ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಪ್ರಮುಖ ಪಕ್ಷಗಳ ಅಭ್ಯರ್ಥಿ ಘೋಷಣೆ

Last Updated 6 ಏಪ್ರಿಲ್ 2013, 6:47 IST
ಅಕ್ಷರ ಗಾತ್ರ

ಬೀದರ್: ಯಾರಿಗೆ ಟಿಕೆಟ್ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ಪಕ್ಷ ಚಾಲ್ತಿಯಲ್ಲಿದ್ದ ವದಂತಿಗಳನ್ನೇ ಸಮರ್ಥಿಸುವಂತೆ ಬೀದರ್ ದಕ್ಷಿಣ ಕ್ಷೇತ್ರದಿಂದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಮೀನಾಕ್ಷಿ ಸಂಗ್ರಾಮ್ ಅವರನ್ನು ಕಣಕ್ಕಿಳಿಸಿದೆ.

ಈ ಮೂಲಕ ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ಇಬ್ಬರು ಮಹಿಳೆಯರು ಕಣಕ್ಕೆ ಇಳಿದಂತಾಗಲಿದೆ. ಈಗಾಗಲೇ ಕೆಜೆಪಿ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾಜಿ ಶಾಸಕ ಬಸವರಾಜ ಪಾಟೀಲ ಅಟ್ಟೂರು ಅವರ ಪತ್ನಿ ಮಲ್ಲಮ್ಮಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಲಭ್ಯ ಮಾಹಿತಿ ಅನುಸಾರ, ಕಾಂಗ್ರೆಸ್ ಅಭ್ಯರ್ಥಿಗಳಾಗಿ ಬೀದರ್, ಭಾಲ್ಕಿ ಮತ್ತು ಹುಮನಾಬಾದ್ ಕ್ಷೇತ್ರದಿಂದ ಹಾಲಿ ಶಾಸಕರು ಮತ್ತು ಬಸವಕಲ್ಯಾಣ ಕ್ಷೇತ್ರದಿಂದ ನಾರಾಯಣರಾವ್ ಅವರನ್ನು ಕಣಕ್ಕೆ ಇಳಿಸಲು ಪಕ್ಷ ತೀರ್ಮಾನಿಸಿದೆ. ಆದರೆ, ಔರಾದ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಪ್ರಶ್ನೆಯಾಗೇ ಉಳಿದಿದೆ.

ಬೀದರ್ ಕ್ಷೇತ್ರದಲ್ಲಿ ಶಾಸಕ ರಹೀಂ ಖಾನ್ ಅವರಿಗೆ ಟಿಕೆಟ್ ತಪ್ಪಬಹುದು ಎಂಬ ವಂದತಿಗಳು ಇದ್ದವು.  ಆದರೆ, ಇದನ್ನು ಸುಳ್ಳಾಗಿಸುವ ಮೂಲಕ ಕಾಂಗ್ರೆಸ್ ಹಾಲಿ ಶಾಸಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಪಕ್ಷದ ತೀರ್ಮಾನಕ್ಕೆ ಸಂತಸ ವ್ಯಕ್ತಪಡಿಸಿದ ಮೀನಾಕ್ಷಿ ಸಂಗ್ರಾಮ್ ಅವರು, `ನನ್ನ ಹೋರಾಟವನ್ನು ಗುರುತಿಸಿ ಪಕ್ಷ ಅವಕಾಶ ನೀಡಿದೆ. ಗೆಲ್ಲುವ ವಿಶ್ವಾಸವಿದೆ. ಮಹಿಳೆಯರ ಪರ ಇನ್ನಷ್ಟು ಪ್ರಬಲವಾಗಿ ದನಿ ಎತ್ತಲು ಒಂದು ಅವಕಾಶ' ಎಂದರು.

ಬಿಜೆಪಿ ಪಟ್ಟಿ: ಬಿಜೆಪಿಯೂ ತನ್ನ ಪಟ್ಟಿಯನ್ನು ಪ್ರಕಟಿಸಿದ್ದು, ಬೀದರ್ ದಕ್ಷಿಣ ಕ್ಷೇತ್ರದಿಂದ ಬಸವರಾಜ ಪಾಟೀಲ್ ಅಷ್ಟೂರು; ಭಾಲ್ಕಿ ಕ್ಷೇತ್ರದಿಂದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಔರಾದ್‌ನಿಂದ ಹಾಲಿ ಶಾಸಕ ಪ್ರಭು ಚವ್ಹಾಣ,  ಬಸವಕಲ್ಯಾಣ ಕ್ಷೇತ್ರದಿಂದ ಸಂಜಯ್ ಪಟವಾರಿ ಅವರನ್ನು ಕಣಕ್ಕಿಳಿಸಿದೆ.

ಬೀದರ್ ಮತ್ತು ಹುಮನಾಬಾದ್ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಎರಡನೇ ಪಟ್ಟಿಯಲ್ಲಿ ಹೊರಬೀಳಬಹುದು. ಪಕ್ಷದ ಮೂಲದ ಪ್ರಕಾರ, ಬೀದರ್ ಕ್ಷೇತ್ರದಿಂದ ಮಾಜಿ ಶಾಸಕ ರಮೇಶ್‌ಕುಮಾರ್ ಪಾಂಡೆ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ. ಜೆಡಿಎಸ್ ನಿರೀಕ್ಷೆಯಂತೆ ಬೀದರ್ ದಕ್ಷಿಣದಿಂದ ಶಾಸಕ ಬಂಡೆಪ್ಪಾ ಕಾಶೆಂಪುರ, ಬಸವಕಲ್ಯಾಣದಿಂದ ಮಾಜಿಶಾಸಕ ಮಲ್ಲಿಕಾರ್ಜುನ ಖೂಬಾ, ಹುಮನಾಬಾದ್ ಕ್ಷೇತ್ರದಿಂದ ಜಿಲ್ಲಾ ಘಟಕದ ಅಧ್ಯಕ್ಷ ನಸಿಮುದ್ದೀನ್ ಪಟೇಲ್ ಅವರ ಹೆಸರು ಪ್ರಕಟಿಸಿದೆ.

ಭಾಲ್ಕಿ, ಔರಾದ ಮತ್ತು ಬೀದರ್ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಾಗಿದೆ.ಇದರೊಂದಿಗೆ ಜಿಲ್ಲೆಯವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳಿಂದ ಮುಖಾಮುಖಿ ಆಗಲಿರುವ ಅಭ್ಯರ್ಥಿಗಳ ಚಿತ್ರಣ ಲಭ್ಯವಾದಂತಾಗಿದೆ. ಸಾರ್ವತ್ರಿಕ ಚುನಾವಣೆಗೆ ಇದೇ 10ರಂದು ಅಧಿಸೂಚನೆ ಹೊರಬೀಳಲಿದ್ದು,ನಾಮಪತ್ರಗಳನ್ನು ಸಲ್ಲಿಸಲು ಇದೇ 17 ಕಡೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT