ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐನಲ್ಲಿ ಮತ್ತಷ್ಟು ಗೊಂದಲ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಭಾನುವಾರದ ಸಭೆ ತಾರ್ಕಿಕ ಅಂತ್ಯವೊಂದನ್ನು ಕಾಣಿಸುತ್ತದೆ ಎಂದು ನಿರೀಕ್ಷಿಸಿದ್ದು ಸುಳ್ಳಾಗಿದೆ.  ಒತ್ತಡಕ್ಕೆ ತಲೆಬಾಗಿ ಬಿಸಿಸಿಐ ಕಾರ್ಯಕಾರಿ ಸಮಿತಿಯ ತುರ್ತುಸಭೆ ಕರೆದಿದ್ದ ಶ್ರೀನಿವಾಸನ್, ಎಲ್ಲರಿಗೂ ಚೆನ್ನಾಗಿಯೇ ಚಳ್ಳೆಹಣ್ಣು ತಿನ್ನಿಸಿರುವುದು ಸ್ಪಷ್ಟವಾಗಿದೆ. ಶ್ರೀನಿವಾಸನ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಅದರೆ `ಅಧಿಕಾರರಹಿತ' ಅಧ್ಯಕ್ಷರಾಗಿಯೇ ಉಳಿಯಲು ಅವರು ತೀರ್ಮಾನ ತೆಗೆದುಕೊಂಡಿದ್ದಾರೆ.  ಸಮಿತಿ ಸಭೆಯಲ್ಲಿ ಯಾವ ಸದಸ್ಯರೂ ಕೇಳಲಿಲ್ಲ ಎಂಬುದನ್ನೇ ನೆವಮಾಡಿ ರಾಜೀನಾಮೆ ಪ್ರಶ್ನೆಯೇ ಇಲ್ಲ  ಎಂದು ಶ್ರೀನಿವಾಸನ್ ಹೇಳಿರುವುದು ಒಂದು ರೀತಿಯಲ್ಲಿ ಹಟಮಾರಿ ಧೋರಣೆ. ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿರುವುದೂ ಕೂಡ ಕಣ್ಣೊರೆಸುವ ತಂತ್ರವಾಗಿ ಕಾಣಿಸುತ್ತದೆ.

ಸದ್ಯಕ್ಕೆ ಸಂಸ್ಥೆಗೆ ಸಂಬಂಧಿಸಿದ ದೈನಂದಿನ ಕೆಲಸ ಕಾರ್ಯಗಳಿಂದ ದೂರ ಇರುವುದಾಗಿ ಶ್ರೀನಿವಾಸನ್. ರಾಜೀನಾಮೆಗೆ ಆಗ್ರಹ ಮಾಡುತ್ತಿರುವವರಿಗೆ ಹೇಳಿದ್ದಾರೆ. ಸಂಸ್ಥೆಯ ನಿಯಮಾವಳಿ ಪ್ರಕಾರ `ಹಂಗಾಮಿ ಅಧ್ಯಕ್ಷ' ಸ್ಥಾನವೇ ಇಲ್ಲ. ಬಿಸಿಸಿಐ ಮೇಲಿನ ಬಿಗಿಹಿಡಿತವನ್ನು ತಮ್ಮಲ್ಲೇ ಇರಿಸಿಕೊಳ್ಳಲು ಶ್ರೀನಿವಾಸನ್ ನಡೆಸಿದ ತಂತ್ರ ಇದು ಎಂಬ ಮಂಡಳಿಯ ಇನ್ನೊಂದು ಪಾಳೆಯದ ವಾದ ಅರಣ್ಯರೋದನವಾಗಿದೆ.

ಬಿಸಿಸಿಐನಲ್ಲಿ ನಡೆದಿರುವ ಈ ಬೆಳವಣಿಗೆಗಳು ಏನನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ದಾಲ್ಮಿಯ ಜವಾಬ್ದಾರಿ ಏನು ಅಥವಾ ಶ್ರೀನಿವಾಸನ್ `ಅಧ್ಯಕ್ಷ' ಸ್ಥಾನದಿಂದ ಎಷ್ಟರಮಟ್ಟಿಗೆ ದೂರವಿರುತ್ತಾರೆ ಇತ್ಯಾದಿ ಬಗ್ಗೆ ಯಾವುದೇ ಕರಾರುವಕ್ಕಾದ ನಿರ್ಧಾರಗಳಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಬಗ್ಗೆ ಈಚೆಗೆ ಎದ್ದಿರುವ ಒತ್ತಡದ ಪ್ರವಾಹವನ್ನು ನಿಯಂತ್ರಿಸಲಿಕ್ಕಾಗಿ ಇಂತಹದ್ದೊಂದು `ತಂತ್ರ' ನಡೆಸಲಾಗಿದೆ ಎನ್ನುವುದಂತೂ ನಿಚ್ಚಳ. ಆದರೆ ಮಂಡಳಿಯ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ಈಗಾಗಲೇ ಸಂಜಯ್ ಜಗದಾಳೆ ಮತ್ತು ಅಜಯ್ ಶಿರ್ಕೆ ರಾಜೀನಾಮೆ ನೀಡಿದ್ದು, ಅವರ ಸ್ಥಾನಗಳಿಗೆ ನೇಮಕವಾಗಬೇಕಿದೆ.

ಮಂಡಳಿಯ ನಿಯಮಾವಳಿ ಪ್ರಕಾರ ಯಾವುದೇ ನಿರ್ಧಾರಗಳು ಕಾರ್ಯಕಾರಿ ಸಮಿತಿಯಲ್ಲಿಯೇ ಬಹುಮತದಿಂದ ತೆಗೆದುಕೊಳ್ಳಬೇಕು. ಈ ದಿಸೆಯಲ್ಲಿ ಮೊದಲಿಗೆ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ನೀಡಲಾಗಿರುವ ರಾಜೀನಾಮೆ ಅಂಗೀಕೃತವಾಗಿ ಹೊಸ ನೇಮಕಗಳಾಗಬೇಕಿದೆ. ಈ ಹೊಸ ನೇಮಕಕ್ಕೆ ಸಂಬಂಧಿಸಿದಂತೆ ಕಾರ್ಯಕಾರಿ ಸಮಿತಿಯಲ್ಲಿ ಒಮ್ಮತ ಮೂಡುವುದು ಸುಲಭವೇನಲ್ಲ. ಈ ನಡುವೆ ಶ್ರೀನಿವಾಸನ್ `ಅಳಿಯನ ಮೇಲಿನ ತನಿಖೆ ಪೂರ್ಣಗೊಳ್ಳುವವರೆಗೆ ಅಧ್ಯಕ್ಷ ಸ್ಥಾನದಿಂದ ದೂರವಿದ್ದು ತನಿಖೆಗೆ ಸಹಕಾರ ನೀಡುತ್ತೇನೆ' ಎಂದಿದ್ದಾರೆ.

ಶ್ರೀನಿವಾಸನ್ ಅವರ ಅಧಿಕಾರಾವಧಿ ಮುಂದಿನ ಸೆಪ್ಟೆಂಬರ್‌ಗೆ ಮುಗಿಯಲಿದ್ದು, ಆ ನಂತರ ನಿಯಮಾವಳಿ ಪ್ರಕಾರವೇ ಒಂದು ವರ್ಷದ ಹೆಚ್ಚುವರಿ ಅಧಿಕಾರ ಪಡೆಯಲಿಕ್ಕಾಗಿ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆಯಲು ಅವರು ಯಶಸ್ವಿಯಾದರೂ ಅಚ್ಚರಿ ಏನಿಲ್ಲ. ಈ ಬೆಳವಣಿಗೆಗಳ ನಡುವೆ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆಗೆ ಸಂಬಂಧಿಸಿದ ಸಂಗತಿಗಳು ಜನರ ನೆನಪಿನಿಂದ ಮರೆಯಾಗುವ ಸಾಧ್ಯತೆ ಇದೆ. ಅಂತಿಮವಾಗಿ ಕ್ರಿಕೆಟ್ ಆಡಳಿತಗಾರರ `ಶಕ್ತಿ ಪೈಪೋಟಿ'ಯಲ್ಲಿ ಯಾರು ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ ಎನ್ನುವುದಕ್ಕಿಂತ ಜನಮನದಲ್ಲಿ ಈ ಕ್ರೀಡೆಯ ಬಗ್ಗೆ ನಂಬಿಕೆ ಕಳೆದು ಹೋಗುತ್ತದೆ ಎಂಬ ಸತ್ಯವನ್ನು ಬಿಸಿಸಿಐ ಮನಗಾಣಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT