ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಶಿಸ್ತು ಸಮಿತಿ ಸಭೆ ಇಂದು

ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌; ತನಿಖಾ ಆಯೋಗದ ವರದಿ ಬಗ್ಗೆ ಚರ್ಚೆ
Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಆಟಗಾರರ ಕುರಿತು ತನಿಖಾ ಆಯೋಗ ನೀಡಿರುವ ವರದಿ ಬಗ್ಗೆ ಚರ್ಚೆ ನಡೆಯಲಿರುವ ಕಾರಣ, ಶುಕ್ರವಾರ ಆಯೋಜನೆಯಾಗಿರುವ ಬಿಸಿಸಿಐ  ಶಿಸ್ತು ಸಮಿತಿ ಸಭೆ ಮಹತ್ವ ಪಡೆದುಕೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಸವಾನಿ ನೇತೃತ್ವದ ಏಕವ್ಯಕ್ತಿ ತನಿಖಾ ಆಯೋಗ ರಾಜಸ್ತಾನ ರಾಯಲ್ಸ್ ತಂಡದ ವೇಗಿ ಎಸ್‌. ಶ್ರೀಶಾಂತ್‌ ಮತ್ತು ಅಂಕಿತ್‌ ಚವಾಣ್‌ ಅವರನ್ನು ವಿಚಾರಣೆಗೆ ಒಳಪಡಿಸಿ ವರದಿಯನ್ನು ತಯಾರಿಸಿತ್ತು. ಹೋದ ತಿಂಗಳು ಕೋಲ್ಕತ್ತದಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸವಾನಿ ವರದಿ ನೀಡಿದ್ದರು. ಈ ವರದಿ ಕುರಿತು ಮಂಡಳಿಯ ಉಪಾಧ್ಯಕ್ಷರಾದ ಅರುಣ್‌ ಜೇಟ್ಲಿ ಮತ್ತು ನಿರಂಜನ್‌ ಷಾ ಅಧ್ಯಯನ ನಡೆಸಲಿ­ದ್ದಾರೆ.

ಸೆಪ್ಟೆಂಬರ್ 29ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಿಸ್ತು ಸಮಿತಿ ವರದಿ ಬಹಿರಂಗ  ಮಾಡಲಿದೆ. ಸವಾನಿ ಮಧ್ಯಂತರ ವರದಿ ಸಲ್ಲಿಸಿದ್ದಾಗ ಚಾಂಡಿಲಾ ವಿಚಾರಣೆ ನಡೆಸಿರಲಿಲ್ಲ. ಆದ ಕಾರಣ ಬಿಸಿಸಿಐ ಈ ವರದಿಯನ್ನು ತಡೆಹಿಡಿದಿತ್ತು. ನಂತರ ಚಾಂಡಿಲಾ ಜೈಲಿನಿಂದ ಹೊರ ಬಂದಿದ್ದರು. ಶ್ರೀಶಾಂತ್‌ ಮತ್ತು ಅಂಕಿತ್‌ ಸಹ ಜಾಮೀನು ಪಡೆದು ಈಗ ಹೊರಗಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದ ಮೇಲೆ ರಾಯಲ್ಸ್‌ ತಂಡದ ಮೂವರು ಆಟಗಾರರನ್ನು ಮತ್ತು 11 ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಎಲ್ಲಾ ಘಟನೆ ನಡೆದ ನಂತರ ಬಿಸಿಸಿಐ ಕಳ್ಳಾಟವನ್ನು ತಡೆಯಲು ಕೆಲ ಕ್ರಮಗಳನ್ನು ಕೈಗೊಂಡಿತ್ತು. ಐಪಿಎಲ್‌ ಪಂದ್ಯದ ನಂತರ ಪಾರ್ಟಿ ಆಯೋಜನೆ, ಚಿಯರ್ ಬೆಡಗಿಯರ ನೃತ್ಯ ರದ್ದು, ಡಗ್‌ ಔಟ್‌ (ಆಟಗಾರರು ಕುಳಿತುಕೊಳ್ಳುವ ಸ್ಥಳ) ಮತ್ತು ಡ್ರೆಸ್ಸಿಂಗ್ ಕೊಠಡಿಗೆ ತಂಡದ ಮಾಲೀಕರಿಗೆ ಪ್ರವೇಶ ನಿಷೇಧ ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಶ್ರೀನಿವಾಸನ್‌ಗೆ ಹಿನ್ನಡೆ
ಸೆಪ್ಟೆಂಬರ್ 29ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷ ಸ್ಥಾನ ವಹಿಸುತ್ತೇನೆ ಎಂದು ಹೇಳಿದ್ದ ಎನ್‌. ಶ್ರೀನಿವಾಸನ್‌ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಸ್ಪಾಟ್‌ ಫಿಕ್ಸಿಂಗ್‌ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಆಂತರಿಕ ತನಿಖಾ ಆಯೋಗವು ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ಈ ಹಿಂದೆ ಬಾಂಬೆ ಹೈಕೋರ್ಟ್‌ ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ ಬಿಸಿಸಿಐ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಆದರೆ, ಇದರ ವಿಚಾರಣೆ ಮುಂದೆ ಹೋಗಿರುವ ಕಾರಣ ವಾರ್ಷಿಕ ಸಾಮಾನ್ಯ ಸಭೆಗೆ ಶ್ರೀನಿವಾಸನ್‌  ಅಧ್ಯಕ್ಷತೆ ವಹಿಸುವುದು ಅನುಮಾನವಾಗಿದೆ. ‘ಈ ಕುರಿತು ಬುಧವಾರ ಮಧ್ಯಾಹ್ನ 3.40ರ ಸುಮಾರಿಗೆ ವಿಚಾರಣೆ ನಡೆಯಬೇಕಿತ್ತು.

ಆದರೆ, 20 ನಿಮಿಷ ಮಾತ್ರ ಸಮಯಾವಕಾಶವಿತ್ತು. ಈ ಅವಧಿಯಲ್ಲಿ ವಿಚಾರಣೆ ನಡೆಸಲು ಆಗದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕ ಇನ್ನು ಗೊತ್ತಾಗಿಲ್ಲ’ ಎಂದು ಬಿಸಿಸಿಐ ಪರ ವಕೀಲೆ  ರಾಧಾ ರಂಗಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT