ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ನೂರು ವರ್ಷ ಇತಿಹಾಸದ ಚರ್ಚ್‌

Last Updated 24 ಡಿಸೆಂಬರ್ 2013, 6:11 IST
ಅಕ್ಷರ ಗಾತ್ರ

ಬೀದರ್: ನೂರು ವರ್ಷಗಳಿಗೂ ಹಿಂದೆ   ಬೀದರ್‌ಗೆ ಆಗಮಿಸಿದ್ದ ಕ್ರೈಸ್ತ ಮಿಷನರಿ­ಗಳು ನಗರದಲ್ಲಿ ನೆಲೆ­ಯೂರಿದ ಭಾಗ ಮಂಗಲಪೇಟ್‌. ನಗರದ ಹಳೆಯ ಬಡಾವಣೆಗಳಲ್ಲಿ ಒಂದಾದ ಮಂಗಲಪೇಟ್‌ನಲ್ಲಿ ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಚರ್ಚ್, ಮಿಷನ್‌ ಆಸ್ಪತ್ರೆ, ರಾಸ್‌ ಮೆಥೋಡಿಸ್ಟ್‌ ಚರ್ಚ್‌ ಈ ಎಲ್ಲವೂ ಕ್ರೈಸ್ತ ಮಿಷನರಿಗಳು ಭೇಟಿಯ, ಅಸ್ತಿತ್ವದ ಗುರುತುಗಳು. ಇಂದಿಗೂ ಕ್ರೈಸ್ತರ ಭೇಟಿಗೆ ವೇದಿಕೆಯಾಗುತ್ತಿವೆ.


ಮೆಥೋಡಿಸ್ಟ್‌ ಚರ್ಚ್ ಭವ್ಯವಾದ ಆಕರ್ಷಣೆಯ ಕಟ್ಟಡ, ವಿಶಾಲವಾದ ಮೈದಾನ ಹೊಂದಿದೆ. ಕ್ರಿಸ್‌ಮಸ್ ದಿನ ಇಲ್ಲಿ ನಡೆವ ಧಾರ್ಮಿಕ ಕಾರ್ಯ­ಕ್ರಮಗಳಲ್ಲಿ ಅಸಂಖ್ಯ ಸಂಖ್ಯೆಯ ಕ್ರೈಸ್ತರು ಸೇರುತ್ತಾರೆ.

ಮೆಥೋಡಿಸ್ಟ್‌ ಚರ್ಚ್‌ ಅನ್ನು  ಎ.ಇ. ಕುಕ್‌ ಅವರು 1896ರಲ್ಲಿ ನಿರ್ಮಾಣ ಮಾಡಿದ್ದು. ಪ್ರಸ್ತುತ ಕ್ರಿಸ್‌ಹಬ್ಬದ ದಿನ ಯೇಸು­ಕ್ರಿಸ್ತರ ಆರಾಧನೆಗಾಗಿ ಭಜನೆ, ಸಾಮೂಹಿಕ ಪ್ರಾರ್ಥನೆ, ಧರ್ಮಗುರು ಎ. ಸಿಮಿಯೋನ್‌ ಅವರಿಂದ ಯೇಸು ಸಂದೇಶಗಳ ಆಶೀರ್ವಚನ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತವೆ.

ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ಮುನ್ನಾ ದಿನಗಳಲ್ಲಿ ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಚರ್ಚ್ ವತಿಯಿಂದ ಸಾಂಸ್ಕೃತಿಕ ಸ್ಪರ್ಧೆಗಳು, ಮ್ಯಾರಥಾನ್‌  ನಡೆಯಲಿದೆ.

ಮಂಗಲ್‌ಪೇಟ್‌ನಲ್ಲಿನ ರಾಸ್ ಮೆಮೋರಿಯಲ್ ಚರ್ಚ್‌ ಕೂಡಾ ನೂರು ವರ್ಷಗಳ ಇತಿಹಾಸ ಹೊಂದಿ­ದೆ. ಈಚೆಗೆ ನವೀಕರಣಗೊಂಡಿದ್ದರೂ, ಗುಣಮಟ್ಟದ ನಿರ್ಮಾಣಕ್ಕೆ ಸಾಕ್ಷಿ­ಯಾಗಿ ಉಳಿದಿದೆ. ವಾರಾಂತ್ಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ಬ್ರಿಟಿಷ್‌ರ ಕಾಲದಲ್ಲಿ ಕ್ರೈಸ್ತ ಮಿಶನರಿಗಳಿಂದ ಸುಮಾರು 1901ರಲ್ಲಿ ಆರಂಭವಾಗಿರುವ ಮೆಥೋಡಿಸ್ಟ್‌ ಚರ್ಚ್‌ ಅಡಿಯಲ್ಲಿ ಸದ್ಯ ನಡೆಯುತ್ತಿರುವ ಮಂಗಲಪೇಟ್‌ನ ಎನ್.ಎಫ್‌. ಶಾಲೆಯೂ ಜಿಲ್ಲೆಯ ಮೊಟ್ಟ ಮೊದಲನೆ ಕನ್ನಡ ಮಾಧ್ಯಮದ ಶಾಲೆ ಎಂದೇ ಹಿರಿಮೆ ಪಡೆದಿದೆ.

ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಚರ್ಚ್‌ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಪ್ರೇರಣೆಯ ಸ್ಥಳ ಎಂದು ಹೆಸರಾಗಿದೆ. ಚರ್ಚ್‌ನಲ್ಲಿ ಯೇಸು ಸಂದೇಶಗಳ ಜಾಗೃತಿ ಮೂಡಿಸುವ ಪ್ರತಿ ಭಾನುವಾರ ಬೆಳಿಗ್ಗೆ ಹಾಗೂ ಪ್ರತಿ ಬುಧವಾರ ಸಾಯಂಕಾಲ ‘ಸತ್ಯವೇದ ಪಾಠ ಶಾಲೆ’ ನಡೆಯುತ್ತದೆ.

ಬೇಸಿಗೆ ರಜೆ ದಿನಗಳಲ್ಲಿ ಸುಮಾರು 10 ದಿವಸಗಳ ಕಾಲ ವಿದ್ಯಾರ್ಥಿ­ಗಳಿಗಾಗಿ ರಜೆ ಕಾಲದ ಸತ್ಯವೇದ ಪಾಠ ಶಾಲೆಯೂ ನಡೆಸಲಾಗುತ್ತದೆ ಎಂದು ವಿವರಣೆ ನೀಡುತ್ತಾರೆ ಪ್ರೊ. ರವಿದಾಸ್‌.

ಧರ್ಮಗುರು  ಎ. ಸಿಮಿಯೋನ್‌ ಅವರು ಬೈಬಲ್‌ ಪಠಣ, ಯೇಸುಕ್ರಿಸ್ತ ಅವರ ಸಂದೇಶಗಳು ಹಾಗೂ ಕ್ರೈಸ್ತ ಧರ್ಮದ ಪರಂಪರೆ ಬಗ್ಗೆ ಜಾಗೃತಿ ಮೂಡಿಸುವುದು ಸತ್ಯವೇದ ಪಾಠ ಶಾಲೆ ಉದ್ದೇಶ. ಜೊತೆಗೆ ವಿಶೇಷ ಪ್ರಾರ್ಥನೆ, ಭಜನೆ ಕಾರ್ಯಕ್ರಮಗಳು ನಡೆಯಲಿವೆ.
ಚರ್ಚ್‌ ಅಡಿಯಲ್ಲಿ ಎನ್‌.ಎಫ್‌. ಪ್ರಾಥಮಿಕ, ಪ್ರೌಢಶಾಲೆ, ಪದವಿ­ಪೂರ್ವ ಹಾಗೂ ಪದವಿ ಕಾಲೇಜುಗಳು ನಡೆಯುತ್ತಿದ್ದು. ಈ ಮೂಲಕ ಶೈಕ್ಷಣಿಕವಾಗಿಯೂ ಜಿಲ್ಲೆಗೆ ವಿಶೇಷ ಕೊಡುಗೆ ನೀಡುತ್ತಿದೆ.

ಕ್ರಿಸ್‌ಮಸ್‌ ಸಿದ್ಧತೆ: ಯೇಸು ಅವರ ಜನ್ಮದಿನದ ನಿಮಿತ್ತ ಆಚರಿಸಲಾಗುವ ಕ್ರಿಸ್‌ಮಸ್‌ ಹಬ್ಬ ಅಂಗವಾಗಿ  ಜಿಲ್ಲೆಯಲ್ಲಿ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗಿದೆ.

ಡಿ. 1 ರಿಂದ ಶುರುವಾಗುವ ಕ್ರಿಸ್‌ಮಸ್‌  ಹಬ್ಬದ ದಿನವಾದ  25 ರ ವರೆಗೂ ಇರುತ್ತದೆ.

ನಾಟಕ, ನೃತ್ಯ, ಮನೆ ಮನೆಗೆ ತೆರಳಿ ಶುಭ ಸಂದೇಶ ರವಾನೆ, ಸಾಂತಕ್ಲೌಜ್ ವೇಷಧಾರಿಗಳಿಂದ ಪ್ರಾರ್ಥನೆ, ಚಾಕೊಲೇಟ್ ವಿತರಣೆ, ಆಟೋಟಗಳ ಆಯೋಜನೆ, ಕ್ರಿಸ್‌ಮಸ್ ಟ್ರೀ ಹಬ್ಬದಲ್ಲಿ ಕಂಡು ಬರುವ ಪ್ರಮುಖ ದೃಶ್ಯ.

ಡಿ. 1ರಿಂದ 25 ರವರೆಗೆ ಕ್ರಿಸ್‌ಮಸ್ ಅಡ್ವೆಂಟ್ ಆಚರಿಸಲಾಗುತ್ತದೆ. ನಾಟಕ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸ­ಲಾಗುತ್ತದೆ. ಮನೆ ಮನೆಗೆ ತೆರಳಿ ಶುಭ ಸಂದೇಶ ಸಾರಲಾಗುತ್ತದೆ. ಕ್ರೈಸ್ತರ ಮನೆಗಳಲ್ಲಿ ಕ್ರಿಸ್‌ಮಸ್‌ ಟ್ರೀ ಅಳವಡಿಸಿ ಸಿಂಗರಿಸಲಾಗುತ್ತದೆ ಎನ್ನುತ್ತಾರೆ ನಗರಸಭೆ ಸದಸ್ಯ ಫಿಲೋಮಿನ್ ರಾಜ್ ಪ್ರಸಾದ್.

ಸಾಂತಾಕ್ಲಾಸ್‌ ವೇಷಧಾರಿಗಳು ನೃತ್ಯ, ಪಾರ್ಥನೆ ಮೂಲಕ ಮಕ್ಕಳಿಗೆ, ಹಿರಿಯರಿಗೆ ಚಾಕೊಲೇಟ್‌ ವಿತರಿಸು­ತ್ತಾರೆ. ಸೇಂಟ್ ಪೌಲ್  ರಕ್ತದಾನ ಶಿಬಿರ, ಮ್ಯಾರಥಾನ್, ಸೈಕ್ಲಿಂಗ್, ಕ್ರಿಕೆಟ್, ಟೆಬಲ್ ಟೆನಿಸ್, ನೃತ್ಯ, ಚಿತ್ರಕಲೆ ಸ್ಪರ್ಧೆಗಳು ನಡೆಯಲಿವೆ  ಎನ್ನುತ್ತಾರೆ.

ಮನೆಗಳಲ್ಲಿ ಕೇಕ್, ಡೊನಟ್ಸ್, ಮುರಕಲು ತಿಂಡಿ, ಆಹಾರ ಸಿದ್ಧಪಡಿಸಲಾಗುತ್ತದೆ. ಹಬ್ಬದ ದಿನ ಬೆಳಿಗ್ಗೆ ಚರ್ಚ್‌ಗಳಲ್ಲಿ ಆರಾಧನೆ, ಪ್ರವಚನ ನಡೆಯುತ್ತದೆ. ನಂತರ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಬಂಧು-ಮಿತ್ರರ ಮನೆಗಳಿಗೆ ತೆರಳಿ ಶುಭ ಕೋರಲಾಗುತ್ತದೆ. ಬಂಧು, ಸ್ನೇಹಿತ­ರನ್ನು ಭೋಜನಕ್ಕೆ ಆಹ್ವಾನಿಸ­ಲಾಗುತ್ತದೆ. ಮನೆ, ಚರ್ಚ್‌ಗಳಲ್ಲಿ  ಕೇಕ್‌ ಕತ್ತರಿಸುವುದು ಸೇರಿದಂತೆ ಮತ್ತಿತರರ ಕಾರ್ಯಕ್ರಮಗಳು ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT