ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿಯ ಕಾಯಕಯೋಗಿಗಳು

Last Updated 11 ಸೆಪ್ಟೆಂಬರ್ 2011, 8:00 IST
ಅಕ್ಷರ ಗಾತ್ರ

`ಉದರ ನಿಮಿತ್ತಂ ಬಹುಕೃತ ವೇಷಂ~ ತುತ್ತಿನ ಚೀಲ ತುಂಬಿಸಿಕೊಂಡು ಬದುಕಿನ ರಥ ಸಾಗಿಸಲು ಒಬ್ಬೊಬ್ಬರದು ಒಂದೊಂದು ರೀತಿಯ ಕಸರತ್ತು.

ಎಲ್ಲರಿಗಿಂತ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಳಸ್ತರದ ಜನರೆಂದು ಗುರುತಿಸಿಕೊಂಡ ಅಲೆಮಾರಿ ಜನಾಂಗದವರ ಬದುಕಿನ ಶೈಲಿ ಮಾತ್ರ ನಿಜಕ್ಕೂ ಸವಾಲಿನದ್ದು. ಅವರ ಪಾಲಿಗೆ ಬದುಕೆನ್ನುವುದು ಪ್ರನಿತ್ಯ ಸವಾಲಿನದ್ದು. ಇವರ ಬಾಳಿನಲ್ಲಿ ಜಡತ್ವ ಎನ್ನುವುದೇ ಇಲ್ಲವೇನೊ ಎನ್ನುವಂತೆ ಪ್ರತಿದಿನವೂ ಹೊಸ ಪರಿಸರದಲ್ಲಿ ಹೊಸಸವಾಲುಗಳಿಗೆ ಎದೆಯೊಡ್ಡುವ ಪ್ರವೃತ್ತಿ ಇವರಲ್ಲಿ ಎದ್ದು ಕಾಣಿಸುತ್ತದೆ. ಸ್ವಂತ ನೆಲೆಯೆನ್ನುವುದಿರದಿದ್ದರೂ ಪ್ರತಿ ಊರು ತನ್ನೂರು, ಎಲ್ಲಾ ಜನರು ತನ್ನವರು ಎನ್ನುವ ವಿಶಾಲ ಭಾವನೆಯಿಂದ ಜೀವನದ ಪಯಣ ಸಾಗಿಸುವ ಗುಣ ಅಲೆಮಾರಿ ಜನರಲ್ಲಿ ರಕ್ತಗತವಾಗಿ ಬಂದಿರುವಂತೆ ಭಾಸವಾಗುತ್ತದೆ.

ಭರಮಸಾಗರ ಗ್ರಾಮದ ಬೀದಿ ಬದಿಗಳಲ್ಲಿ ಸಣ್ಣಪುಟ್ಟ ಸರ್ಕಸ್ (ದೈಹಿಕ ಕಸರತ್ತು) ಪ್ರದರ್ಶಿಸುತ್ತಿದ್ದ ಛತ್ತೀಸ್‌ಘಡ್ ಮೂಲದ ಅಲೆಮಾರಿ ಕುಟುಂಬವೊಂದನ್ನು ಮಾತ ನಾಡಿಸಿದಾಗ ಇಂತದೊಂದು ಅಭಿಪ್ರಾಯ ವ್ಯಕ್ತವಾಯಿತು. ತಲಾತಲಾಂತರದಿಂದ ತಮ್ಮ ಕುಟುಂಬ ಇದೇ ವೃತ್ತಿಯಲ್ಲಿ ತೊಡಗಿಕೊಂಡು ಜೀವನ ಸಾಗಿಸುತ್ತಿದೆ ಎನ್ನುತ್ತಾರೆ ಕುಟುಂಬದ ಮುಖ್ಯಸ್ಥ ರಾಜು.

ಇದೇ ರೀತಿ ಜೀವನ ಸಾಗಿಸುವ ಹಲವಾರು ಕುಟುಂಬಗಳು ಒಟ್ಟಿಗೆ ಇರುತ್ತವೆ. ಊರೂರು ಅಲೆಯುವ ಇವರು ಯಾವುದಾದರೂ ಜಿಲ್ಲಾ ಕೇಂದ್ರದಲ್ಲಿ ಗುಡಿಸಲು ಹಾಕಿಕೊಂಡು ತಂಗುತ್ತಾರೆ. ನಂತರ ಬೆಳಿಗ್ಗೆ ಎದ್ದು ಎಲ್ಲಾ ಕುಟುಂಬಗಳು ಪ್ರತ್ಯೇಕವಾಗಿ ಬೇರೆ ಬೇರೆ ಹಳ್ಳಿಗಳಿಗೆ ತೆರಳಿ ಆಟ ಪ್ರದರ್ಶಿಸಿ ಹಣ ಸಂಪಾದಿಸಿ ಪುನಃ ಗುಡಿಸಿಲುಗಳಿಗೆ ಹಿಂತಿರುಗುತ್ತಾರೆ. ಹೀಗೆ 15ರಿಂದ 20 ದಿನಗಳ ಕಾಲ ಒಂದು ಕಡೆ ತಂಗಿ ಊರೂರು ಅಲೆಯುವ ಇವರು ನಂತರ ಬೇರೆ ಜಿಲ್ಲೆಗೆ ತೆರಳುತ್ತಾರೆ. ಹೀಗೆ ಆಟ ಪ್ರದರ್ಶಿಸುತ್ತಾ ಇಡೀ ದೇಶ ಸುತ್ತುತ್ತಾರೆ.
ಚಿಕ್ಕವರು, ದೊಡ್ಡವರು ಎನ್ನದೇ ಪ್ರತಿಯೊಬ್ಬರೂ ಆಟ ಪ್ರದರ್ಶನದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಮುಖ್ಯಸ್ಥ ರಾಜು ಆಟ ಪ್ರದರ್ಶನಕ್ಕೆ ಬೇಕಾದ ಕಂಬ, ತಂತಿಕಟ್ಟುವುದು ಮುಂತಾದ ಕೆಲಸ ಮಾಡಿದರೆ, ಇವರ ಪತ್ನಿ ಚರ್ಮವಾದ್ಯ ಬಾರಿಸುವ ಮೂಲಕ ಜನರು ಗುಂಪುಗೂಡವಂತೆ ಮಾಡುತ್ತಾರೆ. 5 ವರ್ಷದ ಮಕ್ಕಳೂ ಕೂಡ ಹಗ್ಗದ ಮೇಲೆ ನಡೆಯುವುದು ಮುಂತಾದ ಕಸರತ್ತು ನಡೆಸಿ ಜನರನ್ನು ಮನರಂಜಿಸುತ್ತವೆ. ಆಟ ಮುಗಿದ ನಂತರ ತಟ್ಟೆ ಹಿಡಿದು ಜನರ ಬಳಿ ಹೋಗಿ ಅವರು ನೀಡಿದಷ್ಟು ಹಣ ಪಡೆಯುತ್ತಾರೆ. ಇವರ ದುಡಿಮೆಗೆ ಇಂತಿಷ್ಟೆ ಆದಾಯ ಎಂದಿಲ್ಲ. ದಿನಕ್ಕೆ ್ಙ 200 ರಿಂದ 300 ಸಂಪಾದಿಸುತ್ತಾರೆ. ಇವರದು ಒಂದು ರೀತಿ ಪ್ರಯತ್ನವಷ್ಟೇ ನಮ್ಮದು ಫಲಾಫಲಗಳನ್ನು ನೀಡುವುದು ದೇವರು ಎನ್ನುವ ಪಾಲಿಸಿ. ಇವರ ಪಾಲಿಗೆ ಜಮೀನು, ಮನೆ ಎಂಬುದು ಕನಸಿನ ಮಾತು. ಅಸಲಿಗೆ ಸ್ವಂತ ಊರೆಂಬುದೇ ಇಲ್ಲಾ. ವರ್ಷವಿಡೀ ಅಲೆದಾಟ. ನಿಮ್ಮಂತರವರ ನೆರವಿಗೆ ಸರ್ಕಾರ ಏನೂ ಸೌಲಭ್ಯ ನೀಡಿಲ್ಲವೇ ಎಂದು ಪ್ರಶ್ನಿಸಿದರೆ. ಸರ್ಕಾರ ಸಹಾಯ ಮಾಡಿದ್ದರೇ ನಾವೇಕೆ ಊರೂರು ಅಲೆಯುತ್ತಿದ್ದೆವು ಎಂದು ಪ್ರಶ್ನಿಸುತ್ತಾರೆ. ಅಲೆಮಾರಿಗಳಾದ ಕಾರಣ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲಾಗುತ್ತಿಲ್ಲ. ಅದರೂ ಅವರನ್ನು ವಿದ್ಯಾವಂತರನ್ನಾಗಿಸುವ ಆಸೆ ಇದೆ. ಆದರೆ, ತಮ್ಮ ಜತೆ ಅಲೆಯುವ ಮಕ್ಕಳು ತಮ್ಮನ್ನು ನೋಡಿ ಆಕರ್ಷಿತರಾಗಿ ಕುಲಕಸುಬಿಗೆ ಅಂಟಿಕೊಂಡು ಶಾಲೆಗೆ ಸೇರಲು ನಿರಾಕರಿಸುತ್ತವೆ ಎನ್ನುತ್ತಾರೆ ರಾಜು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT