ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿ ಹಾವಳಿ ಗಂಭೀರವಾಗಿ ಪರಿಗಣಿಸಿ

ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ
Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕರನ್ನು `ಪೀಡೆ'ಯಂತೆ ಕಾಡುತ್ತಿರುವ, ಅವರಲ್ಲಿ ಭೀತಿ ಮೂಡಿಸಿರುವ ಬೀದಿ ನಾಯಿಗಳಿಗೆ ದಯಾಮರಣ ಕಲ್ಪಿಸಬೇಕು. ಇಂಥ ನಾಯಿಗಳು ಮಕ್ಕಳು ಅಥವಾ ಹಿರಿಯರನ್ನು ಕಚ್ಚಿದ ನಿದರ್ಶನ ಇಲ್ಲದಿದ್ದರೂ, ನೋವಾಗದ ರೀತಿಯಲ್ಲಿ ಅವುಗಳನ್ನು ಕೊಲ್ಲಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಬೀದಿ ನಾಯಿಗಳು ನೀಡುವ ತೊಂದರೆಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಂಭೀರವಾಗಿ ಪರಿಗಣಿಸಬೇಕು. ದೂರು ಸ್ವೀಕರಿಸಲು ವಲಯ ಮಟ್ಟದಲ್ಲಿ ಘಟಕಗಳನ್ನು ಆರಂಭಿಸಬೇಕು. ದೂರು ಬಂದ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ.

ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಮಾಸ್ಟರ್ ಜಿಶ್ನು ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, ಶುಕ್ರವಾರ ಈ ಆದೇಶ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಬೀದಿ ನಾಯಿಗಳನ್ನು ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳಪಡಿಸಬೇಕು. ಈ ಕಾರ್ಯವನ್ನು ಪ್ರಾಣಿ ದಯಾ ಸಂಘಗಳು, ಸರ್ಕಾರೇತರ ಸಂಸ್ಥೆಗಳಿಗೆ ವಹಿಸಬಹುದು. ಈ ಸಂಘ-ಸಂಸ್ಥೆಗಳಿಗೆ ವಹಿಸಲಾದ ಕೆಲಸವನ್ನು ಬಿಬಿಎಂಪಿ ಕಾಲಕಾಲಕ್ಕೆ ಪರಿಶೀಲಿಸಬೇಕು. ಸಂಘ-ಸಂಸ್ಥೆಗಳು ಕಾಲಕಾಲಕ್ಕೆ ಬಿಬಿಎಂಪಿಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ 84 ಪುಟಗಳ ಆದೇಶದಲ್ಲಿ ಹೇಳಿದೆ.

ಬೀದಿ ನಾಯಿಗಳ ದಾಳಿಯಿಂದ ತೊಂದರೆಗೆ ಸಿಲುಕಿದವರಿಗೆ ಪರಿಹಾರ ನೀಡುವ ಸಂಬಂಧ ಬಿಬಿಎಂಪಿ ನಿಯಮಾವಳಿಗಳನ್ನು ರೂಪಿಸಬೇಕು. ಸಂತಾನಶಕ್ತಿ ಹರಣ ಹಾಗೂ ರೇಬಿಸ್ ನಿರೋಧಕ ಲಸಿಕೆ ನೀಡುವ ಕಾರ್ಯವನ್ನು ಬಿಬಿಎಂಪಿ ಕಾಲಕಾಲಕ್ಕೆ ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದೆ.

ಬೀದಿ ನಾಯಿಗಳು ಗುಣಪಡಿಸಲಾಗದ ರೋಗದಿಂದ ನರಳುತ್ತಿವೆ ಅಥವಾ ತೀವ್ರಸ್ವರೂಪದಲ್ಲಿ ಗಾಯಗೊಂಡಿವೆ ಎಂಬುದನ್ನು ತಜ್ಞ ವೈದ್ಯರು ಖಚಿತಪಡಿಸಿದರೆ, ಅಂಥ ನಾಯಿಗಳನ್ನು `ಪ್ರಾಣಿಗಳ ಸಂತಾನಶಕ್ತಿ ನಿಯಂತ್ರಣ ನಿಯಮ -2001'ರ ಅನ್ವಯ ದಯಾಮರಣಕ್ಕೆ ಒಳಪಡಿಸಬಹುದು ಎಂದು ನ್ಯಾಯಪೀಠ ಹೇಳಿದೆ.

`ಕಸ ಎತ್ತಿ': ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ನಗರದಲ್ಲಿ ಗುಪ್ಪೆಯಾಗಿ ಬೀಳುವ ಕಸದ ರಾಶಿ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಕಾರಣ ಆಗಬಾರದು ಎಂದೂ ನ್ಯಾಯಪೀಠ ತನ್ನ ಆದೇಶದಲ್ಲಿ ಬಿಬಿಎಂಪಿಗೆ ತಾಕೀತು ಮಾಡಿದೆ.

ಸಾಕು ನಾಯಿಗಳ ಮಾಲೀಕರು, ತಮ್ಮ ಮನೆಯ ನಾಯಿ ಸಾರ್ವನಿಕರಿಗೆ ತೊಂದರೆ ನೀಡದಂತೆ ಕಾಳಜಿ ವಹಿಸಬೇಕು. ನಾಯಿಯನ್ನು ಹೊರಗೆ ಕೊಂಡೊಯ್ಯುವ ಸಂದರ್ಭದಲ್ಲಿ, ಅದನ್ನು ಎಲ್ಲೆಂದರಲ್ಲಿ ತಿರುಗಾಡಲು ಬಿಡಬಾರದು. ಸಾಕು ನಾಯಿಗಳು ಬೀದಿ ನಾಯಿಗಳ ಜೊತೆ ಕಾದಾಟಕ್ಕೆ ಮುಂದಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದೆ.

ಅವುಗಳಿಗೂ ಬದುಕುವ ಹಕ್ಕಿದೆ...
ಬೀದಿ ನಾಯಿಗಳಿಗೂ ಬದುಕುವ ಹಕ್ಕು ಇದೆ ಎಂಬುದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ಅವುಗಳತ್ತ ಕಲ್ಲೆಸೆಯುವುದು ಅಥವಾ ಅವುಗಳನ್ನು ಹೊಡೆಯುವ ಕೆಲಸಕ್ಕೆ ಸಾರ್ವಜನಿಕರು ಮುಂದಾಗಬಾರದು. ಬೀದಿ ನಾಯಿಗಳ ಬಳಿ ತೆರಳಿ ಆಟವಾಡಲು ಅಥವಾ ಅವುಗಳಿಗೆ ಆಹಾರ ತಿನ್ನಿಸಲು ಮಕ್ಕಳು ಮುಂದಾಗದಂತೆ ಪಾಲಕರು ಕಾಳಜಿ ವಹಿಸಬೇಕು.
ಹೈಕೋರ್ಟ್ ವಿಭಾಗೀಯ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT