ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗಿಳಿಯುತ್ತಿರುವ ಅಮೆರಿಕ ಶ್ರೀಸಾಮಾನ್ಯರು

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಶ್ವದ ಯಾವ ಭಾಗದಲ್ಲಿ ಏನೇ ಗದ್ದಲ, ಗಲಾಟೆ, ಏಳುಬೀಳು, ತೊಂದರೆ, ವಿಜಯೋತ್ಸಾಹ ಆದರೂ ಅದರ ವಾಸನೆ ಹಿಡಿದು ಖಡಾಖಂಡಿತವಾಗಿ ಒಂದು ಚೂರಾದರೂ ಮೂಗು ತೂರಿಸಿ, `ಈ ವಾಸನೆಯಿಂದ ನಮಗೇನು ಲಾಭ, ಏನು ನಷ್ಟ?~ ಎಂದು ಲೆಕ್ಕಾಚಾರ ಹಾಕಿ, ದಾಳ ಹಾಕಲು ತುದಿಗಾಲಲ್ಲೇ ಕಾದಿರುತ್ತಿದ್ದ ಅಮೆರಿಕಾ ಎಂಬ ದೇಶದ ರಾಜಕೀಯಕ್ಕೆ, ರಾಜಕಾರಣಿಗಳಿಗೆ, ಸಿರಿವಂತರಿಗೆ ಇದು ಮುಜುಗರದ ಕಾಲ.

ತಮ್ಮ ಮಣ್ಣಿನ ಮೈಯ್ಯಿಂದಲೇ ಈಗ ಕಡಕ್ಕಾಗಿ ಹೊಮ್ಮುತ್ತಿರುವ ಬಡವರ, ಮಧ್ಯಮ ವರ್ಗದ ಬೇಸತ್ತ ಬೆವರಿನ ವಾಸನೆಗೆ ಈಗ ತಮ್ಮ ಮೂಗನ್ನು ಹಿಡಿಯುವುದರ ಜೊತೆಗೆ, ಮೈಗೆ ಮೈಯ್ಯೇ ಮೈಲಿಗೆಯಾಗಿ ಹೋಗಿದೆಯೆಂದು ಅದನ್ನು ತಿಕ್ಕಿ ತೊಳೆದು, ಸಾಧ್ಯವಾದರೆ ಹೊಸ ಬಣ್ಣ ಹಚ್ಚಿಸಿ ಪಾಲಿಶ್ ಮಾಡಿಸಿ ಬಿಡೋಣ ಎಂಬ ಹುನ್ನಾರದಲ್ಲಿದ್ದಾರೆ.

ಇಡೀ ಅಮೆರಿಕದಲ್ಲಿ ಇಂದು ಶೇಕಡ 99 ಜನರು ಸಂಕಷ್ಟದಲ್ಲಿದ್ದಾರೆ. ಕೆಲಸ ಕಳೆದುಕೊಂಡವರು, ಕಳೆದುಕೊಳ್ಳುತ್ತಿರುವವರು, ಮನೆಗಳ ಅಡವು ಕಂತು (ಮಾರ್ಟ್‌ಗೇಜ್ ಕಂತು) ಕಟ್ಟಲಾರದೆ ಬೀದಿಗೆ ಬಿದ್ದಿರುವವರು,

ಶಾಲಾ ಟೀಚರುಗಳು, ಕಾರ್ಮಿಕರು, ದಿನಗೂಲಿಯವರು, ಫೀಜುಗಳ ಭಾರ ಹೊರಲಾಗದೆ ಹೆಣಗುತ್ತಿರುವ ವಿದ್ಯಾರ್ಥಿಗಳು, ಅನಾರೋಗ್ಯ ಕಾಡುತ್ತಿರುವವರು, ಕೂಲಿ ಕಾರ್ಮಿಕರು, ಸರ್ಕಾರೇತರ, ಖಾಸಗಿಯೇತರ ಸಂಘ ಸಂಸ್ಥೆಗಳು, ಪರಿಸರವಾದಿಗಳು, ರೈತರು, ವಯಸ್ಸಾದವರು- ಒಟ್ಟಿನಲ್ಲಿ ಬಡವರು ಮತ್ತು ಮಧ್ಯಮವರ್ಗದವರು ಈ ಶೇ 99ರಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರೆ, ಶ್ರಿಮಂತ ಮಾಧ್ಯಮಗಳ ಒಡೆಯರು,

ಬ್ಯಾಂಕುಗಳ-ಕಾರ್ಪೊರೇಷನ್‌ಗಳ ಸಿಇಓಗಳು, ಉದ್ಯಮಗಳ ಅಧಿಪತಿಗಳು, ರಿಪಬ್ಲಿಕನ್ ಪಕ್ಷದವರು-ಅಮೆರಿಕದ ಎಲ್ಲಾ ಶ್ರೀಮಂತರೂ ಉಳಿದ  ಶೇ 1ರಲ್ಲಿ ಸೇರಿದ್ದಾರೆ.

`ಶೇಕಡಾ ಒಂದರಷ್ಟಿರುವ ಅಮೆರಿಕದ ಅತ್ಯಂತ ಶ್ರಿಮಂತರು ತಮ್ಮ ಅಗಾಧ ಸಂಪತ್ತಿಗನುಗುಣವಾಗಿ ತೆರಿಗೆ ಕೊಡದೆ ಮಧ್ಯಮ ವರ್ಗದವರು ಕೊಡುವಷ್ಟೇ ತೆರಿಗೆಯನ್ನು ಕಟ್ಟುತ್ತಾ ದೇಶಕ್ಕೆ ವಂಚನೆ ಮಾಡುತ್ತಿದ್ದಾರೆ.
 

ಅಂತಹ ಸಿರಿವಂತರಿಗೆ ಹೆಚ್ಚು ತೆರಿಗೆ ಹಾಕುವುದನ್ನು ಬಿಟ್ಟು ಶೇ 99 ಇರುವ ಬಡ-ಮಧ್ಯಮ ವರ್ಗದವರನ್ನು ಯಾಕೆ ಪೀಡಿಸುತ್ತೀರಿ~ ಎಂದು ಇದುವರೆಗೂ ಇದನ್ನು ಕಂಡೂ ತಟಸ್ಥರಂತಿದ್ದ ಅಮೆರಿಕನ್ ಜನಸಾಮಾನ್ಯ ಈಗ ಪ್ರತಿಭಟನೆ ಮಾಡಲು ಮುಂದೆ ಬಂದಿದ್ದಾನೆ.

ಟ್ಯುನೀಷಿಯಾ, ಸಿರಿಯಾ, ಈಜಿಪ್ಟ್‌ನಲ್ಲಿ ಕ್ರಾಂತಿಯಾದಾಗ ಮನೆಗಳಲ್ಲೇ ಕೂತು ಅದನ್ನು ನೋಡಿ ಬೆಚ್ಚಗಾದ ಈ ದೇಶ ಜನರು ಈಗ ಹೊಸದೊಂದು ಬಗೆಯ ಹೋರಾಟಕ್ಕಿಳಿದಿದ್ದಾರೆ.
 
ಅಮೆರಿಕದ ಮುಕ್ತ ಮಾರುಕಟ್ಟೆಯನ್ನು ಇನ್ನೂ ಬೆತ್ತಲೆ ಮಾಡಿ ಇಡೀ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ನೂಕಲು ಕಾರಣವಾಗಿರುವ ಧನದಾಹೀ ಕಾರ್ಪೊರೇಷನ್ನುಗಳನ್ನು, ಜನಸಾಮಾನ್ಯರು (ಅಂದರೆ ಶೇ 99ರಷ್ಟಿರುವವರು) ಎದುರು ಹಾಕಿಕೊಳ್ಳುವ ಧೈರ್ಯ ಮಾಡಿ ಬೀದಿಗಿಳಿದಿದ್ದಾರೆ.

ಕಾರ್ಪೊರೇಷನ್ನುಗಳಿಲ್ಲದೆ ಅಮೆರಿಕ ಇಲ್ಲ, ಸಂಪತ್ತಿನ ಸಮಾನ ಹಂಚಿಕೆಯಲ್ಲಿ ಅಮೆರಿಕ ನಂಬಿಕೆ ಇಡುವುದಿಲ್ಲ, ನಮ್ಮದು ಕಮ್ಯುನಿಸಂ ಅಲ್ಲ, ಈ ದಂಗೆಕೋರರು ನಮ್ಮನ್ನು ಕೊಂದು ನಮ್ಮ ಸಂಪತ್ತನ್ನು ಲೂಟಿ ಮಾಡಲು ಬಿಡೆವು ಎಂದು ಶೇ. ಒಂದರಷ್ಟಿರುವ ಅಮೆರಿಕನ್ ಶ್ರೀಮಂತರು ಹೆದರಿ ಒಟ್ಟಾಗುತ್ತಿದ್ದಾರೆ.
 
ಇಲ್ಲಿ ಪುಟ್ಟದೊಂದು ಕ್ರಾಂತಿ ಮೈತಳೆದಿದೆ. ಹೋರಾಟ ಹಬ್ಬುತ್ತಿದೆ. ಇದು ನಿಜಕ್ಕೂ ಬದಲಾವಣೆಯ ಕಾಲ. ಅಮೆರಿಕಾದ ರಾಜಧಾನಿ ವಾಷಿಂಗ್ಟನ್ನಿನ ಶ್ವೇತಭವನದ ಮುಂದೆ ಒಂದು ದಿನದಲ್ಲಿ ಹತ್ತಿಪ್ಪತ್ತು ಧರಣಿ, ಮೆರವಣಿಗೆ-ಹೋರಾಟಗಳು ನಡೆಯುತ್ತಿರುತ್ತವೆ.

`ಇರಾಕ್ ಯುದ್ಧ ನಿಲ್ಲಿಸಿ..~ `ಇಲ್ಲಿ ನಮಗೆ ಕೆಲಸ ಸೃಷ್ಟಿಸಿ~ ಅಂತ ಗುಂಪೊಂದು ಘೋಷಣೆ ಕೂಗುತ್ತಿದ್ದರೆ, `ನನ್ನ ಸೈನಿಕ ಮಗನ ಸಾವಿಗೆ ಕಾರಣ ಜಾರ್ಜ್ ಬುಷ್ ಅವರೇ ಅಥವಾ ಆಪ್ಘಾನಿಸ್ತಾನದ ಭಯೋತ್ಪಾದಕರೋ?~ ಅಂತ ತಾಯಿಯೊಬ್ಬಳು ಬೋರ್ಡು ಹಿಡಿದು ಕೂತಿರುತ್ತಾಳೆ.

`ನನ್ನ ಮನೆ ಉಳಿಸಿಕೊಡಿ, ಕೆಲಸ ಕೊಡಿ~ ಎಂದು ನಿರುದ್ಯೋಗಿ ನಿರ್ಗತಿಕನೊಬ್ಬ ಟೆಂಟು ಹಾಕಿರುತ್ತಾನೆ, ಮುಸ್ಲಿಮರ ಮೇಲಿನ ಅನವಶ್ಯಕ ವಿಚಾರಣೆಯನ್ನು ನಿಲ್ಲಿಸಿ ಎಂದು ಮುಸ್ಲಿಂ ಗುಂಪೊಂದು ಧರಣಿ ಕೂತಿರುತ್ತದೆ...ಹೀಗೇ...ವಾಷಿಂಗ್ಟನ್ನಿನ ರಾಜಕೀಯ ವಲಯಗಳಲ್ಲಿ ನಡೆಯುವ ರಾಜಕೀಯ ನಾಟಕದಂತೆ ಅಲ್ಲಿನ ಬೀದಿಗಳ ಮೇಲೂ ಜನ ತಮ್ಮ ಬದುಕು ಹರಡಿಕೊಂಡಿರುತ್ತಾರೆ. ಇದು ನಿತ್ಯದ ಪರಿಯಾಗುತ್ತಿದೆ.

ಹೀಗೆಯೇ, ಸೆಪ್ಟೆಂಬರ್ 17 ರಂದು ಒಂದಷ್ಟು ಜನ `ವಾಲ್ ಸ್ಟ್ರೀಟ್‌ಗೆ ಮುತ್ತಿಗೆ~ ಅಥವಾ `ಆಕ್ಯುಪೈ ವಾಲ್ ಸ್ಟ್ರೀಟ್~ ಎಂದು ನ್ಯೂಯಾರ್ಕಿನಲ್ಲಿ ಕಲೆತಾಗ ಮತ್ತೊಂದಷ್ಟು ಹೊಟ್ಟೆಗಿಲ್ಲದ, ಕೆಲಸವಿಲ್ಲದವರ ಒಂದೆರಡು ದಿನದ ಕೂಗಾಟವೆಂದು ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ವಾಲ್ ಸ್ಟ್ರೀಟಿನ ಠೀಕು ಠಾಕು ಮಂದಿಯಂತೂ ಹೋರಾಟಗಾರರನ್ನು ಕುತೂಹಲಕ್ಕೂ ಕಣ್ಣೆತ್ತಿ ನೋಡಿರಲಿಲ್ಲ. ಅವರಿಗೆ ಇದು ಬೋನಸ್ ಬರುವ ಸಮಯ. ಉನ್ನತ ಹುದ್ದೆಯಲ್ಲಿರುವವರಿಗೆ ಈ ಬಾರಿ ದೊಡ್ಡ ಬೋನಸ್ ಪ್ಯಾಕೇಜ್‌ಗಳು ನಿರ್ಧಾರವಾಗಿದ್ದವು.

ಕಂಪೆನಿಯ ಕೆಳಹಂತದ ಸಾವಿರಾರು ಕೆಲಸಗಾರರನ್ನು ಆಗಷ್ಟೇ ತೆಗೆದುಹಾಕಿ ಕಂಪೆನಿಗಳಿಗೆ ದುಡ್ಡು ಉಳಿಸಿದ ಸಂದರ್ಭಕ್ಕೆ ಅವರನ್ನು ಸನ್ಮಾನಿಸಲಾಗುತ್ತಿತ್ತು.

ಅವರು ಸಂಭ್ರಮಿಸುವುದರಲ್ಲಿ ಬ್ಯುಸಿಯಾಗಿದ್ದರೆ ಇತ್ತ ನ್ಯೂಯಾರ್ಕಿನ ಜುಕೊಟಿ ಪಾರ್ಕಿನ ಇಕ್ಕೆಲಗಳಿಂದ ನಿಧಾನಕ್ಕೆ ಜನ ಸೇರುತ್ತಾ ವಾಲ್ ಸ್ಟ್ರೀಟ್ ಅನ್ನು ಮುತ್ತಿಗೆ ಹಾಕುವ ಯೋಜನೆಗೆ ಕೈಗೂಡಿಸುತ್ತಿದ್ದರು.

ಹಾಗೆಯೇ,  ಅಕ್ಟೋಬರ್ 15ರಿಂದ `ಆಕ್ಯುಪೈ ವಾಲ್ ಸ್ಟ್ರೀಟ್~ ನಂತೆಯೇ ಆಯಾ ದೇಶಗಳ ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಮುತ್ತಿಗೆ ಹಾಕುವ ಯೋಜನೆ ವಿಶ್ವದ 70ಕ್ಕೂ ಹೆಚ್ಚು ದೇಶಗಳಲ್ಲಿ ಚಾಲನೆಗೊಳ್ಳಲಿದೆ.

ಕೆನಡಾ, ಇಟಲಿ, ಗ್ರೀಸ್, ಇಂಗ್ಲೆಂಡ್, ಫಿಲಿಪ್ಪೀನ್ಸ್, ಹಾಂಕಾಂಗ್ ಇತ್ಯಾದಿ ದೇಶದ ಜನಪರ ಸಂಘಟನೆಗಳು ಈಗಾಗಲೇ ಈ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ.

ಪ್ರಜಾಪ್ರಭುತ್ವವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ, ಜನ ಸಾಮಾನ್ಯರನ್ನು ದಿಕ್ಕುತಪ್ಪಿಸುತ್ತಿರುವ ಬಂಡವಾಳಶಾಹಿಗಳ ವಿರುದ್ಧದ ವಿಶ್ವವ್ಯಾಪಿ ಹೋರಾಟವಾಗಿ ಇದು ರೂಪುಗೊಳ್ಳಲಿದೆ.

ಈ ಚಳವಳಿ ತರುವ ಬದಲಾವಣೆ ತಕ್ಷಣದ್ದಲ್ಲದಿರಬಹುದು. ಆದರೆ ಜನ ಅರಿತಿದ್ದಾರೆ, ಒಗ್ಗೂಡಿದ್ದಾರೆ, ವಿರೋಧಿಸುತ್ತಿದ್ದಾರೆ, ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ, ಕಂಪೆನಿಗಳ ಉತ್ಪನ್ನಗಳನ್ನು ಖರೀದಿ ಮಾಡುವಾಗ, ಹುಟ್ಟಿರುವುದೇ ಖರೀದಿ ಮಾಡಲು ಎಂಬ ಮನಃಸ್ಥಿತಿಯಿಂದ ಸಂಪೂರ್ಣ ಹೊರಬರಲು ಈ ಅರಿವು ಸಹಾಯ ಮಾಡುವಂತಾದರೆ...ಅದೇ ಗೆಲುವಿನ ಸೂಚಕ, ಇಲ್ಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT