ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಗಯಾದಲ್ಲಿ ಸರಣಿ ಸ್ಫೋಟ

ಇಬ್ಬರು ವಿದೇಶಿ ಬೌದ್ಧ ಬಿಕ್ಕುಗಳಿಗೆ ಗಾಯ * ಪ್ರವೇಶ ನಿರ್ಬಂಧ, ಪೂಜೆಗೆ ಅಡ್ಡಿ ಇಲ್ಲ
Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಗಯಾ (ಬಿಹಾರ) (ಪಿಟಿಐ): ಬೌದ್ಧರ ಪವಿತ್ರ ಕ್ಷೇತ್ರ ಬುದ್ಧಗಯಾದಲ್ಲಿ ಭಾನುವಾರ ನಸುಕಿನ ಅರ್ಧ ಗಂಟೆ ಅವಧಿಯಲ್ಲಿ  ಒಂಬತ್ತು ಕಡೆ ಕಡಿಮೆ ತೀವ್ರತೆಯ ಸರಣಿ ಬಾಂಬ್‌ಗಳು ಸ್ಫೋಟಿಸಿದ್ದು, ಇಬ್ಬರು ವಿದೇಶಿ ಬೌದ್ಧ ಬಿಕ್ಕುಗಳು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಮಹಾಬೋಧಿ ವೃಕ್ಷ ಮತ್ತು ದೇವಾಲಯಕ್ಕೆ ಹಾನಿಯಾಗಿಲ್ಲ. ಮೂರು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಈ ಮಧ್ಯೆ, ಕೋಲ್ಕತ್ತದಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಸದಸ್ಯನನ್ನು ಬಂಧಿಸಲಾಗಿದ್ದು, ಸರಣಿ ಬಾಂಬ್ ಸ್ಫೋಟದ ಹಿಂದೆ ಆತನ ಪಾತ್ರ ಇದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ಹೇಳಿದ್ದಾರೆ.

ಗಾಯಗೊಂಡಿರುವ ಸ್ವಾಯತ್ತ ಟಿಬೆಟ್ ಪ್ರಾಂತ್ಯದ ತೆನ್‌ಜಿಂಗ್ ಲಾಮಾ ಮತ್ತು ಮ್ಯಾನ್ಮಾರ್‌ನ ಬಾಲ ಸಂಘ ಅವರನ್ನು ಗಯಾದಲ್ಲಿರುವ ಅನುಗ್ರಹ ನಾರಾಯಣ ಮಗಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಮಾ ಅವರಿಗೆ ಕಾಲಿಗೂ, ಸಂಘ ಅವರಿಗೆ ಬಲಗೈಗೂ ಪೆಟ್ಟಾಗಿದೆ. ಅವರಿಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಮೊದಲ ಸ್ಫೋಟವು ಬುದ್ಧಗಯಾ ಪಟ್ಟಣ ಮತ್ತು ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಮಹಾಬೋಧಿ ದೇವಾಲಯ ಆವರಣದಲ್ಲಿ ನಸುಕಿನ 5.30ರಿಂದ 5.58ರ ಸಮಯದಲ್ಲಿ ಸಂಭವಿಸಿದೆ. ದೇವಾಲಯ ಆವರಣದಲ್ಲಿ ಒಟ್ಟು ನಾಲ್ಕು, ಕರ್ಮಪಾ ಅವರ ನಿವಾಸದ ಬಳಿ ಮೂರು ಬಾಂಬ್‌ಗಳು ಸ್ಫೋಟಗೊಂಡಿವೆ. 80 ಅಡಿ ಎತ್ತರದ ಬುದ್ಧ ವಿಗ್ರಹ ಇರುವ ಪ್ರದೇಶದಲ್ಲಿ ಮತ್ತು ಬೈಪಾಸ್ ರಸ್ತೆಯಲ್ಲಿರುವ ಬಸ್ ನಿಲ್ದಾಣದಲ್ಲಿ ತಲಾ ಒಂದು ಸ್ಫೋಟ ಸಂಭವಿಸಿದೆ.

ಇದುವರೆಗೂ ಈ ಕೃತ್ಯದ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತಿಲ್ಲ. ಆದರೆ, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಈ ಮಧ್ಯೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಭಾಗದಲ್ಲಿ ಮಾವೊವಾದಿಗಳ ಉಪಟಳವೂ ಇದೆ ಎಂದು ಹೇಳಿವೆ.

ನಿತೀಶ್ ಭೇಟಿ: ಘಟನಾ ಸ್ಥಳಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿ ನೀಡಿದ್ದು, ಕೂಡಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್‌ಎಫ್)  ನಿಯೋಜಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಬೋಧಿ ವೃಕ್ಷ ಸುರಕ್ಷಿತ: `ಪವಿತ್ರ ಬೋಧಿ ವೃಕ್ಷದ ಸಮೀಪ ಮೊದಲ ಸ್ಫೋಟ ಸಂಭವಿಸಿತು. ವೃಕ್ಷಕ್ಕೆ ಯಾವುದೇ ಹಾನಿಯಾಗಿಲ್ಲ.

ಆದರೆ ಸ್ಫೋಟದಿಂದ ಮೇಜು ಛಿದ್ರವಾಯಿತು. ಇದರಿಂದಾಗಿ ಇಬ್ಬರು ಬಿಕ್ಕುಗಳು ಗಾಯಗೊಂಡರು. ಎರಡನೇ ಸ್ಫೊಟವು ಪುಸ್ತಕಗಳನ್ನು ಇರಿಸಿದ್ದ ಕಪಾಟಿನ ಬಳಿ ಉಂಟಾಯಿತು. ಇದರಿಂದ ಪೀಠೋಪಕರಣಗಳು ಹಾನಿಗೊಂಡವು, ಸ್ಮರಣಿಕೆಗಳು ಮತ್ತು ವಿಗ್ರಹಗಳಿಗೆ ಯಾವುದೇ ಹಾನಿಯಾಗಿಲ್ಲ' ಎಂದು ಬುದ್ಧಗಯಾ ದೇವಾಲಯ ಆಡಳಿತ ಮಂಡಳಿ (ಬಿಟಿಎಂಸಿ) ಮೂಲಗಳು ತಿಳಿಸಿವೆ.

`ಬುದ್ಧನ ಬೃಹತ್ ವಿಗ್ರಹ ಮತ್ತು ಬೈಪಾಸ್ ರಸ್ತೆಯಲ್ಲಿ ತಲಾ ಒಂದೊಂದು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ' ಎಂದು `ಬಿಟಿಎಂಸಿ' ಸದಸ್ಯ ಅರವಿಂದ್ ಸಿಂಗ್ ಹೇಳಿದ್ದಾರೆ.ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಮಹಾಬೋಧಿ ದೇವಾಲಯದ ಒಳ ಆವರಣದ ಭದ್ರತೆಯನ್ನೂ ಪೊಲೀಸರಿಗೆ ಒಪ್ಪಿಸಲು ನಿರ್ಧರಿಸಲಾಗಿದೆ. ಸರಣಿ ಬಾಂಬ್ ಸ್ಫೋಟದ ನಂತರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ `ಬಿಟಿಎಂಸಿ' ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇವಾಲಯ ಸಮುಚ್ಚಯದ ಹೊರಭಾಗದಲ್ಲಿ ಮಾತ್ರ ಪೊಲೀಸರ ಭದ್ರತೆ ಇದೆ. ಒಳ ಆವರಣದಲ್ಲಿ ದೇವಾಲಯದ ಆಡಳಿತ ಮಂಡಳಿಯೇ ಭದ್ರತೆ ಕಲ್ಪಿಸಿಕೊಂಡಿದೆ. ಬಿಹಾರದ ರಾಜಧಾನಿ ಪಟ್ನಾದಿಂದ 100 ಕಿ.ಮೀ. ಮತ್ತು ಹಿಂದೂಗಳ ಧಾರ್ಮಿಕ ಕ್ಷೇತ್ರವಾದ ಗಯಾದಿಂದ 10 ಕಿ.ಮೀ. ದೂರದಲ್ಲಿರುವ ಬುದ್ಧಗಯಾ, ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ಸ್ಥಳ. ಇಲ್ಲಿನ ಮಹಾಬೋಧಿ ವೃಕ್ಷ ಮತ್ತು ಇಲ್ಲಿನ ಬೌದ್ಧ ವಿಹಾರಕ್ಕೆ ದೇಶದಿಂದ ಮಾತ್ರವಲ್ಲದೆ ಶ್ರೀಲಂಕಾ, ಜಪಾನ್, ಚೀನಾ, ಥಾಯ್ಲೆಂಡ್, ವಿಯಟ್ನಾಂ ಮತ್ತಿತರ ರಾಷ್ಟ್ರಗಳಿಂದಲೂ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.

ಎನ್‌ಐಎ ತಂಡ ಆಗಮನ:
ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಡಿಐಜಿ ವಿಕಾಸ್ ವೈಭವ್ ಅವರ ನೇತೃತ್ವದ ಐವರು ಸದಸ್ಯರ ತಂಡವು ಬುದ್ಧಗಯಾಕ್ಕೆ ಬಂದಿದ್ದು, ತನಿಖೆ ಆರಂಭಿಸಿದೆ. ತಂಡದಲ್ಲಿ ಇಬ್ಬರು ಅಧೀಕ್ಷ ದರ್ಜೆಯ ಹಿರಿಯ ಅಧಿಕಾರಿಗಳು ಇದ್ದಾರೆ.
(ನವದೆಹಲಿ ವರದಿ): `ಬುದ್ಧಗಯಾ ಪಟ್ಟಣ ಮತ್ತು ಬೌದ್ಧ ವಿಹಾರದಲ್ಲಿ ಸಂಭವಿಸಿರುವ ಸ್ಫೋಟವು ಭಯೋತ್ಪಾದಕರ ದಾಳಿ' ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಹೇಳಿದ್ದಾರೆ.

`ಘಟನಾ ಸ್ಥಳಕ್ಕೆ ಎನ್‌ಐಎ ತಂಡ ತಲುಪಿದೆ.  ಜೊತೆಗೆ ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ತಂಡವನ್ನು ರವಾನಿಸಲಾಗಿದೆ' ಎಂದೂ ತಿಳಿಸಿದ್ದಾರೆ. ಬುದ್ಧಗಯಾದ ಮೇಲೆ ಉಗ್ರರ ಕಣ್ಣಿದೆ ಎಂದು ಬಿಹಾರದ ಪೊಲೀಸರಿಗೆ ಸುಳಿವು ನೀಡಲಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಭಯೋತ್ಪಾದಕರು ಕಳೆದ ವರ್ಷ ಇಲ್ಲಿ  ವಿಧ್ವಂಸಕ ಕೃತ್ಯಕ್ಕೆ ನಡೆಸಲು ಸಂಚು ನಡೆಸಿದ್ದರು. ಬೇರೊಂದು ಪ್ರಕರಣದಲ್ಲಿ ಬಂಧಿತರಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತರಿಂದ  ಈ ವಿಷಯ ಕಲೆಹಾಕಲಾಗಿತ್ತು. ಮ್ಯಾನ್ಮಾರ್‌ನಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲು ಸಂಚು ನಡೆಸಿದ್ದರು.

ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಸರಣಿ ಬಾಂಬ್ ಸ್ಫೋಟದ ನಂತರ ಮಹಾಬೋಧಿ ದೇವಾಲಯ ಸಮುಚ್ಚಯಕ್ಕೆ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ. ಆದರೆ, ಬಿಕ್ಕುಗಳಿಗೆ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಬಿಹಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಯಾನಂದ್ ಹೇಳಿದ್ದಾರೆ.

`ಒಟ್ಟು ಮೂರು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಬುದ್ಧಗಯಾದಲ್ಲೇ ಎರಡು ಮತ್ತು ಬುದ್ಧಗಾಯ ಬಳಿಯ ಬೈಜು ಬಿಗಹಾ ಗ್ರಾಮದಲ್ಲಿ ಒಂದು ಪತ್ತೆಯಾಗಿದ್ದವು. ಬಾಂಬ್‌ಗಳು ಮಧ್ಯಮ ಪ್ರಮಾಣದ ಸ್ಫೋಟಕವಾದ್ದರಿಂದ ಹೆಚ್ಚು ಹಾನಿಯಾಗಿಲ್ಲ. ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿರುವ ವರದಿಯಲ್ಲಿ ಸ್ಫೋಟಕಗಳು ಕಚ್ಚಾ ಬಾಂಬ್‌ಗಳಿರಬಹುದು ಎಂದೇ ಉಲ್ಲೇಖಿಸಲಾಗಿದೆ' ಎಂದು ತಿಳಿಸಿದ್ದಾರೆ.

`ಬೇಹುಗಾರಿಕಾ ಸಂಸ್ಥೆಗಳಿಂದ ವಿಧ್ವಂಸಕ ಕೃತ್ಯದ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದರೂ ಏಕೆ ಎಚ್ಚರಿಕೆ ವಹಿಸಲಿಲ್ಲ' ಎಂಬ ಪ್ರಶ್ನೆಗೆ ಉತ್ತರಿಸಿದ ಡಿಜಿಪಿ, ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ಆದರೆ, ಪ್ರತಿಯೊಂದು ಘಟನೆಯಿಂದಲೂ ನಾವು ಪಾಠ ಕಲಿಯಬೇಕಿದೆ' ಎಂದಿದ್ದಾರೆ. `ಬಾಂಬ್ ಸ್ಫೋಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಅವುಗಳ ಪರಿಶೀಲನೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ' ಎಂದೂ ಹೇಳಿದ್ದಾರೆ.

`ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ, ಘಟನೆಯಿಂದ ಯಾತ್ರಿಗಳು ಭಯಭೀತರಾಗಿದ್ದಾರೆ' ಎಂದು ಗಯಾ ವಲಯದ ಡಿಐಜಿ ನಯ್ಯರ್ ಹುಸನೈನ್ ಖಾನ್ ಹೇಳಿದ್ದಾರೆ. ತನಿಖೆಗೆ ಮಳೆ ಅಡ್ಡಿ: ಈ ಮಧ್ಯೆ, ಘಟನಾ ಸ್ಥಳದಲ್ಲಿ ಪೊಲೀಸರು ತನಿಖೆ ಕೈಗೊಂಡು ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದಾರೆ. ಆದರೆ, ಭಾನುವಾರ ಮಧ್ಯಾಹ್ನದವರೆಗೂ ಜೋರು ಮಳೆ ಸುರಿದ ಕಾರಣ ಈ ಕಾರ್ಯಕ್ಕೆ ಅಡಚಣೆ ಆಗಿದೆ.

ಐಎಂ ನಂಟು: ಬಂಧಿತನ ತಪ್ಪೊಪ್ಪಿಗೆ

ಕೋಲ್ಕತ್ತ (ಐಎಎನ್‌ಎಸ್): ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಆಪಾದನೆ ಮೇಲೆ ಬಂಧಿತನಾಗಿರುವ ಅನ್ವರ್ ಹುಸೇನ್ ಮಲ್ಲಿಕ್‌ಗೂ (42) ಬುದ್ಧಗಯಾದಲ್ಲಿ ಸಂಭವಿಸಿರುವ ಸರಣಿ ಬಾಂಬ್ ಸ್ಫೋಟಕ್ಕೂ ಸಂಬಂಧವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಲ್ಲಿಕ್‌ನನ್ನು ಶನಿವಾರ ಬಂಧಿಸಲಾಗಿತ್ತು. ಪೊಲೀಸರ ಮುಂದೆ ನೀಡಿರುವ ಹೇಳಿಕೆಯಲ್ಲಿ, ತಾನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸದಸ್ಯನಾಗಿದ್ದು, ಸರಣಿ ಬಾಂಬ್ ಸ್ಫೋಟದಲ್ಲಿ ತನ್ನ ಪಾತ್ರ ಇರುವುದಾಗಿ ಹೇಳಿದ್ದಾನೆ. ತಾನೆ ಬಾಂಬ್‌ಗಳನ್ನು ಪೂರೈಸಿದ್ದಾಗಿಯೂ ಒಪ್ಪಿಕೊಂಡಿದ್ದಾನೆ ಎಂದು ಸರ್ಕಾರಿ ವಕೀಲ ಕೃಷ್ಣ ಚಂದ್ರ ದಾಸ್ ನ್ಯಾಯಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಲ್ಲಿಕ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಇದೇ 20ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT