ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಯಲ್ಲಿ ಬದುಕು

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಆ ದಾರಿಯಲ್ಲಿ ನಿತ್ಯವೂ ಸಾವಿರಾರು ಜನ ಓಡಾಡುತ್ತಾರೆ. ಶಾಲೆಗೆ ಹೋಗುವ ಮಕ್ಕಳು, ಆಫೀಸಿಗೆ ತೆರಳುವ ಪುರುಷರು, ಮಹಿಳೆಯರು, ಶಾಪಿಂಗ್‌ನಲ್ಲಿ ನಿರತರಾಗಿರುವ ಶಾಪಿಂಗ್‌ಪ್ರಿಯರು... ಅಬ್ಬ ಆ ಬೀದಿಯಲ್ಲಿ ನಿತ್ಯವೂ ಜನಜಾತ್ರೆ... ಎಲ್ಲರೂ ತಂತಮ್ಮ ಕೆಲಸದಲ್ಲಿ ನಿರತ...

ಅಂತಹ ಜನರ ಕಣ್ಣು ಒಮ್ಮೆ ಇವರತ್ತ ಹಾಯಿಸಿದರೆ ಇವರ ಮುಖದಲ್ಲಿ ಏನೋ ನಗು... ದಿನವಿಡೀ ಕುಳಿತಿದ್ದಕ್ಕೆ ಸಾರ್ಥಕತೆ.. ಬೀದಿಯಲ್ಲಿ ಕುಳಿತು ಕಸವಾಗಿ ಹೋಗಲಿಲ್ಲವಲ್ಲ ಎಂಬ ಸಮಾಧಾನ. ಇಳಿಸಂಜೆಯಾಗುವ ಹೊತ್ತಿಗೆ ಕೈಗೆ ಬಂದ ದುಡ್ಡನ್ನು ಎಣಿಸಿ ಸೀರೆಯಂಚಿನಲ್ಲಿ ಭದ್ರವಾಗಿ ಸಿಕ್ಕಿಸಿಕೊಳ್ಳುತ್ತಾ ತಮ್ಮ ಪುಟ್ಟ ಮನೆಯ ಹಾದಿ ಹಿಡಿಯುತ್ತಾರೆ.

ಬೆಂಗಳೂರು ಮಹಾನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಇಂತಹ ನೂರಾರು ಮಹಿಳೆಯರು ಬೀದಿ ಬದಿಯಲ್ಲಿ ತಮ್ಮ ಪುಟ್ಟ ವ್ಯಾಪಾರವನ್ನು ನಡೆಸುತ್ತಿರುತ್ತಾರೆ. ಮಲ್ಲೇಶ್ವರಂ, ಗಾಂಧಿಬಜಾರು, ಮೆಜೆಸ್ಟಿಕ್, ಅವೆನ್ಯೂ ರಸ್ತೆ ಮೊದಲಾದ ಬ್ಯುಸಿ ಏರಿಯಾಗಳಲ್ಲಿ ಕುಳಿತಿರುವ ಈ ಮಹಿಳೆಯರಿಗೆ ಪಾದಚಾರಿಗಳೇ ಅನ್ನದಾತರು.

ಯಾವುದಾದರೂ ಹಣಕಾಸು ಸಂಸ್ಥೆಗಳಿಂದ, ಬ್ಯಾಂಕಿನಿಂದ, ಸ್ವಸಹಾಯ, ಮಹಿಳಾ ಸಂಘಗಳಿಂದ ಹಣವನ್ನು ಪಡೆದು ಫುಟ್‌ಪಾತ್ ಮೇಲೆ ವ್ಯಾಪಾರ ನಡೆಸುವ ಮಹಿಳೆಯರದ್ದು ಅವಿರತ ದುಡಿಮೆ. ತರಕಾರಿ-ಹಣ್ಣು ವ್ಯಾಪಾರ, ಗಿಡ ಮಾರುವುದು, ಫ್ಯಾನ್ಸಿ ವಸ್ತುಗಳ ಮಾರಾಟ ಹೀಗೆ ಕಡಿಮೆ ಬಂಡವಾಳ ಹಾಕಿ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವ ಮಹಿಳೆಯರದ್ದು ಹೋರಾಟದ ಬದುಕು.

ಇವರಲ್ಲಿ ಬಹುಪಾಲು ಮಹಿಳೆಯರ ಜೀವನಕ್ಕೆ ಇದೇ ವ್ಯಾಪಾರ ಆಧಾರ. ಬೆಂಗಳೂರು ಹೊರವಲಯಗಳಿಂದ ಬೆಳಗಿನ ಜಾವ ಇಲ್ಲಿ ಬಂದು ಕುಳಿತುಕೊಂಡರೆ ಮತ್ತೆ ಮನೆಗೆ ತೆರಳುವುದು ರಾತ್ರಿಯಾದ ಮೇಲೆಯೇ. 

`ನಾನು ಕಳೆದ 15 ವರ್ಷಗಳಿಂದ ಮಲ್ಲೇಶ್ವರಂನ ಇದೇ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ನಮ್ಮ ಯಜಮಾನರು ತೀರಿಕೊಂಡ ಬಳಿಕ ಫೈನಾನ್ಸ್ ಒಂದರಿಂದ ಸಾಲ ಪಡೆದು ಹೊಟ್ಟೆಪಾಡಿಗಾಗಿ ಇಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ವ್ಯಾಪಾರ ಸುಮಾರಾಗಿ ನಡೆಯುತ್ತಿದೆ~ ಎನ್ನುತ್ತಾರೆ ವೈಟ್‌ಫೀಲ್ಡ್‌ನಿಂದ ಬಂದ ಯಶೋದಾ.

`ಇಲ್ಲಿ ನಾನು ಮಾಡುವ ವ್ಯಾಪಾರದಿಂದ ಕುಟುಂಬದ ಜೀವನಕ್ಕೆ ಕಷ್ಟವಾಗುತ್ತಿತ್ತು. ಈಗ ಮಗನೂ ದುಡಿಯಲು ಆರಂಭಿಸಿದ್ದರಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ~ ಎನ್ನುತ್ತಾರೆ ನೆಲಮಂಗಲದ ನಾಗಮ್ಮ.

ಬೇಸಿಗೆಯಲ್ಲಿ ವ್ಯಾಪಾರ ಚೆನ್ನಾಗಿರುತ್ತದೆ. ಮಳೆಗಾಲದಲ್ಲಿ ನಮಗೆ ತಾಪತ್ರಯವೇ. ಪೊಲೀಸರು ತೊಂದರೆ ಕೊಡುವುದಿಲ್ಲ. ನಮ್ಮ ಪಾಡಿಗೆ ವ್ಯಾಪಾರ ನಡೆಸಲು ಬಿಡುತ್ತಾರೆ ಎನ್ನುವುದು ಮಲ್ಲೇಶ್ವರದಲ್ಲಿಯೇ ವಾಸವಿದ್ದು ಹತ್ತು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಸರೋಜಾ.

ಬಿಸಿಲು, ಗಾಳಿ, ಚಳಿ, ಮಳೆಗೆ ಮೈಯೊಡ್ಡಿ ಬದುಕು ಸವೆಸುವ ಇವರದ್ದು ಹೋರಾಟದ ಬದುಕು. ಫುಟ್‌ಪಾತ್ ಇವರಿಗೆ ಬದುಕಿನ ಆಸರೆ. ಅಲ್ಲಿಯೇ ಕಾಯಕ. ಅಲ್ಲಿ ಸಂಚರಿಸುವ ಪಾದಚಾರಿಗಳು, ದಾರಿಹೋಕರು, ಶಾಲಾ-ಕಾಲೇಜು ಹುಡುಗಿಯರು, ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಇವರ ಬದುಕು ಹೊರೆಯುವವರು.

ಅಂಗಡಿ, ಮಾಲ್‌ಗಳಲ್ಲಿ ಕೇಳಿದಷ್ಟು ಹಣವನ್ನು ನೀಡಿ ವಸ್ತುವನ್ನು ಕೊಂಡು ತರುತ್ತಾರೆ. ಹಾಗೆಯೇ ವ್ಯಾಪಾರದಲ್ಲಿ ತಮಗೂ ಜನರು ಸಹಕರಿಸಲಿ ಎಂಬುದು ಇವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT