ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಟಕ ಮೂಲಕ ಮತದಾನ ಜಾಗೃತಿ

Last Updated 24 ಏಪ್ರಿಲ್ 2013, 7:05 IST
ಅಕ್ಷರ ಗಾತ್ರ

ಹಾವೇರಿ: ಯುವಜನಾಂಗ ಮತದಾನದಲ್ಲಿ ಪಾಲ್ಗೊಂಡು ತಮ್ಮ ನೆರೆಹೊರೆಯವರನ್ನು, ವೃದ್ಧರನ್ನು, ವಿಕಲಚೇತನರನ್ನು ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಹೇಳಿದರು.

ನಗರದ ಜೆ.ಪಿ.ಸರ್ಕಲ್‌ನಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದಿಂದ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಹೊಸಮತದಾರರ ನೋಂದಣಿ ಹಾಗೂ ಮೊದಲ ಹಂತದ ಜಾಗೃತಿ ಕಾರ್ಯಕ್ರಮ ಪೂರ್ಣಗೊಂಡಿದ್ದು, ಮತದಾರರು ತಪ್ಪದೇ ಮತ ಚಲಾಯಿಸಬೇಕು ಎಂಬ ಸಂದೇಶ ಸಾರುವ ಎರಡನೇ ಹಂತದ ಬೀದಿ ನಾಟಕದ ಮೂಲಕ ಮತದಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಸಿ.ಪಿ.ಮಾಯಾಚಾರಿ ಮಾತನಾಡಿ, ಮೇ 3 ರವರೆಗೆ ನಿರಂತರವಾಗಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಗ್ರಾಮಗಳಲ್ಲಿ ಬೀದಿ ನಾಟಕ ಮತ್ತು ಗೀತೆಗಳ ಮೂಲಕ ಮತದಾರರಿಗೆ ಅರಿವು ಮೂಡಿಸಲಾಗುವುದು. ಒಟ್ಟು 48 ಗ್ರಾಮಗಳಲ್ಲಿ ಜಾಗೃತಿ ಕಾರ್ಯ ನಡೆಯಲಿದೆ. ಕಲಾವಿದರು ಮತದಾನದ ಮಹತ್ವ ಸಾರುವ ಸಂದೇಶ ನೀಡಬೇಕು ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ರಾಣೆಬೆನ್ನೂರ ತಾಲ್ಲೂಕು ಯಕಲಾಸಪೂರ ಗ್ರಾಮದ ಪರಶುರಾಮ ಬಣಕಾರ ಅವರ ನೇತೃತ್ವದ `ಜನನಿ ಜಾನಪದ ಕಲಾವೇದಿಕೆ' ತಂಡದ ಕಲಾವಿದರಾದ ಬಸವರಾಜ ಎನ್.ಕೊಳಜಿ, ಚಂದ್ರಪ್ಪ ದೊಡ್ಮನಿ, ವಿರೇಶ ಸಂಕಿನಮಠ, ಸರೋಜಾ ಸಣಕಂಬಿ, ರಮೇಶ ಲಮಾಣಿ, ರಾಜು ಸುರ್ವೆ, ಲಿಂಗರಾಜ್ ಕೊಳಜಿ, ತಿಪ್ಪೇಶ ಲಕ್ಕಿಕೋನಿ `ನಮ್ಮ ಮತ ನಮ್ಮ ಹಕ್ಕು' ಎಂಬ ಬೀದಿನಾಟಕ ಪ್ರಸ್ತುತ ಪಡಿಸಿದರು.

ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಚೆನ್ನಮ್ಮ ಹೊಳೆಹೊಸೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಚ್. ರಾಘವೇಂದ್ರಸ್ವಾಮಿ, ಜಿ.ಪಂ. ಸಹಾಯಕ ಕಾರ್ಯದರ್ಶಿ ಸಿದ್ದನಗೌಡರ, ನಗರಸಭೆ ಆಯುಕ್ತ ಮಲ್ಲಾಪುರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸವರಾಜಪ್ಪ, ಮಹಿಳಾ ಕಲ್ಯಾಣಾಧಿಕಾರಿ ವಿಜಯಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಮದೂರ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT