ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಗಯಾದಲ್ಲಿ ಸರಣಿ ಸ್ಫೋಟ : ಇಬ್ಬರಿಗೆ ಗಾಯ

Last Updated 7 ಜುಲೈ 2013, 12:35 IST
ಅಕ್ಷರ ಗಾತ್ರ

ಪಾಟ್ನಾ (ಪಿಟಿಐ/ಐಎಎನ್ಎಸ್): ಬೌದ್ಧರ ಪವಿತ್ರ ಧಾರ್ಮಿಕ ಕ್ಷೇತ್ರವಾದ ಬಿಹಾರದ ಬುದ್ಧಗಯಾದಲ್ಲಿರುವ ವಿಶ್ವಪ್ರಸಿದ್ಧ ಮಹಾಬೋಧಿ ಮಂದಿರದಲ್ಲಿ ಭಾನುವಾರ ಮುಂಜಾನೆ ಸರಣಿ ಬಾಂಬ್ ಸ್ಫೋಟ ಸಂಭವಿದ್ದು, ಘಟನೆಯಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಗಾಯಗೊಂಡಿದ್ದಾರೆ. ಬುದ್ಧನ ಪ್ರತಿಮೆ, ಬೋಧಿ ವೃಕ್ಷಕ್ಕೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮುಂಜಾನೆ 5.30ರಿಂದ 5.58ರ ವೇಳೆ ಈ ಸರಣಿ ಸ್ಫೋಟ ನಡೆದಿದೆ. ಮಹಾಬೋಧಿ ಮಂದಿರದ ಆವರಣದಲ್ಲಿ ನಾಲ್ಕು ಸ್ಫೋಟ ಸಂಭವಿಸಿದ್ದು, ಕರ್ಮಪಾ ಮಂದಿರದ ಬಳಿ ಮೂರು ಬಾಂಬ್‌ಗಳು ಸ್ಫೋಟಗೊಂಡಿವೆ. ಬುದ್ಧ ಪ್ರತಿಮೆಯ ಸಮೀಪ ಅಂದರೆ 80 ಅಡಿ ದೂರದಲ್ಲಿ ಒಂದು ಬಾಂಬ್ ಸ್ಫೋಟಗೊಂಡಿತು. ಆದರೆ, ಪ್ರತಿಮೆಗೆ ಯಾವುದೇ ಹಾನಿಯುಂಟಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಎಚ್. ಖಾನ್ ಮಾಹಿತಿ ನೀಡಿದ್ದಾರೆ.

ಮ್ಯಾನ್ಮಾರ್ ಮತ್ತು ಟಿಬೆಟ್ ಗೆ ಸೇರಿದ ಇಬ್ಬರು ಗಾಯಗೊಂಡಿದ್ದು ಅವರನ್ನು ಮಗಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಹಾಬೋಧಿ ಮಂದಿರದ ಆಡಳಿತ ಮಂಡಳಿಯ ಸದಸ್ಯ ಅರವಿಂದ ಸಿಂಗ್ ತಿಳಿಸಿದ್ದಾರೆ.

ಆರೇಳು ತಿಂಗಳ ಹಿಂದೆಯೇ ಮಹಾಬೋಧಿ ಮಂದಿರದ ಮೇಲೆ ದಾಳಿ ನಡೆಯುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳುವುದಲ್ಲದೇ ಹೆಚ್ಚಿನ ಭದ್ರತೆ ವ್ಯವಸ್ಥೆಯನ್ನೂ ಕೈಗೊಂಡಿದ್ದೆವು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಕೆ.ಭಾರದ್ವಾಜ್ ಹೇಳಿದ್ದಾರೆ.

ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ ವಿಭಾಗದ ಆರು ಮಂದಿ ತಜ್ಞರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಿಐಡಿ ವಿನಯ್ ಕುಮಾರ್ ತಿಳಿಸಿದ್ದಾರೆ.

'ಇದೊಂದು ಉಗ್ರರ ದಾಳಿಯಂತೆ ಕಂಡುಬಂದಿದೆ. ಆದರೆ, ಯಾವುದೇ ಉಗ್ರ ಸಂಘಟನೆಗಳು ಘಟನೆಯ ಹೊಣೆ ಹೊತ್ತಿಲ್ಲ. ಹೀಗಾಗಿ ತನಿಖೆ ಮುಗಿಯುವವರೆಗೂ ಯಾವುದೆ ಮಾಹಿತಿ ನೀಡಲಾಗದು' ಎಂದು ಗೃಹ ಖಾತೆ ರಾಜ್ಯ ಸಚಿವ ಆರ್. ಪಿ. ಎನ್. ಸಿಂಗ್ ತಿಳಿಸಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರು ಬಿಹಾರ ಸ್ಫೋಟ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೇ, ಮಂದಿರದ ಭದ್ರತೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಕಳುಹಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಎರಡು ಜೀವಂತ ಬಾಂಬ್ ನಿಷ್ಕ್ರೀಯ
`ಒಟ್ಟಾರೆ 9 ಬಾಂಬ್‌ಗಳು ಸ್ಫೋಟಗೊಂಡಿವೆ. ಮಹಾಬೋಧಿ ಮಂದಿರದ ಪ್ರದೇಶದಲ್ಲಿ ಎರಡು ಜೀವಂತ ಬಾಂಬ್‌ಗಳು ಪತ್ತೆಯಾಗಿದ್ದು, ಭದ್ರತಾ ಸಿಬ್ಬಂದಿಗಳು ಅವುಗಳನ್ನು ನಿಷ್ಕ್ರೀಯಗೊಳಿಸಿದ್ದಾರೆ `ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.

ಘಟನೆಯ ತನಿಖೆಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪ್ರತ್ಯೇಕ ತಂಡಗಳು ಬಿಹಾರಕ್ಕೆ ದೌಡಾಯಿಸಿವೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT