ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ಲರ್‌ಗೆ ಗಲ್ಲು ಕಾಯಂ

ವೀರಪ್ಪನ್ ಸಹಚರರು, ರಾಜೀವ್ ಹಂತಕರ ಅರ್ಜಿ ಮೇಲೂ ಪರಿಣಾಮ
Last Updated 12 ಏಪ್ರಿಲ್ 2013, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜಧಾನಿ ದೆಹಲಿಯಲ್ಲಿ 1993ರ ಸೆಪ್ಟೆಂಬರ್‌ನಲ್ಲಿ ಬಾಂಬ್ ಸ್ಫೋಟಿಸಿ 9 ಜನರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲಿಸ್ತಾನ್ ವಿಮೋಚನಾ ಪಡೆಯ (ಕೆಎಲ್‌ಎಫ್) ಉಗ್ರ ದೇವಿಂದರ್‌ಪಾಲ್ ಸಿಂಗ್ ಬುಲ್ಲರ್‌ಗೆ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಕಾಯಂಗೊಳಿಸಿದೆ.

ಕ್ಷಮಾದಾನ ಅರ್ಜಿ ಬಗ್ಗೆ ತೀರ್ಮಾನ ವಿಳಂಬವಾಗಿರುವುದರಿಂದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಬುಲ್ಲರ್ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ. `ಶಿಕ್ಷೆಯ ಪ್ರಮಾಣ ಇಳಿಸಲು ಕೋರಿ ಅರ್ಜಿದಾರರು ನೀಡಿದ ಕಾರಣ ಸಮರ್ಥನೀಯವಲ್ಲ' ಎಂದು ನ್ಯಾಯಮೂರ್ತಿಗಳಾದ ಜಿ. ಎಸ್. ಸಿಂಘ್ವಿ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

`ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ನೀಡಿದ್ದು 2001ರಲ್ಲಿ. ಅಲ್ಲಿಂದೀಚೆಗೆ ವಿವಿಧ ಹಂತಗಳಲ್ಲಿ ವಿಚಾರಣೆ ನಡೆದಿದೆ. ರಾಷ್ಟ್ರಪತಿಗೆ ಸಲ್ಲಿಸಿದ ಕ್ಷಮಾದಾನ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ದೀರ್ಘ ಕಾಲ ವಿಳಂಬವಾಗಿದ್ದು, ಆತ ಅನುದಿನವೂ ಸಾವಿನ ಭಯದಲ್ಲಿ ಮಾನಸಿಕ ಯಾತನೆ ಅನುಭವಿಸುತ್ತ ಬಂದಿದ್ದಾನೆ' ಎಂದು ಬುಲ್ಲರ್‌ನ ಕುಟುಂಬ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

`ಇದು ಕ್ರೌರ್ಯಕ್ಕೆ ಸಮನಾದದ್ದು ಮತ್ತು ಸಂವಿಧಾನದ 21ನೇ ಕಲಂ ಪ್ರಕಾರ ಜೀವಿಸುವ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ. ಅಲ್ಲದೆ ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದು 2010 ರಿಂದಲೂ ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗಾಗಲೆ 18 ವರ್ಷದಿಂದ ಜೈಲಿನಲ್ಲಿದ್ದಾನೆ. ಆದ್ದರಿಂದ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಬೇಕು' ಎಂದು ಮೇಲ್ಮನವಿಯಲ್ಲಿ ಕೋರಿತ್ತು.

ಕೋರ್ಟ್‌ನ ಈ ದೂರಗಾಮಿ ತೀರ್ಪು ವೀರಪ್ಪನ್ ಸಹಚರರು ಹಾಗೂ ರಾಜೀವ್ ಗಾಂಧಿ ಹಂತಕರು ಸೇರಿದಂತೆ ಮರಣದಂಡನೆ ಎದುರಿಸುತ್ತಿರುವ 17 ಅಪರಾಧಿಗಳ ಅರ್ಜಿ ಮೇಲೆ ಪರಿಣಾಮ ಬೀರಲಿದೆ. ಬೆಳಿಗ್ಗೆ 11.15ಕ್ಕೆ ನ್ಯಾಯಾಧೀಶರು ತೀರ್ಪಿನ ಎರಡು ಪ್ರಮುಖ ಭಾಗಗಳನ್ನು ಓದುವಾಗ ಬುಲ್ಲರ್‌ನ ಕೆನಡಾ ವಾಸಿ ಪತ್ನಿ ನವನೀತ್ ಕೌರ್ ಹಾಜರಿದ್ದರು. ತೀರ್ಪು ಕೇಳುತ್ತಿದ್ದಂತೆ ಮಂಕಾದ ಅವರು ಕೋರ್ಟ್‌ನಿಂದ ಹೊರನಡೆದರು.

ಘಟನೆಯ ವಿವರ: ಸುಮಾರು 20 ವರ್ಷಗಳ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಂ. ಎಸ್. ಬಿಟ್ಟಾ ಅವರನ್ನು ಗುರಿಯಾಗಿಸಿಕೊಂಡು ಯುವ ಕಾಂಗ್ರೆಸ್ ಕಚೇರಿ ಮುಂದೆ ನಡೆಸಿದ್ದ ಈ ಸ್ಫೋಟದಲ್ಲಿ 9 ಮಂದಿ ಸತ್ತು, ಬಿಟ್ಟಾ ಸೇರಿದಂತೆ 25 ಮಂದಿ ಗಾಯಗೊಂಡಿದ್ದರು. ಬಿಟ್ಟಾ ಪಂಜಾಬ್ ಉಗ್ರಗಾಮಿಗಳ ಕಟು ಟೀಕಾಕಾರರಾಗಿದ್ದರು. ಅದಕ್ಕಾಗಿಯೇ ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 2001ಆಗಸ್ಟ್‌ನಲ್ಲಿ ಬುಲ್ಲರ್‌ಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣದಂಡನೆಯನ್ನು ದೆಹಲಿ ನ್ಯಾಯಾಲಯ 2002ರಲ್ಲಿ ಎತ್ತಿ ಹಿಡಿದಿತ್ತು.

ಇದನ್ನು ಪ್ರಶ್ನಿಸಿ ಆತ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ 2002ರ ಮಾರ್ಚ್ 26ರಂದು ತಳ್ಳಿಹಾಕಿತ್ತು. ನಂತರದಲ್ಲಿ ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿ 2003 ಮಾರ್ಚ್ 12ರಂದು ವಜಾಗೊಂಡಿತ್ತು.

ಇದರ ನಡುವೆಯೇ ಬುಲ್ಲರ್ 2003 ಜನವರಿ 14ರಂದು ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದ. 2011ರ ಮೇ 25ರಂದು ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇದನ್ನು ತಿರಸ್ಕರಿಸಿದ್ದರು.

ಕನಸು ನುಚ್ಚುನೂರು: ತೀರ್ಪಿನ ನಂತರ ಪ್ರತಿಕ್ರಿಯಿಸಿದ ಬುಲ್ಲರ್ ಪತ್ನಿ ನವನೀತ್ ಕೌರ್, `ಹದಿನೆಂಟು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಇದೀಗ ಕನಸು ನುಚ್ಚು ನೂರಾಗಿದೆ' ಎಂದು ಹೇಳಿದ್ದಾರೆ.

`ನಮಗೆ ನ್ಯಾಯ ಸಿಕ್ಕಿಲ್ಲ. 1984ರಲ್ಲಿ ಸಹಸ್ರಾರು ಸಿಖ್ಖರನ್ನು ಕೊಂದ ಹಂತಕರಿಗೆ ಏಕೆ ಇನ್ನೂ ಶಿಕ್ಷೆ ಕೊಟ್ಟಿಲ್ಲ' ಎಂದು ಪ್ರಶ್ನಿಸಿದ್ದಾರೆ. `ಸರ್ಕಾರ ಮನಸ್ಸು ಮಾಡಿದರೆ ಈಗಲೂ ನನ್ನ ಗಂಡನ ಪ್ರಾಣ ಉಳಿಸಬಹುದು' ಎಂದು ಹೇಳಿರುವ ಅವರು, 1993ರ ಸ್ಫೋಟದಲ್ಲಿ ಮಡಿದ ಪೊಲೀಸ್ ಸಿಬ್ಬಂದಿಗಳ ಕುಟುಂಬ ವರ್ಗದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಭಿನ್ನಮತ: ಸುಪ್ರೀಂಕೋರ್ಟ್ ತೀರ್ಪಿಗೆ ಸಂಬಂಧಿಸಿ ಪಂಜಾಬ್‌ನಲ್ಲಿ ಆಡಳಿತ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿವೆ.`ಸುಪ್ರೀಂಕೋರ್ಟ್ ಯಾವುದೇ ಪ್ರಮಾಣದ ಶಿಕ್ಷೆಯನ್ನು ನೀಡಿರಲಿ, ಅದನ್ನು ಜಾರಿಗೆ ತರಲೇಬೇಕು. ಅದರಲ್ಲಿ ಯಾವುದೇ ವಿನಾಯಿತಿ ನೀಡಬಾರದು' ಎಂದು ಬಿಜೆಪಿ ಮುಖಂಡ ಬಲ್ಬೀರ್ ಪುಂಜ್ ತಿಳಿಸಿದ್ದಾರೆ.

ಆದರೆ ಬುಲ್ಲರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ದುರದೃಷ್ಟಕರ ಎಂದು ಶಿರೋಮಣಿ ಅಕಾಲಿ ದಳ ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ಅಭಿಪ್ರಾಯಪಟ್ಟಿವೆ.`ನಮಗೆ ಬೇಸರವಾಗಿದೆ. ಸುಪ್ರೀಂಕೋರ್ಟ್ ಅಂದು ಪಂಜಾಬ್‌ನಲ್ಲಿದ್ದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಾಗಿ ನಾವು ಭಾವಿಸಿದ್ದೆವು. ತೀರ್ಪನ್ನು ಪುನರ್‌ಪರಿಶೀಲಿಸುವಂತೆ ನಾವು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಹಾಗೂ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಮಂತ್ರಿ ಅವರನ್ನು ಕೋರುತ್ತೇವೆ' ಎಂದು ಅಕಾಲಿ ದಳ ಮುಖಂಡ ಪ್ರೇಮ್‌ಸಿಂಗ್ ಚಂದುಮಾಜ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT