ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂ. ನಗರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಅಧಿಕ

Last Updated 15 ಸೆಪ್ಟೆಂಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: 2008ರಿಂದ 2010ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣಗಳ ಸಂಖ್ಯೆ ಅವಿಭಜಿತ ಗುಲ್ಬರ್ಗ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಾಗಿದ್ದು, ಬೆಂಗಳೂರು ನಗರ ಜಿಲ್ಲೆ ಎರಡನೆಯ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಅವಿಭಜಿತ ಗುಲ್ಬರ್ಗದಲ್ಲಿ (ಯಾದಗಿರಿ ಜಿಲ್ಲೆ ಸೇರಿದಂತೆ) 322 ಹಲ್ಲೆ ಪ್ರಕರಣಗಳು ವರದಿಯಾಗಿದ್ದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ 312 ಪ್ರಕರಣಗಳು ವರದಿಯಾಗಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಮೇಲ್ವಿಚಾರಣೆ ಮತ್ತು ಬಲವರ್ಧನಾ ಸಮಿತಿ ಸಿದ್ಧಪಡಿಸಿದ 2010ನೇ ಸಾಲಿನ ರಾಜ್ಯ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಹಾಸನ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಬಳ್ಳಾರಿ, ಮೈಸೂರು, ವಿಜಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳು ದಲಿತರ ಮೇಲೆ ಹೆಚ್ಚು ದೌರ್ಜನ್ಯ ನಡೆಯುವ ಜಿಲ್ಲೆಗಳ ಪೈಕಿ ಮುಂಚೂಣಿ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ.

ಶಾಸಕರ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಈ ವರದಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು ವರದಿಯನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಗಮನಕ್ಕೆ ತರುವ ಭರವಸೆ ನೀಡಿದರು. `ಕಳೆದ 3-4 ವರ್ಷಗಳಲ್ಲಿ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿವೆ~ ಎಂದರು.

`ದಲಿತರ ಮೇಲೆ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಕೆಲವು ಬಿ-ಫೈಲ್ ಆಗುತ್ತಿವೆ. ಇವು ಪರಸ್ಪರ ಮಾತುಕತೆಯಿಂದ ಆಗುತ್ತಿವೆಯೋ ಅಥವಾ ಮತ್ತೆ ದೌರ್ಜನ್ಯ ಎಸಗುವ ಮೂಲಕ ಆಗುತ್ತಿದೆಯೋ ಎಂಬ ಪ್ರಶ್ನೆ ನಮ್ಮ ಮುಂದಿದೆ~ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, `ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ದಲಿತ ಸಮುದಾಯದೊಳಗೇ ಚರ್ಚಿಸುವ ಬದಲು ಅದನ್ನು ಇಡೀ ಸಮಾಜದ ಮುಂದಿಡುವ ಕೆಲಸ ಆಗಬೇಕು~ ಎಂದರು.

ಶಿಫಾರಸುಗಳು: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಯನ್ನು ಒಂದು ವರ್ಷದ ಕಾಲಮಿತಿಯಲ್ಲಿ ಮುಕ್ತಾಯಗೊಳಿಸಬೇಕು. ಈ ಪ್ರಕರಣಗಳ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಿ, ಅವುಗಳಿಗೆ ಸೂಕ್ಷ್ಮಗ್ರಾಹಿ ನ್ಯಾಯಾಧೀಶರನ್ನು ನೇಮಕ ಮಾಡಬೇಕು.
 
ಈ ಪ್ರಕರಣಗಳನ್ನು ಸರ್ಕಾರಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಶಾಸಕರಾದ ವೈ. ಸಂಪಂಗಿ, ಪಿ.ಎಂ. ನರೇಂದ್ರಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT