ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ, ಗೊಬ್ಬರ ಕೊರತೆ ಇಲ್ಲ

ಕೃಷ್ಣ ಬೈರೇಗೌಡ
Last Updated 3 ಜೂನ್ 2013, 19:34 IST
ಅಕ್ಷರ ಗಾತ್ರ

ಬೆಂಗಳೂರು: ಮುಂಗಾರು ಬಿತ್ತನೆಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಕೃಷಿ ಚಟುವಟಿಕೆಗಳು, ಲಭ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಯಾವುದೇ ಪ್ರದೇಶದಲ್ಲೂ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಉದ್ಭವಿಸದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದರು.

ರಾಜ್ಯದ ಎಲ್ಲೆಡೆ ಏಕಕಾಲದಲ್ಲಿ ಮಳೆ ಬೀಳುತ್ತಿರುವುದರಿಂದ ಬಿತ್ತನೆ ಬೀಜ, ರಸಗೊಬ್ಬರಗಳಿಗೆ ಬೇಡಿಕೆ ಹೆಚ್ಚಲಿದೆ. ಈ ಕಾರಣದಿಂದ ಹೆಚ್ಚುವರಿ ರೈತ ಸಂಪರ್ಕ ಕೇಂದ್ರಗಳ ಮೂಲಕವೂ ಬೀಜ, ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಮುಂದಿನ ಹದಿನೈದು ದಿನಗಳವರೆಗೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

2013ರ ಮುಂಗಾರು ಹಂಗಾಮಿನಲ್ಲಿ 74.29 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ವಿವಿಧ ಜಿಲ್ಲೆಗಳ 3.26 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಕೃಷಿ ಚಟುವಟಿಕೆಗಳು ಮುಂದುವರಿದಿವೆ. ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಮಡಿ ಸಿದ್ಧತೆ ಪ್ರಗತಿಯಲ್ಲಿದೆ. ಮಲೆನಾಡು ಪ್ರದೇಶಗಳಲ್ಲಿ ಮಳೆಯಾಶ್ರಿತ ಭತ್ತದ ಬಿತ್ತನೆಯೂ ಪ್ರಾರಂಭವಾಗಿದೆ ಎಂದು ವಿವರ ನೀಡಿದರು.

ರಾಜ್ಯದಲ್ಲಿ 10.68 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಇಲ್ಲಿಯವರೆಗೆ 1.53 ಲಕ್ಷ ರೈತರಿಗೆ 14,786.55 ಕ್ವಿಂಟಲ್ ಬಿತ್ತನೆ ಬೀಜ ಪೂರೈಸಲಾಗಿದೆ. ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ 1,40,619 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ. ಶೇಂಗಾ ಮತ್ತು ಸೋಯಾಬೀನ್ ಬಿತ್ತನೆ ಬೀಜಕ್ಕೆ ಸಹಾಯಧನ ನೀಡಬೇಕು ಎಂಬ ಬೇಡಿಕೆ ಬಹು ದಿನಗಳಿಂದ ಇತ್ತು. ಈ ಹಿನ್ನೆಲೆಯಲ್ಲಿ ಶೇಂಗಾ ಮತ್ತು ಸೋಯಾಬೀನ್ ಬೀಜಗಳಿಗೆ ನೀಡುತ್ತಿದ್ದ ರಿಯಾಯಿತಿ ದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದರು.

ಒಟ್ಟು 23.40 ಲಕ್ಷ ಟನ್ ರಸಗೊಬ್ಬರದ ಬೇಡಿಕೆ ಇದೆ. ಈವರೆಗೆ 3.29 ಲಕ್ಷ ಟನ್ ರಸಗೊಬ್ಬರ ಸರಬರಾಜು ಮಾಡಲಾಗಿದೆ. ವಿಶಾಖಪಟ್ಟಣ, ಕಾಕಿನಾಡದಿಂದಲೂ ಹೆಚ್ಚುವರಿಯಾಗಿ ರಸಗೊಬ್ಬರ ತರಿಸಿಕೊಳ್ಳಲಾಗುವುದು. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದರದ ಪಟ್ಟಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ನಿಗದಿಗಿಂತ ಹೆಚ್ಚಿನ ದರಕ್ಕೆ ಬೀಜ, ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಾಸನ ಜಿಲ್ಲೆಯ ಸಕಲೆಶಪುರದಲ್ಲಿ ಕಳಪೆ ಗೊಬ್ಬರ ಮಾರಾಟ ಮಾಡಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ಇಬ್ಬರು ಈಗಾಗಲೇ ಜಾಮೀನು ಪಡೆದು, ಬಿಡುಗಡೆ ಆಗಿದ್ದಾರೆ. ರಾಜ್ಯದ ಇತರೆಡೆಯೂ ಕಳಪೆ ಗೊಬ್ಬರ ಮಾರಾಟಕ್ಕೆ ಪ್ರಯತ್ನ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ಆರಂಭಿಸಲಾಗಿದೆ. ಕಳಪೆ ಗೊಬ್ಬರ ಮಾರಾಟ ಮಾಡುವವರು ಹಾಗೂ ತಯಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜನಸಾಮಾನ್ಯರಿಗೆ ಅನುಮಾನ ಇದ್ದರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡಬಹುದು ಎಂದರು.

ರೈತರು `ಕಿಸಾನ್ ಕಾಲ್ ಸೆಂಟರ್' ದೂರವಾಣಿ ಸಂಖ್ಯೆ 1800 180 1551ಗೆ ಕರೆ ಮಾಡಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT