ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಗಯಾ ಸ್ಫೋಟ: ವಿವಿಧೆಡೆ ಖಂಡನೆ

Last Updated 9 ಜುಲೈ 2013, 11:13 IST
ಅಕ್ಷರ ಗಾತ್ರ

ಬೀದರ್: ಬಿಹಾರದ ಬುದ್ಧ ಗಯಾದಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣವನ್ನು ಖಂಡಿಸಿ,  ಸ್ಮಾರಕಗಳು ಮತ್ತು ಬೌದ್ಧ ಭಿಕ್ಕುಗಳ ರಕ್ಷಣೆಗಾಗಿ ಆಗ್ರಹಿಸಿ ಸೋಮವಾರ ನಗರದಲ್ಲಿ  ಬೃಹತ್ ಪ್ರತಿಭಟನೆ ನಡೆಯಿತು.

ಅಣದೂರಿನ ಅಂತರರಾಷ್ಟ್ರೀಯ ಬೌದ್ಧ ಭಿಕ್ಕುಗಳ ಚಾರಿಟೇಬಲ್ ಟ್ರಸ್ಟ್‌ನ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತೀಯ ಬೌದ್ಧ ಮಹಾಸಭಾದ ಪದಾಧಿಕಾರಿಗಳು, ದಲಿತ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಬುದ್ಧ ಗಯಾ ಮತ್ತು ಭೋದಿವೃಕ್ಷದ ಮೇಲೆ ಬಾಂಬ್ ದಾಳಿ ನಡೆದಿರುವುದು ದೇಶದ ಎಲ್ಲ ಬೌದ್ಧಿಯರಿಗೆ ನೋವು ಮೂಡಿಸಿದೆ. ಇದು ಜ್ಞಾನದ ಮೇಲೆ ನಡೆದ ಅಜ್ಞಾನದ ದಾಳಿ ಎಂದು ಪ್ರತಿಭಟನಾಕಾರರು ಖಂಡಿಸಿದರು.

ಈ ಬಾಂಬ್ ಸ್ಪೋಟ ಪ್ರಕರಣ ಖಂಡನೀಯ. ದೇಶದಲ್ಲಿ ಬೌದ್ಧ ಧಮ್ಮದ ಬೆಂಬಲಿಗರಿಗೆ ಅಸುರಕ್ಷತೆ ಭಯ ಕಾಡಿದೆ. ಬೌದ್ಧ ಧರ್ಮದ ಬೆಂಬಲಿಗರು, ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳಿಗೆ ಇದು ದುಃಖ ಮೂಡಿಸಿದೆ ಎಂದು ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ದೇಶದ ಎಲ್ಲ ಬುದ್ಧ ವಿಹಾರ ಸ್ಮಾರಕ, ಸ್ತಂಭ, ಶಾಸನಗಳು, ಬೌದ್ಧ ಭಿಕ್ಕುಗಳಿಗೆ ರಕ್ಷಣೆ ಒದಗಿಸಲು ಕೇಂದ್ರ, ಆಯಾ ರಾಜ್ಯ ಸರ್ಕಾರಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಗುಪ್ತದಳ ಇಲಾಖೆ ಇಂಥ ದುಷ್ಕೃತ್ಯದ ಬಗೆಗೆ ಮೊದಲೇ ಸೂಚನೆ ನೀಡಿದ್ದರೂ ಬಿಹಾರ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ ಎಂದು ಟೀಕಿಸಿದರು.

ಭಾರತೀಯ ಬೌದ್ಧ ಧಮ್ಮ ಚಾರಿಟೆಬಲ್ ಟ್ರಸ್ಟ್‌ನ ಭಿಕ್ಕು ಭಂತೆ ಧಮ್ಮಾನಂದ, ಮುಖಂಡರಾದ ಅನಿಲ್ ಕುಮಾರ್ ಬೆಲ್ದಾರ್, ಬಾಬು ಪಾಸ್ವಾನ್, ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ, ಶಿವಾನಂದಕುದುರೆ, ರಾಜು ಕಾಂಬಳೆ, ಮಾರುತಿ ಕಂಟೆ, ರಾಜಕುಮಾರ ಬನ್ನೇರ, ಅವಿನಾಶ ರಾಯ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ಸ್ಫೋಟ: ಪ್ರತಿಭಟನೆ
ಬೀದರ್: ಬಿಹಾರದ ಬುದ್ಧಗಯಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಜಿಲ್ಲೆಯಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು, ಬಜರಂಗದಳದ ನೇತೃತ್ವದಲ್ಲಿ  ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ ಬಜರಂಗದಳ ಮುಖಂಡ, ಭಯೋತ್ಪಾದಕರ ಕೃತ್ಯದ ಬಗೆಗೆ ರಾಜ್ಯ ಸರ್ಕಾರಕ್ಕೆ ಗುಪ್ತದಳ ಮುನ್ಸೂಚನೆ ನೀಡಿದ್ದರೂ ಮುನ್ನೆಚ್ಚರಿಕೆ ವಹಿಸವಲ್ಲಿ ಸ್ಥಳೀಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಭಯೋತ್ಪಾದಕ ಕೃತ್ಯಗಳು ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನಾದರೂ ಕೇಂದ್ರ ಸರ್ಕಾರ ಜಾಗೃತವಾಗಬೇಕು. ಇಂಥ ಘಟನೆಗಳು ಮರುಕಳಿಸದಂತೆ ಬುದ್ಧಗಯಾ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ರಕ್ಷಣೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ರಾಮಕೃಷ್ಣ, ರಾಜಕುಮಾರ್, ಲಕ್ಷ್ಮಣ ಪಾಟೀಲ್ ಮತ್ತು ಇತರರು ಭಾಗವಹಿಸಿದ್ದರು.

ಭಾರತೀಯ ಜೈ ಭೀಮ ದಳ ಖಂಡನೆ: ಸ್ಫೋಟ ಪ್ರಕರಣವನ್ನು ಭಾರತೀಯ ಜೈ ಭೀಮ ದಳ ಕೂಡಾ ಖಂಡಿಸಿದೆ. ಈ ಘಟನೆಯು ಬುದ್ಧನ ತತ್ವ ಪರಿಪಾಲನೆಯೊಂದಿಗೆ ಬಾಳುವ ಜನರಿಗೆ ನೋವು ಉಂಟು ಮಾಡುವಂಥದಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಜಾಗೃತಿ ವಹಿಸಬೇಕು. ಮುನ್ಸೂಚನೆ ಇದ್ದರೂ ಕ್ರಮವಹಿಸದ ಬಿಹಾರ ಸರ್ಕಾರದ ವೈಫಲ್ಯ ಘಟನೆಗೆ ಕಾರಣ ಎಂದು ಭೀಮ ದಳದ ಮುಖಂಡರಾದ ಅಂಬೇಡ್ಕರ್ ಸಾಗರ, ರಮೇಶ್‌ಗೌಡ, ಮಾರುತಿ ಬಿ ಕಂಟೆ, ಧರ್ಮೇಂದ್ರ ಶುಕ್ಲಾ ಹೇಳಿಕೆ ನೀಡಿದ್ದಾರೆ.

ಔರಾದ್: ಜನರ ಖಂಡನೆ
ಔರಾದ್: ಬಿಹಾರದ ಬುದ್ಧಗಯಾದಲ್ಲಿ ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟ ಘಟನೆಗೆ ಇಲ್ಲಿಯ ಹಲವು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಭಾರತೀಯ ಬೌದ್ಧ ಮಹಾಸಭೆ, ದಲಿತ ಸಂಘಟನೆ ಸೇರಿದಂತೆ ಹಲವರು ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತಂತೆ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ನೀಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಆಡಳಿತ ವೈಫಲ್ಯ ಕಾರಣ ಎಂದು ದಲಿತ ಸಂಘರ್ಷ ಸಮಿತಿ ಧನರಾಜ ಮುಸ್ತಾಪುರ, ಸುಭಾಷ ಲಾಧಾ, ಪ್ರಕಾಶ ಭಂಗಾರೆ, ರಾಜಕುಮಾರ ತಾರೆ, ಬಸವರಾಜ ಕಾಂಬಳೆ ದೂರಿದ್ದಾರೆ.

ಈ ಕುರಿತು ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಸ್ಫೋಟ ನಡೆಸಿದ ಉಗ್ರಗಾಮಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಭಾರತೀಯ ಬೌದ್ಧ ಮಹಾಸಭೆ ತಾಲ್ಲೂಕು ಅಧ್ಯಕ್ಷ ಸೋಪನರಾವ ಡೊಂಗರೆ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸಿಂಗೆ, ಜಗತ್ತಿಗೆ ಶಾಂತಿ ಬೋಧಿಸಿದ ಬೌದ್ಧರ ಪವಿತ್ರ ಕ್ಷೇತ್ರದಲ್ಲಿ ಹೀನ ಕೃತ್ಯ ನಡೆದಿರುವುದು ತೀವ್ರ ಖಂಡನೀಯ ಎಂದಿದ್ದಾರೆ. ಘಟನೆಯಿಂದ ಜಗತ್ತಿನ ಕೋಟ್ಯಂತರ ಬೌದ್ಧ ಅನುಯಾಯಿಗಳ ಮನಸ್ಸಿಗೆ ನೋವುಂಟಾಗಿದೆ ಎಂದು ತಿಳಿಸಿದ್ದಾರೆ.

ಬಸವಕಲ್ಯಾಣ: ರಸ್ತೆತಡೆ
ಬಸವಕಲ್ಯಾಣ: ಇಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಸೋಮವಾರ ರಸ್ತೆತಡೆ ನಡೆಸಿ ಬೌದ್ಧ ಧರ್ಮೀಯರ ಪವಿತ್ರ ಕ್ಷೇತ್ರ ಬುದ್ಧಗಯಾದಲ್ಲಿ ನಡೆದ ಸರಣಿ ಸ್ಫೋಟಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು.

ಡಾ.ಬಾಬಾಸಾಹೇಬ್ ಅಂಬೇಡ್ಕರ ವೃತ್ತದಲ್ಲಿನ ಪ್ರತಿಮೆಗೆ ಪುಷ್ಪಮಾಲೆ ಹಾಕಿ ನಂತರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಲಾಯಿತು.

ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ನರಸಿಂಗರಾವ ಕಾಂಬಳೆ, ಭಾರತೀಯ ದಲಿತ ಪ್ಯಾಂಥರ ಜಿಲ್ಲಾಧ್ಯಕ್ಷ ರವಿ ಗಾಯಕವಾಡ, ಬೌದ್ಧಿಷ್ಟ ಸೊಸೈಟಿಯ ತಾಲ್ಲೂಕು ಅಧ್ಯಕ್ಷ ನಾಗನಾಥ ವಾಡೇಕರ್, ಪರಿಶಿಷ್ಟ ಜಾತಿ ನ್ಯಾಯ ಸಲಹಾ ಸಮಿತಿ ಅಧ್ಯಕ್ಷ ಬಾಬುರಾವ ಮದಲವಾಡಾ, ಪ್ರಮುಖರಾದ ದಿಲೀಪ ಸಿಂಧೆ, ಅರ್ಜುನ ಕನಕ, ಮನೋಹರ ಮೈಸೆ, ಸೂರ್ಯಕಾಂತ ಗಾಯಕವಾಡ, ಜ್ಞಾನದೇವ ಗುರೂಜಿ ಈ ಮುಖಂಡರು ಮಾತನಾಡಿ, ಸ್ಫೋಟಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ರಾಜ್ಯದಲ್ಲಿನ ಬೌದ್ಧ ವಿಹಾರಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ ವೆಂಕಟಯ್ಯ ಅವರಿಗೆ  ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಸದಾನಂದ ಭೋಸ್ಲೆ, ವಾಮನ ಮೈಸಲಗೆ, ದತ್ತಾತ್ರೇಯ ಸೂರ್ಯವಂಶಿ, ಶಶಿಕಾಂತ ಗಾಯಕವಾಡ, ಸಂಜೀವ ಖೇಲೆ, ರವಿಕಿರಣ ಯಮ್ಹಾನ, ಸಂಜೀವ ಮೋರಖಂಡಿ, ಸಂಜೀವ ಗೋಡಬೋಲೆ, ಮಹಾದೇವ ಹಲಸೆ, ಧರ್ಮಾ ಗಜರೆ, ಮನೋಜ ಮುಡಬಿಕರ್, ಎಸ್.ಪಿ.ಫುಲೆ, ಕುಮಾರ ಗಾಯಕವಾಡ, ಮಾರುತಿ ಫುಲೆ, ಮುರಲಿ ದಾದೆ, ಶಿವಾಜಿ ಸಿಂಧೆ, ಸತೀಶ ಗೋಪಾಳೆ, ಭಾಸ್ಕರ ಕಾಂಬಳೆ, ಶೀತಲ ಸಿಂಧೆ, ಮಂಜು ಸಿಂಧೆ, ಮಹೇಂದ್ರ ಮಂದಿರಕರ್, ಡಾ.ಸುಹಾಸ ಕಾಂಬಳೆ, ಧಮ್ಮಾನಂದ ದಾಂಡಗೆ ಮತ್ತಿತರರು ಪಾಲ್ಗೊಂಡಿದ್ದರು.

ರಸ್ತೆತಡೆಯಿಂದಾಗಿ ವಾಹನ ಸಂಚಾರಕ್ಕೆ ಕೆಲಕಾಲ ಅಡೆತಡೆಯಾಯಿತು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ರಾದ ಉಮೇಶ ಕಾಂಬಳೆ, ವಿಜಯಕುಮಾರ ಬಿರಾದಾರ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಹುಮನಾಬಾದ್: ಬಂಧನಕ್ಕೆ ಆಗ್ರಹ
ಹುಮನಾಬಾದ್: ಬಿಹಾರದ ಬುದ್ಧ ವಿಹಾರ ಆವರಣದಲ್ಲಿ ಭಾನುವಾರ ನಡೆದ ಬಾಂಬ್ ಸ್ಫೋಟ ಪ್ರಕರಣ ಖಂಡಿಸಿ, ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬೌದ್ಧಧಮ್ಮ ಪ್ರಚಾರಕ ಧರ್ಮರಾಯ ಘಾಂಗ್ರೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ವಿಶ್ವದ ಶಾಂತಿಧೂತ ಗೌತಮಬುದ್ಧರಿಗೆ ಜ್ಞಾನೋದಯವಾದ ಬುದ್ಧಗಯಾ ಮತ್ತು ಮಹಾಬೋಧಿ ಹಾಗೂ ಬೋಧಿವೃಕ್ಷದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಫೋಟದ ಪ್ರಕರಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೃತ್ಯಗೈದ ಆರೋಪಿಗಳನ್ನು ಶೀಘ್ರದಲ್ಲೆ ಬಂಧಿಸಬೇಕು. ದಾಳಿ ಘಟನೆಗೆ ನಿರ್ಲಕ್ಷಿಸಿದ ಬಿಹಾರ ಸರ್ಕಾರವನ್ನು ವಜಾಗೊಳಿಸಬೇಕು. ಗಯಾದಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ವಜಾ ಗೊಳಿಸುವಂತೆ ತಹಸೀಲ್ದಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ  ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಜಿಲ್ಲಾ ಘಟಕ ಅಧ್ಯಕ್ಷ ಲಕ್ಷ್ಮೀಪುತ್ರ ಮಾಳಗೆ, ತಾಲ್ಲೂಕು ಅಧ್ಯಕ್ಷ ಪ್ರಶಾಂತ ಜಾನವೀರ, ದಲಿತ ಸೇನೆ ವಿಭಾಗೀಯ ಅಧ್ಯಕ್ಷ ಸುರೇಶ ಘಾಂಗ್ರೆ, ತಾಲ್ಲೂಕು ಘಟಕ ಅಧ್ಯಕ್ಷ ಈರಪ್ಪ ಧುಮ್ಮನಸೂರ, ದಸಂಸ(ಭೀಮವಾದ) ತಾಲ್ಲೂಕು ಸಂಚಾಲಕ ಮಾಣಿಕರಾವ ಬಿ.ಪವಾರ, ಸಾಗರ ಬಣದ ತಾಲ್ಲೂಕು ಸಂಚಾಲಕ ರವಿಚಂದ್ರ ಜಂಬಗಿ, ದಲಿತ ಮುಖಂಡ ಸಂಜೀವಕುಮಾರ ಜಂಜೀರ, ಝೆರೆಪ್ಪ ಬೆಲ್ಲಾಳೆ, ಗೌತಮ ಮೇಟಿ, ರೇವಣಸಿದ್ದಪ್ಪ ದೊಡ್ಡಿ, ಗೌತಮ ಸೆಡೋಳ್, ಪ್ರಕಾಶ ವಿ.ಮುಗನೂರ್,ಚಂದ್ರಪ್ರಕಾಶ ಹಳ್ಳಿಖೇಡ, ಸಂಜೀವಕುಮಾರ ಗರ್ಜೆ ಮತ್ತಿತರರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಭಾಲ್ಕಿ: ವ್ಯಾಪಕ ಖಂಡನೆ
ಭಾಲ್ಕಿ: ಬಿಹಾರದ ಬುದ್ಧ ಗಯಾದಲ್ಲಿ ನಡೆದ ಬಾಂಬ್ ಸ್ಪೋಟವನ್ನು ನಗರದ ವಿವಿಧ ಸಂಘಟನೆಗಳು ಖಂಡಿಸಿ ಸೋಮವಾರ ಪ್ರತಿಭಟನೆ ರ‌್ಯಾಲಿ ನಡೆಸಿದವು.

ರಿಪಬ್ಲಿಕನ್ ಸೇನಾ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಯಿತು. ತಹಸೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ಸಂಘದ ಅಧ್ಯಕ್ಷ ರಾಜಕುಮಾರ ಮೋರೆ, ಪ್ರಧಾನ ಕಾರ್ಯದರ್ಶಿ ಸಿದ್ಧಾರ್ಥ ಪ್ಯಾಗೆ, ಖಜಾಂಚಿ ಧನರಾಜ ಕುಂದೆ ಮತ್ತಿತರರು ಮಾತನಾಡಿದರು. ವೈಜಿನಾಥ ಧರ್ಮಪಾಲ್, ಲವಕುಶ ಕಾಂಬಳೆ, ಸತೀಶ,  ವಿಲಾಸ, ಸುನಿಲ ವಾಂಜರೆ, ಭರತ ನಾಟೀಕಾರ, ರಾಜಕುಮಾರ ಧನ್ನೂರೆ, ಜೈಪಾಲ್ ಬೋರೋಳೆ, ಮಹೇಂದ್ರ ಪ್ಯಾಗೆ ಇದ್ದರು.

ಖಂಡನೆ: ಬುದ್ಧಗಯಾದಲ್ಲಿ ನಡೆದ ಬಾಂಬ್ ಸ್ಪೋಟದ ಘಟನೆಗೆ ವಿಶ್ವಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಉಮಾಕಾಂತ ವಾರದ್, ಹಿರಿಯ ಮುಖಂಡ ಸುಧಾಕರ ದೇಶಪಾಂಡೆ ಅವರು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT