ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಟೆ ನಾಟಾ ಅಕ್ರಮ ದಾಸ್ತಾನು ಪತ್ತೆ!

Last Updated 7 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಹುಲಿ ಅಭಯಾರಣ್ಯದಲ್ಲಿ ಮರಗಳ್ಳರ ಜಾಲ ಬೆಲೆಬಾಳುವ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿರುವ ಕೃತ್ಯ ನಿರಂತರವಾಗಿ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಬೆಲೆ ಬಾಳುವ ಸುಮಾರು 30ಕ್ಕೂ ಹೆಚ್ಚು ಬೀಟೆ ನಾಟಾಗಳನ್ನು ಕೊಂಕಳಮನೆ ಬೇಟೆ ನಿಗ್ರಹ ಶಿಬಿರದ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.

ಬೇಟೆ ನಿಗ್ರಹ ಶಿಬಿರದ ಬಳಿ ಅಭಯಾರಣ್ಯದಲ್ಲಿ ಬೀಟೆ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಚಿತ್ರ `ಪ್ರಜಾವಾಣಿ~ಗೆ ಲಭ್ಯವಾಗಿದೆ.

ಕಳೆದ ತಿಂಗಳಿನಲ್ಲಿ ಲಕ್ಕವಳ್ಳಿ, ಹೆಬ್ಬೆ ಹಾಗೂ ಭದ್ರಾ ಹಿನ್ನೀರು ಪ್ರದೇಶದ ಅಭಯಾರಣ್ಯದಲ್ಲಿ ಬೆಲೆ ಬಾಳುವ ಸಾಗುವಾನಿ, ಬೀಟೆ, ನಂದಿ ಮರಗಳನ್ನು ಕಳ್ಳರು ಕಡಿದು ಕಳ್ಳ ಸಾಗಣೆ ಮಾಡಿದ್ದಾರೆ.

ಈ ಭಾಗದಲ್ಲಿ ಸಕ್ರಿಯವಾಗಿದ್ದ ಮರಗಳ್ಳರ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದ ಅರಣ್ಯ ಇಲಾಖೆ, ಮರಗಳ್ಳರ ಎರಡು ತಂಡಗಳಲ್ಲಿ ಕೆಲವರನ್ನು ಇತ್ತೀಚೆಗಷ್ಟೆ ಬಂಧಿಸಿತ್ತು. ಆದರೂ ಇದೇ ಭಾಗದ ಹೆಬ್ಬೆ ವಲಯದ ಕಲ್ಕೋವೆ ಮತ್ತು ತಡಸಾ ಮಧ್ಯೆ ಅಭಯಾರಣ್ಯದಲ್ಲಿ 4 ಸಾಗುವಾನಿ ಮರಗಳು ನಾಲ್ಕೈದು ದಿನಗಳ ಹಿಂದೆ ಮತ್ತೆ ಕಳವು ಆಗಿವೆ. ಇದೇ ಜಾಗದಲ್ಲಿ ಈ ಹಿಂದೆ ಕಳವು ಆಗಿರುವ ಮರಗಳ ಹತ್ತಾರು ಹಳೆಯ ಬುಡಗಳು ಪತ್ತೆಯಾಗಿವೆ.

ತೇಗೂರು ಗುಡ್ಡದಲ್ಲಿ ಇತ್ತೀಚೆಗಷ್ಟೇ ಬೀಟೆ ಮರಗಳನ್ನು ಕಡಿದು ಸಾಗಿಸಿದ್ದರು. ಒಂದಷ್ಟು ಮರಗಳನ್ನು ಕದ್ದೊಯ್ದ ಕಳ್ಳರು ಸುಮಾರು 40 ಬೀಟೆಯ ನಾಟಾಗಳನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದರು. ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳ ಮಹಜರು ಮಾಡಿ, ಇದರಲ್ಲಿ ನಾಲ್ಕೈದು ನಾಟಾಗಳನ್ನು ಮಾತ್ರ ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಳಿದ ಮರದ ತುಂಡುಗಳನ್ನು ಕೊಂಕಳಮನೆ ಬೇಟೆ ನಿಗ್ರಹ ಶಿಬಿರದ ಬಳಿ ಅನಧಿಕೃತವಾಗಿ ಶೇಖರಿಸಿಟ್ಟಿದ್ದಾರೆ.
ಇವುಗಳನ್ನು ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಾರದೆ ಲಪಟಾಯಿಸುವ ಹುನ್ನಾರ ಹಾಕಿಕೊಂಡಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಮರಗಳು ಹನನವಾಗಿರುವಾಗ ಕಠಿಣ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೇ ನಾಟಾಗಳನ್ನು ಬಚ್ಚಿಟ್ಟಿರುವುದನ್ನು ನೋಡಿದರೆ ನಿರಂತರ ನಡೆಯುತ್ತಿರುವ ಮರಗಳ ಕಳವು ಪ್ರಕರಣಗಳ ಹಿಂದೆ ಇಲಾಖೆ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕೈವಾಡದ ಶಂಕೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ಮೇಲಧಿಕಾರಿಗಳು ಸಮಗ್ರ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಾಗುತ್ತದೆ. ಅಭಯಾರಣ್ಯದಲ್ಲಿ ನಡೆಯುತ್ತಿರುವ ಮರಗಳ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಭದ್ರಾ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತನಿಖೆಗೆ ಆದೇಶಿಸಬೇಕು ಎಂದು ಜಿಲ್ಲೆಯ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT