ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಗರ ಔತಣಕ್ಕೆ ತಟ್ಟುವುದೇ ನೀತಿ ಸಂಹಿತೆ ಬಿಸಿ?

ಚುನಾವಣೆ ಆಯೋಗಕ್ಕೆ ಸಿಗದ ವಿಡಿಯೋಗ್ರಾಫರ್ಸ್‌
Last Updated 13 ಏಪ್ರಿಲ್ 2013, 4:35 IST
ಅಕ್ಷರ ಗಾತ್ರ

ಹಾಸನ: ಚುನಾವಣೆಯ ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗಕ್ಕೆ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳು ಎದುರಾಗಿವೆ.

ಜಿಲ್ಲೆಯ ಒಟ್ಟು 1882 ಮತಗಟ್ಟೆಗಳಲ್ಲಿ ಶೇ 50ಕ್ಕೂ ಹೆಚ್ಚು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 581 ಸೂಕ್ಷ್ಮ ಹಾಗೂ 386 ಅತಿ ಸೂಕ್ಷ್ಮಮತಗಟ್ಟೆಗಳು ಜಿಲ್ಲೆಯಲ್ಲಿದ್ದು, ಇಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಬೇಕಾಗಿದೆ. ಅತಿ ಸೂಕ್ಷ್ಮ ಎನಿಸಿರುವ 386 ಕಡೆಗಳಲ್ಲಿ ಕೇಂದ್ರದ ಅರೆ ಸೈನಿಕ ಪಡೆ ಸಿಬ್ಬಂದಿ ನೇಮಕಕ್ಕೆ ಸಿದ್ಧತೆ ಮಾಡಿಕೊಂಡಿದೆ. ಉಳಿದ ಕಡೆಗಳಲ್ಲಿ ಸಾಮಾನ್ಯ ಭದ್ರತೆಯ ಜತೆಗೆ 139 ಕಡೆಗೆ ವಿಡಿಯೋ ರೆಕಾರ್ಡಿಂಗ್‌ಗೆ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಆಯೋಗ ಸೂಚನೆ ನೀಡಿದೆ. ಆದರೆ ಚುನಾವಣೆಯ ದಿನವೇ ಜಿಲ್ಲೆಯಲ್ಲಿ ಮದುವೆ-ಮುಂಜಿ ಮುಂತಾದ ನೂರಾರು ಸಮಾರಂಭಗಳ ಇರುವುದರಿಂದ ವಿಡಿಯೋಗ್ರಾಫರ್‌ಗಳು ಸಿಗುವುದೇ ದುರ್ಲಭವಾಗಿದೆ.

ಒಟ್ಟಾರೆ 7 ವಿಧಾನಸಭಾ ಕ್ಷೇತ್ರಗಳಿಗೆ ಕನಿಷ್ಠ ಎಂದರೂ 139 ವಿಡಿಯೋಗ್ರಾಫರ್‌ಗಳು ಬೇಕಾಗುತ್ತಾರೆ. ಆದರೆ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲ ವಿಡಿಯೋಗ್ರಾಫರ್‌ಗಳೂ ಅಂದು ಮದುವೆ ಸಮಾರಂಭದ ಚಿತ್ರೀಕರಣಕ್ಕೆ ಒಪ್ಪಿಕೊಂಡಿದ್ದಾರೆ. ಇದರಿಂದ ಚುನಾವಣಾ ಕೆಲಸಕ್ಕೆ ಯಾರೂ ಲಭ್ಯವಾಗುತ್ತಿಲ್ಲ.  `ಕಳೆದ ಬಾರಿ ಚುನಾವಣೆಯಲ್ಲಿ ವಿಡಿಯೋಗ್ರಾಫರ್‌ಗಳಿಗೆ ದಿನಕ್ಕೆ 1200 ರೂಪಾಯಿ ನೀಡಲಾಗಿತ್ತು. ಈ ಬಾರಿ ರೂ. 1500 ನೀಡಲು ಸಿದ್ಧ. ಆದರೂ  ಬೇಕಾದಷ್ಟು ಮಂದಿ ಸಿಗುತ್ತಿಲ್ಲ. ಕೆಲವು ಜಿಲ್ಲೆಗಳಲ್ಲಿ ಛಾಯಾಗ್ರಾಹಕರು ಸಂಘಟಿತರಾಗಿದ್ದು 2,500 ರಿಂದ 3,000 ರೂಪಾಯಿ ನೀಡಬೇಕು ಎಂದು  ಒತ್ತಾಯಿಸಿದ್ದಾರೆ. ನಾವೂ ಹೆಚ್ಚಿನ ಹಣ ನೀಡಿ ಎಂದು ಆಯೋಗಕ್ಕೆ ಮನವಿ ಮಾಡಿದ್ದೇವೆ' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ ತಿಳಿಸಿದರು.

`ಮದುವೆ ಕಾಲದಲ್ಲಿ ಚುನಾವಣೆ ಬಂದಿರುವುದು ಸಮಸ್ಯೆಗೆ ಒಂದು ಕಾರಣವಾಗಿದ್ದರೆ, ಒಂದೇ ಹಂತದಲ್ಲಿ ರಾಜ್ಯದಾದ್ಯಂತ ಚುನಾವಣೆ ನಡೆಯುತ್ತಿರುವುದರಿಂದ ಬೇರೆ ಜಿಲ್ಲೆಗಳಿಂದ ವಿಡಿಯೋಗ್ರಾಫರ್‌ಗಳನ್ನು ಕರೆ ತರಲು ಸಾಧ್ಯವಾಗದಂತಾಗಿದೆ' ಎಂದು ನುಡಿಯುತ್ತಾರೆ.
ಬಾಡೂಟ, ನಾಟಕಗಳ ಚಿಂತೆ: ಮದುವೆ ಕಾಲದಲ್ಲೇ ಚುನಾವಣೆ ಬಂದಿರುವುದರಿಂದ ಬಾಡೂಟದ ಮೇಲೆ ಕಣ್ಣಿಡಬೇಕಾದ ಇನ್ನೊಂದು ಸಮಸ್ಯೆ ಆಯೋಗಕ್ಕೆ ಬಂದಿದೆ.

ಮದುವೆಯ ನಂತರ `ಬೀಗ ಔತಣ' (ಬಾಡೂಟ) ಏರ್ಪಡಿಸುವುದು ಈ ಭಾಗದ ಸಂಸ್ಕೃತಿ. ಈಗ ಆಯೋಗ ಇಂಥ ಊಟಗಳ ಮೇಲೂ  ಕಣ್ಣಿಡಬೇಕಾಗಿದೆ. ಚುನಾವಣಾ ಕಣಕ್ಕೆ ಇಳಿದಿರುವವರೂ ಸಹ ಮದುವೆ ಗಂಡಿನ ಮನೆಯವರನ್ನು ಭೇಟಿ ಮಾಡಿ ಬಾಡೂಟಕ್ಕೆ  `ನೆರವು' ನೀಡಿ ಆ ಮೂಲಕ ಮತದಾರರ ಓಲೈಕೆಯ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಬಾಡೂಟಕ್ಕೂ ತಹಶೀಲ್ದಾರರ ಅನುಮತಿ ಪಡೆಯಬೇಕು ಎಂಬ ವದಂತಿಗಳು ಜಿಲ್ಲೆಯಲ್ಲಿ ಹಬ್ಬಿವೆ.

`ಬೀಗ ಔತಣ ಈ ಭಾಗದ ಸಂಸ್ಕೃತಿಯಾಗಿರುವುದರಿಂದ ಅದನ್ನು ತಡೆಯಲಾಗುವುದಿಲ್ಲ. ಅನುಮತಿಯನ್ನೂ ಪಡೆಯಬೇಕಾಗಿಲ್ಲ. ಆದರೆ ಇಂಥ ಕಾರ್ಯಕ್ರಮಗಳ ಮೇಲೆ ನಾವು ಒಂದು ಕಣ್ಣಿಟ್ಟಿರುತ್ತೇವೆ' ಎಂದು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಹಲವು ವರ್ಷಗಳಿಂದ ಕಾಣೆಯೇ ಆಗಿದ್ದ ನಾಟಕದ ಸಂಸ್ಕೃತಿ ಅಚಾನಕ್ಕಾಗಿ ಜಿಲ್ಲೆಯಲ್ಲಿ ಮರು ಹುಟ್ಟು ಪಡೆದುಕೊಂಡಿದೆ. `ಸಂಪೂರ್ಣ ರಾಮಾಯಣ', ಮಹಾಭಾರತ ಮುಂತಾಗಿ ರಾತ್ರಿ ಇಡೀ ಪೌರಾಣಿಕ ನಾಟಕಗಳನ್ನು ಆಯೋಜಿಸುವುದು, ನಾಟಕಕ್ಕೆ ಬಂದವರಿಗೆ ಅಭ್ಯರ್ಥಿ ಕಡೆಯವರು ತಿಂಡಿ, ಊಟ, ಚಿಪ್ಸ್ ಕೊಡಿಸಿ ಮತ ಸೆಳೆಯುವ ಪ್ರಯತ್ನ ಮಾಡಿರುವುದು ಅಲ್ಲಲ್ಲಿ ವರದಿಯಾಗಿದೆ.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ವೀಕ್ಷಕರು ರಾತ್ರಿ ಇಡೀ ನಿದ್ದೆಗೆಟ್ಟು ನಾಟಕ ನೋಡಿದ್ದೂ ಆಗಿದೆ. ಈಗ ಜಿಲ್ಲೆಯಲ್ಲಿ ನಾಟಕಗಳಿಗೆ ಅನುಮತಿ ನೀಡುವುದನ್ನೇ ನಿಲ್ಲಿಸಲಾಗಿದೆ. ಹೀಗಿದ್ದರೂ ಒಂದು ತಂಡದವರು ಸಕಲೇಶಪುರದಲ್ಲಿ ಅನುಮತಿ ಇಲ್ಲದೆಯೇ ನಾಟಕ ಆಡಿದ್ದರು. ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಆಯೋಗ ಹೆಚ್ಚು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೆ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಚುನಾವಣೆಯ ಕಾವು ಇನ್ನೂ ಏರುತ್ತಿದ್ದಂತೆ ಇನ್ನೂ ಹೊಸ ಹೊಸ ಬಣ್ಣಗಳು ಹೊರಹೊಮ್ಮಿದರೂ ಅಚ್ಚರಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT