ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬುದ್ಧಿ ಇರಲಿ, ಭಾವ ಜೀವಿಯೂ ಆಗಲಿ'

Last Updated 27 ಡಿಸೆಂಬರ್ 2012, 9:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೊಸ ತಲೆಮಾರಿನವರು ಬುದ್ಧಿ ಜೀವಿಗಳಾಗುತ್ತಿದ್ದಾರೆ ಹೊರತು ಅವರಲ್ಲಿ ಭಾವಗಳು ಕೆರಳುತ್ತಿಲ್ಲ. ಹೀಗಾಗಿ ಮಕ್ಕಳನ್ನು ಭಾವಜೀವಿಗಳಾಗಲು ಪ್ರೇರೇಪಿಸಬೇಕು' ಎಂದು ಶಿರಹಟ್ಟಿ ತಾಲ್ಲೂಕು ಬಾಳೇಹೊಸೂರಿನ ಶ್ರೀ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅಮರಗೋಳದ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ನೂತನ ಶಿಲಾಮಠದ ಕಳಸಾರೋಹಣ, ಅಮೃತ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಸತ್ಸಂಗ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
`ಹಿಂದಿನವರು ಬುದ್ಧಿಜೀವಿಗಳಾಗಿರುತ್ತಿದ್ದರು, ಜೊತೆಯಲ್ಲಿ ಭಾವಜೀವಿಗಳೂ ಆಗಿರುತ್ತಿದ್ದರು. ಹೀಗಾಗಿ ಸಮಾಜದಲ್ಲಿ ಒಳ್ಳೆಯ ವಿಚಾರಗಳ ಮಂಥನವಾಗುತ್ತಿತ್ತು. ಈಗ ಇಂಥ ಪರಿಸ್ಥಿತಿಯಿಂದ ಜನರು ದೂರವಾಗುತ್ತಿದ್ದಾರೆ' ಎಂದು ಅವರು ಹೇಳಿದರು.

`ಮನುಷ್ಯನಲ್ಲಿರುವ ಭಾವನೆಗಳನ್ನು ಪ್ರೇರೇಪಿಸಲು ಸತ್ಸಂಗದಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಒಡೆದ ಮನಗಳನ್ನು ಒಂದುಗೂಡಿಸುವ ಕಾರ್ಯಕ್ಕೆ ಇದು ಪ್ರೇರೇಪಣೆ ನೀಡುತ್ತದೆ' ಎಂದು ಅವರು ಹೇಳಿದರು.

`ಮನುಷ್ಯ ಜೀವಂತವಾಗಿರುವಾಗಲೇ ಎಲ್ಲ ಗೌರವವನ್ನು ಸಲ್ಲಿಸಬೇಕು. ಹೆತ್ತವರು ತೀರಿಹೋದ ಮೇಲೆ ತಿಥಿ ಮತ್ತಿತರ ಕಾರ್ಯಗಳನ್ನು ನಿಷ್ಠೆಯಿಂದ ಮಾಡಲಾಗುತ್ತದೆ. ಆದರೆ ಕೆಲವರು ಜೀವಂತವಿರುವಾಗ ತಂದೆ-ತಾಯಿಗೆ ಸಲ್ಲಬೇಕಾದ ಮರ್ಯಾದೆಯನ್ನು ನೀಡುವುದಿಲ್ಲ' ಎಂದು ಅವರು ಬೇಸರಿಸಿದರು.

ಸುಳ್ಳ ಶ್ರೀ ಪಂಚಗೃಹ ಹಿರೇಮಠದ ಅಭಿನವ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸದ್ಗುರು ಸಿದ್ದಪ್ಪಜ್ಜನವರ ಮಠದ ಸದ್ಭಕ್ತ ಮಂಡಳಿಯ ಅಧ್ಯಕ್ಷ ಕಲ್ಲನಗೌಡ್ರು ಸಂಗನಗೌಡ್ರು ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಐ.ಮುನವಳ್ಳಿ, ಮಾಜಿ ಸಂಸದ ಮಂಜುನಾಥ ಕುನ್ನೂರು ಮತ್ತಿತರರು ಉಪಸ್ಥಿತರಿದ್ದರು. ಬೆಳಿಗ್ಗೆ ಮಠದ ಉದ್ಘಾಟನೆ ನಡೆಯಿತು. ಮಧ್ಯಾಹ್ನ 5 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ದೊಡವಾಡ ಹಿರೇಮಠದ ಜಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಮರಗೋಳದ ಹಿರಿಯರಾದ ಬಸವಪ್ಪ ಕಿತ್ತೂರ, ಪಾಲಿಕೆ ಸದಸ್ಯ ಶಾಂತಪ್ಪ ದೇವಕ್ಕಿ ಭಾಗವಹಿಸಿದ್ದರು.

`ಆಂತರಿಕ ಭಜನೆ ಮುಖ್ಯ'
ಹುಬ್ಬಳ್ಳಿ:
ದೇವರು ಮೆಚ್ಚುವಂತೆ ಆಂತರಿಕ ಭಜನೆ, ಧ್ಯಾನ ಮಾಡಿ ಮನಸ್ಸನ್ನು ಶಾಂತವಾಗಿಸಿಕೊಳ್ಳಬೇಕು' ಎಂದು ಬಾಳೇಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಅವರು ಅಮರಗೋಳ ಬಳಿಯ ಅಧ್ಯಾಪಕ ನಗರದ ಸಿದ್ದಪ್ಪಜ್ಜ ದೇವಸ್ಥಾನದ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಸತ್ಸಂಗದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ಮನುಷ್ಯನಿಗೆ ಎಲ್ಲದರ ಜೊತೆಗೆ ದೇವರು ಬುದ್ಧಿಯನ್ನೂ ಕೊಟ್ಟಿದ್ದಾನೆ. ಅದಕ್ಕಾಗಿ ದಿನಕ್ಕೆ ಸಾಧ್ಯವಾದಷ್ಟು ಬಾರಿ ದೇವರನ್ನು ನೆನೆದರೂ ಒಳ್ಳೆಯದು. ಭಜನೆ ನಾವು ಭಗವಂತನಿಗೆ ತಿಳಿಸುವ ಧನ್ಯವಾದ' ಎಂದು ಹೇಳಿದರು.

ದೊಡ್ಡವಾಡ ಜಡೇಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ,ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಚಂದ್ರಕಾಂತ ಬೆಲ್ಲದ, ಶರಣಪ್ಪ ಕೊಟಗಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT