ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗೆ ಬಂತು `ಕೈ'ಮುಸುಕಿನ ಗುದ್ದಾಟ

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಂಡ್ಯ: ಕಾಂಗ್ರೆಸ್ಸಿನ ರಾಜ್ಯ ನಾಯಕರಾದ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಅವರ ನಡುವಿನ ಮುಸುಕಿನ ಗುದ್ದಾಟದ ಪರಿಣಾಮವು ಜಿಲ್ಲೆಯಲ್ಲೆಡೆ ಪಸರಿಸುತ್ತಿದೆ.

ಪಕ್ಷದೊಳಗೆ ಇದ್ದ ಆಂತರಿಕ ಕಲಹ ಈಗ ಚುನಾವಣಾ ಕಣದಲ್ಲಿ ವ್ಯಕ್ತವಾಗುತ್ತಿದೆ. ಎರಡೂ ಬಣಗಳು ಚುನಾವಣೆಯನ್ನು ಪ್ರತಿಷ್ಠೆಯ ವಿಷಯ ಮಾಡಿಕೊಂಡಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಅಂತರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಮಂಡ್ಯದಿಂದ ಸ್ಪರ್ಧಿಸಿರುವ ಅಂಬರೀಷ್ ಹಾಗೂ ಶ್ರೀರಂಗಪಟ್ಟಣದಿಂದ ಸ್ಪರ್ಧಿಸಿರುವ ಅಂಬರೀಷ್ ಅವರ ಬೆಂಬಲಿಗ ಎಸ್.ಎಲ್.ಲಿಂಗರಾಜು ಅವರ ವಿರುದ್ಧ ಕೃಷ್ಣ ಅವರ ಬೆಂಬಲಿಗ ರವೀಂದ್ರ ಶ್ರೀಕಂಠಯ್ಯ ಎರಡೂ ಕಡೆ ಕಣಕ್ಕೆ ಇಳಿಯುವ ಮೂಲಕ ಅಂಬರೀಷ್ ತಂಡಕ್ಕೆ ಬಹಿರಂಗ ಸವಾಲು ಎಸೆದಿದ್ದಾರೆ.
ಎಸ್.ಎಂ. ಕೃಷ್ಣ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಮದ್ದೂರುತಾಲ್ಲೂಕು ಪಂಚಾಯಿತಿ ಮೂವರು ಸದಸ್ಯರು ಜಿಲ್ಲಾ ಘಟಕದ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿರುವುದು ಬಂಡಾಯದ ಬಿಸಿ ಮೆಲ್ಲಗೆ ಹರಡತೊಡಗಿದೆ.

ರವೀಂದ್ರ ಅವರಿಗೆ ಶ್ರೀರಂಗಪಟ್ಟಣದ ಟಿಕೆಟ್ ರದ್ದುಪಡಿಸುವವರೆಗೂ ಮಂಡ್ಯದಿಂದ ಸ್ಪರ್ಧಿಸುವುದಿಲ್ಲ ಎಂದು ಅಂಬರೀಷ್ ಘೋಷಿಸಿದಾಗ, ಅವರನ್ನು ಬೆಂಬಲಿಸಿದ್ದ ಎಲ್.ಡಿ. ರವಿ ಅವರೂ ಮೇಲುಕೋಟೆಯಿಂದ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆ ಮಾಡಿದ್ದರು. ಪರಿಣಾಮ ಅಲ್ಲಿಯೂ ಅವರ ವಿರುದ್ಧ ಕಾಂಗ್ರೆಸ್‌ನಲ್ಲಿ ಅಪಸ್ವರದ ಮಾತುಗಳು ಕೇಳಿ ಬರತೊಡಗಿವೆ.

`ನಾನೂ ಬಂಡಾಯದ ರಾಜಕೀಯದಿಂದಲೇ ಬಂದವನು. ಬಂಡಾಯ ಅಭ್ಯರ್ಥಿಯ ಬಗೆಗೆ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳಲಿದೆ' ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ `ಪ್ರಜಾವಾಣಿ'ಗೆ ತಿಳಿಸಿದರು.

`ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಬಂಡಾಯ ಅಭ್ಯರ್ಥಿಯಾಗಿರುವ ರವೀಂದ್ರ ಶ್ರೀಕಂಠಯ್ಯ ಅವರ ಸ್ಪರ್ಧೆಯಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಂಡ್ಯದ ಜನತೆ ಸೂಕ್ತ ತೀರ್ಪು ನೀಡಲಿದ್ದಾರೆ. ಜಯ ಗಳಿಸುತ್ತೇನೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.
`ಕಳೆದ ಹಾಗೂ ಈ ಬಾರಿ ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ಎಂದು ಘೋಷಣೆ ಮಾಡಿತ್ತು. ಎರಡೂ ಬಾರಿಯೂ ಅನ್ಯಾಯ ಮಾಡಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಜೆಡಿಎಸ್‌ನಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಸ್ಪರ್ಧೆಗೆ ಇಳಿಯಬೇಕು ಎಂಬ ಕಾರ್ಯಕರ್ತರ ಒತ್ತಡದ ಮೇರೆಗೆ ಸ್ಪರ್ಧೆಗೆ ಇಳಿದಿದ್ದೇನೆ' ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದರು.

`ದಬ್ಬಾಳಿಕೆಯಿಂದ ಅನ್ಯಾಯ ಮಾಡುವವರ ಬಗೆಗೆ ಜನರು ತೀರ್ಪು ನೀಡುತ್ತಾರೆ. ನ್ಯಾಯ ಸಿಗುವ ವಿಶ್ವಾಸ ನನಗಿದೆ. ಆ ತೀರ್ಪಿನ ಬಗೆಗೆ ಕುತೂಹಲವೂ ಇದೆ' ಎಂದರು.

`ಶ್ರೀರಂಗಪಟ್ಟಣದಲ್ಲಿ ಅವರ ಅಭ್ಯರ್ಥಿ ನಾಮಪತ್ರ ಹಿಂತೆಗೆದುಕೊಂಡು, ನನ್ನನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಬೇಕು. ಹಾಗಾದರೆ ನಾನೂ ಮಂಡ್ಯದಿಂದ ಹಿಂದಕ್ಕೆ ಸರಿಯುತ್ತೇನೆ. ದ್ವೇಷದ ರಾಜಕಾರಣ ಮಾಡುವ ಮನಸ್ಸೂ ನನಗಿಲ್ಲ' ಎಂದು ಹೇಳಿದರು.

ಜೆಡಿಎಸ್‌ನದ್ದೂ ಅದೇ ಕತೆ: ಟಿಕೆಟ್ ನಿರಾಕರಣೆಯ ಕಾರಣದಿಂದ ಮದ್ದೂರು ಕ್ಷೇತ್ರದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಡಿ.ಸಿ. ತಮ್ಮಣ್ಣ ಅವರ ವಿರುದ್ಧ ಶಾಸಕಿ ಕಲ್ಪನಾ ಸಿದ್ದರಾಜು, ಕೆ.ಆರ್. ಪೇಟೆಯಲ್ಲಿ ಕೆ.ಸಿ. ನಾರಾಯಣಗೌಡ ಅವರ ವಿರುದ್ಧ ಮಾಜಿ ಸ್ಪೀಕರ್ ಕೃಷ್ಣ ಅವರು, ಮಂಡ್ಯದಲ್ಲಿ ಶಾಸಕ ಎಂ.ಶ್ರೀನಿವಾಸ್ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಅಶೋಕ್ ಜಯರಾಂ ಪಕ್ಷೇತರರಾಗಿ ಸ್ಪರ್ಧೆಗೆ ಧುಮುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT