ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ ರಕ್ಷಕರ ಸಮಾವೇಶ

Last Updated 18 ಮೇ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಕುಲಾಂತರಿ ವಿರೋಧಿ ಆಂದೋಲನ ಸೇಜ್-ಕರ್ನಾಟಕವು `ಅಂದು ಉಪ್ಪು -ಇಂದು ಬೀಜ~ ಘೋಷವಾಕ್ಯದ ಎರಡು ತಿಂಗಳ ರಾಜ್ಯವ್ಯಾಪಿ ಬೀಜ ಜಾಗ್ರತಿ ಜಾಥಾ ಕೈಗೊಂಡಿತು. ಕರ್ನಾಟಕದ 14 ಜಿಲ್ಲೆಗಳ ವಿವಿಧ ವಲಯಗಳಲ್ಲಿ ಸಂಚರಿಸಿದ ಜಾಥಾ ಸುಮಾರು 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿತು.

ಬರಗಾಲ, ಹವಾಮಾನ ಬದಲಾವಣೆ ಮುಂತಾದ ಇಂದಿನ ಸಮಸ್ಯೆಗಳಿಗೆ ನಮ್ಮಲ್ಲಿರುವ ಗಟ್ಟಿಮುಟ್ಟಾದ ಬೀಜಗಳು ಉತ್ತರವಾಗಬ್ಲ್ಲಲವು ಎಂಬುದು ರೈತರ ಅಭಿಪ್ರಾಯವಾಗಿತ್ತು. ಕರ್ನಾಟಕ ಮಹಾನ್ ಕೃಷಿ ಪರಂಪರೆ, ಬೀಜ ಶ್ರಿಮಂತಿಕೆಯ ನಾಡು.

ವಿವಿಧ ಪ್ರದೇಶಕ್ಕೆ ಹೊಂದಿಕೊಂಡಂಥ ವಿಧವಿಧ ಬೆಳೆ ಪದ್ಧತಿ, ಅವುಗಳಿಗೆ ಅಗತ್ಯವಾದ ಬೀಜ ಸಂಪತ್ತು ನಮ್ಮಲ್ಲಿ ಯಾವಾಗಲೂ ಇತ್ತು. ಬೀಜ ಎಂದರೆ ರೈತನ ಸ್ವತ್ತು. ಅದನ್ನು ಖರೀದಿಸಬೇಕು ಎಂಬುದೇ ಕಲ್ಪನೆಗೆ ಮೀರಿತ್ತು.

`ಕಡಿಮೆ ಅವಧಿ, ಅಧಿಕ ಇಳುವರಿ~ ಎಂದು ಹೇಳಿಕೊಂಡು ಯಾವಾಗ ಹೈಬ್ರಿಡ್ ಬೀಜಗಳು, ಸುಧಾರಿತ ತಳಿ ಬೀಜಗಳನ್ನು ತಂದರೋ, ರಾಸಾಯನಿಕ ಕೃಷಿ ಪದ್ಧತಿಯಲ್ಲಿ ಬೆಳೆಯತೊಡಗಿದರೋ, ಏಕಬೆಳೆ ಪದ್ಧತಿಗೆ ಬದಲಾವಣೆ ಮಾಡತೊಡಗಿದರೋ ಆಗಿನಿಂದ ನಮ್ಮ ರೈತರ ಸ್ಥಳೀಯ/ನಾಟಿ ಬೀಜ ದಿನೇದಿನೇ ಕಣ್ಮರೆಯಾಗತೊಡಗಿದವು. 
ಆದರೆ ಇವತ್ತಿಗೂ ರೈತರ ನಡುವೆ ಬೀಜ ವಿನಿಮಯ ನಡೆಯುತ್ತಿದೆ. ನೀರಾವರಿ ರೈತರು ಹೈಬ್ರಿಡ್ ಬೀಜಗಳಿಗೆ ಮೊರೆಹೋಗಿ ಸ್ವಂತ ಬೀಜ ಕಳೆದುಕೊಂಡಿರಬಹುದು. ಆದರೆ ಮಳೆಯಾಶ್ರಯದಲ್ಲಿ ಬೆಳೆಯುವವರು ಇವತ್ತಿಗೂ ಸ್ವಂತ ಬೀಜಗಳನ್ನೇ ಉಪಯೋಗ ಮಾಡುತ್ತಾರೆ. ವಿಶೇಷವಾಗಿ, (ತುಂಗಭದ್ರ ನದಿ ಆಚೆಗಿನ) ಉತ್ತರ ಕರ್ನಾಟಕದಲ್ಲಿ ಪ್ರತಿಯೊಂದು ರೀತಿಯ ಬೀಜವೂ ಇದೆ.

ಕರ್ನಾಟಕದಲ್ಲಿ 2002ರಲ್ಲಿ ಕುಲಾಂತರಿ ಬಿಟಿ ಹತ್ತಿ ಬೀಜವನ್ನು ರೈತರಿಗೆ ಮಾರಾಟ ಮಾಡಲು ಬಹುರಾಷ್ಟ್ರೀಯ ಕಂಪೆನಿಗೆ ಸರ್ಕಾರ ಅನುಮತಿ ಕೊಟ್ಟ ನಂತರ ರಾಜ್ಯದಲ್ಲಿ ಬೇರೆಲ್ಲ ಹತ್ತಿ ಬೀಜಗಳ ಹಂಚಿಕೆಯನ್ನು ಸರ್ಕಾರ ನಿಲ್ಲಿಸಿತು. ಮೂರೇ ವರ್ಷದಲ್ಲಿ ಬಿಟಿ ಹತ್ತಿ ಇಡೀ ರಾಜ್ಯದ ಕೃಷಿಯನ್ನು ಆಕ್ರಮಿಸಿತು.

ಈಗ ರೈತರು ಬೆಳೆಯುತ್ತಿರುವ ಪ್ರತಿಯೊಂದು ಬೆಳೆಯನ್ನೂ (ಒಟ್ಟು ಸುಮಾರು 72) ಬಹುರಾಷ್ಟ್ರೀಯ ಕಂಪೆನಿಗಳು ಕುಲಾಂತರಿಯಾಗಿ ಅಭಿವೃದ್ಧಿಪಡಿಸುತ್ತಿವೆ. ಇದರಿಂದ ನಮ್ಮ ಬೀಜಗಳೆಲ್ಲಾ ನಾಶವಾಗಿ ಕಂಪೆನಿ ರಾಜ್ ಸ್ಥಾಪನೆಯಾಗುವ ದಿನ ದೂರವಿಲ್ಲ.

ಈ ಹಿನ್ನೆಲೆಯಲ್ಲಿ 20, 21 ಮೇ, 2012 ಎರಡು ದಿನಗಳ ಸಮಾವೇಶದಲ್ಲಿ ಬೆಂಗಳೂರಿನ ರಾಜ್ಯ ಸರ್ಕಾರಿ ನೌಕರರ ಸಂಘ (ಎನ್.ಜಿ.ಒ ಹಾಲ್), ಕಬ್ಬನ್ ಪಾರ್ಕ್‌ನಲ್ಲಿ ಏರ್ಪಡಿಸಲಾಗಿದೆ. ಸಮಾವೇಶವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಉದ್ಘಾಟಿಸುತ್ತಾರೆ.
 
ಕನ್ನಡ ನಾಡಿನ ವಿವಿಧ ವಲಯಗಳ ರೈತರ ಬೀಜ ಸಂಪತ್ತಿನ ಪ್ರದರ್ಶನ ಮತ್ತು ಸ್ಥಿತಿಗತಿ ಕುರಿತು ಬೀಜ ರಕ್ಷಕರಿಂದ ವಿಚಾರ ಮಂಡನೆ, ಕರ್ನಾಟಕ ರಾಜ್ಯ ಬೀಜ ನಿಗಮ, ಕರ್ನಾಟಕ ಕೃಷಿ ಇಲಾಖೆಗಳ ನಿರ್ದೇಶಕರು, ಕೃಷಿ ವಿ.ವಿ.ಗಳ ಬೀಜ ಸಂಶೋಧಕರೊಡನೆ ಸಂವಾದ ಏರ್ಪಡಿಸಲಾಗಿದೆ. ಡಾ. ಬಿ.ಎಂ. ಹೆಗಡೆ, ಡಾ. ಖಾದರ್, ಕೆ.ಸಿ ರಘು ಉಪನ್ಯಾಸ ನೀಡಲಿದ್ದಾರೆ. ಡಾ. ದೇವಿಂದರ್ ಶರ್ಮ ಮಾತನಾಡಲಿದ್ದಾರೆ. ಕುಲಾಂತರಿಗೆ ಒತ್ತಾಸೆಯಾದ ಕಾನೂನು ಕಾಯ್ದೆಗಳು ಕುರಿತು ಪ್ರೊ. ಎಂ.ಕೆ. ರಮೇಶ್ ಬೆಳಕು ಚೆಲ್ಲಲಿದ್ದಾರೆ.

ಮಾಹಿತಿಗೆ: 080-25283370, 8861252335 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT