ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಡಿ ಕಾರ್ಮಿಕರ ಬದುಕಿಗೆ ಮೋರಿಯೇ ಕಂಟಕ

ಮನೆಗಳಿಗೆ ನುಗ್ಗಿದ ಹಾವು, ಚೇಳು; ದವಸ–ಧಾನ್ಯ, ಅಡುಗೆ ಸಾಮಗ್ರಿ ನೀರುಪಾಲು
Last Updated 11 ಸೆಪ್ಟೆಂಬರ್ 2013, 4:54 IST
ಅಕ್ಷರ ಗಾತ್ರ

ದಾವಣಗೆರೆ: ‘ದಿನವಿಡೀ ಬೀಡಿಕಟ್ಟಿದರೆ ` 50 ಕೂಲಿ ಸಿಗುತ್ತೆ... ಯಜಮಾನ್ರು ಕೈ ಗಾಡಿ ಎಳೆದು ಬಿಡಿಗಾಸು ದುಡಿತಾರೆ... ಅದರಲ್ಲೇ ಅಂದಿಗೆ ಬೇಕಾಗುವಷ್ಟು ಗಂಜಿಗೆ ಕಾಳು–ಕಡಿ ತಂದು ಬದುಕು ಸಾಗಿಸುತ್ತಾ ಬಂದಿದ್ದೇವೆ. ಈಗ ಅನ್ನ ಬೇಸಯಿಸಲಿಕ್ಕೆ ಪಾತ್ರೆನೂ ಗತಿಯಿಲ್ಲ... ಮಕ್ಕಳು ಖಾಲಿ ಹೊಟ್ಟೇಲಿ ಶಾಲೆಗೆ ಹೋಗಿದ್ದು ನೋಡಿ ಕರಳು ಚುರ್‌ ಅಂತು ಸ್ವಾಮಿ...’

ನಗರದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಆರ್ಭಟಿಸಿದ ನಗರದ ಪ್ರಮುಖ ರಾಜಗಾಲುವೆ ಹೊಂದಿರುವ ಮೋರಿಯ ಪ್ರವಾಹಕ್ಕೆ ತುತ್ತಾದ ಬೀಡಿ  ಕಾರ್ಮಿಕರ ಬಡಾವಣೆಯ ನಿವಾಸಿ ಹಸೀನಾಬಾನು ಬಾನು ತೋಡಿಕೊಂಡ ಸಂಕಷ್ಟದ ಪರಿ ಇದು.
ಮಳೆ ಸುರಿದೊಡನೆ ನಗರದಲ್ಲಿನ ರಾಜಗಾಲುವೆಯ ಮೋರಿಯ ಬಾಷಾ ನಗರದ, ಮಿರ್ಜಾ ಇಸ್ಮಾಯಿಲ್‌ ನಗರ, ಲಾಲ್‌ಬಹದ್ದೂರ್‌ ಶಾಸ್ತ್ರೀ ನಗರ, ಎಸ್‌.ಎಸ್‌. ಮಲ್ಲಿಕಾರ್ಜುನ ನಗರ, ಬೀಡಿ ಕಾರ್ಮಿಕರ ಬಡಾವಣೆ ನಿವಾಸಿಗಳ ನಿದ್ದೆಗೆಡಿಸುತ್ತಾ ಬಂದಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಈ ಬೃಹತ್ ಮೋರಿ ನಿವಾಸಿಗಳ ನಿದ್ದೆಗೆಡಿಸುವ ಬದಲು ಬದುಕನ್ನೇ ನುಂಗಿ ಹಾಕಿದೆ. ಮೋರಿಯ ಆರ್ಭಟಕ್ಕೆ ಒಟ್ಟು 35 ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ರಾಗಿ, ಜೋಳ, ಅಕ್ಕಿ, ಬೇಳೆ ಸೇರಿದಂತೆ ಅಡುಗೆ ಸಾಮಗ್ರಿಯನ್ನು ಮೋರಿ ನುಂಗಿ ಹಾಕಿದೆ. ಹಾವು, ಚೇಳು, ಜರಿ ಮನೆಗಳಲ್ಲಿ ಸೇರಿವೆ.

ಇಡೀ ರಾತ್ರಿ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ನಿವಾಸಿಗಳು ನಿದ್ದೆಗೆಟ್ಟಿದ್ದಾರೆ. ಇಡೀ ಬಡಾವಣೆಯಲ್ಲಿ ದುನಾರ್ತ ಬೀರುವ ಮೂಲಕ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ. ಅನಿವಾರ್ಯ ಸ್ಥಿತಿಯಲ್ಲಿ ನಿವಾಸಿಗಳು ಅಲ್ಲೇ ಬದುಕು ಹುಡುಕುತ್ತಿದ್ದಾರೆ! ಸುಮಾರು 4ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಸ್ಪಂದಿಸದ ಅಧಿಕಾರಿಗಳು
ನಗರದಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ದಾವಣಗೆರೆ ನಗರಸಭೆ ಮಹಾನಗರ ಪಾಲಿಕೆ ಆಗಿ ಮೇಲ್ದರ್ಜೆಗೇರಿ ಆರು ವಷರ್ಗಳೇ ಕಳೆದರೂ ಸುಸಜ್ಜಿತ ಚರಂಡಿ ವ್ಯವಸ್ಥೆ ನಗರದ ನಾಗರಿಕರಿಗೆ ಕನಸಾಗಿಯೇ ಉಳಿದಿದೆ.

ದಾವಣಗೆರೆ ಉತ್ತರ ವಲಯ ಭಾಗದಲ್ಲಿನ ಸುಮಾರು 14 ಬಡಾವಣೆಯ ಚರಂಡಿ ನೀರು ನಗರದ ಉತ್ತರ ದಿಕ್ಕಿಗೆ ರಾಜಗಾಲುವೆಯ ಮುಖಾಂತರ ನದಿಯೋಪಾದಿಯಲ್ಲಿ ಹರಿಯುತ್ತದೆ. ಈ ಬೃಹತ್‌ ಚರಂಡಿಯ ದಂಡೆಯಲ್ಲಿ ಹತ್ತಾರು ನಗರಗಳು ಬೆಳೆದುನಿಂತಿವೆ. ಸಲ್ಪ ಮಳೆ ಸುರಿದಾಗಲೆಲ್ಲ ಈ ಮೋರಿ ಭಾಷಾನಗರ, ಮಿರ್ಜಾ ಇಸ್ಮಾಯಿಲ್ ನಗರ, ಎಸ್‌.ಎಸ್. ಮಲ್ಲಿಕಾರ್ಜುನ್‌ ನಗರ, ಬೀಡಿ ಕಾರ್ಮಿಕರ ನಗರಗಳಲ್ಲಿನ ನಿವಾಸಿಗಳ ನೆಮ್ಮದಿ ಕೆಡಿಸುತ್ತಾ ಬಂದಿದೆ. ಆದರೆ, ಸೋಮವಾರ ರಾತ್ರಿ ನಿರಂತರವಾಗಿ ಸುರಿದ ಮಳೆಗೆ ಮೋರಿ ರೌದ್ರವತಾರ ತಾಳಿದೆ. ಬೀಡಿ ಕಾರ್ಮಿಕರ ಬದುಕಿನ ಮೇಲೆ ಬರೆ ಎಳೆದಿದೆ. ಮಧ್ಯರಾತ್ರಿಯ ಆ ಸಮಯದಲ್ಲಿ ನಿವಾಸಿಗಳು ರಕ್ಷಿಸುವಂತೆ ಜಿಲ್ಲಾಡಳಿತಕ್ಕೆ, ಪೊಲೀಸರಿಗೆ ದೂರವಾಣಿ ಕರೆ ಮಾಡಿ ಗೋಗರೆದರೂ ಯಾರೂ ಬಂದಿಲ್ಲ ಎಂದು ನಿವಾಸಿಗಳಾದ ನಸಿಮಾ ಬಾನು, ಶಬ್ನಾ, ಅಂಜುಮ್‌, ಮುಮ್ತಾಜ್‌ ಹೇಳುತ್ತಾರೆ.

ಸೌಲಭ್ಯ ವಂಚನೆ
ಬೀಡಿ ಕಾರ್ಮಿಕರಿಗೆ ರಾಜೀವ್‌ಗಾಂಧಿ ಆವಾಸ್‌ ಯೋಜನೆ ಅಡಿ 59 ಮನೆಗಳನ್ನು ಹಾಗೂ ಅಮಾನತ್‌ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ 93 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ, ಈ ಮನೆಗಳೆಲ್ಲವೂ ಶಿಥಿಲಗೊಂಡಿದ್ದು, ಸೋರುತ್ತಿವೆ. ಸಹಕಾರ ಸಂಸ್ಥೆ 10 ಮನೆಗಳಿಗೆ ಒಂದೇ ಮೀಟರ್‌ನಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಅದೂ ಸಂಜೆ 7ರಿಂದ ಬೆಳಿಗ್ಗೆ 6ಗಂಟೆವರೆಗೆ ವಿದ್ಯುತ್‌ ಪೂರೈಕೆ ಮಾಡುತ್ತಾರೆ. ಇಷ್ಟಕ್ಕೆ ಪ್ರತಿ ತಿಂಗಳು ರೂ 400 ಶುಲ್ಕ ಕಟ್ಟಬೇಕಿದೆ ಎನ್ನುತ್ತಾರೆ ನಿವಾಸಿಗಳು.

ಬಡಾವಣೆಯ ತುಂಬೆಲ್ಲಾ ಇಡೀ ಚರಂಡಿಯ ನೀರು ಆವರಿಸಿದೆ. ಸಂಚರಿಸಲು ರಸ್ತೆಗಳಿಲ್ಲ. ಬೀದಿದೀಪಗಳನ್ನು ಅಳವಡಿಸಿಲ್ಲ. ಕತ್ತಲಾಗುತ್ತಿದ್ದಂತೆ ಮನೆತುಂಬಾ ಸೊಳ್ಳೆಗಳು ತುಂಬಿಕೊಳ್ಳುತ್ತವೆ. ಕಪ್ಪೆಗಳ ಕಾಟ ಶುರುವಾಗುತ್ತದೆ. ಇಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಮಲೇರಿಯಾ ಲಕ್ಷಣಗಳಿವೆ. ಜ್ವರಬಾಧೆ ತಪ್ಪಿಲ್ಲ. ಸುಮಾರು 70ಕ್ಕೂ ಹೆಚ್ಚು ಮಕ್ಕಳಿದ್ದು, ಅವುಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಸದಾ ಕಾಡುವ ಅನಾರೋಗ್ಯ ನಿವಾಸಿಗಳ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಳ್ಳಿದೆ.

ತಾತ್ಕಾಲಿಕ ಕಾರ್ಯಕ್ಕೆ ಚಾಲನೆ
ಜಿಲ್ಲಾಧಿಕಾರಿ ಅಂಜನ್‌ಕುಮಾರ್‌ ಅವರೊಂದಿಗೆ ನೀರು ನುಗ್ಗಿರುವ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿ ಪರಿಸ್ಥಿತಿ ಪರಿಶೀಲಿಸಿದ್ದೇವೆ. ಉಕ್ಕಿ ಹರಿಯುತ್ತಿರುವ ಮೋರಿಗೆ ದಂಡೆಗಳನ್ನು ಎತ್ತರಿಸುವ ತಾತ್ಕಾಲಿಕ ಕಾರ್ಯಕ್ಕೆ ತತಕ್ಷಣ ಚಾಲನೆ ನೀಡಲಾಗಿದೆ. ನಂತರ ಮೋರಿ ನೀರು ಸರಾಗವಾಗಿ ಮುಂದೆ ಸಾಗಲು ಕೈಗೊಳ್ಳಬೇಕಾದ ಶ್ವಾಶ್ವತ ಯೋಜನೆ ಬಗ್ಗೆ ನಿರ್ಧರಿಸಿಲ್ಲ. ಮಳೆಗಾಲ ಮುಗಿದ ನಂತರ ಯೋಜನೆ ರೂಪಿಸಿಲು ಸಂಬಂಧಿಸಿದ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಸೂಚಿಸಲಾಗಿದೆ. ಸದ್ಯ ಬೀಡಿ ಕಾರ್ಮಿಕರ ಬಡಾವಣೆಯಲ್ಲಿ ವಿದ್ಯುತ್‌ ದೀಪ ಅಳವಡಿಸಲು ಕ್ರಮಕೈಗೊಳ್ಳಲಾಗುವುದು.
– ನಾರಾಯಣಪ್ಪ, ಆಯುಕ್ತರು, ಪಾಲಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT