ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಯಲ್ಲಿ ಕಸದ ರಾಶಿ, ಪಾಲಿಕೆ ಸದಸ್ಯರಿಗೆ ಮೋಜಿನ ಹಿಗ್ಗು

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಒಕ್ಕಲಿಗ ಸಮುದಾಯದ ಸುಮಾರು 50 ಜನ ಬಿಬಿಎಂಪಿ ಸದಸ್ಯರು ಬುಧವಾರ ತಲಕಾಡು ಬಳಿಯ ರೆಸಾರ್ಟ್‌ವೊಂದಕ್ಕೆ ಮೋಜಿನಕೂಟ ನಡೆಸಲು ತೆರಳಿದ್ದಾರೆ.

`ಬಿಬಿಎಂಪಿಯಲ್ಲಿರುವ ಒಕ್ಕಲಿಗ ಸದಸ್ಯರು ಪಕ್ಷ ಬೇಧವಿಲ್ಲದೇ ಮೋಜಿನಕೂಟದಲ್ಲಿ ಪಾಲ್ಗೊಂಡಿದ್ದಾರೆ. ಒಕ್ಕಲಿಗರ ಸಮಾವೇಶದ ಯಶಸ್ಸಿನ ಕಾರಣಕ್ಕಾಗಿ ಮೋಜಿನಕೂಟ ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ~ ಎಂದು ಹೆಸರು ಹೇಳಲಿಚ್ಚಿಸದ ಬಿಬಿಎಂಪಿ ಹಿರಿಯ ಸದಸ್ಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲೇ ಮೋಜಿನ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ನಗರದಲ್ಲಿ ತ್ಯಾಜ್ಯದ ಸಮಸ್ಯೆ, ಗುತ್ತಿಗೆದಾರರ ಪ್ರತಿಭಟನೆಯಂಥ ಸಮಸ್ಯೆಗಳಿದ್ದಾಗ ಅದರ ಬಗ್ಗೆ ಗಮನ ನೀಡದೇ ಸದಸ್ಯರು ಮೋಜಿಕೂಟದಲ್ಲಿ ಪಾಲ್ಗೊಂಡಿರುವುದು ಸರಿಯಲ್ಲ~ ಎಂದು ಅವರು ವಿಷಾದಿಸಿದರು.

`ಮುಂಬರಲಿರುವ ಒಕ್ಕಲಿಗರ ಸಂಘದ ಚುನಾವಣೆಯ ಕಾರಣದಿಂದ ಸಂಘದ ಮುಖಂಡರು ಈ ಮೋಜಿನಕೂಟ ಏರ್ಪಡಿಸಿದ್ದಾರೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇದು ಕೇವಲ ಒಕ್ಕಲಿಗ ಸಮುದಾಯದ ಕಾರ್ಯಕ್ರಮವಷ್ಟೇ. ಇದಕ್ಕೂ ಬಿಬಿಎಂಪಿಗೂ ಯಾವುದೇ ಸಂಬಂಧ ಇಲ್ಲ. ಇದು ಸದಸ್ಯರ ಖಾಸಗಿ ವಿಷಯ~ ಎಂದು ಬಿಬಿಎಂಪಿ ಜೆಡಿಎಸ್ ವಿರೋಧ ಪಕ್ಷದ ನಾಯಕ ಟಿ.ತಿಮ್ಮೇಗೌಡ ಹೇಳಿದರು.

`ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಬೀದಿಯಲ್ಲಿ ಕಸ ರಾಶಿ ಬೀಳುತ್ತಿದೆ. ನಗರದ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಬಿಬಿಎಂಪಿ ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿರುವುದರಿಂದ ಕಾಮಗಾರಿಗಳು ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಹೀಗೆ ನಗರದಲ್ಲಿ ಸಾಕಷ್ಟು ಸಮಸ್ಯೆಯಿರುವ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರು ನಗರದಲ್ಲಿದ್ದು ಸಮಸ್ಯೆಯ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಿತ್ತು.  ಆದರೆ, ಸದಸ್ಯರು ಮೋಜಿನಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ನೈತಿಕತೆ ಕಳೆದುಕೊಂಡಿದ್ದಾರೆ~ ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿ, ನಂದಿನಿ ಬಡಾವಣೆಯ ನಿವಾಸಿ ಜಯರಾಮ್‌ರಾವ್ ಹೇಳಿದರು.

`ಪಾಲಿಕೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಇಂತಹ ಸಂದರ್ಭದಲ್ಲೇ ಮೇಯರ್ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಒಕ್ಕಲಿಗ ಸದಸ್ಯರು ಮೋಜಿನಕೂಟಕ್ಕೆ ತೆರಳಿದ್ದಾರೆ.

ಇದನ್ನು ನೋಡಿದರೆ ಪಾಲಿಕೆಯ ಸದಸ್ಯರಿಗೆ ನಗರದ ಜನತೆಯ ಬಗ್ಗೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ನಾಗರಿಕರ ಸೇವೆಗೆ ಹೆಚ್ಚಿನ ಒತ್ತು ನೀಡಬೇಕು. ಆದರೆ, ಬಿಬಿಎಂಪಿ ಈ ಅಂಶವನ್ನೇ ಮರೆತಂತಿದೆ~ ಎಂದು ರಾಜಾಜಿನಗರದ ಪ್ರಮೋದ್ ಆರೋಪಿಸಿದರು.
 
`ಸದಸ್ಯರು ಮೋಜಿನಕೂಟದಲ್ಲಿ ಪಾಲ್ಗೊಳ್ಳುವುದು ಅವರವರ ವೈಯಕ್ತಿಕ ವಿಚಾರ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್ ಮತ್ತು ವಿರೋಧ ಪಕ್ಷದ ನಾಯಕ ಎಂ.ಕೆ.ಗುಣಶೇಖರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT