ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕಚೇರಿ ಇಲ್ಲ, ಅಧಿಕಾರಿಯೂ ಇಲ್ಲ:ಪ್ರವಾಸೋದ್ಯಮ ಅಭಿವೃದ್ಧಿ ಹೇಗೆ?

Last Updated 18 ಆಗಸ್ಟ್ 2012, 6:50 IST
ಅಕ್ಷರ ಗಾತ್ರ

ಬೀದರ್:  ಕೋಟೆ, ಮಹಮೂದ್ ಗಾವಾನ್ ಮದರಸಾ, ತನ್ನದೇ ಪರಂಪರೆ ಹೊಂದಿರುವ ದೇಗುಲಗಳು ಸೇರಿದಂತೆ ಅನೇಕ ಪ್ರವಾಸಿ ತಾಣಗಳಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಪ್ರಗತಿಗೆ ವಿಫುಲ ಅವಕಾಶಗಳಿದ್ದರೂ, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಅಧಿಕಾರಿಗಳೇ ಇಲ್ಲ.

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಒತ್ತು ನೀಡಲು ಪ್ರತ್ಯೇಕವಾಗಿ ಪ್ರವಾಸೋದ್ಯಮ ಇಲಾಖೆಯೇ ಇದ್ದರೂ ಜಿಲ್ಲೆಯಲ್ಲಿ ಇಲಾಖೆ ಕಚೇರಿಯಾಗಲಿ, ಅಧಿಕಾರಿಗಳಾಗಲಿ ಇಲ್ಲ. ಬಹುತೇಕ ಹುದ್ದೆಗಳು ಖಾಲಿ ಇರುವಂತೇ ಈ ಹುದ್ದೆಯನ್ನು ಭರ್ತಿ ಮಾಡುವ ಕಾರ್ಯವು ನೆನೆಗುದಿಗೆ ಬಿದ್ದಿದೆ.

ಅಧಿಕಾರಿ ಮೂಲಗಳ ಪ್ರಕಾರ, ಪ್ರಸ್ತುತ ಗುಲ್ಬರ್ಗ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗೇ ಜಿಲ್ಲೆಯ ಪ್ರಭಾರದ ಹೊಣೆಯೂ ಇದೆ. ಅವರ ಕೆಲಸ ಕಚೇರಿ ಕೆಲಸಗಳಿಗೆ ಸೀಮಿತವಾದ ಕಾರಣ, ಜಿಲ್ಲೆಯ ಮಟ್ಟಿಗೆ ಆ ಅಧಿಕಾರಿಯೂ ಅಪರೂಪದ ಅತಿಥಿಯೇ ಆಗಿದ್ದಾರೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಚೇರಿಯಾಗಲಿ, ಅಧಿಕಾರಿಗಳಾಗಲಿ ಇಲ್ಲ. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿಯೇ ಒಂದು ಶಾಖೆ ಇದ್ದು, ಅಲ್ಲಿಯೂ ಕೇವಲ ಗುಮಾಸ್ತರೊಬ್ಬರು ಮಾತ್ರ ಇದ್ದಾರೆ. ಉಳಿದಂತೆ, ಯಾವುದೇ ಸಿಬ್ಬಂದಿ ಇಲ್ಲ ಎಂಬುದು ತಿಳಿದುಬಂದ ಮಾಹಿತಿ.

ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ವಲ್ಯ್‌ಪುರೆ ಅವರು, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಚುರುಕು ನೀಡಿದ್ದು, ಸ್ಥಳೀಯ ಆರ್ಥಿಕತೆ ಪ್ರಗತಿಗೆ ಪೂರಕವಾಗಿ ರೂಪುರೇಷೆ ಸಿದ್ಧಪಡಿಸುವ ಮಾತನಾಡಿದ್ದಾರೆ.

ಮೊದಲ ಹಂತವಾಗಿ ಇಲಾಖೆಗೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕಾದ ಹೊಣೆಗಾರಿಕೆ ಸಚಿವರ ಮೇಲಿದೆ.
ಸಚಿವರೇ ಉಲ್ಲೇಖಿಸಿರುವಂತೆ ಜಿಲ್ಲೆಯಲ್ಲಿ ಐತಿಹಾಸಿಕ ಪರಂಪರೆಯ ಸ್ಥಳಗಳು ಸೇರಿದಂತೆ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಲು ಸಾಕಷ್ಟು ಸ್ಥಳಗಳು, ಅವಕಾಶಗಳು ಇದ್ದರೂ  ಹಲವು ವರ್ಷಗಳಿಂದ ಕಡೆಗಣಿಸಲಾಗಿದೆ ಎಂಬುದು ನಿಜ.

ನಗರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಕೋಟೆ, ಮಹಮೂದ್ ಗಾವಾನ್ ಮದರಸಾ, ಪಾಪನಾಶ ದೇವಾಲಯ, ನರಸಿಂಹ ಝರಣಿ, ಗುರುನಾನಕ ಝೀರಾ, ಅಷ್ಟೂರಿನ ಗುಂಬಜ್‌ಗಳು, ಹೊನ್ನಕೇರಿ ಸಿದ್ದೇಶ್ವರ   ದೇವಾಲಯ, ಮೈಲಾರ ಮಲ್ಲಣ್ಣ ದೇವಾಲಯ, ಬಸವಕಲ್ಯಾಣದ   ಅನುಭವ ಮಂಟಪ ಸೇರಿದಂತೆ ಅನೇಕ ತಾಣಗಳಿವೆ.

`ನೆರೆಯ ಹೈದರಾಬಾದ್ ಪಟ್ಟಣದಿಂದ ನಗರಕ್ಕೆ ಅತ್ಯುತ್ತಮ ರಸ್ತೆ ಸಂಪರ್ಕ ಸೌಲಭ್ಯ ಇರುವುದು ಅನುಕೂಲಕರ. ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರೂ ಜಿಲ್ಲೆಗೆ ಭೇಟಿ ನೀಡುವಂಥ ವಾತಾವರಣ ರೂಪಿಸಿದರೂ ಸ್ಥಳೀಯವಾಗಿ ಆರ್ಥಿಕತೆ ಅಭಿವೃದ್ಧಿಯ ಜೊತೆಗೆ, ಉದ್ಯೋಗಾವಕಾಶಗಳ ಸೃಷ್ಟಿ ಸಾಧ್ಯತೆಗಳು ಇವೆ~ ಎನ್ನುತ್ತಾರೆ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ್ ಅವರು.
ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು ಎಂಬ ಕೂಗು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಆ ನಿಟ್ಟಿನಲ್ಲಿ ಕಾರ್ಯ ಸಾಧನೆಯಾಗಿಲ್ಲ.

ಹಾಗಂತ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಹಣವೇ ವೆಚ್ಚವಾಗಿಲ್ಲ ಎಂದು ಅರ್ಥವಲ್ಲ.
ಈಚೆಗೆ ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕ ರಘುನಾಥರಾವ್        ಮಲ್ಕಾಪುರೆ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಸರ್ಕಾರವೇ, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ (2008-09 ರಿಂದ 2011-12) ಬೀದರ್ ತಾಲ್ಲೂಕಿಗಾಗಿಯೇ ಕೇಂದ್ರದ ಅನುದಾನದಲ್ಲಿ 10,224 ಲಕ್ಷ, ರಾಜ್ಯದ ಅನುದಾನದಲ್ಲಿ 708 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

ಜೊತೆಗೆ, ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಡಾರ್ಮಿಟರಿ, ಧ್ವನಿ ಬೆಳಕು ಯೋಜನೆ, ಜಲಕ್ರೀಡಾ, ಸಾಹಸ ಕ್ರೀಡಾ ಸೌಲಭ್ಯಗಳನ್ನು ಪ್ರವಾಸಿಗಳಿಗೆ ಒದಗಿಸಲಾಗುತ್ತಿದೆ ಎಂದು ಉತ್ತರವನ್ನು ಸರ್ಕಾರ ನೀಡಿದೆ. ಈ ಸೌಲಭ್ಯಗಳನ್ನು ಎಲ್ಲಿ ಒದಗಿಸಲಾಗುತ್ತಿದೆ ಎಂಬ ಕುತೂಲಹವಂತೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT