ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ ದೋಷ: ಕಂಪೆನಿಗಳಿಂದಲೇ ಪರಿಹಾರ

Last Updated 4 ಡಿಸೆಂಬರ್ 2013, 8:26 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಕನಕ ಮತ್ತು ನಿಕ್ಕಿಪ್ಲಸ್‌ ಬಿ.ಟಿ ಹತ್ತಿಯ ಬೀಜಗಳಲ್ಲಿನ ದೋಷದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅಂತಹ ರೈತರಿಗೆ ಬೀಜ ಕಂಪೆನಿಗಳ ಮೂಲಕವೇ ಪರಿಹಾರ ಕೊಡಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ನಡೆಯುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ತಾರಾ ಅನೂರಾಧಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳಗಾವಿ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಕನಕ ಮತ್ತು ನಿಕ್ಕಿಪ್ಲಸ್‌ ತಳಿಯ ಬಿ.ಟಿ ಹತ್ತಿ ಬಿತ್ತನೆ ಮಾಡಿದ್ದ ರೈತರು ಬೀಜದಲ್ಲಿನ ದೋಷದ ಕಾರಣದಿಂದ ನಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಪ್ರಸಕ್ತ ವರ್ಷ ರಾಜ್ಯದಲ್ಲಿ 5.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿ.ಟಿ ಹತ್ತಿ ಬಿತ್ತನೆ ಮಾಡಲಾಗಿದೆ. ಈ ಪೈಕಿ ಹಾವೇರಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ರೈತರು ನಷ್ಟಕ್ಕೀಡಾಗಿದ್ದಾರೆ. ಕೃಷಿ ವಿಜ್ಞಾನಿಗಳನ್ನು ಹೊಲಗಳಿಗೆ ಕಳುಹಿಸಿ, ಪರಿಶೀಲನೆ ನಡೆಸಲಾಗಿದೆ. ಬೀಜದಲ್ಲಿನ ದೋಷವೇ ನಷ್ಟಕ್ಕೆ ಕಾರಣ ಎಂದು ತಜ್ಞರ ತಂಡ ವರದಿ ನೀಡಿದೆ ಎಂದು ತಿಳಿಸಿದರು.

ದೋಷಪೂರಿತ ಬೀಜಗಳನ್ನು ಒದಗಿಸಿರುವ ಕಂಪೆನಿಗಳಿಂದಲೇ ರೈತರಿಗೆ ಪರಿಹಾರ ಕೊಡಿಸಲಾಗುತ್ತಿದೆ. ಪರಿಹಾರ ನೀಡದೇ ಇದ್ದಲ್ಲಿ ಅಂತಹ ಕಂಪೆನಿಗಳನ್ನು ರಾ ಜ್ಯದಲ್ಲಿ ಕಪ್ಪುಪಟ್ಟಿಗೆ ಸೇರಿಸುವುದಾಗಿ ರಾಜ್ಯ ಸರ್ಕಾರ ಕಠಿಣ ಸಂದೇಶ ರವಾನಿಸಿದೆ ಎಂದು ಹೇಳಿದರು.
ಹಾನಿಗೀಡಾಗಿರುವ ಜಮೀನುಗಳ ಸಮೀಕ್ಷೆ ನಡೆಯುತ್ತಿದೆ. ಇನ್ನು 15 ದಿನಗಳೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ. ಬೀಜದಲ್ಲಿನ ದೋಷ ಕುರಿತು ಖಚಿತ ಸಾಕ್ಷ್ಯ ಕಲೆಹಾಕಲು ಹೊಸದಾಗಿ ತಜ್ಞರ ತಂಡವನ್ನು ನೇಮಕ ಮಾಡಲಾಗಿದೆ. ರೈತರಿಗೆ ಪರಿಹಾರ ನೀಡಲು ನಿರಾಕರಿಸುವ ಬೀಜಕಂಪೆನಿಗಳ ವಿರುದ್ಧ ಕಾನೂನು ಹೋರಾಟ ಆರಂಭಿಸುವ ಯೋಚನೆಯೂ ಸರ್ಕಾರದ ಮುಂದಿದೆ ಎಂದರು.

ಜೋಳ ಮತ್ತು ಕಲ್ಲಂಗಡಿ ಬೀಜಗಳನ್ನು ಬಿತ್ತನೆ ಮಾಡಿದ ರೈತರೂ ಸಂಕಷ್ಟದಲ್ಲಿದ್ದಾರೆ ಎಂದು ತಾರಾ ಗಮನ ಸೆಳೆದರು. ಎರಡೂ ವಿಷಯಗಳ ಬಗ್ಗೆಯೂ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ಸಚಿವರು ಭರವಸೆ ನೀಡಿದರು.

ನೇರ ನಗದು ಬಿಡುಗಡೆ
ರೈತರಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ನೀಡುವ ₨ 5,000ಕ್ಕಿಂತ ಹೆಚ್ಚಿನ ಮೊತ್ತದ ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಖರೀದಿಯನ್ನು ಖಾತರಿಪಡಿಸಿಕೊಂಡು ಹಣ ವರ್ಗಾವಣೆ ಮಾಡಲಾಗುವುದು ಎಂದು ಕೃಷ್ಣ ಬೈರೇಗೌಡರು ತಿಳಿಸಿದರು.

ಕಾಂಗ್ರೆಸ್‌ನ ದಯಾನಂದ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡುವ ಯೋಜನೆಯಲ್ಲಿ ಹಣ ದುರ್ಬಳಕೆ ಆಗದಂತೆ ತಡೆಯಲು ನೇರ ನಗದು ವರ್ಗಾವಣೆ ಅಳವಡಿಸಲು ನಿರ್ಧರಿಸ ಲಾಗಿದೆ. ಶೀಘ್ರದಲ್ಲಿಯೇ ಈ ಕ್ರಮವನ್ನು ಜಾರಿಗೊಳಿಸಲಾಗುವುದು’ ಎಂದರು.

ಕೆಲವು ಕಂಪೆನಿಗಳು ಕಳಪೆ ಗುಣಮಟ್ಟದ ಯಂತ್ರೋಪಕರಣಗಳನ್ನು ಪೂರೈಸುತ್ತಿವೆ. ಸರ್ಕಾರ ನಿರ್ದಿಷ್ಟ ಕಂಪೆನಿಗಳ ಯಂತ್ರೋಪಕರಣಗಳು ಮತ್ತು ಪೂರೈಕೆದಾರರನ್ನು ಖರೀದಿಗೆ ಗುರುತಿಸುವುದೇ ಇದಕ್ಕೆ ಕಾರಣ. ತಕ್ಷಣ ಈ ವ್ಯವಸ್ಥೆಯನ್ನು ಬದಲಿಸ ಬೇಕು ಎಂದು ದಯಾನಂದ್ ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಸರ್ಕಾರ ಇಂತಹ ಪೂರೈಕೆದಾರರ ಬಳಿಯೇ ಖರೀದಿ ಮಾಡಬೇಕೆಂದು ಕಡ್ಡಾಯ ಮಾಡುವುದಿಲ್ಲ. ಯಂತ್ರೋಪಕರಣಗಳ ಪೂರೈಕೆಗೆ ಅರ್ಹವಾಗಿರುವ ಕಂಪೆನಿಗಳು ಮತ್ತು ಪೂರೈಕೆದಾರರ ಪಟ್ಟಿಯನ್ನು ಮಾತ್ರಪ್ರಕಟಿಸುತ್ತದೆ’ ಎಂದರು.
ಮಹಿಂದ್ರಾ ಅಂಡ್ ಮಹಿಂದ್ರಾ ಮತ್ತು ಕ್ಯಾಪ್ಟನ್ ಪವರ್ ಟ್ರಾಕ್ಟರ್ ಕಂಪೆನಿಗಳು ಕಳಪೆ ಗುಣಮಟ್ಟದ ಯಂತ್ರೋಪಕರಣಗಳನ್ನು ಪೂರೈಸಿರುವುದು ದೃಢಪಟ್ಟಿದೆ. ಎರಡೂ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ವಿವರ ನೀಡಿದರು.

ರೈತರಿಗೆ ತಾಂತ್ರಿಕ ಸಲಹೆ ನೀಡಲು ನೇಮಿಸಿರುವ ಸಿಬ್ಬಂದಿ (ಅನುವುಗಾರರು) ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೆಲಸಕ್ಕೆ ಹಾಜರಾಗದೇ ವೇತನ ಪಡೆಯುವ ಸಲಹೆಗಾರರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಕೃಷ್ಣ ಬೈರೇಗೌಡರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT