ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಗ ಹಾಕಿದ ಮನೆಯಲ್ಲಿ ಸ್ಫೋಟ: ಬೆಚ್ಚಿ ಬಿದ್ದ ಜನರು

Last Updated 11 ಡಿಸೆಂಬರ್ 2012, 10:27 IST
ಅಕ್ಷರ ಗಾತ್ರ

ಕಂಪ್ಲಿ: ಕುಟುಂಬದ ಸದಸ್ಯರು ಮನೆ ಬಾಗಿಲು ಹಾಕಿ ಹೊರ ತೆರಳಿದ್ದ ಸಂದರ್ಭದಲ್ಲಿ ಮನೆ ಒಳಗಡೆ ಏಕಾಏಕಿ ಸ್ಫೋಟದ ರೀತಿಯಲ್ಲಿ ಶಬ್ದ ಕೇಳಿ ಬಂದ ಘಟನೆ ಪಟ್ಟಣದ ಕೊಟ್ಟಾಲು ರಸ್ತೆಯ ಮೇಲಂತಸ್ತಿನ ಮನೆಯಲ್ಲಿ ಸೋಮವಾರ ಮಧ್ಯಾಹ್ನ ಜರುಗಿದ್ದು, ಪಟ್ಟಣದ ಜನತೆಯಲ್ಲಿ ಈ ಘಟನೆ ಬೆರಗು ಮೂಡಿಸಿದೆ.

ಈ ಸದ್ದು ಜನತೆಯಲ್ಲಿ ಬಿಚ್ಚಿಬೀಳಿಸುತ್ತಿದ್ದಂತೆ ಹೋಗಿ ನೋಡಿದಾಗ ಮನೆ ಮುಖ್ಯ ಬಾಗಿಲು ಸೇರಿದಂತೆ ಮನೆ ಒಳಗಿನ ಬಾಗಿಲು ಕಿಟಕಿಗಳು ಸಂಪೂರ್ಣ ಜಖಂಗೊಂಡಿವೆ. ಕಿಟಕಿ ಗಾಜುಗಳು ಒಡೆದ್ದ್ದಿದು  ಮನೆಯಲ್ಲಿದ್ದ ಬಟ್ಟೆ, ಪ್ಲಾಸ್ಟಿಕ್ ಕವರ್‌ಗಳು, ಮೊಬೈಲ್ ಚಾರ್ಜರ್ ಮತ್ತು ಸಾಕೆಟ್ ಸ್ಫೋಟಿಸಿರುವುದು ಕಂಡು ಬಂದಿದೆ.

ಸ್ಥಳೀಯ ಗೊಂದಿ ಈಶಪ್ಪ ಅವರಿಗೆ ಸೇರಿದ 2ನೇ ಅಂತಸ್ತಿನಲ್ಲಿ ಉಪನ್ಯಾಸಕ ಕೆ. ಮಲ್ಲಿಕಾರ್ಜುನ ಮತ್ತು ಅವರ ಕುಟುಂಬ ಬಾಡಿಗೆ ಪಡೆದು ನೆಲೆಸಿತ್ತು. ಸೋಮವಾರ ಮಧ್ಯಾಹ್ನ 2ಕ್ಕೆ ಮನೆಯಲ್ಲಿ ಅಡುಗೆ ಅನಿಲ ಸ್ಫೋಟಿಸಿದ ಮಾದರಿಯಲ್ಲಿ ಶಬ್ದ ಕೇಳಿ ಬಂದಾಗ ಮನೆಯಲ್ಲಿ ಯಾರು ಇರಲಿಲ್ಲ.

ಕೆಳ ಭಾಗದಲ್ಲಿ ವಾಸಿಸುತ್ತಿರುವ ಗೊಂದಿ ಈಶಪ್ಪ ಅವರ ತಮ್ಮ ಗೊಂದಿ ವೀರೇಶಪ್ಪ ಹಾಗೂ ಕುಟುಂಬದವರು ಭಯಂಕರ ಶಬ್ದ ಕೇಳಿದ ಕೂಡಲೇ ಮೇಲಂತಸ್ತಿಗೆ ತೆರಳಿದ್ದಾರೆ. ಮನೆಯ ಮುಖ್ಯ ಬಾಗಿಲು ಸೇರಿದಂತೆ ಒಟ್ಟು 5 ಬಾಗಿಲು, 3 ಕಿಟಕಿ ಸಂಪೂರ್ಣ ಮರಿದು ಬಿದ್ದಿವೆ. ಕೆಲ ಪ್ಲಾಸ್ಟಿಕ್ ಕವರ್‌ಗಳು, ಬಟ್ಟೆಗಳು, ಮೊಬೈಲ್ ಚಾರ್ಜರ್ ಮತ್ತು ವಿದ್ಯುತ್ ಸಾಕೆಟ್ ಸುಟ್ಟಿವೆ. ಮನೆ ಗೋಡೆ, ಮೇಲ್ಛಾವಣಿ ಸುರಕ್ಷಿತವಾಗಿವೆ. ಇನ್ನುಳಿದಂತೆ ಮನೆ ಬಹುತೇಕ ಸಾಮಾನುಗಳಿಗೆ ಯಾವುದೇ ಹಾನಿಯಾಗಿಲ್ಲ.

ಕ್ಷಣ ಮಾತ್ರದಲ್ಲಿ ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ತಂಡೋಪತಂಡವಾಗಿ ಧಾವಿಸಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಇದು ಮಾಟ ಮಂತ್ರ, ಬಾನಾಮತಿ ಇರಬಹುದೆಂದು ಸಂದೇಹಪಟ್ಟರು. ನಂತರ ಪೊಲೀಸ್ ಇಲಾಖೆ, ಜೆಸ್ಕಾಂ, ಅಡುಗೆ ಅನಿಲ ಕಂಪನಿಯವರು ಸ್ಥಳಕ್ಕೆ ಭೇಟಿ ನೀಡಿ ಮನೆ ಜಾಲಾಡಿದರು. ಯಾವುದೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಅಡುಗೆ ಅನಿಲ ಸೋರಿಕೆಯಾಗಲಿ ಕಂಡುಬಂದಿಲ್ಲ ಎಂದು  ಸ್ಪಷ್ಟಪಡಿಸಿದರು.  ಆದರೂ ಈ ಘಟನೆ ಹೇಗೆ ನಡೆದಿದೆ ಎನ್ನುವುದು ಮಾತ್ರ ನಿಗೂಢವಾಗಿದೆ ಎಂದರು.

ಸ್ಥಳೀಯ ಪವಾಡ ಸಂಶೋಧನಾ ಕೇಂದ್ರದ ವಿ. ವಸಂತಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಇದು ಬಾನಾಮತಿ ಅಲ್ಲ.  ಯಾರೋ ಕಿಡಿಗೇಡಿಗಳ ಕೃತ್ಯವಿರಬೇಕು. ಇಲ್ಲವೆ ಅಮೋನಿಯಂ ಹೈಡ್ರಾಕ್ಸೈಡ್ ಹಾಗೂ ಸೋಡಿಯಂ ಬಳಸಿ ಈ ರೀತಿ ಮಾಡಿರುವ ಸಾಧ್ಯತೆಯಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬಗ್ಗೆ ಆಸಕ್ತಿ ಇರುವವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೂಢ ನಂಬಿಕೆ ಇಲ್ಲವೆ ವೈಜ್ಞಾನಿಕ ಕಾರಣಗಳನ್ನು ಪತ್ತೆ ಮಾಡಿ  ನೈಜತೆ ಕುರಿತು ಜನತೆಯಲ್ಲಿ ಮೂಡಿರುವ ಸಂಶಯಕ್ಕೆ ಉತ್ತರಿಸುವಂತೆ ಪಟ್ಟಣದ ಕೆಲ ಪ್ರಜ್ಞಾವಂತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT