ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗಿಳಿದ ವಕೀಲರು, ರಾಸುಗಳ ಜತೆ ಪ್ರತಿಭಟನೆ, ಅಂಚೆ ಕಚೇರಿ ಬಂದ್

Last Updated 2 ಅಕ್ಟೋಬರ್ 2012, 4:40 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿ ವಕೀಲರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ವಕೀಲರು ರಾಜ ಒಡೆಯರ್ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಕೀಲರ ಸಂಘದ ಅಧ್ಯಕ್ಷ ಚಂದಗಿರಿಕೊಪ್ಪಲು ಮೂರ್ತಿ, ಕಾರ್ಯದರ್ಶಿ ಹಾಲಪ್ಪ, ಉಪಾಧ್ಯಕ್ಷ ಶಕ್ತಿಪ್ರಸಾದ್, ಮೋಹನಕುಮಾರ್, ವನರಾಜು, ಸತ್ಯನಾರಾಯಣ, ಪ್ರಭಾಕರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಿತರಕ್ಷಣಾ ಸಮಿತಿ: ಕಾವೇರಿ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಸೋಮವಾರ ಕುವೆಂಪು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸಮಿತಿಯ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಸುಮಾರು ಒಂದು ತಾಸು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯದ ಬಿಜೆಪಿ ಸರ್ಕಾರ ರಾಜ್ಯದ ನೀರಿನ ಸ್ಥಿತಿಗತಿ ಕುರಿತು ವಾಸ್ತವ ಸಂಗತಿಯನ್ನು ಕಾವೇರಿ ನದಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ಕೆಂಪೇಗೌಡ, ಕಡತನಾಳು ಬಾಬು, ಪಾಂಡು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಿ.ಎಚ್.ಚಂದ್ರಶೇಖರ್, ಕೆ.ಬಲರಾಂ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುರುಷೋತ್ತಮ, ನಂಜುಂಡಪ್ಪ, ಕೃಷ್ಣೇಗೌಡ  ಪಾಲ್ಗೊಂಡಿದ್ದರು.

ದಸಂಸ: ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 11 ಗಂಟೆಯಿಂದ ಸಂಜೆ 5ರ ವರೆಗೆ ಧರಣಿ ನಡೆಯಿತು. ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಗಂಜಾಂ ರವಿಚಂದ್ರ, ಚ್ಕಿಕಾಡೆ ಮಹದೇವಪ್ಪ, ಹೊನ್ನಯ್ಯ, ಕುಮಾರ್, ಚಲುವರಾಜು, ನಾಗರಾಜು ಧರಣಿಯಲ್ಲಿ ಭಾಗವಹಿಸಿದ್ದರು.

 ಬೆಳಗೊಳ: ತಾಲ್ಲೂಕಿನ ಬೆಳಗೊಳ ಗ್ರಾಮಸ್ಥರು ಗ್ರಾಮದ ಅಂಚೆ ಕಚೇರಿಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು. ಅಲ್ಲಿಂದ ತೆರಳಿ ನಾಡ ಕಚೇರಿಯನ್ನೂ ಬಂದ್ ಮಾಡಿಸಿದರು. ಮೈಸೂರು- ಕೆಆರ್‌ಎಸ್ ರಸ್ತೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4ರ ವರೆಗೆ ಧರಣಿ ನಡೆಸಿದರು.
 
ಮೈಸೂರು- ಕೆಆರ್‌ಎಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕುಮಾರ್, ಹರೀಶ್, ಚಿಕ್ಕನಾಗರಾಜು, ವಿಷಕಂಠು, ಸುನಿಲ್, ಬಿ.ಎಸ್.ನಾಗರಾಜು, ಶಿವಲಿಂಗಯ್ಯ ಭಾಗವಹಿಸಿದ್ದರು.

ಕೆ.ಶೆಟ್ಟಹಳ್ಳಿ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮಸ್ಥರು ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಸೋಮವಾರ ಗ್ರಾಮದ ಬಳಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಕಾವೇರಿ ನದಿ ಪ್ರಾಧಿಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ಕುಬೇರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ದೇವರಾಜು, ಮಾಜಿ ಅಧ್ಯಕ್ಷ ನಂದೀಶ್‌ಕುಮಾರ್, ಚಂದ್ರಶೇಖರ್, ಮದನ್, ಪಾರ್ಥ, ಕೀರ್ತಿಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಧಾನಿ ಜತೆ ಚರ್ಚೆ: ಅಂಬರೀಶ್
ಶ್ರೀರಂಗಪಟ್ಟಣ:
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮಾರಕವಾದ ಆದೇಶ ಹೊರ ಬಿದ್ದಿದ್ದು, ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜತೆ ಚರ್ಚೆ ನಡೆಸುತ್ತೇನೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಅಂಬರೀಶ್ ಹೇಳಿದರು. ಭಾನುವಾರ ರಾತ್ರಿ ಪಟ್ಟಣಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. 

ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರ ಜತೆಗೂ ಚರ್ಚಿಸುತ್ತೇನೆ. ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯದ ರೈತರು ಹಾಗೂ ಸಾರ್ವಜನಿಕರ ಹಿತ ಕಾಯಲು ಬದ್ದವಾಗಿದೆ. ರಾಜ್ಯಕ್ಕೆ ಆಗುವ ಅನ್ಯಾಯ ಸಹಿಸುವುದಿಲ್ಲ ಎಂದು ಹೇಳಿದರು.
 
ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆದ್ಯತೆ ನೀಡುವ ಬದಲು ಗಂಗಾ- ಕಾವೇರಿ ನದಿ ಜೋಡಣೆಗೆ ಆದ್ಯತೆ ನೀಡಬೇಕು. ಇದರಿಂದ ಕರ್ನಾಟಕ ಅಷ್ಟೇ ಅಲ್ಲದೆ ಇತರ ರಾಜ್ಯಗಳಿಗೂ ಅನುಕೂಲ ಆಗಲಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.

 ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಪೈ.ಮುಕುಂದ ಅವರಿಗೆ ನೇಮಕಾತಿ ಪತ್ರ ವಿತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ಕೆಪಿಸಿಸಿ ಸದಸ್ಯ ಸಚ್ಚಿದಾನಂದ, ಪುರಸಭೆ ಮಾಜಿ ಅಧ್ಯಕ್ಷ ಕೋದಂಡರಾಮು, ಶಿವಕುಮಾರ್ ಇದ್ದರು.

ಕಾವೇರಿಗಾಗಿ ಕಾವ್ಯ ಚಳವಳಿ: ಸ್ಫೋಟಗೊಂಡ ಆಕ್ರೋಶ
ಶ್ರೀರಂಗಪಟ್ಟಣ:
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಚುಟುಕು ಸಾಹಿತ್ಯ ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ ಕಾವೇರಿಗಾಗಿ ಕಾವ್ಯ ಚಳವಳಿಲ್ಲಿ ಕವಿಗಳು ಪ್ರಧಾನಮಂತ್ರಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಂ.ಸಿ.ನಾಗರಾಜು ತಮ್ಮ `ರೈತ~ ಕವಿತೆಯಲ್ಲಿ, `ಜೈಲು ಸೇರಿದರೂ, ಪ್ರಾಣ ಬಿಟ್ಟರೂ ಬಿಡುವುದಿಲ್ಲ ಎಂದ ನೀವು ರಾತ್ರೋ ರಾತ್ರಿ ಏಕೆ ನೀರು ಹರಿಸಿದಿರಿ?~ ಎಂದು ಪ್ರಶ್ನಿಸಿದರು. ಸುಧಾಕರ್ ಹೊಸಹಳ್ಳಿ, ಯುವ ಬರಹಗಾರರ ಬಳಗದ ಅಧ್ಯಕ್ಷ ಸತೀಶ್ ಜವರೇಗೌಡ, ಧನಂಜಯ ದರಸಗುಪ್ಪೆ, ರೋಷನ್ ಛೋಪ್ರ, ಅನಾರ್ಕಲಿ ಸಲೀಂ, ಕೆ.ಎನ್.ಪುರುಷೋತ್ತಮ, ಕೊತ್ತತ್ತಿ ರಾಜು, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಅಭಿನಂದನ್, ಉಮಾಶಂಕರ್ ಕವಿತೆ ವಾಚಿಸಿದರು. ಡಾ.ಬಿ.ಸುಜಯಕುಮಾರ್ ಕಾವ್ಯ ಚಳವಳಿಗೆ ಚಾಲನೆ ನೀಡಿದರು.  ಡಾ.ಸಿ.ಮಹದೇವು ಮಾತನಾಡಿ, ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ಸಾಹಿತಿಗಳು ದನಿ ಎತ್ತಬೇಕು ಎಂದು ಹೇಳಿದರು. ಪೋತೇರ ಮಹದೇವು ಇತರರು ಇದ್ದರು.

ಕೆಆರ್‌ಎಸ್‌ಗೆ ಮುತ್ತಿಗೆ: ಬಂಧನ
ಶ್ರೀರಂಗಪಟ್ಟಣ:
ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಬೆಂಗಳೂರು ಘಟಕದ ಕಾರ್ಯಕರ್ತರು ಸೋಮವಾರ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೊಲೀಸರು 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಸಂಜೆ 5.30ರ ವೇಳೆಗೆ ವಾಹನಗಳಲ್ಲಿ ಕೆಆರ್‌ಎಸ್‌ಗೆ ಆಗಮಿಸಿದ ಕರವೇ ಕಾರ್ಯಕರ್ತರು ಜಲಾಶಯದ ಮುಖ್ಯ ದ್ವಾರದ ಬಳಿ ಧರಣಿ ಆರಂಭಿಸಿದರು. ಸುಮಾರು ಅರ್ಧತಾಸು ಧರಣಿ ನಡೆಸಿದ ಪ್ರತಿಭಟನಾಕಾರರು ಕಾವೇರಿ ನದಿ ಪ್ರಾಧಿಕಾರ, ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕದ ಪರ ಘೋಷಣೆ ಕೂಗುತ್ತಾ ಜಲಾಶಯದ ಬಳಿಗೆ ಮುನ್ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ನಾಗೇಂದ್ರ ಬಾಬು ಮಾತನಾಡಿ, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವವರೆಗೆ ಬೆಂಗಳೂರಿನಲ್ಲಿ ಕರವೇ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಸಣ್ಣಫಕೀರಪ್ಪ, ಹಾಸನ ಘಟಕದ ಜಿಲ್ಲಾಧ್ಯಕ್ಷ ರವೀಂದ್ರ, ಮೈಸೂರು ಘಟಕದ ಅಧ್ಯಕ್ಷ ಪ್ರವೀಣ್‌ಕುಮಾರ್, ಕಾಂತರಾಜು, ನರಸಿಂಹ, ರಾಜಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಚಿನಕುರಳಿ ಬಂದ್
ಪಾಂಡವಪುರ:
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆಗಳು ನಡೆದವು.

ಬೆಳಿಗ್ಗೆ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಇದರಿಂದ ವಾಹನಗಳು ಸಂಚರಿಸಲಿಲ್ಲ. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ತರಗತಿಗಳು ನಡೆಯಲಿಲ್ಲ. ಕಚೇರಿಗಳು ಎಂದಿನಂತೆ ನಡೆದರೂ ನೌಕರರ ಹಾಜರಾತಿ ಕಡಿಮೆಯಿತ್ತು. ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸಂಜೆ 5ರ ನಂತರ ಪ್ರಾರಂಭಗೊಂಡವು.

ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್.ಕೆಂಪೂಗೌಡ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹರವು ಪ್ರಕಾಶ್, ಸರ್ವೋದಯ ಪಕ್ಷದ ಅಧ್ಯಕ್ಷ ಎಚ್.ಎನ್.ವಿಜಯಕುಮಾರ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.

ಪಟ್ಟಣದ ಐದು ದೀಪಗಳ ವೃತ್ತದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿ.ಅಣ್ಣೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ಮನ್‌ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ ಭಾಗವಹಿಸಿದರು.

ಚಿನಕುರಳಿ ಬಂದ್: ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಸ್ವಯಂಘೋಷಿತ ಬಂದ್ ಮಾಡಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಪಿಎಂಎಸ್ ಅಧ್ಯಕ್ಷ ಗೋಪಾಲೇಗೌಡ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ಭಾಗವಹಿಸಿದ್ದರು.

ಕಲಾಪ ಬಹಿಷ್ಕಾರ: ವಕೀಲರು ನ್ಯಾಯಾಲದ ಕಲಾಪ ಬಹಿಷ್ಕರಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಅಧ್ಯಕ್ಷ ಸಿ.ಚನ್ನೇಗೌಡ, ಉಪಾಧ್ಯಕ್ಷ ಎಸ್.ಬಸವೇಗೌಡ, ಸಹಕಾರ್ಯದರ್ಶಿ ಜಿ.ಬಿ.ಸುರೇಶ್ ನೇತೃತ್ವ ವಹಿಸಿದ್ದರು.

ಸರಣಿ ಪ್ರತಿಭಟನೆ
ಕೃಷ್ಣರಾಜಪೇಟೆ:
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ಸರಣಿ ಪ್ರತಿಭಟನೆಗಳು ನಡೆದವು.

ಕಾರು ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಗೂಡ್ಸ್ ಲಾರಿ, ಮ್ಯಾಕ್ಸಿಕ್ಯಾಬ್, ಕಾರುಗಳನ್ನು ನಿಲ್ಲಿಸಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಲಾಯಿತು. ಕೇಂದ್ರದ ಯುಪಿಎ ಸರ್ಕಾರದ ತಮಿಳುನಾಡಿನ ಪರ ಧೋರಣೆ, ರಾಜ್ಯದ ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸಿದರು.

ಸಂಘದ ಅಧ್ಯಕ್ಷ ಪಿ.ಕೆ.ಮಹೇಶ್, ಮುಖಂಡರಾದ ಎಸ್.ವಿ.ವಿನಯ್‌ಕುಮಾರ್, ಶಿವಮೂರ್ತಿ, ತಾಲ್ಲೂಕು ಕರವೇ ಅಧ್ಯಕ್ಷ ಎ.ಸಿ.ಕಾಂತರಾಜು, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಗ್ರಾ.ಪಂ ಮಾಜಿ ಅಧ್ಯಕ್ಷ ಕಿಕ್ಕೇರಿ ಅರುಣ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮಾನವ ಸರಪಳಿ: ರಸ್ತೆ ತಡೆ
ಮಳವಳ್ಳಿ:
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಸೋಮವಾರ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪುರಸಭೆ ಬಳಿಯಿಂದ ಹೊರಟ ಪ್ರತಿಭಟನಾಕಾರರು ಕೇಂದ್ರ, ರಾಜ್ಯ ಸರ್ಕಾರ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಅನಂತರಾಮ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆತಡೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಎಂ.ಪಿ.ಮಧು, ಆಟೋಚಾಲಕರ ಸಂಘದ ಅಧ್ಯಕ್ಷ ಶಿವರಾಜು, ಜಯಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ.ನಾಗೇಶ್, ಪಟ್ಟಣ ಘಟಕದ ಅಧ್ಯಕ್ಷ ರಾಜ್‌ಕುಮಾರ್, ಶ್ಯಾಮ್‌ಸುಂದರ್, ಅನಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT