ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಸುತ್ತಿದೆ ಬದಲಾವಣೆಯ ಗಾಳಿ...

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನೀರು ನಿಂತಲ್ಲೇ ಇದ್ದರೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಭಾರತ ಟೆನಿಸ್‌ಗೆ ಈ ಹೋಲಿಕೆಯನ್ನು ಅನ್ವಯಿಸಬಹುದೇನೊ? ವಿವಾದಗಳಿಂದ ಜರ್ಜರಿತವಾಗಿರುವ ಟೆನಿಸ್ ಸಂಸ್ಥೆ ಹಾಗೂ ಕೆಲ ಆಟಗಾರರ ಉಡಾಫೆಯ ದೋರಣೆ ಭಾರತದ ಟೆನಿಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದಕ್ಕೆ ಸಾಕ್ಷಿ. ಇದಕ್ಕೆಲ್ಲಾ ಈಗ ತಾತ್ಕಾಲಿಕ ವಿರಾಮ ಲಭಿಸಿದೆಯಷ್ಟೇ. ಆಟಗಾರರು ಈಗ ಹೊಸ ಸಂಘ ಕೂಡ ಕಟ್ಟಿಕೊಂಡಿದ್ದಾರೆ.

ಆದರೆ ಅಂಗಳದಲ್ಲಿ ಮಾತ್ರ ಭಾರತದ ಸಾಧನೆ ಶೂನ್ಯ. ಡೇವಿಸ್ ಕಪ್‌ನ್ಲ್ಲಲಿ ಈ ತಂಡದ ಸಾಧನೆ ಆರಕ್ಕೇರುತ್ತಿಲ್ಲ. ಆಟಗಾರರ ಗುಂಪುಗಾರಿಕೆ, ಬಂಡಾಯ, ಇದನ್ನು ನಿಭಾಯಿಸುವಲ್ಲಿ ಸಂಸ್ಥೆಯ ಆಡಳಿತದಲ್ಲಿ ವೃತ್ತಿಪರ ಕೊರತೆ. ಇವ್ಲ್ಲೆಲಾ ದೇಶದ ಟೆನಿಸ್ ಮೇಲೆ ಪರಿಣಾಮ ಬೀರಿರುವುದು ನಿಜ.

ಎರಡು ದಶಕಗಳಿಂದ ಭಾರತ ಡೇವಿಸ್ ಕಪ್ ತಂಡ ಕೇವಲ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಅವರ ಮೇಲೆ ಅವಲಂಬಿತವಾಗಿತ್ತು. ಬಳಿಕ ಆ ಪಟ್ಟಿಗೆ ರೋಹನ್ ಬೋಪಣ್ಣ ಹಾಗೂ ಸೋಮದೇವ್ ದೇವವರ್ಮನ್ ಸೇರಿಕೊಂಡರು.

ಹಿರಿಯ ಆಟಗಾರರಾದ ಪೇಸ್, ಭೂಪತಿ ಹಾಗೂ ಬೋಪಣ್ಣ ಅವರ ಆಟ ಬಹುತೇಕ ಮುಗಿಯುತ್ತಾ ಬಂದಿದೆ. ಈಗಲೂ ತಂಡಕ್ಕೆ ಬೆನ್ನೆಲುಬಾಗಿರುವ 40 ವರ್ಷ ವಯಸ್ಸಿನ ಪೇಸ್ ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಇವರೆಲ್ಲಾ ಒಂದೆರಡು ವರ್ಷ ಆಡಬಹುದು ಅಷ್ಟೇ.

ಈ ಹಂತದಲ್ಲಿ ಡೇವಿಸ್ ಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಿದ್ದು ಯುವ ಆಟಗಾರರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಹಿರಿಯ ಆಟಗಾರರ ಅನುಪಸ್ಥಿತಿಯೇ ಇವರಿಗೆ ವರದಾನವಾಗಿ ಪರಿಣಮಿಸಿದೆ. ಹಾಗಾಗಿ ಫಲಿತಾಂಶ ಏನೇ ಇರಲಿ, ಇದೊಂದು ಭಾರತದ ಟೆನಿಸ್‌ನ ಹೊಸ ಯುಗ ಎಂದೂ ಕರೆಯಬಹುದು.

`ಡೇವಿಸ್ ಕಪ್‌ನಲ್ಲಿ ಭಾರತಕ್ಕೆ ಹಿರಿಯ ಆಟಗಾರರು ನೀಡಿದ ಕೊಡುಗೆಯನ್ನು ಮರೆಯಬಾರದು. ಆದರೆ ನಾವು ಹಿಂದಿನ ಆಟವನ್ನು ಜಪಿಸುತ್ತಾ ಕೂರುವಂತಿಲ್ಲ. ಮುಂದಿನ ಸವಾಲುಗಳಿಗೆ ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಯುವ ಆಟಗಾರರು ಭರವಸೆ ಮೂಡಿಸಿದ್ದಾರೆ. ಒಳ್ಳೆಯ ದಿನಗಳು ಬರಲಿವೆ ಎಂಬ ಭರವಸೆ ಇಟ್ಟುಕೊಳ್ಳೋಣ' ಎಂದು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದು ಭಾರತ ಡೇವಿಸ್ ಕಪ್ ತಂಡದ ಕೋಚ್ ಜೀಶನ್ ಅಲಿ.

ಪ್ರತಿಭಾವಂತ ಯುವ ಆಟಗಾರರ ದಂಡು ಬೆಳ್ಳಿ ಗೆರೆಯಂತೆ ಗೋಚರವಾಗುತ್ತಿದೆ. ಸೋಮದೇವ್, ಯೂಕಿ ಭಾಂಬ್ರಿ, ಸನಮ್ ಸಿಂಗ್, ಶ್ರೀರಾಮ್ ಬಾಲಾಜಿ, ವಿಜಯಾಂತ್ ಮಲಿಕ್, ವಿಷ್ಣುವರ್ಧನ್, ಎ.ಎಂ.ರಂಜೀತ್, ಪುರವ ರಾಜಾ, ದಿವಿಜ್ ಶರಣ್ ಸಿಕ್ಕಿದ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇವರೆಲ್ಲಾ ಭಾರತದ ಟೆನಿಸ್‌ನ ಭವಿಷ್ಯದ ಭರವಸೆಗಳು. ಆದರೆ ಇವರಿಗೆ ಕೊಂಚ ಸಮಯಾವಕಾಶ ಬೇಕಷ್ಟೇ.

ಭಾನುವಾರ ಉದ್ಯಾನ ನಗರಿಯಲ್ಲಿ ಕೊನೆಗೊಂಡ ಇಂಡೊನೇಷ್ಯಾ ವಿರುದ್ಧದ ಡೇವಿಸ್ ಕಪ್ ಪಂದ್ಯಗಳು ಆತಿಥೇಯ ತಂಡದ ಯುವ ಆಟಗಾರರಿಗೆ ವಿಶೇಷ ಅನುಭವ ನೀಡಿವೆ. ಈ ತಂಡ ಪ್ರಕಟಿಸಿದಾಗಲೂ ಎಐಟಿಎ ಮೊದಲು ಮಾಡಿದ ಕೆಲಸ ಭೂಪತಿ ಹಾಗೂ ಬೋಪಣ್ಣ ಅವರನ್ನು ಕೈಬಿಟ್ಟಿದ್ದು. ಭಾರಿ ವಿವಾದಕ್ಕೆ ಕಾರಣವಾದ ಬಂಡಾಯದ ಸಾರಥ್ಯವನ್ನು ವಹಿಸ್ದ್ದಿದ್ದು ಸೋಮದೇವ್ ಇರಬಹುದು. ಆದರೆ ಹಿಂದಿನ ಸಂಚು ರೂಪಿಸಿದ್ದು ಯಾರು ಎಂಬುದು ಎಐಟಿಎಗೆ   ಸ್ಪಷ್ಟವಾಗಿ ಗೊತ್ತು.

ಈ ಪಂದ್ಯಗಳಲ್ಲಿಯೂ ಯುವ ಆಟಗಾರರೇ ಹೆಚ್ಚು ಮಂದಿ ಇದ್ದರು. ಭಾರತ ಆಡಿದ್ದು ಏಷ್ಯಾ/ಒಸೀನಿಯಾ ಗುಂಪು ಒಂದರ   ಪ್ಲೇ ಆಫ್ ಪಂದ್ಯಗಳನ್ನು. ಲಿಯಾಂಡರ್ ಪಾಲಿಗಿದು 50ನೇ ಡೇವಿಸ್ ಕಪ್ ಟೂರ್ನಿ ಆಗಿತ್ತು ಎಂಬುದು ವಿಶೇಷ. 20 ವರ್ಷಗಳಿಂದ ತಂಡವನ್ನು ಪ್ರತಿನಿಧಿಸುತ್ತಿರುವ ಇವರ ಬದ್ಧತೆ ಅದ್ಭುತ. ಅದು ಯುವ ಆಟಗಾರರಿಗೆ ಸ್ಫೂರ್ತಿ ಆಗುವಂಥದ್ದು.

ನಗರಿಯ ಘನತೆ ಹೆಚ್ಚಿಸಿದ ಡೇವಿಸ್ ಕಪ್
ವಿವಾದ ಹಾಗೂ ಫಲಿತಾಂಶದ ವಿಚಾರ ಏನೇ ಇರಲಿ, ಉದ್ಯಾನ ನಗರಿ ಸಂಭ್ರಮಪಡಲು ಹಲವು ಕಾರಣಗಳಿವೆ. ಏಕೆಂದರೆ ನಾಲ್ಕನೇ ಬಾರಿ ಪ್ರತಿಷ್ಠಿತ ಡೇವಿಸ್ ಕಪ್ ಪಂದ್ಯಗಳಿಗೆ ಬೆಂಗಳೂರು ವೇದಿಕೆಯಾಯಿತು. ಮೂರು ದಿನ ಪಂದ್ಯಗಳು ಯಶಸ್ವಿಯಾಗಿ ಜರುಗಿದವು. ಪ್ರೇಕ್ಷಕರ ಪ್ರತಿಕ್ರಿಯೆಯೂ ಚೆನ್ನಾಗಿತ್ತು.

ಇಂತಹ ಶ್ರೇಷ್ಠ ಟೂರ್ನಿಗಳು ಖಂಡಿತ ಟೆನಿಸ್ ಆಟದ ಬಗ್ಗೆ ಹೆಚ್ಚು ಪ್ರೀತಿ ಹಾಗೂ ಒಲವು ಹೆಚ್ಚಿಸುತ್ತವೆ. ಹಾಗಾಗಿಯೇ ಇಂಥ ಒಂದು ಟೂರ್ನಿ ಆಯೋಜಿಸಲು ಕಾರಣರಾದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಗೆ (ಕೆಎಸ್‌ಎಲ್‌ಟಿಎ) ಮೆಚ್ಚುಗೆ ವ್ಯಕ್ತಪಡಿಸಬೇಕು. 1970, 1972 ಹಾಗೂ 1985ರ್ಲ್ಲಲಿಯೂ ಡೇವಿಸ್ ಕಪ್ ಪಂದ್ಯಗಳು ಇಲ್ಲಿಯೇ ನಡೆದಿದ್ದವು. ವಿಜಯ್ ಅಮೃತ್‌ರಾಜ್, ಆನಂದ್ ಅಮೃತ್‌ರಾಜ್, ರಮೇಶ್ ಕೃಷ್ಣನ್ ಅವರಂಥ ದಿಗ್ಗಜ ಆಟಗಾರರು ಆಡಿದ ನೆಲವಿದು.

ಡೇವಿಸ್ ಕಪ್ ಹಾಗೂ ಭಾರತ...
ಭಾರತ ಮೊದಲ ಬಾರಿ ಡೇವಿಸ್ ಕಪ್ ಆಡಿದ್ದು 1921ರಲ್ಲಿ. ಆದರೆ ಇದುವರೆಗೆ ಪ್ರಶಸ್ತಿ ಗೆಲ್ಲಲು ಮಾತ್ರ ಸಾಧ್ಯವಾಗಿಲ್ಲ. 1966, 1974 ಹಾಗೂ 1987ರಲ್ಲಿ ರನ್ನರ್ ಅಪ್ ಆಗ್ದ್ದಿದೇ ಇದುವರೆಗಿನ ದೊಡ್ಡ ಸಾಧನೆ. 1974ರಲ್ಲಿ ಅವಕಾಶವಿತ್ತು. ಆದರೆ ವರ್ಣಭೇದ ನೀತಿ ಖಂಡಿಸಿದ್ದ ಭಾರತ ತಂಡದವರು ದಕ್ಷಿಣ ಆಫ್ರಿಕಾಕ್ಕೆ ಹೋಗಲು ನಿರಾಕರಿಸಿದ್ದರು. ಹಾಗಾಗಿ ಟ್ರೋಫಿ ದಕ್ಷಿಣ ಆಫ್ರಿಕಾ ತಂಡದ ಪಾಲಾಗಿತ್ತು. 2011ರಲ್ಲಿ ವಿಶ್ವ ಗುಂಪಿನಲ್ಲಿ ಆಡಲು ಅವಕಾಶ ಪಡೆದಿತ್ತು. ಆದರೆ ಯಶಸ್ಸು ಲಭಿಸಿರಲಿಲ್ಲ.

ಈ ಟೂರ್ನಿಯಲ್ಲಿ ಪ್ರತಿ ವರ್ಷ ಸುಮಾರು 130 ದೇಶದ ತಂಡಗಳು ಪಾಲ್ಗೊಳ್ಳುತ್ತವೆ. ಟೆನಿಸ್‌ನಲ್ಲಿ ತಂಡ ವಿಭಾಗದ ಅತಿ ದೊಡ್ಡ ವಾರ್ಷಿಕ ಟೂರ್ನಿ ಇದು. ಅದರಲ್ಲಿ 16 ತಂಡಗಳು ವಿಶ್ವ ಗುಂಪಿನಲ್ಲಿ ಆಡಲು ಅರ್ಹತೆ ಪಡೆಯುತ್ತವೆ. ಇನ್ನುಳಿದ ತಂಡಗಳು ಅಮೆರಿಕಸ್, ಏಷ್ಯಾ ಒಸೀನಿಯಾ ಹಾಗೂ ಯುರೋಪ್/ಆಫ್ರಿಕಾ ಗುಂಪಿನಲ್ಲಿ ಆಡಿ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಬೇಕು.

ಇದರಲ್ಲಿ ಗುಂಪು 1, 2, 3 ಹಾಗೂ 4 ಹಂತಗಳಿರುತ್ತದೆ. ಇದರಲ್ಲಿ ಸೋತ ತಂಡಗಳು ಹಿಂಬಡ್ತಿ ಪಡೆಯುತ್ತವೆ. ಉದಾಹರಣೆಗೆ ಗುಂಪು ಒಂದರಿಂದ ಹೊರಬೀಳುವ ತಂಡ ಎರಡನೇ ಗುಂಪಿನಲ್ಲಿ ಆಡಬೇಕಾಗುತ್ತದೆ. ಭಾರತ ತಂಡವೀಗ ಏಷ್ಯಾ ಒಸೀನಿಯಾ ಗುಂಪು 1ರಲ್ಲಿದೆ. ಈ ಗುಂಪಿನಲ್ಲಿ ಯಶಸ್ವಿಯಾದರೆ ವಿಶ್ವ ಗುಂಪಿನ ಪ್ಲೇ ಆಫ್ ಸುತ್ತು ಪ್ರವೇಶಿಸಲಿದೆ. ಅಲ್ಲಿ ಗೆದ್ದರೆ ವಿಶ್ವ ಗುಂಪಿನಲ್ಲಿ 16ರ ಬಳಗದಲ್ಲಿ ಆಡಲು ಅವಕಾಶ ಲಭಿಸುತ್ತದೆ.

ಅಮೆರಿಕ 32 ಬಾರಿ ಚಾಂಪಿಯನ್ ಆಗಿದೆ. ಜೆಕ್ ಗಣರಾಜ್ಯ ಹಾಲಿ ಚಾಂಪಿಯನ್. ಭಾನುವಾರವಷ್ಟೇ ವಿಶ್ವಗುಂಪಿನ ಕ್ವಾರ್ಟರ್ ಫೈನಲ್ ಪಂದ್ಯಗಳು ಮುಗಿದಿವೆ. ಫೈನಲ್ ನವೆಂಬರ್‌ನಲ್ಲಿ ನಡೆಯಲಿದೆ. ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯ್ಲ್ಲಲಿರುವ ಭಾರತ ತಂಡ ಡೇವಿಸ್ ಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಬಲ್ಲದೇ? ಅಥವಾ ವಿವಾದಕ್ಕೆ ಮತ್ತೊಂದು ಕೊಂಡಿ ಸೇರಲಿದೆಯೇ? ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT