ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಚೌಳಿ ಮಠಕ್ಕೆ ಭಕ್ತರ ನೇತೃತ್ವ

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಚೌಳಿ ಮಠವನ್ನು ಸದ್ಯ ಭಕ್ತರ ನೇತೃತ್ವದಲ್ಲೇ ಮುನ್ನಡೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ.

ಮಠದ ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರ ನಿಗೂಢ ಸಾವು ಮತ್ತು ಮೂವರು ಸಾಧಕರ ಆತ್ಮಾಹುತಿ ಹಿನ್ನೆಲೆಯಲ್ಲಿ ಮಠದಲ್ಲಿ ಶುಕ್ರವಾರ ನಡೆದ ಸರ್ವ ಭಕ್ತರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

`ಮಠದಲ್ಲಿ ನಡೆದ ಘಟನೆಗಳು ನಮಗೆ ತೀವ್ರ ಬೇಸರ ತಂದಿದ್ದು, ಒಂದು ತಿಂಗಳ ಕಾಲ ಮಠ ಬಿಟ್ಟು ಹೋಗಲು ನಿರ್ಧರಿಸಿದ್ದೇವೆ' ಎಂದು ಸಾಧಕರಾದ ಮಹಾದೇವ್ ಸ್ವಾಮೀಜಿ ಹಾಗೂ ಸುಭಾಷ್ ಸ್ವಾಮೀಜಿ ತಿಳಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಭಕ್ತರು, ಸಾಧಕರು ಬರುವವರೆಗೆ ಭಕ್ತರ ಮುಂದಾಳತ್ವದಲ್ಲಿ ಪೂಜೆ ಸೇರಿದಂತೆ ಮಠದ ವಿವಿಧ ಚಟುವಟಿಕೆಗಳನ್ನು ಮುನ್ನಡೆಸಲು ನಿರ್ಣಯಿಸಿದರು. ಮಠದ ಮುಂದಾಳತ್ವ, ಟ್ರಸ್ಟ್ ರಚನೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಲು ಏಪ್ರಿಲ್ 28ರಂದು ಮತ್ತೊಮ್ಮೆ ಸಭೆ ಸೇರಲು ತೀರ್ಮಾನಿಸಲಾಯಿತು ಎಂದು ಮಠದ ಭಕ್ತರೂ ಆದ ಬೀದರ್ ನಗರಸಭೆ ಸದಸ್ಯ ವೀರಶೆಟ್ಟಿ ಭಂಗೂರು ತಿಳಿಸಿದರು.

ಹಿರಿಯ ಸ್ವಾಮೀಜಿ ವಾಸವಾಗಿದ್ದ ಮಠದ ಗರ್ಭಗುಡಿಯಲ್ಲಿ ಇರುವ ಲಾಕರ್ ಅನ್ನು ಪೊಲೀಸರ ಸಮ್ಮುಖದಲ್ಲಿ ತೆರೆದು ಅದರಲ್ಲಿನ ಕಾಗದಪತ್ರ, ಚಿನ್ನಾಭರಣ ಹಾಗೂ ಇತರ ಸಾಮಗ್ರಿಗಳನ್ನು ಪರಿಶೀಲಿಸಲಾಯಿತು.

ಸ್ವರ್ಣ ಲೇಪಿತ ಬೆಳ್ಳಿ ಕಿರೀಟ, ಸ್ವರ್ಣ ಲೇಪಿತ ಕೈಗೆ ಕಟ್ಟುವ ನಾಲ್ಕು ಬೆಳ್ಳಿ ಪಟ್ಟಿಗಳು, ಒಂದು ಚಿನ್ನದ ಲಾಕೆಟ್, 10 ಚಿನ್ನದ ಉಂಗುರ,ರೂ. 5 ಸಾವಿರ  ನಗದು, ಸುಮಾರುರೂ. 1,200  ಜಮೆ ಇರುವ ಬ್ಯಾಂಕ್ ಖಾತೆ, ಚೌಳಿಯಲ್ಲಿ ಇರುವ ಎಂಟು ಎಕರೆ ಜಮೀನು, ಜನವಾಡ ವ್ಯಾಪ್ತಿಯಲ್ಲಿರುವ 6 ಎಕರೆ ಜಮೀನಿನ ಕಾಗದ ಪತ್ರ ಸೇರಿದಂತೆ ವಿವಿಧ ವಸ್ತುಗಳ ಕುರಿತು ಲೆಕ್ಕ ಹಾಕಲಾಯಿತು. ಮಠದ ಅಧೀನದಲ್ಲಿ ಒಂದು ಜೀಪ್, ಎರಡು ಬೈಕ್, ವಿವಿಧೆಡೆ ಸುಮಾರು 20 ಶಾಖಾ ಮಠಗಳು ಇರುವ ಬಗ್ಗೆಯೂ ಮಾಹಿತಿ ನೀಡಲಾಯಿತು.

ಬೀದರ್ ಗ್ರಾಮೀಣ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಅನಂದ ಕಬ್ಬೂರು, ಜನವಾಡ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಪಂಡಿತ ಸಗರ್, ಭಕ್ತರಾದ ಓಂಕಾರ ಪಾಟೀಲ್, ಶಿವರಾಜ ರಾಜಗೀರಾ, ಕವಿರಾಜ ಸಂಗೋಳಗಿಕರ್, ಮಲ್ಲಿಕಾರ್ಜುನ ಗೋರಂಚೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT