ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಟಕ ಪ್ರಭಾವಿ ಮಾಧ್ಯಮ

ಒಡಲಾಳ ನಾಟಕೋತ್ಸವದಲ್ಲಿ ರಂಗ ನಿರ್ದೇಶಕ ಸಾಂಬಶಿವ ದಳವಾಯಿ ಅಭಿಮತ
Last Updated 16 ಜನವರಿ 2013, 5:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಈ ಹಿಂದೆ ನಿಕೃಷ್ಟ ಸ್ಥಿತಿಯಲ್ಲಿ ಇದ್ದು, ಜನರಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಬೀದಿ ನಾಟಕ ಇಂದು ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಬೆಳೆದಿದೆ ಎಂದು ರಂಗ ನಿರ್ದೇಶಕ ಸಾಂಬಶಿವ ದಳವಾಯಿ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗ ಮಂದಿರದಲ್ಲಿ ಮಂಗಳವಾರ ಆರಂಭವಾದ `ಒಡಲಾಳ ನಾಟಕೋತ್ಸವ'ದಲ್ಲಿ `ಸಿಜಿಕೆ ಮತ್ತು ಬೀದಿ ನಾಟಕಗಳು' ಕುರಿತು ಅವರು ಮಾತನಾಡಿದರು.

ಜನಪದದಲ್ಲಿ ಅನೇಕ ಪ್ರಾಕಾರಗಳಿವೆ. ಇದರಲ್ಲಿ ಬೀದಿ ನಾಟಕ ಒಂದು ಪ್ರಾಕಾರ. ನೇರವಾಗಿ ಮನೆ ಅಂಗಳಕ್ಕೆ ಹೋಗಿ ವಸ್ತುಸ್ಥಿತಿಯನ್ನು ಇದ್ದ ಹಾಗೆ ಮನ ಮುಟ್ಟುವಂತೆ ಹೇಳುವ ಪ್ರಕಾರ ಇದಾಗಿದೆ. ಅತ್ಯಂತ ತೀಕ್ಷ್ಣ, ದೊಡ್ಡ ಹಾಗೂ ಫಲವತ್ತಾದ ಪ್ರಾಕಾರ ಎನ್ನುವ ಹೆಗ್ಗಳಿಕೆಯೂ ಬೀದಿ ನಾಟಕಗಳಿಗಿದೆ ಎಂದು ಹೇಳಿದರು.

ನೈಜ, ವಾಸ್ತವ, ಅಸಂಗತ, ಬಡ ನಾಟಕ ಹಾಗೂ ಬೀದಿ ನಾಟಕಗಳೆಂದು ಐದು ಪ್ರಕಾರಗಳನ್ನು ಹೊಂದಿರುವ ರಂಗಭೂಮಿಯಲ್ಲಿ ಒಂದೊಂದು ಪ್ರಕಾರವೂ ವಿಶಿಷ್ಟವಾಗಿದೆ. ಬಡ ನಾಟಕಗಳು ಏನು ಇಲ್ಲದೇ ಎಲ್ಲವನ್ನು ಹೇಳುವುದಾದರೆ, ಉಳಿದ ನಾಟಕಗಳು ಶಬ್ದ, ಕುಟುಂಬ ಹಾಗೂ ಸಮಾಜದ ಮಾಲಿನ್ಯದೊಳಗೆ ಸಿಲುಕಿರುವ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ ಎಂದರು.

ಪ್ರಮುಖವಾಗಿ ಗುರುತಿಸುವ ರಂಗಭೂಮಿ, ರುದ್ರಭೂಮಿ ಹಾಗೂ ಯುದ್ಧಭೂಮಿಗಳಲ್ಲಿ ರಂಗ ಭೂಮಿ ಎಲ್ಲರಿಗೂ ಎಟುಕುವ, ಅರ್ಥೈಸುವ, ಅಂದಾಜಿಸುವ ಮಾಧ್ಯಮವಾಗಿದೆ. ಇಡೀ ಜಗತ್ತು ನಡೆಯುವುದು  ಈ ಮೂರು ಭೂಮಿಕೆಗಳಲ್ಲಿ ಎಂದು ವಿಶ್ಲೇಷಿಸಿದರು.

ಇಂತಹ ಪ್ರಾಕಾರಗಳ ಆಳಕ್ಕೆ ಇಳಿದು ತನ್ನದೇ ಆದ ಬದ್ಧತೆ ಹೊಂದಿದ್ದ ಸಿಜಿಕೆ ರಂಗಭೂಮಿಗೆ ಸಾಕಷ್ಟು ಶ್ರಮಿಸಿದ್ದಾರೆ. ಹಳ್ಳಿಗಳಿಂದ ನವ ಯುವಕರನ್ನು ತಂದು ರಂಗಭೂಮಿಗೆ ನಟರನ್ನಾಗಿ ಸೇರಿಸುತ್ತಿದ್ದರು. ಆ ಮೂಲಕ ರಂಗಭೂಮಿ ಚಟುವಟಿಕೆಗೆ ವಿಸ್ತಾರವನ್ನು ಒದಗಿಸಿದರು ಎಂದರು.

ಯಾವುದೇ ವಿಚಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಸ್ವಭಾವ ಹೊಂದಿರುವವರು ಮನುಷ್ಯತ್ವ ಹೊಂದಿದ್ದಾರೆ ಎಂದರ್ಥ. ಈ ಕೆಲಸವನ್ನು ಸಿಜಿಕೆ ನಿರಂತರವಾಗಿ ಮಾಡುತ್ತಿದ್ದರು. ನಿರಂತರವಾಗಿ ನಡೆಯುವ ಹೋರಾಟಗಳಿಗೆ ಯಾವತ್ತೂ ಕೆಂಪು ಬಣ್ಣ ಇದ್ದೇ ಇರುತ್ತದೆ. ನಾಡಿನಾದ್ಯಂತ ಯಾವುದೇ ಅನ್ಯಾಯ ಅಪವಾದಗಳು ನಡೆದರೂ ತಕ್ಷಣ ಸಿಜಿಕೆ ಬೀದಿಗಿಳಿದು ಅನೇಕ ಯುವಕರನ್ನು ಹೋರಾಟಕ್ಕೆ ಧುಮುಕಿಸಿ ಅವರಿಗೆ ದಿಗಿಲು ಹಿಡಿಸುತ್ತಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಾಟಕ ಅಕಾಡೆಮಿ ಮಾಜಿ ಸದಸ್ಯ ಕೆ. ನಾಗರಾಜು ಮಾತನಾಡಿದರು. ಸಂಸ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ. ಬೋರಪ್ಪ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಟಪ್ಪನಹಟ್ಟಿ ತಿಪ್ಪೇಸ್ವಾಮಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ.ವಿ. ನಾಥ್, ಹಿರಿಯ ರಂಗ ಕಲಾವಿದ ಎಂ.ಸಿ. ಮಂಜುನಾಥ್, ಉದ್ಯಮಿ ಸುರೇಶ್ ಬಾಬು, ಶಿಕ್ಷಕ ನಂದಗೋಪಾಲ್ ಉಪಸ್ಥಿತರಿದ್ದರು.
ಒಡಲಾಳ ನೇಪಥ್ಯ ಗೌರವವನ್ನು ರಂಗ ಸಂಘಟಕ ರಚನಾ ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಲಾಯಿತು. ರಂಗ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ವಿ. ಬಸವರಾಜು ಸ್ವಾಗತಿಸಿದರು. ರಂಗ ಪಯಣ ತಂಡದಿಂದ ಕೃಷ್ಣ ಗಾರುಡಿ ನಾಟಕ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT