ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಂದಾವನ ಇನ್ನು ನೆನಪು ಮಾತ್ರ...!

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಅನಿಲ್ ಕುಂಬ್ಳೆ ವೃತ್ತದಿಂದ ಎಂ.ಜಿ ರಸ್ತೆ ಪ್ರವೇಶಿಸಿದರೆ ಕಾವೇರಿ ಎಂಪೋರಿಯಂ ತಲುಪುವದರಲ್ಲಿಯೇ ಹೊಟ್ಟೆ ತಾಳ ಹಾಕತೊಡಗುತ್ತದೆ. ಎಂ.ಜಿ.ರಸ್ತೆಯ ಪರಿಚಯ ಇದ್ದವರೆಲ್ಲ ಇನ್ನೆಂಟು ಹೆಜ್ಜೆ ಹಾಕಿ ಬಲಕ್ಕೆ ಹೊರಳಿದರೆ, ಅದೊಂದು ಬಗೆಯ ನಿರಾಳ. ಅಲ್ಲಿದೆ, ಹೋಟೆಲ್ `ಬೃಂದಾವನ~. ಇನ್ನು ಕೆಲವೇ ದಿನಗಳಲ್ಲಿ ಶಾಶ್ವತವಾಗಿ ನೆನಪಿನ ಅಂಗಳವನ್ನೇ ಸೇರಲಿದೆ.

1960ರಲ್ಲಿ ನಿರ್ಮಾಣವಾದ ಈ ಹೋಟೆಲ್‌ಗೆ ಬಂದವರೆಲ್ಲರೂ ಮತ್ತೆ ಮತ್ತೆ ಭೇಟಿ ಕೊಡುವ, ಹೃದ್ಯವಾದ ಸಂಬಂಧವನ್ನು ಬೆಳೆಸಿದ ಹೋಟೆಲ್ ಅದು.

ರಾವ್ ಕುಟುಂಬದವರು ಆ ಕಾಲದಲ್ಲಿ 25 ಸಾವಿರ ರೂಪಾಯಿಗೆ ಖರೀದಿಸಿದ್ದ 46000 ಚದರ ಅಡಿ ವಿಸ್ತಾರದ ಈ ಆಸ್ತಿಯನ್ನು ಇದೀಗ ಮೆಹ್ತಾ ಕುಟುಂಬಕ್ಕೆ 80 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ 140-160 ಕೋಟಿ ಬೆಲೆ ಬಾಳುತ್ತಿದ್ದರೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಇಕ್ಕಟ್ಟಾದ ಸಂಪರ್ಕ ರಸ್ತೆಯ ಕೊರತೆಯೇ ಈ ಅಗ್ಗದ ಬೆಲೆಗೆ ಕಾರಣವೆನ್ನಲಾಗಿದೆ.

ಅದೇನೆ ಇರಲಿ, ಕಳೆದ ಐದು ದಶಕಗಳಿಂದಲೂ ನಗುಮೊಗದ ಮಾಣಿಗಳೊಂದಿಗೆ ಮನೆಊಟದ ಸ್ವಾದವನ್ನೇ ನೀಡುತ್ತಿದ್ದುದು ಇಲ್ಲಿಯ ವಿಶೇಷವಾಗಿತ್ತು. ಬೆಳಿಗ್ಗೆ ಪೂರಿ, ಇಡ್ಲಿ-ವಡೆಗೆ ಹೆಸರಾಗಿದ್ದರೆ, ಸಂಜೆಗೆ ದೋಸೆ, ಪರಾಠಾ ಹಾಗೂ ರುಚಿಕರವಾದ ಬಜ್ಜಿಗೆ ಹೆಸರಾಗಿತ್ತು.

ಎಂ.ಜಿ ರಸ್ತೆಯಲ್ಲಿರುವ ಎಲ್ಲ ಮಳಿಗೆ, ಕಚೇರಿಯವರೂ ಒಂದಲ್ಲ ಒಂದು ದಿನ ಇಲ್ಲಿ ಬಂದು ಬಜ್ಜಿಯೊಂದಿಗೆ ಚಹಾ ಸವಿದವರೇ ಆಗಿದ್ದಾರೆ.

ಬೆಂಗಳೂರಿನಲ್ಲಿಯೇ ವಿದ್ಯಾರ್ಥಿ ಜೀವನ ಕಳೆದು ಇದೀಗ ಮಂಗಳೂರಿನಲ್ಲಿ ವಾಸವಾಗಿರುವ ಸುಧಾ, ಈಗಲೂ ಬೆಂಗಳೂರಿಗೆ ಭೇಟಿ ನೀಡಿದರೆ, ಬೃಂದಾವನದಲ್ಲಿ ಬೋಂಡಾ ತಿನ್ನುವುದಕ್ಕೆ ಎಂ.ಜಿ.ರಸ್ತೆಗೆ ಭೇಟಿ ನೀಡುವುದಾಗಿ ತಿಳಿಸುತ್ತಾರೆ.

ಸಿ.ಇ.ಟಿಗಾಗಿ ಅಪ್ಪನೊಂದಿಗೆ ಧಾರವಾಡದಿಂದ ಬೆಂಗಳೂರಿಗೆ ಬಂದಿದ್ದೆ. ಇಲ್ಲಿಯೇ ಮೊದಲ ಸಲ ಬಟನ್ ಇಡ್ಲಿ, ಸಾಂಬಾರ್ ಸವಿದಿದ್ದು. ಆ ನಂತರ ಬೆಂಗಳೂರಿನಲ್ಲಿಯೇ ಎಂಜಿನಿಯರಿಂಗ್‌ಗೆ ಸೇರಿದ್ದು, ಇಲ್ಲಿಯೇ ಕೆಲಸಕ್ಕೆ ಸೇರಿದ್ದು. ಈಗಲೂ ತಿಂಗಳಿಗೊಮ್ಮೆ ಬೃಂದಾವನಕ್ಕೆ ಭೇಟಿ ನೀಡದಿದ್ದರೆ ಏನೋ ಕಳೆದುಕೊಂಡಂತೆ ಎನಿಸುತ್ತದೆ ಎನ್ನುತ್ತಾರೆ ಬಾಷ್ ಉದ್ಯೋಗಿ ವಿನಯ್.

ಹೋಟೆಲ್ ಬೃಂದಾವನದಲ್ಲಿ ಝಗಮಗಿಸುವ ಲೈಟುಗಳಿಲ್ಲ. ಮೆತ್ತನೆಯ ಸೋಫಾಗಳಿಲ್ಲ. ಚಂದದ ಟೇಬಲ್ ಅದರ ಮೇಲೊಂದು ನಗೆಚೆಲ್ಲುವ ಗುಲಾಬಿಯೂ ಇಲ್ಲ. ಯಾವುದೇ ನಾಜೂಕಿನ ಅಲಂಕಾರಗಳೂ ಇಲ್ಲಿಲ್ಲ.

ಇಲ್ಲಿರುವುದು ಒಂದೆರಡು ದಶಕಗಳ ಹಿಂದೆ ಎಲ್ಲರ ಮನೆಯಲ್ಲಿದ್ದ ಮಾದರಿಯ ಸರಳವಾದ ಟೇಬಲ್‌ಗಳು. ಅಷ್ಟೇ ಸರಳವಾದ ಕುರ್ಚಿಗಳು. ಈ ಸರಳತನವೇ ಎಲ್ಲರನ್ನೂ ಸೆಳೆಯುತ್ತಿತ್ತೇ? ನಕ್ಕರೆ, ತುಟಿರಂಗು ಮಾಸುತ್ತದೆಯೇನೋ ಎಂಬ ಭೀತಿಯಲ್ಲಿ ನಗೆ ಸೂಸುವ ಅರೆಬಿರಿದ ಒಂಟಿ ಗುಲಾಬಿ ಯಾವ ಟೇಬಲ್ ಮೇಲೆ ಇಲ್ಲದಿದ್ದರೂ ಇಲ್ಲಿಯ ನಗುಮೊಗದ ಮಾಣಿಗಳ ಸ್ವಾಗತವೇ ಆಪ್ತವೆನಿಸುತ್ತದೆ.

ಎಂ.ಜಿ.ರಸ್ತೆಯ ಗೌಜಿನಿಂದ ದೂರವಾಗಿ ಇಲ್ಲಿ ಒಳಗೆ ಬಂದು ಕುಳಿತರೆ, ನೀಡಿದ ಆರ್ಡರ್ ತಡ ಮಾಡಿ ಬಂದರೂ ನಿರಾಳವಾಗಿರುವ ವಾತಾವರಣ ಇಲ್ಲಿಯದು.

ಇನ್ನು ಕೆಲ ದಿನಗಳಲ್ಲಿಯೇ ಇವೆಲ್ಲವೂ ಶಾಶ್ವತವಾಗಿ ಮಾಯವಾಗಲಿವೆ. ನೀಲಿ ಹೊದಿಕೆಯ ಅಡಿ ಐದು ದಶಕಗಳ ಕಾಲ ಊಟ ಹಾಗೂ ವಸತಿಯ ಸೇವೆಯಲ್ಲಿ ನಿರತವಾಗಿದ್ದ ಕಟ್ಟಡವೊಂದು ನೆಲಕ್ಕುರುಳುತ್ತದೆ.

ಶುಭ್ ಜ್ಯುವೆಲ್ಲರ್ಸ್‌ನ ಮಾಲೀಕರಾದ ಮೆಹ್ತಾ ಕುಟುಂಬದವರು ತಮಗಾಗಿ ಇಲ್ಲೊಂದು ವಿಲ್ಲಾ ನಿರ್ಮಿಸುವ ಯೋಚನೆಯಲ್ಲಿದ್ದಾರಂತೆ. ಅದಕ್ಕೇ ಈ ನೆಲವನ್ನು ಖರೀದಿಸಿದ್ದು.
ಕಳೆದ ಇಪ್ಪತ್ತೈದು ವರ್ಷಗಳಿಂದ ಇದೇ ಹೋಟೆಲ್‌ನಲ್ಲಿ ಸೇವೆ ಸಲ್ಲಿಸಿದ ಕೆಲವು ಕೆಲಸಗಾರರಿಗೆ ಈಗಾಗಲೇ ಲೆಕ್ಕ ಚುಕ್ತಾ ಮಾಡಲಾಗಿದೆ. ಮಂಗಳೂರು ಉಡುಪಿ ಮೂಲದ ಕೆಲಸಗಾರರಿಗೆ ಇಲ್ಲಿಂದ ಹೊರಡಲು ಊರು ಬಿಟ್ಟಷ್ಟೇ ಸಂಕಟವಾಗುತ್ತಿದೆ ಎನ್ನುತ್ತಾರೆ ಕಳೆದ 10 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ಮಾಣಿಯೊಬ್ಬರು.

ಈ ವಿದಾಯದ ದುಃಖ ಅವರಲ್ಲಷ್ಟೇ ಅಲ್ಲ, ಬೃಂದಾವನದ ಬಿಸಿ ಕಾಫಿ, ದೋಸೆ, ಬೋಂಡಾ ಹಾಗೂ ಬಾಳೆಲೆಯ ಊಟ ಮಾಡಿದವರೆಲ್ಲರಿಗೂ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT