ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗಿಳಿದ ಚಿಕ್ಕಹೆಸರೂರು ಶಾಲಾ ಮಕ್ಕಳು

Last Updated 22 ಜೂನ್ 2011, 6:35 IST
ಅಕ್ಷರ ಗಾತ್ರ

ಲಿಂಗಸುಗೂರ: ಕಳೆದ ಎರಡು ವರ್ಷಗಳ ಹಿಂದೆ ತಾಲ್ಲೂಕಿನ ಚಿಕ್ಕಹೆಸರೂರು ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿದ್ದು, ಅಂದಿನಿಂದ ಈವರೆಗೂ ಅಗತ್ಯ ಸೌಲಭ್ಯಗಳಿರಲಿ ಪಾಠ ಮಾಡಲು ಶಿಕ್ಷಕರನ್ನು ನಿಯೋಜಿಸದೆ ನಿರ್ಲಕ್ಷ್ಯ ವಹಿಸಿರುವ ಶಿಕ್ಷಣ ಇಲಾಖೆ ಕಾರ್ಯವೈಖರಿ ವಿರೋಧಿಸಿ ಮಂಗಳವಾರ ಮಕ್ಕಳು ಶಾಲೆಗೆ ಬೀಗ ಹಾಕಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಪಕ್ಕದ ಸರ್ಜಾಪುರ ಪ್ರೌಢಶಾಲೆಯಿಂದ ಮೂವರು ಶಿಕ್ಷಕರನ್ನು ವಾರದಲ್ಲಿ ಮೂರು ದಿನದಂತೆ ಎರವಲು ಸೇವೆ ಮೇಲೆ ನಿಯೋಜಿಸಲಾಗಿತ್ತು. ಪ್ರಸಕ್ತ ವರ್ಷ ಶಾಲೆ ಆರಂಭಗೊಂಡು 20 ದಿನಗಳು ಕಳೆದರೂ ಯಾವೊಬ್ಬ ಶಿಕ್ಷಕರನ್ನು ನಿಯೋಜಿಸಿಲ್ಲ. ಕಳೆದ ವಾರ ಮಕ್ಕಳ ಸಮೇತ ತೆರಳಿ ಅರ್ಜಿ ಸಲ್ಲಿಸಿದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಪಂದಿಸಿಲ್ಲ ಎಂದು ಮಕ್ಕಳು ಮತ್ತು ಪಾಲಕರು ಆರೋಪಿಸಿದ್ದಾರೆ.

ಶಾಲೆಯಲ್ಲಿ ಒಟ್ಟು 117 ಮಕ್ಕಳು ದಾಖಲಾತಿ ಹೊಂದಿದ್ದಾರೆ. ತಾತ್ಕಾಲಿಕವಾಗಿ ಪ್ರಾಥಮಿಕ ಶಾಲಾ ಕೊಠಡಿಗಳಲ್ಲಿ ಎರಡು ಕೊಠಡಿಗಳನ್ನು ನೀಡಲಾಗಿದೆ. ಕೊಠಡಿ ಕೊರತೆಯಿಂದ ಗಿಡಮರಗಳ ಕೆಳಗೆ ಪಾಠ ಕೇಳುವಂತಾಗಿದೆ. ಪ್ರೌಢಾವಸ್ಥೆಗೆ ಬಂಧಿರುವ ಬಾಲಕ, ಬಾಲಕಿಯರಿಗೆ ಶೌಚಾಲಯ ವ್ಯವಸ್ಥೆ ಕೂಡ ಕಲ್ಪಿಸದಿರುವ ಬಗ್ಗೆ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಕಟ್ಟಡಕ್ಕೆ ಗ್ರಾಮದ ಗಣ್ಯರಾದ ಬಳೊಡೆಪ್ಪ ಎಂಬುವವರು ಜಮೀನು ದಾನ ಮಾಡ್ದ್ದಿದಾರೆ. ಶಿಕ್ಷಣ ಇಲಾಖೆ ಕಟ್ಟಡ ಮಂಜೂರು ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಜೂನ್ 30ರೊಳಗೆ ಪೂರ್ಣ ಪ್ರಮಾಣದ ಶಿಕ್ಷಕರನ್ನು ನಿಯೋಜಿಸದಿದ್ದರೆ ಸಾಮೂಹಿಕವಾಗಿ ಮಕ್ಕಳ ವರ್ಗಾವಣೆ ಪತ್ರ ಪಡೆಯಲಾಗುವುದು ಎಂದು ಪಾಲಕರು ಎಚ್ಚರಿಕೆ ನೀಡಿದರು.

ಮಕ್ಕಳ ಪ್ರತಿಭಟನೆಗೆ ಸರ್ಜಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸನಗೌಡ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಬಸನಗೌಡ ಮೇಟಿ, ಪಾಲಕರಾದ ಅಯ್ಯನಗೌಡ ಪೊಲೀಸ್‌ಪಾಟೀಲ, ಶಿವಲಿಂಗಪ್ಪ, ಹುಸೇನಪ್ಪ, ವೀರಾರೆಡ್ಡಿ, ರಾಯಪ್ಪ, ನವಜೀವನ ಮಹಿಳಾ ಒಕ್ಕೂಟದ ಮೋಕ್ಷಮ್ಮ, ನಿಂಗಮ್ಮ, ಅಕ್ಕಮ್ಮ, ಹುಲಿಗೆಮ್ಮ, ಮಾಣಿಕ್ ಮತ್ತಿತರರು ಬೆಂಬಲ ವ್ಯಕ್ತಪಡಿಸಿದ್ದರು.

ಶಿಕ್ಷಕರ ನಿಯೋಜನೆ: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ನುಗ್ಗಿದ ಚಿಕ್ಕಹೆಸರೂರು ಪ್ರೌಢಶಾಲಾ ಮಕ್ಕಳು ಶಿಕ್ಷಕರನ್ನು ನಿಯೋಜಿಸದ ಶಿಕ್ಷಣ ಇಲಾಖೆ ವಿರುದ್ಧ ಧಿಕ್ಕಾರ ಹಾಕಿದರು. ಸಭೆಗೆ ಉತ್ತರಿಸಿದ ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟೇಶ ಗುಡಾಳ ಈಗಾಗಲೆ ಐವರು ಶಿಕ್ಷಕರನ್ನು ಎರವಲು ಸೇವೆ ಮೇಲೆ ನಿಯೋಜಿಸಲಾಗಿದೆ. ಮಂಗಳವಾರ ಮೂವರು ಶಿಕ್ಷಕರು ಸೇವೆಗೆ ಹಾಜರಾಗಿದ್ದಾರೆ. ಅಗತ್ಯ ಸೌಲಭ್ಯಗಳ ಕುರಿತು ತುರ್ತು ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT