ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜೋತ್ಪಾದನೆ; ಬಾಳು ಹಸನು

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಅಂತರ್ಜಲದ ಮಟ್ಟ ಕುಸಿದಿದ್ದು, ಕೊಳವೆ ಬಾವಿಯ ನೀರು ಬತ್ತಿದೆ. ಬೆಳೆಗಳಿಗೆ ನೀರು ಸಾಲುತ್ತಿಲ್ಲ. ಸೂರ್ಯಕಾಂತಿ, ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ನೀರು ಹೆಚ್ಚು ಬೇಕು. ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಡಿಮೆ ಬೆಲೆಗೆ ಮಾರುವ ಪರಿಸ್ಥಿತಿ.

ಇಂತಹ ಪರಿಸ್ಥಿತಿಯಲ್ಲಿಯೂ ಕಡಿಮೆ ನೀರಿನಲ್ಲಿ ಹೆಚ್ಚಿನ ಲಾಭದ ಬೀಜೋತ್ಪಾದನೆಯೊಂದಿಗೆ ಜೀವನಕ್ಕೆ ಬೇಕಾದ ಧಾನ್ಯಗಳನ್ನು ಬೆಳೆದರೆ ರೈತರ ಬದುಕು ಬಂಗಾರವಾಗುವುದು ಎಂದು ಸಾಬೀತು ಪಡಿಸಿದ್ದಾರೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಾಳಕೇರಿ ಗ್ರಾಮದ ಶರಣಪ್ಪ ಕರಡಿಕಲ್ಲ.

ಕೊಳವೆ ಬಾವಿಯಲ್ಲಿ ಸಿಗುವ ಅಲ್ಪ ನೀರಿನಲ್ಲೂ 30 ಗುಂಟೆಯಲ್ಲಿ ಬೀಜೋತ್ಪಾದನೆ ಮಾಡಿ ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ ಇವರು. ಶರಣಪ್ಪ ಅವರಿಗೆ ಒಂದೇ ಕಡೆಗೆ ಫಲವತ್ತಾದ ಆರು ಎಕರೆ ನೀರಾವರಿ ಜಮೀನು ಇದೆ. ಇದರಲ್ಲಿ ಮೊದಲು ಶೇಂಗಾ, ಹತ್ತಿ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಯುತ್ತಿದ್ದರು. ಅಂತರ್ಜಲ ಕುಸಿದ ಪರಿಣಾಮ ಬೆಳೆಗಳಿಗೆ ಬೆಲೆ ಸಿಗಲಿಲ್ಲ. ಇದರಿಂದಾಗಿ ಬೀಜೋತ್ಪಾದನೆ ಕೈಹಿಡಿದರು.

ಕೆಲ ಕಂಪನಿಗಳ ಮಾರ್ಗದರ್ಶನದಲ್ಲಿ ಮೆಣಸು, ಸೌತೆ, ಹಾಗಲಕಾಯಿ, ಹಿರೇಕಾಯಿ ಮತ್ತು ಕಲ್ಲಂಗಡಿ ಬೆಳೆದು ಅಧಿಕ ಲಾಭ ಗಳಿಸುತ್ತಿದ್ದಾರೆ. `ಕೆಲವು ಕಂಪನಿಗಳು ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೂಲಿ ಆಳುಗಳಿಗೆ ಬೇಕಾಗುವಷ್ಟು ಹಣವನ್ನು ಮುಂಗಡ ನೀಡುತ್ತವೆ. ಅವರ ಮಾರ್ಗದರ್ಶನದಲ್ಲಿ 30 ಗುಂಟೆ ಜಮೀನಿನಲ್ಲಿ 200 ಮೆಣಸು, ಕಲ್ಲಂಗಡಿ ಬೀಜಗಳನ್ನು ನಾಟಿ ಮಾಡಿದ್ದೇನೆ. ಕಂಪೆನಿಯ ಮೇಲ್ವಿಚಾರಕರೇ ಜಮೀನಿಗೆ ಸೊಳ್ಳೆ ಪರದೆ ಹಾಕಿಸಿಕೊಟ್ಟಿದ್ದಾರೆ. ಇದರಿಂದ ಬೆಳೆಗೆ ಬರುವ ರೋಗವನ್ನು ತಡೆಯುವುದರೊಂದಿಗೆ ಉತ್ತಮ ಇಳುವರಿ ಪಡೆದಿದ್ದೇನೆ' ಎನ್ನುತ್ತಾರೆ ಶರಣಪ್ಪ.

ಪರಾಗಸ್ಪರ್ಶ
ಹೂ ಬೀಡಲು ಆರಂಭವಾದ ದಿನದಿಂದ ಕೇವಲ 20 ದಿನಗಳಲ್ಲಿ ಬರುವ ಮೊಗ್ಗುಗಳನ್ನು ಸುಲಿದು ಗಂಡು ಹೂವಿನ ಪರಾಗರೇಣುಗಳನ್ನು ನೀಡಿ ಪರಾಗಸ್ಪರ್ಶ ಮಾಡುತ್ತಾರೆ. ಹೀಗೆ ಮಾಡಿದ ಕಾಯಿಯನ್ನು ಗುರುತಿಸಲು ದಾರ ಕಟ್ಟಬೇಕು. ಈ ಕೆಲಸ ಮಾಡಲು ಕೂಲಿ ಆಳುಗಳು ಹೆಚ್ಚಿಗೆ ಬೇಕಾಗುತ್ತವೆ.

ಆಳುಗಳು ಹೆಚ್ಚಾದರೂ ಪರವಾಗಿಲ್ಲ, ಇಳುವರಿ ಚೆನ್ನಾಗಿ ಬರುತ್ತದೆ ಎನ್ನುತ್ತಾರೆ ಅವರು. `ಪರಾಗಸ್ಪರ್ಶ ಮಾಡಿದ ಕಾಯಿ ಚೆನ್ನಾಗಿ ಬೆಳೆದು ಹಣ್ಣಾದ ತಕ್ಷಣ ಅದನ್ನು ಕಟಾವು ಮಾಡಿ ಬೀಜ ತೆಗೆದು ತೊಳೆಯಬೇಕು. ಇದರಿಂದ 30 ಗುಂಟೆ ಹೊಲದಲ್ಲೂ 50 ಕಿಲೊ ಬೀಜಗಳನ್ನು ಪಡೆಯಬಹುದು. ಬೀಜೋತ್ಪಾದನೆ ಪರ್ಯಾಯ ಮಾರ್ಗದ ಕೃಷಿಯಾಗಿದೆ. ಇದರಿಂದ ಬದುಕೂ ಹಸನಾಗುತ್ತದೆ' ಎನ್ನುವ ಅನುಭವದ ಮಾತು ಶರಣಪ್ಪನವರದ್ದು. ಸಂಪರ್ಕಕ್ಕೆ-9740547531
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT