ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುವಿಯ ಬೆಸೆಯುವ ಬೆಲ್ಲಿ

Last Updated 11 ಮೇ 2012, 19:30 IST
ಅಕ್ಷರ ಗಾತ್ರ

ಬೆಲ್ಲಿ ನೃತ್ಯ ಮನರಂಜನೆಗಾಗಿ ಅಲ್ಲವೇ ಅಲ್ಲ. ಅದು ಪ್ರದರ್ಶನಾ ಕಲೆಯೂ ಅಲ್ಲ. ಅದು ಹೆಣ್ತನವನ್ನು ವಿಜೃಂಭಿಸುವ ಕಲೆ. ಬುವಿಯೊಂದಿಗೆ ಸಂಪರ್ಕ ಸಾಧಿಸುವ, ನಭದಗಲಕ್ಕೂ ವ್ಯಕ್ತಿತ್ವ ಪಸರಿಸುವ ನೃತ್ಯ... ಬೆಂಗಳೂರಿನಲ್ಲೆಗ ಜನಪ್ರಿಯಗೊಳ್ಳುತ್ತಿದೆ ಬೆಲ್ಲಿ. ಅಂದಹಾಗೆ, ಇಂದು `ವಿಶ್ವ ಬೆಲ್ಲಿ ನೃತ್ಯ ದಿನಾಚರಣೆ~.

`ಬೆಲ್ಲಿ ಎಂಬುದು ಮನರಂಜನೆ ಅಲ್ಲ; ನೃತ್ಯದ ಒಂದು ಪ್ರಕಾರ. ಹೆಂಗಳೆಯರನ್ನು ಬುವಿಯೊಂದಿಗೆ ಬೆಸೆಯುವ ವಿಶೇಷ ಪ್ರಕಾರ... ಇದರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ~ ವೆನಿಜುವೆಲಾ ಮೂಲದ ಅನುಬಿಸ್ ನಿರ್ವಾಣ ಬೆಲ್ಲಿ ನೃತ್ಯದ ಬಗ್ಗೆ ಮಾಹಿತಿಯನ್ನು ಬಿಚ್ಚಿಡುತ್ತಾಹೋದರು.

ಭಾರತೀಯ ಸಿನಿಮಾಗಳು ಬೆಲ್ಲಿಯನ್ನು `ಸೆಕ್ಸಿ~, ಮಾದಕ, ಪ್ರಚೋದಕ ನೃತ್ಯ ಎಂಬಂತೆ ಬಿಂಬಿಸಿರುವ ಬಗ್ಗೆ ಅವರ ಮಾತಿನಲ್ಲಿ ಆಕ್ರೋಶ ಇತ್ತು. ಇದು ಒಂದು ಕಲಾ ಪ್ರಕಾರ. ಕಲೆಯೆಂದೇ ಪ್ರಚಾರಕ್ಕೆ ಬರಲಿ ಎಂಬ ಕಾಳಜಿಯೂ ಇತ್ತು.

ಅನುಬಿಸ್ ಅವರು ವಿಶ್ವಸಂಸ್ಥೆಯಭಾಗವಾದ ನೃತ್ಯ ಸಂಸ್ಥೆಯ ಸದಸ್ಯೆಯೂ ಆಗಿದ್ದಾರೆ. `ಬೆಲ್ಲಿಯಲ್ಲಿ ಹೆಂಗಳೆಯರು ತಮ್ಮನ್ನು ತಾವೇ ಶೋಧಿಸಿಕೊಳ್ಳುತ್ತಾರೆ. ತಮ್ಮನ್ನು ತಾವು ಅರಿಯುತ್ತಾರೆ. ಬಹುತೇಕ ಮಹಿಳೆಯರು ತಮ್ಮ ದೇಹದತ್ತ ದಿವ್ಯ ನಿರ್ಲಕ್ಷ್ಯ ತೋರುತ್ತಾರೆ. ಆದರೆ ಬೆಲ್ಲಿ ನೃತ್ಯ ಪ್ರಕಾರದಲ್ಲಿ ದೇಹ ಮತ್ತು ಆತ್ಮವನ್ನು ಬೆಸೆಯುವ ಕೆಲಸ ಮಾಡಲಾಗುತ್ತದೆ.

ಮೊದಲು ದೇಹದ ಎಲ್ಲ ಭಾಗಗಳನ್ನು ಸ್ವತಂತ್ರವಾಗಿಸುವ ಕಲೆ ಕಲಿಸಲಾಗುತ್ತದೆ. ನಂತರ ಅಂಗಾಂಗಗಳನ್ನು ನಿಯಂತ್ರಿಸುವ ಪಾಠ ಹೇಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹ ಮತ್ತು ಆತ್ಮಗಳ ಸಮ್ಮಿಲನವಾಗುತ್ತದೆ. ದೇಹಕ್ಕೊಂದು ಪರಿಪೂರ್ಣ ಆಕಾರ ಸಿಗುತ್ತದೆ. ಮನಸಿಗೆ ಆಹ್ಲಾದಕರ ಅನುಭವ ದೊರೆಯುತ್ತದೆ. ಹೆಣ್ಣು ಮಗಳೊಬ್ಬಳು ತನ್ನ ಹೆಣ್ತನವನ್ನು ಕಾಣುವ ಪರಿ ಈ ನೃತ್ಯದ ವಿಶೇಷ ಎನ್ನುತ್ತಾರೆ~ ಅವರು.

`ಈ ನೃತ್ಯದಲ್ಲಿ ಬರಿಗಾಲಿನಲ್ಲಿ ಭೂಮಿಯನ್ನು ಮುಟ್ಟುತ್ತ, ತಡವುತ್ತ, ಗಾಳಿಯೊಂದಿಗೆ ಮಾತನಾಡುವಂತೆ ಸ್ಪರ್ಶಿಸುತ್ತ ಸಾಗಬೇಕು. ಜೊತೆಗೆ ಭೂಮಿಯ ಮೇಲಿರುವ ಚರಾಚರಗಳ ಚಲನೆಯನ್ನೇ ನೃತ್ಯರೂಪಕ್ಕೆ ಇಳಿಸಬೇಕು. ಭೂವಿಯನ್ನು ನೃತ್ಯಗಾರ್ತಿ ತನ್ನೊಡನೆ ಮೇಳೈಸುವ, ಭೂಮಿಯೇ ತಾವಾಗುವ ನೃತ್ಯ ಇದು.
 
ವಸುಂಧರೆಯ ಮೇಲಿನ ಜೀವ ವೈವಿಧ್ಯ ವರ್ಣವೈವಿಧ್ಯವನ್ನು ತೋರುವ ನೃತ್ಯವಿದು. ಇದು ಕೇವಲ ಮನರಂಜನೆ ಅಲ್ಲ; ತಪಸ್ಸಿದ್ದಂತೆ. ಇದನ್ನು ಮನರಂಜನೆ ಅಥವಾ ಪುರುಷರ ಮುಂದೆ ಹೆಣ್ಣೊಂದು ತನ್ನ ಅಂಗಾಂಗ ಪ್ರದರ್ಶನಕ್ಕೆ ಎಂಬಂತೆ ಪ್ರಸ್ತುತ ಪಡಿಸಿದರೆ ಅದು ಬೆಲ್ಲಿ ನೃತ್ಯಕ್ಕೆ ಮಾಡುವ ಅಪಚಾರ~ ಎಂದು ನೃತ್ಯಾಂಗನೆ ಸನಾಜ್ ಭುಕ್ತಿಯಾರ್ ಕಿಡಿಕಾರುತ್ತಾರೆ.

ಗೆಲುವಿಗಾಗಿ ಬೆಲ್ಲಿ
`ನಿಯಮಿತ ಬೆಲ್ಲಿ ನೃತ್ಯದಿಂದ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಸರಳವಾಗಿದೆ. ಕೀಲು ನೋವು, ಸಂಧಿವಾತಗಳು ಬಳಿಯೂ ಸುಳಿಯುವುದಿಲ್ಲ. ಬೊಜ್ಜು, ಸ್ಥೂಲಕಾಯವನ್ನೂ ನಿಯಂತ್ರಣದಲ್ಲಿರಿಸಬಹುದು. ಮೂಳೆ ಸಾಂದ್ರತೆ ಹೆಚ್ಚುತ್ತದೆ. ದೈಹಿಕವಾಗಿ ಪರಿಪೂರ್ಣ ಆರೋಗ್ಯ ದೊರೆಯುತ್ತದೆ~ ಅಂತಾರೆ ಅನುಬೀಸ್.

`ಈ ನೃತ್ಯದ ಚಲನವಲನಗಳು ಮನಸ್ಸನ್ನು ಉಲ್ಲಾಸದಿಂದ ಕೂಡಿರುವಂತೆ ಮಾಡುತ್ತವೆ. ಮಾನಸಿಕ ಒತ್ತಡ ನಿರ್ವಹಣೆಗೆ ಈ ನೃತ್ಯ ಪ್ರಕಾರ ಹೇಳಿ ಮಾಡಿಸಿದ ಔಷಧಿ. ನಮ್ಮ ದೇಹ ನಮ್ಮ ಮನಸಿನ ಗುಲಾಮ ಎಂಬಂತೆ ನರ್ತಿಸಲಾರಂಭಿಸಿದಾಗ ಎಲ್ಲಿಲ್ಲದ ಆತ್ಮ ವಿಶ್ವಾಸ ಒಡಮೂಡುತ್ತದೆ. ಮಾನಸಿಕ ಸ್ವಾಸ್ಥ್ಯಕ್ಕೂ ಬೆಲ್ಲಿ ಡಾನ್ಸ್ ಪ್ರಯೋಜಕ~ ಎನ್ನುವುದು ಸನಾಜ್ ಭುಕ್ತಿಯಾರ್ ಅಭಿಪ್ರಾಯವಾಗಿದೆ.

ಬೆಲ್ಲಿ ಎಲ್ಲಿ..?
ವಿಶ್ವದಾದ್ಯಂತ 16 ವರ್ಷಗಳಿಂದ ಬೆಲ್ಲಿ ನೃತ್ಯ ಪ್ರಕಾರವನ್ನು ಅನುಬಿಸ್ ಹೇಳಿಕೊಡುತ್ತಿದ್ದಾರೆ. ಅವರ ಕ್ಲಾಸು, ಶಿಬಿರಗಳ ಬಗ್ಗೆ ಹೆಚ್ಚಿನ ಮಾಹಿತಿಗೆ, 388, ಮೊದಲನೇ ಅಂತಸ್ತು, 16ನೇ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ,  3ನೇ ಬ್ಲಾಕ್ ಕೋರಮಂಗಲ  9972429231.

ಇರಾನ್ ಹಾಗೂ ಪರ್ಷಿಯನ್ ನೃತ್ಯ ಮಾದರಿಯಲ್ಲಿ ತರಬೇತಿ ಪಡೆದಿರುವ ಸನಾಜ್ ಅವರ ಡಾನ್ಸ್ ಸ್ಟುಡಿಯೋ ನಗರದ ವಿವಿಧ ಬಡವಾವಣೆಗಳಲ್ಲಿ ಡಾನ್ಸ್ ಕ್ಲಾಸುಗಳನ್ನು ಏರ್ಪಡಿಸಿದೆ. ಹೆಚ್ಚಿನ ಮಾಹಿತಿಗೆ ಸ್ಟುಡಿಯೋದ ಸಂಯೋಜಕಿ ವಿದ್ಯಾ ಅವರನ್ನು ಈ ಬಗ್ಗೆ ಸಂಪರ್ಕಿಸಬಹುದು. 98864 66746, 99000 49777

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT