ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಟ್ಟಿ ಹೆಣೆಯುವವರ ಬದುಕು ಮೂರಾಬಟ್ಟೆ..!

Last Updated 14 ಜುಲೈ 2013, 6:52 IST
ಅಕ್ಷರ ಗಾತ್ರ

ಭಾರತ ಹಳ್ಳಿಗಳ ದೇಶ. ಇಲ್ಲಿ ಮಾನವ ಶಕ್ತಿಗೆ ಕೊರತೆ ಇಲ್ಲ. ಪರಂಪರಾಗತವಾಗಿ ನಡೆದು ಬಂದು ಕುಟುಂಬದ ಕಸುಬು ಮಾಡಿ ಜೀವನ ಸಾಗಿಸುತ್ತಿದ್ದರು. ಕೇವಲ ಕೆಲ ವರ್ಷಗಳ ಹಿಂದಿನವರೆಗೂ ಗುಡಿ ಕೈಗಾರಿಕೆಗಳು ಎಲ್ಲೆಡೆ ಇದ್ದವು. ಒಕ್ಕಲಿಗರು, ನೇಕಾರರು, ಬಡಿಗರು, ಕಂಬಾರರು, ಕುಂಬಾರರು, ಸುಣಗಾರರು, ಬುಟ್ಟಿ ಹೆಣೆಯುವವರು ಹೀಗೆ ಹಲವು ಉದ್ಯೋಗ ಕೈಗೊಂಡು ಕುಟುಂಬಗಳು ಹಳ್ಳಿ ಹಳ್ಳಿಗಳಲ್ಲಿಯೂ ನೆಲೆಗೊಂಡಿದ್ದರು. ಅವರಿಗೆ ಕುಟುಂಬದ ಕಸುಬು ಜೀವನಾಧಾರಿತವಾಗಿತ್ತು. ಇದೀಗ ಆಧುನಿಕತೆಯ ನೆಪದಲ್ಲಿ ಗುಡಿ ಕೈಗಾರಿಕೆಗಳು ಮೂಲೆ ಸೇರಿದವು. ಈ ಸಾಲಿನಲ್ಲಿ ಬುಟ್ಟಿ ಹೆಣೆಯುವರೂ ಸೇರಿದ್ದಾರೆ.

ಅತ್ತ ಆಧುನಿಕತೆಯನ್ನು ಒಪ್ಪಿ, ಹೊಂದಿಕೊಂಡು ಬದುಕಲು ಸಾಧ್ಯವಾಗುತ್ತಿಲ್ಲ; ಇತ್ತು ಕುಟುಂಬದ ಉದ್ಯೋಗ ಬಿಟ್ಟು ಸ್ವತಂತ್ರವಾಗಿ ಬದುಕುವ ಧೈರ್ಯವೂ ಇಲ್ಲ. ಈ ಗೊಂದಲದ ನಡುವೆ ಗಟ್ಟಿಯಾದ ಬದುಕು ಕಂಡುಕೊಳ್ಳಲು ಸಾಧ್ಯವಾಗದೆ ಭವಿಷ್ಯ ಮಂಕಾಗುತ್ತಿದೆ. ಕುಟುಂಬದ ಉದ್ಯೋಗ ಬಿಟ್ಟು ಆಯಗಾರರು ಕೂಲಿ ಕೆಲಸಕ್ಕೆ ಪಟ್ಟಣ ಸೇರುತ್ತಿದ್ದಾರೆ. ಅವರೊಂದಿಗೆ ಕಲೆಯೂ ಮಾಯವಾಗುತ್ತಿದೆ.

ಲಕ್ಷ್ಮೇಶ್ವರದ ಹಳ್ಳದಕೇರಿಯ ಭಜಂತಿ ಓಣಿಯ ಜನಾಂಗ ಈಚಲು ಬರಲಿನಿಂದ ಬುಟ್ಟಿ ಹೆಣೆಯುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಅಂದಾಜು 100ಕ್ಕೂ ಹೆಚ್ಚು ಭಜಂತ್ರಿ ಕುಟುಂಬಗಳು ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಮಾರುಕಟ್ಟೆಯಲ್ಲಿ ಈಚಲು ಮರದ ಬರಲಿನಿಂದ ತಯಾರಿಸುವ ಬುಟ್ಟಿ, ಕಸಬರಿಗೆ, ಚಾಪೆ, ಜಲ್ಲಿಗಳಿಗೆ ಬೇಡಿಕೆ ಕುಸಿದಿದೆ. ಇವುಗಳ ಜಾಗದಲ್ಲಿ ಇಂದು ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಪ್ಲಾಸ್ಟಿಕ್ ಸಾಮಾನುಗಳು ಕಂಗೊಳಿಸುತ್ತಿವೆ. ಕಣ್ಣು ಕುಕ್ಕುವ ಆಧುನಿಕ ವಸ್ತುಗಳ ಎದುರು ಭಜಂತ್ರಿಯವರು ಹೆಣೆಯುವ ಈಚಲು ಸಾಮಾನುಗಳು ಕಳೆಗುಂದಿವೆ. ಹೀಗಾಗಿ ಇವರ ಗುಡಿ ಕೈಗಾರಿಕೆಗೆ ಕುತ್ತು ಬಂದಿದೆ.

ಲಕ್ಷ್ಮೇಶ್ವರದ ಸುತ್ತಮುತ್ತ ಈ ಹಿಂದೆ ಸಾವಿರಾರು ಈಚಲು ಮರಗಳಿದ್ದವು. ಆದರೆ ಅವೆಲ್ಲ ಆಧುನಿಕತೆಯ ಹೆಸರಿನಲ್ಲಿ ಕಣ್ಮರೆಯಾಗಿವೆ. ಹೀಗಾಗಿ ದೂರದ ಆಂಧ್ರಪ್ರದೇಶದಿಂದ ಈಚಲು ಬರಲು ತರಿಸಬೇಕಾಗಿದೆ. ಹೀಗಾಗಿ ಬುಟ್ಟಿ ಹೆಣೆಯುವುದು ಹೆಚ್ಚು ಖರ್ಚಿನ ಕೆಲಸವಾಗಿದೆ.

`ಮದ್ಲ ಊರಿನ ಕ್ಯಾದಿಗೇರಿ, ಶಿಗ್ಲಿ ಹಳ್ಳದಾಗ ಈಚ್ಲ ಮರಾ ಇದ್ವು. ಆದ್ರ ಈಗ ಅವು ಇಲ್ಲ. ಹಿಂಗಾಗಿ ಆಂಧ್ರಪ್ರದೇಶದಿಂದ ಬಾಳ ರೊಕ್ಕಾ ಖರ್ಚ ಮಾಡಿ ಈಚಲ ಬರಲ ತರಸಬೇಕಾಗೈತಿ. ಹಿಂಗಾಗಿ ಖರ್ಚ ಜಾಸ್ತಿ ಬರಾಕತ್ತೈತಿ. ಆದ್ರ ಪ್ಯಾಟ್ಯಾಗ ಈಚಲ ಬುಟ್ಟಿ ಕೇಳವ್ರ ಇಲ್ಲ' ಎಂದು ಬುಟ್ಟಿ ಹೆಣೆಯುವುದನ್ನೇ ಕಾಯಕ ಮಾಡಿಕೊಂಡಿರುವ ಮರಿಯಪ್ಪ ಹೇಳುವರು.ಬುಟ್ಟಿ ಹೆಣೆಯುವುದು ಸುಲಭದ ಕೆಲಸವಲ್ಲ. ಅದಕ್ಕೆ ಮೊದಲು ಈಚಲ ಮರದ ಬರಲ ಬೇಕು. ಆದರೆ ಈಗ ಈ ಭಾಗದಲ್ಲಿ ಈಚಲ ಮರಗಳೆ ಇಲ್ಲ. ಹೀಗಾಗಿ ಇವರು ದೂರದ ಆಂಧ್ರದಿಂದ ಈಚಲ ಬರಲ ತರಿಸುತ್ತಾರೆ.

`15-20 ಜನಾ ಬರಲ ಆಂಧ್ರಕ್ಕ ಹೊಕ್ಕೇವಿ. ಅಲ್ಲೆ ಹಳ್ಳದವರಿಗೆ 30-40 ಸಾವಿರ ರೂಪಾಯಿ ಕೊಡಬೇಕು. ಹದಿನೈದು ದಿನಾ ಹಳ್ಳದಾಗ ಇದ್ದು ಬರಲ ಕೂಡಿಸಿಡ್ತೇವಿ. ಸ್ವಲ್ಪ ಬರಲ ಒಣಗಿದ ಮ್ಯಾಲ ಮತ್ತ ಸಾವಿರಾರು ರೂಪಾಯಿ ಖರ್ಚ ಮಾಡಿ ಟ್ರಕ್‌ನ್ಯಾಗ ಅವನ್ನ ಹೇರಕೊಂಡ ಲಕ್ಷ್ಮೇಶ್ವರಕ್ಕೆ ಬರ‌್ತೇವಿ' ಎಂದು ಗಣೇಶ, ಮಹಾಂತೇಶ, ಫಕ್ಕೀರಪ್ಪ ಈಚಲ ಬರಲ ತರುವ ಕಷ್ಟದ ಕುರಿತು ತಮ್ಮ ಕಥೆ ಹೇಳುತ್ತಾರೆ.

`ಕಷ್ಟಪಟ್ಟು ಬುಟ್ಟಿ ಹೆಣಕೊಂಡ ಮಾರಾಕ ಪ್ಯಾಟಿಗೆ ಹ್ವಾದ್ರ ಅಲ್ಲೆ ನಮ್ಮ ಬುಟ್ಟಿ ಕೇಳವ್ರ ಇರಲ್ಲ. ಕೇಳಿದ್ರೂ ಭಾಳ ಕಡಿಮಿ ರೇಟಿಗೆ ಕೇಳ್ತಾರ‌್ರೀ' ಎಂದು ನಿತ್ಯ ಬುಟ್ಟಿ ಹೆಣೆಯುವ ಹುಲಿಗೆವ್ವ ಭಜಂತ್ರಿ ಹೇಳುವರು.

ಈಚಲು ಬುಟ್ಟಿ ಹೆಣೆಯುವವರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರ ಅವರಿಗೆ ಈಚಲ ಬರಲು ಸುಲಭವಾಗಿ ದೊರಕುವಂತೆ ವ್ಯವಸ್ಥೆ ಮಾಡಬೇಕು. ಕಡಿಮೆ ಬಡ್ಡಿ ದರದಲ್ಲಿ ಸರಳವಾಗಿ ಸಾಲ ದೊರೆಯುವಂತಾಗಬೇಕು. ಇದರೊಂದಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳೂ ಈ ಜನಾಂಗಕ್ಕೆ ಸಿಗುವಂತಾಬೇಕು ಅಂದಾಗ ಮಾತ್ರ ಅವರು ನೆಮ್ಮದಿ ಜೀವನ ಸಾಗಿಸಲು ಸಾಧ್ಯ' ಎಂಬುದು ಮರಿಯಪ್ಪ ಅವರ ಅನಿಸಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT