ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗೆ ಬಂತು ಪಂಚಾಯಿತಿ ಜಗಳ !

Last Updated 5 ಫೆಬ್ರುವರಿ 2011, 6:30 IST
ಅಕ್ಷರ ಗಾತ್ರ

ಕೋಲಾರ: ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಪ್ರತಿಭಟನೆ, ಧರಣಿ ನಡೆಸುವುದರೊಂದಿಗೆ, ಹಲವು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ.ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕೆಂಬ ಆಗ್ರಹವೂ ಹೊರಬಿದ್ದಿದೆ. ಪಂಚಾಯಿತಿಗಳ ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ರಾಜಕಾರಣದ ನಡುವೆ ಸಾಮರಸ್ಯದ ಕೊರತೆ ಇರುವುದರ ಕಡೆಗೂ ಈ ಘಟನೆ ಬೆರಳು ತೋರಿದಂತಾಗಿದೆ.

ಪಂಚಾಯಿತಿಗಳಿಗೆ ಅಭಿವೃದ್ಧಿ ಅಧಿಕಾರಿಗಳ ನೇಮಕವಾದಂದಿನಿಂದಲೂ ಸಣ್ಣಗೆ ಉಸಿರಾಡುತ್ತಿದ್ದ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ಸಮೂಹ ಮತ್ತು ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ನಡುವಿನ ವಾಗ್ವಾದ, ವಿರೋಧ-ಪ್ರತಿರೋಧಗಳು ಈಗ ಜೋರು ದನಿ ಪಡೆದಿವೆ. ಹಲ್ಲೆ ನಡೆಸುವ ಮಟ್ಟಕ್ಕೂ ಪ್ರಕರಣಗಳು ತಿರುವು ಪಡೆಯುತ್ತಿವೆ ಎಂಬುದು ಗಮನಾರ್ಹ. ಬಹುತೇಕ ಸಂದರ್ಭಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ವಿರುದ್ಧ ಗ್ರಾ.ಪಂ. ಸದಸ್ಯರು ಮತ್ತು ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ತಿರುಗಿಬಿದ್ದಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

ತಾಲ್ಲೂಕಿನ ಉರಿಗಿಲಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ವಿರುದ್ಧ ಕೆಲವು ದಿನಗಳ ಹಿಂದೆ ಕೂಲಿಕಾರರು ತಿರುಗಿಬಿದ್ದಿದ್ದರು.ಅವರ ಕಾರ್ಯವೈಖರಿ ಕೂಲಿಕಾರರ ಹಿತಾಸಕ್ತಿಗೆ ವಿರುದ್ಧವಾಗಿತ್ತು ಎಂಬುದು ಪ್ರಮುಖ ಆರೋಪವಾಗಿತ್ತು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡುವ ವಿಚಾರದಲ್ಲಿ ಮತ್ತು ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಹಣ ಬಿಡುಗಡೆಯ ವಿಚಾರದಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿ ಮುಳಬಾಗಲು ತಾಲ್ಲೂಕಿನ ಬಲ್ಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ, ಉಪಾಧ್ಯಕ್ಷ, ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯ ಮೇಲೆ ಕಳೆದ ಜ.21ರಂದು ಹಲ್ಲೆ ನಡೆದಿತ್ತು. ಗಾಯಾಳುಗಳು ಆಸ್ಪತ್ರೆ ಸೇರಿದ್ದರು.

ಮೂರನೇ ಪ್ರಕರಣದಲ್ಲಿ, ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾ.ಪಂ.ನ ಕಾರ್ಯದರ್ಶಿ ರಾಮಣ್ಣ ಎಂಬುವವರ ಮೇಲೆ ಗುರುವಾರ ಶೆಟ್ಟಿಕುಂಟೆ ಗ್ರಾಮಸ್ಥರೊಬ್ಬರು ಹಲ್ಲೆ ನಡೆಸಿದ್ದಾರೆ. ಅದನ್ನು ಖಂಡಿಸಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದಾಗಿ, ತಾಲ್ಲೂಕು ಪಂಚಾಯಿತಿ ಮುಂದೆ ಧರಣಿ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್ ಅವರು ಸ್ಥಳಕ್ಕೆ ಬಂದ ಬಳಿಕವಷ್ಟೆ ಪರಿಸ್ಥಿತಿ ತಿಳಿಗೊಂಡಿದ್ದು ವಿಶೇಷ.

ಆರೋಪ-ಪ್ರತ್ಯಾರೋಪ:
ಹಲ್ಲೆಗೊಳಗಾದವರು ಮತ್ತು ಹಲ್ಲೆ ನಡೆಸಿದವರು ಪರಸ್ಪರ ಆರೋಪಗಳನ್ನು ಮಾಡುತ್ತಾರೆ. ಅಧಿಕಾರಿಗಳು ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂಬುದು ಗ್ರಾಮಸ್ಥರು, ಪಂಚಾಯಿತಿ ಪ್ರತಿನಿಧಿ, ಸಂಘಟನೆಗಳ ಮಂದಿಯ ಆರೋಪ. ನಿಯಮ ಮೀರಿ ಕೆಲಸ ಮಾಡಲು ಪಂಚಾಯಿತಿ ಪ್ರತಿನಿಧಿಗಳು, ಜನ, ಸ್ಥಳೀಯ ರಾಜಕಾರಣ ಒತ್ತಡ ಹೇರುತ್ತಿವೆ. ನಿಯಮ ಮೀರಲು ಸಾಧ್ಯವಿಲ್ಲ. ಹೀಗಾಗಿ ಘರ್ಷಣೆ ಏರ್ಪಡುತ್ತಿದೆ ಎಂಬುದು ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆರೋಪ. ‘ಹಳ್ಳಿಗಳಲ್ಲಿ ಸೇವೆ ಸಲ್ಲಿಸೋಣ ಎಂಬ ಮಹದಾಸೆಯಿಂದ ಉತ್ತಮ ಕೆಲಸಗಳನ್ನು ಬಿಟ್ಟು ಬಂದಿದ್ದೇವೆ. ಆದರೆ ಪಂಚಾಯಿತಿಗಳಲ್ಲಿರುವ ರಾಜಕಾರಣ ಅದಕ್ಕೆ ಅವಕಾಶ ಕೊಡುತ್ತಿಲ್ಲ’’ ಎಂಬುದು ಕೆಲವರ ಅಸಮಾಧಾನದ ನುಡಿ.

ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಸುಗಮಗೊಳಿಸುವ ಸಲುವಾಗಿ ನಡೆದ ಅಭಿವೃದ್ಧಿ ಅಧಿಕಾರಿಗಳ ನೇಮಕದಿಂದ ನಿರೀಕ್ಷಿತ ಪ್ರಯೋಜನ ಕಾಣುವ ಬದಲಿಗೆ ಹಲವೆಡೆ ನಿತ್ಯವೂ ವಾಗ್ವಾದ, ಘರ್ಷಣೆಗಳು ನಡೆಯುತ್ತಿವೆ. ಅವೇ ಹೆಚ್ಚು ಚರ್ಚೆಯಾಗುತ್ತಿವೆ. ಇಂಥ ಸನ್ನಿವೇಶದಲ್ಲಿ ಜಿಲ್ಲಾ ಪಂಚಾಯಿತಿಯು ಸನ್ನಿವೇಶವನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದು ಅಗತ್ಯವಾಗಿದೆ.ನಿಯಮ ಪಾಲಿಸುವ ಅಧಿಕಾರಿಗಳಿಗೆ ರಕ್ಷಣೆ, ನಿಯಮ ಮೀರುವರ ವಿರುದ್ಧ ಕ್ರಮ,  ನಿಯಮ ಮೀರಿ ಕೆಲಸ ಮಾಡಲು ಒತ್ತಾಯಿಸುವ ಪ್ರತಿನಿಧಿಗಳಿಗೆ ಸಲಹೆ-ಸೂಚನೆ ನೀಡಬೇಕು ಎಂಬುದು ಅಭಿವೃದ್ಧಿ ಅಧಿಕಾರಿಯೊಬ್ಬರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT