ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಉತ್ಸವದಲ್ಲಿ ಪ್ರತಿಭಟನೆ

Last Updated 21 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಉತ್ಸವದಲ್ಲಿ ಭಾಗವಹಿಸುವುದಕ್ಕಾಗಿ ಜಿಲ್ಲಾಡಳಿತ ‘ಮಾರಾಟ’ ಮಾಡಿದ್ದ ಪ್ಲಾಟಿನಂ, ಡೈಮಂಡ್, ಗೋಲ್ಡ್ ಕಾರ್ಡ್‌ಗಳನ್ನು ಹೊಂದಿದ್ದರೂ ಪ್ರವೇಶ ನಿರಾಕರಿಸಿದ್ದರಿಂದ ಕಾರ್ಡುದಾರರು ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು.ಕಾರ್ಡುದಾರರಿಗೆ ಪ್ರವೇಶ ನಿರಾಕರಿಸಲಾಯಿತು ಮಾತ್ರವಲ್ಲ. ಕೆಲವರು ಪೊಲೀಸರ ಲಾಠಿ ಪ್ರಹಾರದ ರುಚಿ ಕೂಡ ಅನುಭವಿಸಬೇಕಾಯಿತು.

ಜಿಲ್ಲಾಡಳಿತವು 10 ಸಾವಿರ ರೂಪಾಯಿಗೆ ಪ್ಲಾಟಿನಂ ಕಾರ್ಡ್, ಐದು ಸಾವಿರ ರೂಪಾಯಿಗೆ ಡೈಮಂಡ್ ಮತ್ತು ಒಂದು ಸಾವಿರ ರೂಪಾಯಿಗೆ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡಿತ್ತು. ಹಾಗೆಯೇ ಕಾರ್ಡು ಖರೀದಿಸಿದವರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕೂಡ ಮಾಡಿತ್ತು. ಆದರೆ, ಭಾನುವಾರ ಕಾರ್ಡುದಾರರಿಗೆ ನಿಗದಿ ಮಾಡಿದ್ದ ಸ್ಥಳ ಭರ್ತಿಯಾಗಿ ಬಿಟ್ಟಿತು.  ಹಣ ನೀಡಿ ಕಾರ್ಡು ಖರೀದಿಸಿದ ಜನ ಹಿಡಿ ಶಾಪ ಹಾಕಬೇಕಾಯಿತು. ‘ಜಿಲ್ಲಾಧಿಕಾರಿಗೆ ಧಿಕ್ಕಾರ’ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಹತ್ತು ಸಾವಿರ ರೂಪಾಯಿ ನೀಡಿ ಪ್ಲಾಟಿನಂ ಕಾರ್ಡ್ ಖರೀದಿಸಿದ್ದೇನೆ. ಸ್ಥಳ ನಿಗದಿಯಾಗಿದೆ ಎಂದು ಮನೆಯವರನ್ನು ಕರೆದುಕೊಂಡು ಬಂದಿದ್ದೆ. ಹಣ ನೀಡಿದರೂ ಸ್ಥಳ ಇಲ್ಲ ಮಾತ್ರವಲ್ಲ. ಕುಟುಂಬದ ಸದಸ್ಯರ ಮೇಲೆ ಪೊಲೀಸರು ಲಾಠಿಯಿಂದ ಹೊಡೆದರು’ ಎಂದು ಶಿವನಗರ ನಿವಾಸಿಯಾಗಿರುವ ಚಂದ್ರಕಾಂತ ಶಂಕರ ಅವರು ಆರೋಪಿಸಿದರು. ಶನಿವಾರ ಕೂಡ ಕಾರ್ಡುದಾರರು ಸ್ಥಳ ದೊರಕದೇ ನಿರಾಶರಾಗಿ ಮರಳುವಂತಾಗಿತ್ತು.

ನಕಲಿ ಕಾರ್ಡುಗಳು: ಜಿಲ್ಲಾಡಳಿತದ ವಿತರಿಸಿದ ಕಾರ್ಡುಗಳನ್ನೇ ಹೋಲುವಂತಹ ‘ನಕಲಿ’ ಕಾರ್ಡುಗಳು ಕಾಣಿಸಿಕೊಂಡದ್ದು ಸಮಸ್ಯೆ ಉಲ್ಬಣ ಆಗುವುದಕ್ಕೆ ಕಾರಣವಾಯಿತು. ನಕಲಿ ಕಾರ್ಡು ಹೊಂದಿದವರು ಬೇಗ ಬಂದು ನಿಗದಿಗೊಳಿಸಿದ್ದ ಸ್ಥಳದಲ್ಲಿ ಕುಳಿತಿದ್ದರಿಂದ ಹಣ ನೀಡಿ ಖರೀದಿಸಿದವರು ನಿರಾಶರಾಗಬೇಕಾಯಿತು. ‘ನಕಲಿ ಕಾರ್ಡುಗಳು ಇರಲು ಸಾಧ್ಯವೇ ಇಲ್ಲ.
 
ನನಗೆ ನೂರಕ್ಕೆ ನೂರು ಖಚಿತವಿದೆ’ ಎಂದು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ‘ಕಾರ್ಡಿನಲ್ಲಿ 7 ಗಂಟೆಗೆ ಮುಂಚೆ ಬಂದವರಿಗೆ ಮಾತ್ರ ಸ್ಥಳಾವಕಾಶ ಕಲ್ಪಿಸಲಾಗುತ್ತದೆ’ ಎಂದು ಕಾರ್ಡಿನಲ್ಲಿ ದಾಖಲಿಸಲಾಗಿತ್ತು. ತಡವಾಗಿ ಬಂದವರಿಗೆ ಸ್ಥಳ ನೀಡುವುದು ಕಷ್ಟಸಾಧ್ಯ’ ಎಂದರು.‘ಏಳುಗಂಟೆಗೆ ಮೊದಲು ಬಂದವರ ಪೈಕಿ ಒಬ್ಬರಿಗೂ ಪ್ರವೇಶ ನಿರಾಕರಿಸಿಲ್ಲ’ ಎಂದ ಜಿಲ್ಲಾಧಿಕಾರಿಗಳು ‘ಲಕ್ಷಕ್ಕೂ ಹೆಚ್ಚು ಜನ ಸೇರಿರುವ ಕಡೆಗಳಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸುವುದು ಸಾಧ್ಯವಿಲ್ಲ’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT