ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ ಸಿದ್ಧರಾಮೇಶ್ವರ ರಥೋತ್ಸವ ಇಂದು

Last Updated 2 ಸೆಪ್ಟೆಂಬರ್ 2013, 7:29 IST
ಅಕ್ಷರ ಗಾತ್ರ

ಬೀಳಗಿ: `ಅರವತ್ತೆಂಟು ಸಾವಿರ ವಚನಂಗಳ ಹಾಡಿ ಸೋತಿತೆನ್ನ ಮನ ನೋಡಯ್ಯಾ' ಎಂದು ಹಾಡಿದ ಬೀಳಗಿ ತಾಲ್ಲೂಕಿನ ಆರಾಧ್ಯ ದೈವ, ಶಿವಯೋಗಿ ಸಿದ್ಧರಾಮೇಶ್ವರರ 840ನೇ ಜಯಂತಿ ಸಂದರ್ಭ ಇದು.

ಇದೇ 2ರಂದು ರಥೋತ್ಸವ ನಡೆಯಲಿದ್ದು ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಶ್ರಾವಣ ಮಾಸದ ಅರಂಭದಿಂದಲೂ ಕಾರ್ಯಕ್ರಮಗಳು ನಡೆಯುತ್ತಿವೆ.

ಸೊನ್ನಲಿಗೆಯಲ್ಲಿ (ಈಗಿನ ಸೊಲ್ಲಾಪುರ) ಕ್ರಿ.ಶ.1173ರಲ್ಲಿ ಕುಡಿಯರ ಮನೆತನದ ಮುದ್ದುಗೌಡ, ಸುಗ್ಗಲಾ ದೇವಿಯವರ ಮಗನಾಗಿ ಜನಿಸಿದ ಸಿದ್ಧರಾಮೇಶ್ವರರಿಗೆ ಶ್ರೆಶೈಲದ ಮಲ್ಲಿಕಾರ್ಜುನ ಆರಾಧ್ಯ ದೈವ. ಕರ್ನಾಟಕ ಅವರ ಕಾರ್ಯ ಕ್ಷೇತ್ರವಾದರೆ ಆಂಧ್ರಪ್ರದೇಶ ಅವರ ಸಿದ್ಧಿ ಸ್ಥಾನ.

`ಮೂರು ಮನೆಗೊಂದು ಬಾವಿ, ನೂರು ಮನೆಗೊಂದು ಕೆರೆ' ಎನ್ನುವ ಆದರ್ಶ ವ್ಯವಸ್ಥೆಯ ಕಲ್ಪನೆಯನ್ನು ಆಗಿನ ಕಾಲದಲ್ಲಿಯೇ ಬಿತ್ತರಿಸಿದ ಮಹಾನ್ ಸಾಧಕ. ಅನ್ನ, ವಸ್ತ್ರ, ವಸತಿ ಎಲ್ಲರಿಗೂ ದೊರೆಯಬೇಕೆನ್ನುವ ನಿಲುವು. ಜಾತಿ, ಮತ,ಪಂಥಗಳಿಂದ ಹೊರತಾದ, ಸಮಾನತೆಗೆ ಗೌರವ ನೀಡುವ ಸಮಾಜ ನಿರ್ಮಾಣದ ಹಂಬಲ.

ಜಪವೇನು ತಪವೇನು ಸಾಧಿಸುವಾತಂಗೆ ದುರ್ಲಭವೇ?/ ನಿತ್ಯವೇನು ನೇಮವೇನು ಆಚರಿಸುವಾತಂಗೆ ದುರ್ಲಭವೇ?/ ಪೂಜೆ ಏನು ಪುರಸ್ಕಾರವೇನು ಸಲ್ಲಿಸುವಾತಂಗೆ ದುರ್ಲಭವೇ? ಹೇ ದೇವಾ ಕಪಿಲ ಸಿದ್ಧ ಮಲ್ಲಿಕಾರ್ಜುನಾ/ ಎಂದು ಈ ಜಗದ ಜನತೆಯ ದೇವ ಲೋಕದ ಹುಚ್ಚು ಬಿಡಿಸಿ ಇಹಲೋಕವನ್ನೇ ದೇವಲೋಕವನ್ನಾಗಿಸಲು ತಮ್ಮ ಸಂದೇಶಗಳ ಮೂಲಕ ಯತ್ನಿಸಿದವರು ಸಿದ್ಧರಾಮೇಶ್ವರರು.

ಕಲ್ಯಾಣ ಕ್ರಾಂತಿಯ ನಂತರ ಇಡೀ ಶರಣ ಸಮೂಹ ವಚನ ಸಾಹಿತ್ಯದ ಪ್ರಚಾರಕ್ಕಾಗಿ ನಾಡಿನುದ್ದಕ್ಕೂ ಚದುರಿ ಹೋದ ಸಂದರ್ಭದಲ್ಲಿ ಉಳವಿ ಕ್ಷೇತ್ರದತ್ತ ಹೊರಟ ಸಿದ್ಧರಾಮೇಶ್ವರರು ಬೀಳಗಿ ಪಕ್ಕದ ದಟ್ಟ ಕಾಡಿನಲ್ಲಿ ಒಂದಿಷ್ಟು ಸಮಯ ತಂಗಿ, ವಿಶ್ರಮಿಸಿ ತಪಗೈದರೆಂದು ಐತಿಹ್ಯವಿದೆ. ಅಂದು ಅವರು ತಂಗಿದ ತಾಣವೇ ಬೀಳಗಿ ಹಾಗೂ ಸುತ್ತಮುತ್ತಲಿನ ಜನ ಸಮೂಹಕ್ಕೆ ಇಂದು ಪುಣ್ಯ ಕ್ಷೇತ್ರ.

ಪ್ರಕೃತಿಯ ಮಡಿಲಲ್ಲಿ ಸ್ಥಳೀಯ ಕಲ್ಲುಗಳನ್ನೇ ಬಳಸಿ ಚಾಲುಕ್ಯ, ಹೊಯ್ಸಳ ಸಮ್ಮಿಶ್ರ ಶೈಲಿಯಲ್ಲಿ ನಾನೂರು ವರ್ಷಗಳ ಹಿಂದೆಯೇ ನಿರ್ಮಿಸಿದ ದೇವಾಲಯ ಇದೀಗ ನಿರ್ಮಿಸಿದ್ದಾರೇನೋ ಎಂಬ ಭಾವ ಹುಟ್ಟಿಸುತ್ತದೆ. ಸುಖನಾಸಿ, ನವರಂಗ, ಗರ್ಭಗುಡಿ, ಸುಂದರವಾದ  ಕೆತ್ತನೆಯ  ಕಂಬಗಳಿಂದ ಕೂಡಿದ ದೇವಾಲಯ ನೋಡಲು ಎರಡು ಕಣ್ಣುಗಳು ಸಾಲವು.

ವೀರಭದ್ರೇಶ್ವರ ದೇವಾಲಯದ ಕಂಬಗಳಂತೂ ದುಂಡಗಾಗಿ, ನುಣುಪಾಗಿ ಅಧುನಿಕ `ಲೇತ ಯಂತ್ರ' ಬಳಸಿ ಕೊರೆದು ನಿರ್ಮಿಸಿದಂತೆ ತೋರುತ್ತವೆ. ತ್ರಿಕೂಟಾಚಲ (ಮೂರು ಗುಡಿಯಲ್ಲಿ ಲಿಂಗಗಳು, ಮಧ್ಯದಲ್ಲಿ ಒಂದೇ ನಂದಿ), ನುಣುಪಾದ ಕರಿಯ ಕಲ್ಲಿನ ಮೇಲೆ ಕೊರೆಯಲಾದ ನವಗ್ರಹ ಯಂತ್ರ, ಲಜ್ಜಾ ಗೌರಿ, ಗುಡ್ಡವನ್ನೇ ಹೊದಿಕೆಯಾಗಿರಿಸಿಕೊಂಡ ಚಿಕ್ಕ ಗುಡಿಯಲ್ಲಿರುವ ಈಶ್ವರ ಲಿಂಗಗಳ ಸಮೂಹ, ಸಪ್ತ ಮಾತೃಕೆಯರು ನೋಡುಗರನ್ನು ಬೆರಗುಗೊಳಿಸುತ್ತವೆ.

ವಜೀರ ಹೈದರಖಾನ್‌ನ ಕೈ ಕೆಳಗಿನ ಅಧಿಕಾರಿಯಾಗಿದ್ದ ಖಂಡೇರಾವ್ ತಿಮ್ಮಾಜಿ ಎಂಬಾತ 1689ರಲ್ಲಿ ಈ ದೇವಾಲಯದ ಉತ್ತರಕ್ಕಿರುವ ಗುಡ್ಡದ ಮೇಲೆ 12ಮೀ. (40ಅಡಿ) ಎತ್ತರದ ಏಕ ಶಿಲಾ ದೀಪಸ್ತಂಭವನ್ನು ನಿಲ್ಲಿಸಿದನೆಂದೂ, 1695- 96ರಲ್ಲಿ ಈತನೇ ದೇವಾಲಯದ ಪೂರ್ವದ  ಮಹಾದ್ವಾರವನ್ನು ಕಟ್ಟಿಸಿದನೆಂದೂ ದೇವಸ್ಥಾನದ ಪಾವಟಿಗೆಗಳ ಮೇಲಿನ ಹಾಗೂ ದೀಪಸ್ತಂಭದ ಮೇಲಿನ ಶಾಸನಗಳು ಹೇಳುತ್ತವೆ.

ಖಂಡೇರಾವ್ ಎಂಬಾತನೇ ದೇವಸ್ಥಾನವನ್ನು ನಿರ್ಮಿಸಿದನೋ ಅಥವಾ ಮೊದಲೇ ನಿರ್ಮಾಣಗೊಂಡ ದೇವಾಲಯಕ್ಕೆ ಮಹಾದ್ವಾರ ನಿರ್ಮಿಸಿ, ದೀಪಸ್ತಂಬ ನಿಲ್ಲಿಸಿದನೋ ಖಚಿತವಾಗುವುದಿಲ್ಲ. ನಂತರ ಶಿಥಿಲಗೊಂಡ ಪೂರ್ವದ ದ್ವಾರವನ್ನು ಸೊನ್ನದ ಶ್ರೀಮಂತ ಗಂಗಪ್ಪ ಶಿವಲಿಂಗಪ್ಪ ದೇಸಾಯಿಯವರು, ಉತ್ತರದ ದ್ವಾರವನ್ನು ಪಟ್ಟಣದ ವರ್ತಕರಾದ ನಾಗರಾಳ ಕುಟುಂಬದವರು ಜೀರ್ಣೋದ್ಧಾರಗೊಳಿಸಿದರೆ, ಬಳ್ಳೂರ ಗ್ರಾಮದ ಸಿದ್ಧನಗೌಡ ವೀರನಗೌಡ ಪಾಟೀಲ ಎನ್ನುವವರು 1947ರಲ್ಲಿ ಪೂಜಾ ಕೈಂಕರ್ಯಕ್ಕೆ ಹಾಗೂ ಕುಡಿಯುವುದಕ್ಕಾಗಿ ಬಾವಿಯನ್ನು ತೋಡಿಸಿ ಭಕ್ತಿ ಸಮರ್ಪಿಸಿದ್ದಾರೆ.

ಐವತ್ತು, ಅರವತ್ತು ವರ್ಷಗಳ ಹಿಂದೆ  ಜಾತ್ರಾ ಸಮಿತಿಯವರು ಪೌಳಿಗಳನ್ನು ನಿರ್ಮಿಸಿದ್ದಾರೆ. ಈಗಲಂತೂ ಅಧುನಿಕ ಶೈಲಿಯ ಕಲ್ಯಾಣ ಮಂಟಪವನ್ನು ಸರಕಾರ ಹಾಗೂ ಸಾರ್ವಜನಿಕರ ನೆರವಿನಿಂದ ಸ್ವಾಮಿಯ ಹೆಸರಿನಲ್ಲಿ ನಿರ್ಮಿಸಲಾಗಿದೆ. ಸ್ವಾಮಿಯ ಪೂಜೆಗೆ ದಿನ ನಿತ್ಯ ಹಿರಿ ಹೊಳಿ (ಕೃಷ್ಣಾ ನದಿ) ನೀರನ್ನು ಸೊನ್ನದ ದೇಸಾಯಿಯವರೇ ಕಳಿಸಿ ಕೊಡುತ್ತಾರೆ. ವರ್ಷದುದ್ದಕ್ಕೂ ನಿತ್ಯ ರುದ್ರಾಭಿಷೇಕ ನಡೆಯುವ ವ್ಯವಸ್ಥೆಯನ್ನು ಭಕ್ತಾದಿಗಳ ನೆರವಿನಿಂದ ಮಾಡಲಾಗಿದೆ.

ಇತ್ತೀಚೆಗೆ ಯುವಕರ ಕೈಯ್ಯಲ್ಲಿ ಜಾತ್ರಾ ಮಹೋತ್ಸವ ಸಿಕ್ಕಿ ಪ್ರಸಾದ ಸೇವೆ, ಕ್ರೆಡಾಕೂಟ, ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ, ಮದ್ದು ಸುಡುವುದು ಎಲ್ಲವುಗಳಿಗೂ ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಖರ್ಚಾಗುತ್ತಿರುವುದನ್ನು ಕಂಡು ಹಿರಿಯ ವರ್ತಕರಾದ ವಿಎಸ್ ಕೊಲ್ಹಾರ ತಾವು ಚಿಕ್ಕವರಿದ್ದಾಗಿನ  ಜಾತ್ರೆಯನ್ನು ನೆನಪಿಸಿಕೊಳ್ಳುತ್ತಾರೆ.

1932 ನೇ ಸಾಲಿನಲ್ಲಿ ಜಾತ್ರೆಗೆ ಸಾರ್ವಜನಿಕರಿಂದ ಜಮಾ ಆದ ಹಣ ರೂ 172  11ಆಣೆ, 2ದುಡ್ಡು. ಹಾಗೂ ಜಾತ್ರೆಯ ವೆಚ್ಚ ರೂ  115.2ಆಣೆ, 2ದುಡ್ಡು, ಶಿಲ್ಕು ಉಳಿದ ಹಣ ರೂ 57,9ಆಣೆ ಎಂದು ಅವರು ಅಂದಿನ ಜಮಾ ಖರ್ಚಿನ ವಿವರವನ್ನು ತಮ್ಮ ತಂದೆ ಶಿಮೂರ್ತೆಪ್ಪ ಕೊಲ್ಹಾರ ಅವರು  ಹಸ್ತಾಕ್ಷರಗಳಲ್ಲಿ ಬರೆದಿಟ್ಟ ಜೀರ್ಣಗೊಂಡ ಕಾಗದದ ಸುರುಳಿಯನ್ನು ನೋಡುಗರ ಮುಂದೆ ಬಿಚ್ಚಿಡುತ್ತಾರೆ. ನಾವು ಮರೆತು ಬಿಟ್ಟಿರುವ, ನಮಗೆ ಗೊತ್ತೇ ಇಲ್ಲದ ಪಾವಲಿ (ನಾಲ್ಕಾಣೆ), ಚವಲಿ (ಎರಡಾಣೆ), ದುಡ್ಡು (ರೂಪಾಯಿಯ ಹದಿನಾರನೆ ಭಾಗ) ಎಲ್ಲವನ್ನೂ ನೆನಪಿಸುತ್ತಾರೆ.

ಒಂದು ವರ್ಷ ಲಕ್ಷಾಂತರ ವಂತಿಗೆ ಸೇರಿ ಅದ್ದೂರಿಯಾಗಿ ಜಾತ್ರೆ ನಡೆದು ಮತ್ತೊಂದು ವರ್ಷ ವಂತಿಗೆ ಕೂಡದೇ ಹೋದಲ್ಲಿ ಜಾತ್ರೆ ನಿಲ್ಲುವುದಿಲ್ಲ. ಕುರುಹಿನ ಶೆಟ್ಟಿ ಸಮಾಜದವರು ತೇರಿನ ಕಳಸದೊಂದಿಗೆ ರೂ 25ನ್ನು ಜಾತ್ರಾ ಸಮಿತಿಗೆ ಜಾತ್ರೆಯ ವೆಚ್ಚಕ್ಕಾಗಿ ವಂತಿಗೆ ಸಮರ್ಪಿಸುತ್ತಾರೆ.

ಜೊತೆಗೆ ಕರಡಿ ವಾದನದ ಸೇವೆ ಮಾಡುತ್ತಾರೆ. ಈ ರೂ25ಗಳಲ್ಲಿ ಜಾತ್ರಾ ಮಹೋತ್ಸವ ನಡೆಯಲೇಬೇಕೆಂದು ಕರಾರುಗಳಾಗಿವೆ. ಪ್ರತಿಯಾಗಿ ಕರಡಿ ವಾದನಕ್ಕಾಗಿ ಗೌರವ ಧನವಾಗಿ ರೂ5, ಎಲೆಯಡಿಕೆ, ಒಂದು ತೆಂಗಿನ ಕಾಯಿ ಹೋಳನ್ನು ಜಾತ್ರಾ ಸಮಿತಿಯವರು ಕಳಸದೊಂದಿಗೆ ಗೌರವ ಪೂರ್ವಕವಾಗಿ ಮರಳಿಸುತ್ತಾರೆ. ರಥೋತ್ಸವದ ಉಸ್ತುವಾರಿ ಪರಂಪರಾಗತವಾಗಿ ಬೋವಿ ಸಮಾಜಕ್ಕೆ ಸೇರಿದ್ದು. ಇದು ಇಲ್ಲಿನ ಪರಂಪರೆ.

ಸುಮಾರು ವರ್ಷಗಳಿಂದ ಮಹಾಲಿನಮನಿ ಎಂಬ ಮುಸ್ಲಿಂ ಕುಟುಂಬದವರು ತೇರಿಗೆ ಹೂವಿನ ಅಲಂಕಾರ ಮಾಡಿಸುತ್ತಾರೆ.  ಕೋಮು ಸೌಹಾರ್ದ ಹಾಗೂ ಭಾವೈಕ್ಯಕ್ಕೆ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ತಾಲ್ಲೂಕಿಗೆ ಅದನ್ನು ಗಟ್ಟಿಗೊಳಿಸಲು ಈ ಹೂವಿನ ಪರಿಮಳ ಇನ್ನಷ್ಟು ಕಸುವು ತುಂಬುತ್ತಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.

  ಭಾನುವಾರ ಮಹಾ ಪ್ರಸಾದದ ಏರ್ಪಾಡು, ಸೋಮವಾರ ರಥೋತ್ಸವ, ಮಂಗಳವಾರ ಕುಸ್ತಿ,  ಶಕ್ತಿ ಪ್ರದರ್ಶನಗಳು, ಕಡುಬಿನ ಕಾಳಗ, ಸಾಯಂಕಾಲ ಗಂಡೆದೆಯವರೇ ಬೆಚ್ಚಿಬೀಳುವಂತೆ ಪಟಾಕಿ, ಗರ್ನಾಲು, ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಬಾಣ, ಬಿರುಸು, ಉಕ್ಕೇರುವ ಕುಳ್ಳಿಗಳೊಂದಿಗೆ ಕಳಸದ ಮೆರವಣಿಗೆ ನಡೆಯಲಿದೆ. ನಂತರ ಜಾತ್ರಾ ಮಹೋತ್ಸವಕ್ಕೆ ತೆರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT