ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡ್ಗರನ್ನು ಮರೆತ ಸರ್ಕಾರ: ಕಲಬುರ್ಗಿ

Last Updated 26 ಸೆಪ್ಟೆಂಬರ್ 2011, 11:10 IST
ಅಕ್ಷರ ಗಾತ್ರ

ಧಾರವಾಡ: `ಲಿಂಗಾಯತ ಸಮುದಾಯದ ಕೆಲವು ಸ್ವಾಮೀಜಿಗಳು ಬುಡ್ಗ ಜಂಗಮರ ಹಕ್ಕುಗಳನ್ನು ದಮನ ಮಾಡಿದ್ದು, ಇದರಿಂದ ಆ ಸಮುದಾಯದ ಪ್ರಗತಿ ಕುಂಠಿತವಾಗಿದೆ~ ಎಂದು ಹಿರಿಯ ಸಂಶೋಧಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ವಿಷಾದಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬುಡ್ಗ ಜಂಗಮರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. `ಜಂಗಮರಿಗೆ ಬುಡ್ಗ ಹಾಗೂ ಬೇಡ ಎಂಬ ಅಡ್ಡನಾಮ ಬರುವಲ್ಲಿ ಸ್ವಾಮೀಜಿಗಳ ಪಾತ್ರವೇ ಹಿರಿದಾಗಿದೆ. ಇದೇ ಕಾರಣದಿಂದ ಈ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸೌಲಭ್ಯಗಳಿಂದಲೂ ವಂಚಿತವಾಗಿದೆ~ ಎಂದು ಅವರು ಅವರು ಅಭಿಪ್ರಾಯಪಟ್ಟರು.

`ರಾಜ್ಯದ ತುಂಬಾ ಈ ಸಮುದಾಯ ಕೇವಲ 50 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಸರ್ಕಾರ ಸಹ ಅವರ ಕಲ್ಯಾಣವನ್ನು ಮರೆತುಬಿಟ್ಟಿದೆ. ಬುಡ್ಗ ಜಂಗಮರ ಪ್ರಗತಿಗಾಗಿ ಯಾವ ಯೋಜನೆಗಳನ್ನೂ ಹಾಕಿಕೊಂಡಿಲ್ಲ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. `ಬುಡ್ಗ ಜಂಗಮರ ಹಕ್ಕು ದಮನ ಮಾಡುವ ಇಂತಹ ವರ್ತನೆ ನಾಚಿಕೆ ತರಿಸುವಂತಿದ್ದು, ಇದಕ್ಕಾಗಿ ನಾನು ಸಮುದಾಯದ ಕ್ಷಮೆಯಾಚಿಸುತ್ತೇನೆ~ ಎಂದು ಹೇಳಿದರು.

`ಸಮುದಾಯಗಳ ಸಾಂಪ್ರದಾಯಿಕ ಕಾಯಕಕ್ಕೆ ಅನುಗುಣವಾಗಿ ಸಮಾಜ ಒಡೆಯುವ ಕೆಲಸ ನಿಲ್ಲಬೇಕು. ಹಿಂದುಳಿದ ಜನಾಂಗವನ್ನು ಮೇಲೆತ್ತುವ ಕೆಲಸವನ್ನು ಮುಂದುವರಿದ ಸಮುದಾಯ ಮಾಡಬೇಕು~ ಎಂದು ಅವರು ಸಲಹೆ ನೀಡಿದರು.

`ದೇಶದ ಭವ್ಯ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಹಾಡು, ಕುಣಿತ, ರೂಪಕಗಳ ಮೂಲಕ ಜನಸಾಮಾನ್ಯರ ಎದುರು ಅನಾವರಣ ಮಾಡಿದ ಕೀರ್ತಿ ಬುಡ್ಗ ಜಂಗಮರಿಗೆ ಸಲ್ಲಬೇಕು~ ಎಂದು ಮೆಚ್ಚುಗೆಯಿಂದ ಹೇಳಿದರು.

`ಸಮಾಜಕ್ಕೆ ಈ ಸಮುದಾಯ ನೀಡಿದ ಕೊಡುಗೆಯನ್ನು ಗಮನಿಸಿ ರಾಜ್ಯ ಸರ್ಕಾರ, ಬುಡ್ಗ ಜಂಗಮರಿಗೆ ಶಿಕ್ಷಣ, ಉದ್ಯೋಗ ಒದಗಿಸುವಂತಹ ಸರಣಿ ಯೋಜನೆಗಳನ್ನು ಹಾಕಿಕೊಳ್ಳಬೇಕು~ ಎಂದು ಆಗ್ರಹಿಸಿದರು. ಬುಡ್ಗರು ಅಲೆಮಾರಿಗಳಾಗಿದ್ದರಿಂದ ಅವರಿಗೆ ಸ್ವಂತ ಜಮೀನಿಲ್ಲ. ವಲಸೆಯನ್ನು ತಪ್ಪಿಸಲು ಅವರಿಗೆ ಮನೆ ಕಟ್ಟಿಕೊಡಬೇಕಾದ ಹೊಣೆಯೂ ಸರ್ಕಾರದ ಮೇಲಿದೆ ಎಂದು ಹೇಳಿದರು.

`ಕರ್ನಾಟಕ ವಿದ್ಯಾವರ್ಧಕ ಸಂಘ ತನ್ನ ಚಟುವಟಿಕೆಗಳನ್ನು ಕೇವಲ ಸಾಹಿತ್ಯ, ಭಾಷೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಧ್ವನಿಯಿಲ್ಲದವರ ಧ್ವನಿಯಾಗಿಯೂ ಕೆಲಸ ಮಾಡಬೇಕು~ ಎಂದು ಅವರು ಸಲಹೆ ನೀಡಿದರು. `ಕೇವಲ ಮೇಲ್ವರ್ಗದಿಂದ ಯಾವುದೇ ಸಮಾಜ ನಿರ್ಮಾಣಗೊಳ್ಳುವುದಿಲ್ಲ. ಸಮಾಜದ ಪ್ರಗತಿಗೆ ಕೆಳವರ್ಗವೂ ಮಹತ್ವದ ಕೊಡುಗೆ ನೀಡುತ್ತದೆ ಎಂಬುದನ್ನು ಯಾರೂ ಮರೆಯಬಾರದು~ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಬುಡ್ಗ ಜಂಗಮರ ಕಲೆಯನ್ನು ಸಂರಕ್ಷಿಸಿ ಜಾಗತಿಕವಾಗಿ ಬೆಳೆಸುವ ಅಗತ್ಯವಿದೆ ಎಂದರು. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ಡೀನ್ ಕೆ.ದುರ್ಗಾದಾಸ, ಪ್ರೊ. ಕೆ.ಎಂ. ಮೇಟ್ರಿ, ಮೋಹನ ನಾಗಮ್ಮನವರ ಮತ್ತಿತರರು ಮಾತನಾಡಿದರು.

ಕರ್ನಾಟಕ ಬುಡ್ಗ ಜಂಗಮ ಕಲ್ಯಾಣ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅಂಡೊಳ್ಳು ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಗೌರವಕ್ಕೆ ಪಾತ್ರರಾದ ಬರ‌್ರಕಥಾ ಈರಮ್ಮ ಅವರಿಗೆ `ಬುಡ್ಗ ರತ್ನಾ~ ಹಾಗೂ ಕವಿ ಎಸ್.ಜಿ. ಸಿದ್ದರಾಮಯ್ಯ ಅವರಿಗೆ `ಬುಡ್ಗ ಶ್ರೀ~ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT