ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬೀಟ್ ಗುರು'ಗಳ ಜಂಬೆ ತಾಳ!

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಆ  ತರುಣ ಇದೇ ಬೆಂಗಳೂರಿನ ಮನೆ ಮತ್ತು ಭಜನಾ ಮಂಡಳಿಗಳಲ್ಲಿ, ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಭಜನೆಗೆ ಖಂಜಿರಾ ನುಡಿಸುತ್ತಾ ತನ್ನ ಸಂಗೀತದ ದಾಹವನ್ನು ನೀಗಿಕೊಳ್ಳುವ ಪ್ರಯತ್ನ ಮಾಡಿಕೊಳ್ಳುತ್ತಿದ್ದರು. ಅವರ ಖಂಜಿರಾ ನುಡಿ ಸಾಣಿಕೆಯ ಬೆಡಗಿಗೆ ಬೆರಗಾಗಿ ಭಜನಾ ಮಂದಿರಕ್ಕೆ ಹೋದ ಮತ್ತೊಬ್ಬ ತರುಣನ ಮೈಮನಸ್ಸಲ್ಲೆಲ್ಲಾ ಸಂಗೀತದ ನಶೆ.

ಪ್ರಶಾಂತ್ ಮುರಳೀಧರ್ ಎಂಬ ಆ ಯುವಕ ನಿಗೆ ಗಣೇಶನ್ ಗೋವಿಂದಸ್ವಾಮಿ ಎಂಬ ಆ ಖಂಜಿರಾ ತರುಣ ಒಂದು ಅಪರೂಪದ ಡೋಲಿನ ಬಗ್ಗೆ ಹೇಳಿದರು. ಪ್ರಶಾಂತ್‌ಗೆ ತಮ್ಮ ಕನಸಿನ ಡ್ರಮ್‌ನ ಸಾಕ್ಷಾತ್ಕಾರವಾದದ್ದು ಹಾಗೆ.

ಡಬ್ಬಗಳಿಂದಲೇ ಜಂಬೆ
ಆಫ್ರಿಕಾದ ಆದಿವಾಸಿಗಳ ನೆಚ್ಚಿನ ಡೋಲು, ಜಂಬೆ. ನುಡಿಸುವವನ ಜಾಣ್ಮೆ, ವೃತ್ತಿಪರತೆಗೆ ಅನುಗುಣ ವಾಗಿ ನೂರಾರು ಬಗೆಯ ನಾದವನ್ನು ಹೊಮ್ಮಿಸ ಬಲ್ಲ ವಿಶಿಷ್ಟ ಸಂಗೀತೋಪಕರಣವಿದು. ಭಾರತ ಸಂಗೀತಲೋಕದಲ್ಲಿ ಅಪರೂಪದಲ್ಲಿ ಬಳಕೆಯಾಗು ತ್ತಿರುವುದು ಮತ್ತೊಂದು ವಿಶೇಷ. ಇಂತಹ ಜಂಬೆ ಬೆಂಗಳೂರಿನ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಪ್ರಧಾನ ಪರಿಕರವಾಗಿ ಬಳಕೆಯಾಗಿರಲಿಲ್ಲ. ಆ ಡೋಲಿನ ಮೋಹಕ್ಕೆ ಬಿದ್ದಿದ್ದ ಪ್ರಶಾಂತ್ ಮತ್ತು ಗಣೇಶನ್‌ಗೆ ಸಿಲಿಕಾನ್ ಸಿಟಿಗೆ ಹೊಸ ಸಾಧ್ಯತೆ ಯನ್ನು ಪರಿಚಯಿಸಲು ಇಷ್ಟು ಸಾಕಾಯಿತು.

`ನಮಗೆ ಹೆಚ್ಚಿನ ತರಬೇತಿ, ಇನ್ನಷ್ಟು ವಾದ್ಯಗಳ ಪರಿಚಯ ಬೇಕಾಗಿತ್ತು. ವಿಕ್ಟರ್ ಆಲ್ಬರ್ಟ್ ಎಂಬ ಸಂಗೀತೋಪಕರಣ ಮಳಿಗೆಯ ಮಾಲೀಕರ ಸ್ನೇಹ ದಿಂದಾಗಿ ಇನ್ನಷ್ಟು ತಾಳವಾದ್ಯಗಳ ತರಬೇತಿ ಸಾಧ್ಯವಾಯಿತು. `ಗ್ರೀನ್ ರಿದಮ್ಸ' ಎಂಬ ಹೆಸರಿನೊಂದಿಗೆ ಇವರ ಸಂಗೀತ ತಂಡ ಅಧಿಕೃತವಾಗಿ ಶುರುವಾಯಿತು.  ಕ್ರಮೇಣ ಸ್ನೇಹಿತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಗಣೇಶ್ ಪೂಜಾರಿ ಮೃದಂಗ, ಗಣೇಶ್ ನಾಯಕ್ ಗಿಟಾರ್, ಅರ್ಜುನ್ ಎಂ.ಪಿ.ಎನ್ ಕೊಳಲು, ಆದರ್ಶ್ ಪಿ.ಬಿ. ಮತ್ತು ಪ್ರಸಾದ್ ಜಿ. ಜಂಬೆ ನುಡಿಸುವಲ್ಲಿ ನಿಪುಣರಾಗಿ ತಂಡವನ್ನು ಸೇರಿಕೊಂಡರು. ಎಲ್ಲರಿಗೂ ಜಂಬೆಯಲ್ಲಿ ಪ್ರಾವೀಣ್ಯ ಸಿಕ್ಕಿದರೂ ಪ್ರತಿಯೊಬ್ಬರಿಗೂ ಪ್ರತ್ಯೇಕ ಡೋಲು ಖರೀದಿಸುವುದು ಸವಾಲು ಎನಿಸಿದಾಗ ಪೇಂಟ್‌ನ ಖಾಲಿ ಡಬ್ಬಗಳಿಂದಲೇ ಜಂಬೆ ತಯಾರಿಸಿ ತರಬೇತಿ ಮುಂದುವರಿಸಿದೆವು' ಎಂದು ಆರಂಭದ ಕಷ್ಟದ ದಿನಗಳನ್ನು ಸ್ಮರಿಸುತ್ತಾರೆ ಗಣೇಶನ್ ಗೋವಿಂದಸ್ವಾಮಿ.

ಬ್ಯಾಂಡ್‌ನಲ್ಲಿ ಜಂಬೆ
`ನಗರದಲ್ಲಿ ಸಾಕಷ್ಟು ಮ್ಯೂಸಿಕ್ ಬ್ಯಾಂಡ್‌ಗಳಿದ್ದರೂ ಯಾರೂ ಜಂಬೆಯನ್ನು ಪ್ರಧಾನ ವಾದ್ಯ ಪರಿಕರ ವಾಗಿ ಬಳಸಿರುವ ಉದಾಹರಣೆಯಿಲ್ಲ. ಇದು, ಜಂಬೆಯನ್ನೇ ಉಸಿರಾಗಿಸಿಕೊಂಡಿದ್ದ ನಮ್ಮ ತಂಡಕ್ಕೆ ಗುರಿ ಮುಟ್ಟಲು ಸುಲಭ ಅವಕಾಶವಾಯಿತು. ಇನ್ನು ನಮ್ಮ ಸಂಗೀತ ಕಾರ್ಯಕ್ರಮಗಳಲ್ಲಿ ಜಂಬೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಜನ `ಯಾವುದೋ ಡೋಲು ಅದರಿಂದೇನು ಗಂಟೆಗಟ್ಟಲೆ ಬಾರಿಸೋದು' ಅನ್ನುವ ಉದಾಸೀನಭಾವದಿಂದಲೇ ಬರುತ್ತಿದ್ದರು. ಆದರೆ ಜಂಬೆ ನಿರೀಕ್ಷೆಗೂ ಮೀರಿ ಸಂಗೀತಾರಾಧಕರನ್ನು ಸೆಳೆಯಿತು, ಕೆಲವರನ್ನು ಆವರಿಸಿಕೊಂಡಿತು. ನಮಗೂ ತರಬೇತಿ ಕೊಡಿ ಎಂಬ ಬೇಡಿಕೆ ಹೆಚ್ಚಾಯಿತು. ಗಣೇಶನ್ ಬೆಂಗಳೂರಿನಲ್ಲಷ್ಟೇ ಅಲ್ಲ ಸಿಂಗಪುರ, ಮಲೇಶ್ಯಾ, ಅಮೆರಿಕ, ಯೂರೋಪ್ ಮತ್ತಿತರ ಖಂಡಾಂತರ ಮಟ್ಟದಲ್ಲಿ ನೂರಾರು ತರಬೇತಿ ಶಿಬಿರಗಳನ್ನು ನಡೆಸಿದ್ದಾನೆ' ಎಂದು ಮಾಹಿತಿ ಕೊಡುತ್ತಾರೆ ಪ್ರಶಾಂತ್ ಮುರಳೀಧರನ್.

ಆಸ್ಟ್ರೇಲಿಯಾ ಮೂಲದ- ಉದ್ದನೆಯ ಕೊಳವೆಯಾಕಾರದ ವಾದ್ಯ- ದಿಜಿರಿಡು ಮತ್ತು ಅದೇ ದೇಶದ ಡರ್ಬೂಕಾ ಎಂಬ ತಾಳ/ವಾದ್ಯ ಪರಿಕರಗಳನ್ನೂ ನಮ್ಮ ತಂಡಕ್ಕೆ ಸೇರಿಸಿದೆವು. ಇದರಿಂದಾಗಿ ಬೆಂಗಳೂರಿನಲ್ಲಿ ಆಫ್ರಿಕನ್, ಅರೇಬಿಯನ್ ಮತ್ತು ಆಸ್ಟ್ರೇಲಿಯನ್ ಸಂಗೀತೋಪಕರಣಗಳನ್ನು ಹೊಂದಿರುವ ಏಕೈಕ ಬ್ಯಾಂಡ್ ಎಂಬ ಹೆಗ್ಗಳಿಕೆ ನಮ್ಮದಾಯಿತು ಎಂದು ನಗುತ್ತಾರೆ ಅವರು.

ಗ್ರೀನ್ ರಿದಮ್ಸ ತಂಡದ ಈ ವೈಶಿಷ್ಟ್ಯವೇ ಅವರಿಗೆ ಉತ್ತಮ ಶ್ರೋತೃವರ್ಗವನ್ನು, ಅಭಿಮಾನಿಗಳನ್ನು ತಂದುಕೊಟ್ಟಿದ್ದು. ಆದರೆ ಕ್ರಮೇಣ ಅವರಿಗೇ ಅನಿಸಿದ್ದೇನೆಂದರೆ, ತಮ್ಮ ತಂಡದ ಹೆಸರು ಯುವಜನರನ್ನು ಒಂದೇ ಏಟಿಗೆ ಸೆಳಯುತ್ತಿಲ್ಲ ಎಂದು. ಆಗ ಇಟ್ಟುಕೊಂಡ ಹೆಸರೇ `ಬೀಟ್ ಗುರೂಸ್'.

ಬೀಟ್ ಗುರೂಸ್ ಎಂದು ಸರ್ಚ್ ಎಂಜಿನ್‌ನಲ್ಲಿ ಹಾಕಿ ಎಂಟರ್ ಕೊಟ್ಟರೆ ಸಾಕು, ಜಂಬೆ ವಿದೇಶದಲ್ಲೂ ಇವರಿಗೆ ಹೊಗಳಿಕೆಯ ಸುರಿಮಳೆ ಗಳಿಸಿಕೊಟ್ಟ ಬಗ್ಗೆ ಮಾಹಿತಿ ಸಿಗುತ್ತದೆ. `ಕೈಲಿ ನುಡಿಸುವ ವಾದ್ಯಗಳನ್ನು ಉಳಿಸಿ' ಎಂಬ ಅಡಿಟಿಪ್ಪಣಿ, `ಬೀಟ್‌ಗುರೂಸ್' ಬ್ರಾಂಡ್‌ನ ಹೆಸರಿನ ಕೆಳಗಿದೆ.

ಪ್ರೇಕ್ಷಕರೂ ಸಾಥಿದಾರರು
ಸಾಮಾನ್ಯವಾಗಿ ಬ್ಯಾಂಡ್‌ನಲ್ಲಿ ಗಾಯಕರು ತಮ್ಮಂದಿಗೆ ಹಾಡುವಂತೆ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವಂತೆ ಪ್ರೇಕ್ಷಕರತ್ತ ಮೈಕ್ ಹಿಡಿಯುತ್ತಾರೆ.  ಆದರೆ `ಬೀಟ್‌ಗುರೂಸ್'ನಲ್ಲಿ ಗಾಯಕರೇ ಇಲ್ಲ! ಆದರೆ ಪ್ರೇಕ್ಷಕರು ಇವರ ಕಾರ್ಯಕ್ರಮದುದ್ದಕ್ಕೂ ಸಾಥ್ ನೀಡುತ್ತಾರೆ.

ಇವರ ಕಾರ್ಯಕ್ರಮ ಆರಂಭವಾಗುವುದು ನಿಧಾನಗತಿಯಿಂದ. ಆಗ ಚಪ್ಪಾಳೆಯಿಂದ ಆರಂಭವಾಗುವ ಸಾಥಿ ಕ್ಷಣಗಳು ಸರಿದಂತೆ, ಡೋಲು ಬಾರಿಸುವಾತನ ಕೈ-ಬೆರಳುಗಳೂ ವೇಗ ಪಡೆದುಕೊಂಡಂತೆ ಚಪ್ಪಾಳೆಯ ವೇಗವೂ ಹೆಚ್ಚುತ್ತದೆ. ಮೇರುಮಟ್ಟಕ್ಕೆ ತಲುಪಿದಾಗ ಎಲ್ಲ ಡೋಲುಗಳೂ, ಕೊಳಲೂ. ಮೃದಂಗವೂ ತಟಸ್ಥವಾಗುತ್ತದೆ. ಆದರೆ ಪ್ರೇಕ್ಷಕರು ಹಳೆಯ ಗುಂಗಿನಲ್ಲೇ ಚಪ್ಪಾಳೆ ತಟ್ಟುತ್ತಿರುತ್ತಾರಂತೆ! ಸಂಗೀತದ ಆವಾಹನೆಯೆಂದರೆ ಹಾಗೇ ಅಲ್ಲವೇ?

ಹೀಗೆ, ವಿಶಿಷ್ಟವಾದ ವಾದ್ಯ, ಪರಿಕರಗಳೊಂದಿಗೆ ಬೆಂಗಳೂರಿನ ಬ್ಯಾಂಡ್ ಸಂಗೀತ ಲೋಕದಲ್ಲಿ ಹೊಸ ಭಾಷ್ಯ ಬರೆದ ಬೀಟ್ ಗುರೂಸ್ ತಂಡ, ಆಫ್ರಿಕಾ, ಅರೇಬಿಯಾ ಮತ್ತು ಆಫ್ರಿಕಾದ ಸಂಗೀತದ ಲಯವನ್ನು ನಮ್ಮ ಸಂಸ್ಕೃತಿಗೆ, ಶ್ರುತಿಗೆ ಒಗ್ಗಿಸಿ ಗೆದ್ದಿದ್ದಾರೆ. ಪಾಶ್ಚಿಮಾತ್ಯ ಒಪೆರಾ ಗಾಯಕ ರಾಬರ್ಟ್ ಕ್ರೋ ಅವರ ಬಾಯಲ್ಲಿ ಗಾಯತ್ರಿ ಮಂತ್ರ ಹಾಡಿಸಿ ಜಂಬೆ, ಡರ್ಬೂಕಾ ಮತ್ತು ಡಿಜಿರುಡಾದ ಹಿಮ್ಮೇಳ ನೀಡಿದ್ದು ಇದಕ್ಕೆ ಸಾಕ್ಷಿ. ಸಾಧಿಸಿದರೆ ಸಬಳ ನುಂಗಬಹುದು ಎಂಬ ಮಾತನ್ನು ಬೀಟ್ ಗುರೂಸ್ ಸಾಬೀತು ಮಾಡಿರುವ ಪರಿಯಿದು. ಸಂಪರ್ಕಕ್ಕೆ: 99863 00398, 99863 00398, www.facebook.com/beatgurus

ಮಕ್ಕಳಿಗಾಗಿ ವಿದೇಶಕ್ಕೆ...
ಜಂಬೆ ಎಂಬ ವಿದೇಶಿ ಸಂಗೀತ ಪರಿಕರವನ್ನೇ ದುಡಿಸಿಕೊಂಡು ಸತತ 13 ವರ್ಷಗಳಿಂದ ಬ್ಯಾಂಡ್ ಲೋಕದಲ್ಲಿ ಮಿಂಚುತ್ತಿರುವ ಬೀಟ್ ಗುರೂಸ್ ಯುವಕರು ಡೋಲು ಬಾರಿಸುವುದು ದುಡ್ಡು ಮಾಡುವ ಏಕೈಕ ಉದ್ದೇಶದಿಂದಲ್ಲ. ಬದಲಾಗಿ ಅವರು ಅನಾಥ ಮಕ್ಕಳಿಗಾಗಿ ದೇಶ ವಿದೇಶದೆಲ್ಲೆಡೆ ಸಂಚರಿಸಿ ಶಿಕ್ಷಣದ ಮೂಲಕ ಬದುಕು ಕಟ್ಟಿಕೊಡುವ ಕೆಲಸವನ್ನೂ ಮಾಡುತ್ತಿರುವುದು ಗಮನಾರ್ಹ.

`ಸಿಂಗಪುರದ ಸಂಸ್ಥೆಯೊಂದು ನಮಗೆ ಹಣಕಾಸಿನ ನೆರವು ಒದಗಿಸುತ್ತದೆ. ಅದಕ್ಕೆ ನಮ್ಮ ಪಾಲನ್ನೂ ಸೇರಿಸಿ ಪ್ರತಿ ವರ್ಷ 100 ಮಕ್ಕಳಿಗೆ ಸಹಾಯ ಮಾಡುತ್ತೇವೆ' ಎನ್ನುತ್ತಾರೆ, ಗಣೇಶನ್.

ಈ ತಂಡದ ಮತ್ತೊಂದು ವೈಶಿಷ್ಟ್ಯವೆಂದರೆ ಆರು ಮಂದಿ ಕಾಯಂ ಸದಸ್ಯರು, ಇಬ್ಬರು ಅತಿಥಿ ಕಲಾವಿದರನ್ನು ಹೊಂದಿರುವ `ಬೀಟ್‌ಗುರೂಸ್'ನಲ್ಲಿ ದುಶ್ಚಟಕ್ಕೆ ದಾಸರಾದವರು ಯಾರೂ ಇಲ್ಲವಂತೆ!

`ಬೆಂಗಳೂರೇ ಇರಲಿ ಎಲ್ಲೇ ಇರಲಿ ನನ್ನಲ್ಲಿ ತರಬೇತಿಗೆ ಬರುವಾಗ ಧೂಮಪಾನ, ಮದ್ಯಪಾನದಿಂದ ದೂರವಿರಬೇಕು ಎಂಬ ಷರತ್ತು ವಿಧಿಸುತ್ತೇನೆ. ನನ್ನ ತಂಡದ ಸದಸ್ಯರಿಗೂ ಈ ಮಾತು ಅನ್ವಯಿಸುತ್ತದೆ. ಅದೃಷ್ಟಕ್ಕೆ  ನಮ್ಮಲ್ಲಿ ಯಾರಿಗೂ ದುರಭ್ಯಾಸಗಳಿಲ್ಲ' ಎಂದು ಅಭಿಮಾನದಿಂದ ಹೇಳುತ್ತಾರೆ, ತಂಡದಲ್ಲಿ ತರಬೇತುದಾರರಾಗಿ ದುಡಿಯುವ ಗಣೇಶನ್ ಗೋವಿಂದಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT