ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿಗಳು ಕಾಡಿಗೆ: ವನ್ಯ ಪ್ರಾಣಿಗಳಿಗೆ ಸೋಂಕು ಸಾಧ್ಯತೆ

Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೀದಿನಾಯಿಗಳನ್ನು ಹಿಡಿದು ನಾಡಿನಿಂದ ಕಾಡಿಗೆ ಬಿಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಿಂದ ಕಾಡು ಪ್ರಾಣಿಗಳಿಗೆ ಹಲವು ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಕೆಲ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ವರ್ಷದಿಂದ ಅಕ್ರಮವಾಗಿ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಕೆಲ ಭಾಗಗಳು, ತುಮ­ಕೂರು,   ಹಾಗೂ ಕೆಜಿಎಫ್‌ನಲ್ಲಿ ಬೀದಿ ನಾಯಿಗಳನ್ನು ಹಿಡಿದು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತಿದೆ ಎಂದು ಸರ್ವೋದಯ ಸೇವಾಬಾವಿ ಸಂಸ್ಥೆಯ ಟ್ರಸ್ಟಿ ವಿನಯ್‌ ಮೋರೆ ಆಪಾದಿಸಿದ್ದಾರೆ.

ಮಂಡ್ಯದ ನಗರ ಪ್ರದೇಶ, ಪಾಂಡವಪುರ, ಮದ್ದೂ­ರಿನಲ್ಲಿ ಹಿಡಿದ ಬೀದಿನಾಯಿಗಳನ್ನು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ,  ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸೇರಿ­ದಂತೆ ಕೆಲ ತಾಲ್ಲೂಕುಗಳಲ್ಲಿ ಹಿಡಿದ ಬೀದಿ ನಾಯಿ­ಗಳನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ಬಿಡುತ್ತಿದ್ದರೆ, ಕೆಜಿಎಫ್‌ನಲ್ಲಿ ಕೃಷ್ಣಗಿರಿ ಅರಣ್ಯಕ್ಕೆ ಹಾಗೂ ತುಮಕೂ­ರಿ­ನಲ್ಲಿ ದೇವರಾಯನ ದುರ್ಗ ಹಾಗೂ ತಿಮ್ಮನಹಳ್ಳಿ ಅರಣ್ಯ ಪ್ರದೇಶಕ್ಕೆ ನಾಯಿಗಳನ್ನು ಸ್ಥಳಾಂತರ ಗೊಳಿಸ­ಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಈ ಬಗ್ಗೆ ಹಲವು ಬಾರಿ ಮಾಹಿತಿ ಬಂದಾಗ ಆಯಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ಸತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರಿಗೆ
ಹಾಗೂ ನಗರಸಭೆಗಳ ಸದಸ್ಯರಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ’.


‘ಈ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾ­ಗಿ­ರುವ ಸಂಬಂಧ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿರುವ ಅಲ್ಲಿನ ನಗರಸಭೆಗಳ ಸದಸ್ಯರು, ಅರಣ್ಯ ಇಲಾಖೆಯ ಗಮನಕ್ಕೆ ಬಾರದಂತೆ ಅಕ್ರಮ­ವಾಗಿ ಈ ಕೃತ್ಯ ಎಸಗುತ್ತಿದ್ದಾರೆ. ಆದರೆ ಇದು ಕಾನೂನುಬಾಹಿರ’.

‘ಅರಣ್ಯಗಳಲ್ಲಿ ಈಗಾಗಲೇ ನೀರು ಹಾಗೂ ಆಹಾ­ರದ ಅಭಾವದಿಂದ ಕಾಡು ಪ್ರಾಣಿಗಳು ಜನವಸತಿ ಪ್ರದೇ­ಶ­ಗಳತ್ತ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಾಕು ಪ್ರಾಣಿಗಳಾದ ಬೀದಿ ನಾಯಿಗಳನ್ನು ಅರಣ್ಯಕ್ಕೆ ಬಿಟ್ಟರೆ, ಅವು ಚಿರತೆ­ಯಂತಹ ಮಾಂಸಹಾರಿ ಪ್ರಾಣಿಗಳಿಗೆ ಸುಲಭವಾಗಿ ಆಹಾರ­ವಾಗುತ್ತವೆ. ಇದರ ರುಚಿ ಹತ್ತಿ  ಚಿರತೆಗಳು ಸುಲಭವಾಗಿ ಸಿಗುವ ಬೇಟೆಯನ್ನು ಅರಸಿ ನಾಡಿನತ್ತ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಅವರ ಅಭಿಪ್ರಾಯ.

‘ಮಂಡ್ಯ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿ­ಗಳು ಬೀದಿನಾಯಿಗಳನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತ­ರಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಅದರಂತೆ ಈಗಾಗಲೇ ನೂರಾರು ಬೀದಿ ನಾಯಿಗಳನ್ನು ಹಿಡಿದು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ’.

ಆರೋಗ್ಯವಂತ ಬೀದಿನಾಯಿಗಳನ್ನು ಕೊಲ್ಲದಂತೆ ಹಾಗೂ ಸ್ಥಳಾಂತರಿಸದಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ್ದರೂ, ಕೆಲ ಜಿಲ್ಲೆಗಳಲ್ಲಿನ ನಗರಸಭಾ ಸದಸ್ಯರು ನಿಯ­ಮಗಳನ್ನು ಉಲ್ಲಂಘಿಸಿ ಈ ಕೃತ್ಯಕ್ಕೆ ಕೈ ಹಾಕುತ್ತಿ­ದ್ದಾರೆ. ಈ ಸಂಬಂಧ ಮಂಡ್ಯ ನಗರಸಭೆಯ ಸದಸ್ಯರ ವಿರುದ್ಧ ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನುತ್ತಾರೆ.

ಬೀದಿನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಶಸ್ತ್ರಚಿಕಿತ್ಸೆ: ಇನ್ನು ಬೀದರ್‌ನಲ್ಲಿ ನಿತ್ಯ ಬೀದಿ ನಾಯಿಗಳನ್ನು ಬಹಳ ಕ್ರೂರವಾಗಿ ಹತ್ಯೆ ಮಾಡಲಾಗುತ್ತಿದೆ. ಹಾಸನದಲ್ಲೂ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ರೀತಿ ಬೀದಿನಾಯಿ­­ಗಳನ್ನು ಹತ್ಯೆ ಮಾಡುವ ಬದಲು ಸಂತಾನ ಶಕ್ತಿ ನಿಯಂತ್ರಿಸಲು ನಗರಸಭೆ ಟೆಂಡರ್‌ ಕರೆದು ನಾಯಿ­ಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸ­ಬಹುದು. ನಂತರ ವರ್ಷ­ಕ್ಕೊಮ್ಮೆ ರೇಬಿಸ್‌ ನಿರೋಧಕ ಲಸಿಕೆ ನೀಡುವ ಕಾರ್ಯ­ಕ್ರಮಗಳನ್ನು ಹಮ್ಮಿಕೊಳ್ಳ­ಬಹುದು. ಇದರಿಂದ ಬೀದಿ­ನಾಯಿಗಳ ಸಂಖ್ಯೆ ಹಾಗೂ ರೇಬಿಸ್‌ ಪ್ರಕ­ರಣ­ಗಳನ್ನು ಕಡಿಮೆ ಮಾಡಬಹುದು ಎಂದು ಪರಿಸರವಾದಿ ನವೀನ ಕಾಮತ್‌ ಅಭಿಪ್ರಾಯ­ಪಟ್ಟರು.

ನಗರಸಭಾ ಅಧ್ಯಕ್ಷರಿಗೆ ನೋಟಿಸ್‌
ಮುತ್ತತ್ತಿ ಅರಣ್ಯ ಪ್ರದೇಶದಲ್ಲಿರುವ ಕಾವೇರಿ ವನ್ಯ­ಜೀವಿ ಧಾಮದಲ್ಲಿ ತಿಂಗಳ ಹಿಂದೆ ಬೀದಿ ನಾಯಿಗಳು ಜಿಂಕೆಗಳ ಮೇಲೆ ಗುಂಪುಗುಂಪಾಗಿ ದಾಳಿ ನಡೆಸಿದ ಘಟನೆ ನಡೆದಿತ್ತು. ಆಗಿನಿಂದ ಬಿಡಾಡಿ ನಾಯಿಗಳು ಅರಣ್ಯ ಪ್ರದೇಶವನ್ನು ಪ್ರವೇಶಿಸದಂತೆ ಕ್ರಮ ತೆಗೆದು­ಕೊಳ್ಳಲಾಗಿದೆ. ಈ ಸಂಬಂಧ ಅರಣ್ಯ ಸಿಬ್ಬಂದಿಗೂ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್‌­ನಲ್ಲೂ ಮಂಡ್ಯ­ದಿಂದ ಬೀದಿನಾಯಿಗಳನ್ನುತಂದು ಕಾವೇರಿ ವನ್ಯ­ಜೀವಿ ಧಾಮ­ದಲ್ಲಿ ಬಿಡಲು ಪ್ರಯತ್ನಿಸಲಾಗಿತ್ತು. ಅದನ್ನು ಕಂಡ ನಮ್ಮ ಸಿಬ್ಬಂದಿ ತಡೆದಿದ್ದರು. ಈ ಬಗ್ಗೆ ಮಂಡ್ಯ ನಗರ­ಸಭಾ ಅಧ್ಯಕ್ಷರಿಗೆ ನೋಟಿಸ್‌ ಕಳು­ಹಿಸ­ಲಾಗಿದೆ. ಬೀದಿ­ನಾಯಿ­­ಗಳನ್ನು ಅರಣ್ಯಗಳಿಗೆ ತಂದು ಬಿಡುವುದರಿಂದ ಸಣ್ಣ ವನ್ಯಜೀವಿಗಳಿಗೆ ಹಾನಿ ಹಾಗೂ ಕೆಲವೊಂದು ರೋಗ­ಗಳು ವನ್ಯಜೀವಿಗಳಿಗೆ ಹರಡು­ತ್ತದೆ. ಅಲ್ಲದೆ ಚಿರತೆ ಹಾಗೂ ಇತರೆ ಪ್ರಾಣಿಗಳು ಈ ನಾಯಿಗಳನ್ನು ಹಿಂಬಾಲಿಸಿಸುವ ಸಾಧ್ಯತೆ ಇರು­ತ್ತದೆ.

–ಕೆ.ವಿ. ವಸಂತರೆಡ್ಡಿ, ಉಪ ಅರಣ್ಯ  ಸಂರಕ್ಷಣಾಧಿಕಾರಿ, ಕಾವೇರಿ ವನ್ಯಜೀವಿ ಧಾಮ

ಸತ್ಯಕ್ಕೆ ದೂರವಾದ ಮಾತು

ಸಾಕು ಪ್ರಾಣಿಯಾಗಿರುವ ಬೀದಿ ನಾಯಿಗಳನ್ನು ಕಾಡಿಗೆ ಬಿಡುವುದು ಅಮಾನವೀಯ. ನಾಯಿ­ಗಳನ್ನು ಅರಣ್ಯಕ್ಕೆ ಬಿಡುವುದರಿಂದ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಬಂದು ದಾಳಿ ನಡೆಸು­ವುದು ಸತ್ಯಕ್ಕೆ ದೂರವಾದ ಮಾತು. ಆದರೆ ಕಾಡಿ­ನಲ್ಲಿ ಜೀವಿಸುವುದನ್ನೇ ಅರಿಯದ ಜೀವಿಗಳನ್ನು ಈ ರೀತಿ ಕಾಡಿಗೆ ಬಿಡುವುದರಿಂದ ಬಹಳ ದಿನ ಅವು ಜೀವಿಸುವುದಿಲ್ಲ. ಹೀಗೆ ಸತ್ತ ನಾಯಿಗಳಿಂದ ವನ್ಯ ಜೀವಿಗಳಿಗೆ ರೋಗ ಹರಡುತ್ತದೆ. ಹುಲಿಗಳು ಬೇಟೆ­ಯಾಡಲು ದೈಹಿಕವಾಗಿ ನಿಶ್ಯಕ್ತವಾದಾಗ ಮಾತ್ರ ಸುಲಭವಾಗಿ ಸಿಗುವ ಆಹಾರವನ್ನು ಹುಡುಕುತ್ತದೆ. ಈ ಸಮಯದಲ್ಲಿ ಅದು ಜನವಸತಿ ಪ್ರದೇಶಗಳತ್ತ ಬರುತ್ತದೆ. ಆದರೆ ಕಾಡಿನ ಅಂಚು ಪ್ರದೇಶಗಳಲ್ಲಿ ಜೀವಿಸುವ ಚಿರತೆಗಳು ಬೇರೆ ಆಹಾರ ಸಿಗದಾಗ ಪರ್ಯಾಯವಾಗಿ ನಾಯಿಗಳನ್ನು ಬೇಟೆಯಾಡು­ತ್ತವೆ.

–ಕೃಪಾಕರ, ವನ್ಯಜೀವಿ ನಡವಳಿಕೆ ತಜ್ಞ

ಪ್ರಾಣಿಗಳಿಗೆ ಹರಡುವ ರೋಗಗಳು

ಬೀದಿನಾಯಿಗಳನ್ನು ಕಾಡಿಗೆ ಬಿಡು­ವು­ದರಿಂದ ‘ಕೆನಲ್‌ ಕಾಫ್’, ‘ಕೆನೈನ್‌ ಡಿಸ್ಟೆಂಪರ್‌’, ‘ಪಾರ್ವೋ ವೈರಲ್‌ ಎಂಟ­ರೈಟೀಸ್‌’, ‘ಪಾರ್ವೋ ವೈರಲ್‌ ಗ್ಯಾಸ್ಟ್ರೋ ಎಂಟರೈಟೀಸ್‌’ ಹಾಗೂ ‘ಪ್ಯಾರಾ ಇನ್‌ಫ್ಲುಯೆನ್ಜಾ’ ರೋಗಗಳು ಗಾಳಿ ಮೂಲಕ ಹರಡ­ಬಹುದು.

‘ಲ್ಯಾಪ್ಟೊ  ಸ್ಪೈರೋ­ಸಿಸ್‌’ (ಮೂತ್ರ ಸೇವನೆಯಿಂದ ಹರಡು­ತ್ತದೆ), ಜತೆಗೆ ರೇಬಿಸ್‌ ಸೋಂಕಿತ ನಾಯಿ­ಗಳಿಂದ ರೇಬಿಸ್‌ ಸಹ ಬರ­ಬಹುದು. ರೋಗ ನಿರೋಧಕ ಶಕ್ತಿ ಇಲ್ಲದ ವನ್ಯಜೀವಿ­ಗಳು ವೈರಲ್‌ ಸೋಂಕಿ­ನಿಂದ ಕೆಲವೇ ದಿನಗಳಲ್ಲಿ ಸಾವನ್ನಪ್ಪಬಹುದು. 
–ಡಾ.ಎನ್‌.ಬಿ. ಶಿವಪ್ರಕಾಶ್‌, ಪಶುವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT