ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ರಿಯಾಯಿತಿ ಪುಸ್ತಕ ಮೇಳ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಪುಸ್ತಕಕ್ಕೆ ಕನಿಷ್ಠ ಶೇಕಡ 25ರಷ್ಟು ರಿಯಾಯಿತಿ ನೀಡುವ ಪುಸ್ತಕ ಮಾರಾಟ ಮೇಳ ಇದೇ 5ರಿಂದ 8ರವರೆಗೆ ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಡೆಯಲಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿರುವ ಈ ಮೇಳದಲ್ಲಿ ರಾಜ್ಯದ 70 ಪ್ರಕಾಶನ ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ಮೈಸೂರು ವಿಶ್ವವಿದ್ಯಾಲಯ ಮತ್ತು ಹಂಪಿ ಕನ್ನಡ ವಿ.ವಿ.ಯ ಪ್ರಕಟಣೆಗಳು ಶೇಕಡ 50ರಷ್ಟು ರಿಯಾಯಿತಿಯಲ್ಲಿ ಲಭ್ಯವಾಗಲಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಅವರು ಮೇಳವನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. 68 ಪುಸ್ತಕ ಮಳಿಗೆಗಳು ಈ ಮೇಳದಲ್ಲಿರುತ್ತವೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಅವರು `ಕನ್ನಡ ಭವನ~ದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಲ್ಕು ದಿನಗಳ ಅವಧಿಗೆ ಪ್ರತಿ ಮಳಿಗೆಯಿಂದ 1,000 ರೂಪಾಯಿ ಶುಲ್ಕ ಪಡೆದುಕೊಳ್ಳಲಾಗುವುದು. ಪ್ರತಿ ಮಳಿಗೆಗೂ ಒಂದು ಲಕ್ಷ ರೂಪಾಯಿ ಮೌಲ್ಯದ ವಿಮೆ ಮಾಡಿಸಲಾಗುತ್ತದೆ. ಕನ್ನಡ ಪುಸ್ತಕಗಳು ಮತ್ತು ಕನ್ನಡದಿಂದ ಇತರ ಭಾಷೆಗಳಿಗೆ ಅನುವಾದಗೊಂಡ ಪುಸ್ತಕಗಳು ಮಾತ್ರ ಮೇಳದಲ್ಲಿ ದೊರೆಯಲಿವೆ.

ಉದ್ಘಾಟನೆಯ ದಿನ ಹೊರತುಪಡಿಸಿ ಉಳಿದ ದಿನಗಳಂದು, ಬೆಳಿಗ್ಗೆ 10.30ರಿಂದ ರಾತ್ರಿ 8 ಗಂಟೆಯವರೆಗೆ ಪುಸ್ತಕ ಮಳಿಗೆಗಳು ತೆರೆದಿರುತ್ತವೆ ಎಂದರು.

ಜನಪ್ರಿಯ ಪ್ರಕಾಶನ ಸಂಸ್ಥೆಗಳಾದ ನವ ಕರ್ನಾಟಕ ಪ್ರಕಾಶನ, ಸಪ್ನಾ ಬುಕ್ ಹೌಸ್, ರಾಜ್ಯದ ಎಲ್ಲಾ ಅಕಾಡಮಿಗಳು ಮಳಿಗೆಗಳನ್ನು ತೆರೆಯಲಿವೆ ಎಂದರು.

ಹೊಸ ಪ್ರಕಟಣೆಗಳು: ಶ್ರೀನಿವಾಸ ಹಾವನೂರ ಅವರ `ಹೊಸಗನ್ನಡದ ಅರುಣೋದಯ~ ಕೃತಿಯ ಮುದ್ರಣ ಕಾರ್ಯ ಮುಗಿದಿದ್ದು ಅದು ಈ ತಿಂಗಳಲ್ಲೇ ಮಾರುಕಟ್ಟೆಗೆ ಬರಲಿದೆ. ಎಚ್.ಎಸ್. ಶಿವಪ್ರಕಾಶ್ ಅವರ ಸಮಗ್ರ ನಾಟಕಗಳ ಸಂಕಲನ ಕೂಡ ಸಿದ್ಧವಾಗಿದೆ. ಡಾ. ಚಂದ್ರಶೇಖರ ಕಂಬಾರ ಅವರ ಸಮಗ್ರ ನಾಟಕಗಳ ಸಂಕಲನ `ನೆಲಸಂಪಿಗೆ~ ಮುದ್ರಣ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

`ಕನ್ನಡ ಕಟ್ಟಿದವರು~ ಮಾಲೆಯ 35 ಪುಸ್ತಕಗಳ ಮುದ್ರಣ ಅಂತಿಮ ಹಂತದಲ್ಲಿದೆ. ಆಯ್ದ 35 ಪುಸ್ತಕಗಳನ್ನು ಬ್ರೈಲ್ ಲಿಪಿಗೆ ಅಳವಡಿಸಲು ಟೆಂಡರ್ ಕರೆಯುವ ಸಂಬಂಧ ಸರ್ಕಾರದ ಅನುಮತಿ ದೊರೆತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT