ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಬ್ಯಾಡ್ಮಿಂಟನ್ ಲೋಕ ಮತ್ತು ಪಡುಕೋಣೆ ಜೀವನ ಚರಿತ್ರೆ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಭಾರತದ ಮಟ್ಟಿಗೆ ಬ್ಯಾಡ್ಮಿಂಟನ್ ಆಟ ಅಂದರೆ ಬೆಂಗಳೂರಿನವರೇ ಆದ ಪ್ರಕಾಶ್ ಪಡುಕೋಣೆ ಬಿಟ್ಟು ಮಾತಾಡಲು ಸಾಧ್ಯವೇ ಇಲ್ಲ. ಪ್ರಪಂಚದ ಅತಿ ಪ್ರತಿಷ್ಠಿತ ಪಂದ್ಯವಾದ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಗೆಲ್ಲುವುದ್ದಕ್ಕೆ ಮುನ್ನ ಏಳು ವರ್ಷ ರಾಷ್ಟ್ರೀಯ ಮಟ್ಟದ ಶ್ರೇಷ್ಠ ಆಟಗಾರ ಎಂಬ ಬಿರುದನ್ನು ಗೆಲ್ಲುತ್ತಾ ಬಂದು ಭಾರತದ ಅಗ್ರ ಬ್ಯಾಡ್ಮಿಂಟನ್ ಪಟುವಾಗಿ ಹೆಸರು ಮಾಡಿದ್ದರು.

ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಿ ಹಲವು ಕಿರಿಯರನ್ನು ಕೋಚ್ ಮಾಡಿ ಸಜ್ಜುಗೊಳಿಸುತ್ತಿದ್ದಾರೆ.

____________________________________________________

ಬೆಂಗಳೂರಿನ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಲಂಡನ್ ಒಲಿಂಪಿಕ್ಸ್‌ಗೆ ಹೊರಟಿದ್ದಾಳೆ. ಈ ಕೊಡಗಿನ ಹುಡುಗಿ ಬ್ಯಾಡ್ಮಿಂಟನ್ ಆಡುವುದಕ್ಕೆ ಮೊದಲು ದೊಡ್ಡ ಅಥ್ಲೆಟ್ ಆಗುವ ಪ್ರತಿಭೆ ತೋರಿದ್ದಳಂತೆ. ಆದರೆ ನೃಪತುಂಗ ರಸ್ತೆಯ ಯವನಿಕಾದಲ್ಲಿ ಬ್ಯಾಡ್ಮಿಂಟನ್ ಕಲಿಯಲು ಮತ್ತು ಆಡಲು ಆಕೆಗೆ ಸಿಕ್ಕ ಪ್ರೋತ್ಸಾಹದಿಂದ ಇಂದು ಭಾರತವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬಂದಿದ್ದಾಳೆ.

ಭಾರತದ ಮಟ್ಟಿಗೆ ಬ್ಯಾಡ್ಮಿಂಟನ್ ಆಟ ಅಂದರೆ ಬೆಂಗಳೂರಿನವರೇ ಆದ ಪ್ರಕಾಶ್ ಪಡುಕೋಣೆ ಬಿಟ್ಟು ಮಾತಾಡಲು ಸಾಧ್ಯವೇ ಇಲ್ಲ. ಪ್ರಪಂಚದ ಅತಿ ಪ್ರತಿಷ್ಠಿತ ಪಂದ್ಯವಾದ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಗೆಲ್ಲುವುದ್ದಕ್ಕೆ ಮುನ್ನ ಏಳು ವರ್ಷ ರಾಷ್ಟ್ರೀಯ ಮಟ್ಟದ ಶ್ರೇಷ್ಠ ಆಟಗಾರ ಎಂಬ ಬಿರುದನ್ನು ಗೆಲ್ಲುತ್ತಾ ಬಂದು ಭಾರತದ ಅಗ್ರ ಬ್ಯಾಡ್ಮಿಂಟನ್ ಪಟುವಾಗಿ ಹೆಸರು ಮಾಡಿದ್ದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಿ ಹಲವು ಕಿರಿಯರನ್ನು ಕೋಚ್ ಮಾಡಿ ಸಜ್ಜುಗೊಳಿಸುತ್ತಿದ್ದಾರೆ.

ಆದರೆ ಈ ಟಿಪ್ಪಣಿ ಅವರ ಬಗ್ಗೆಯಲ್ಲ. ದೇವ್ ಸುಕುಮಾರ್ ಎಂಬ ಕ್ರೀಡಾ ವರದಿಗಾರನ ಬಗ್ಗೆ. ಆತನ ಬರಹದಿಂದಲೇ ನನಗೆ ಅಶ್ವಿನಿ ಪೊನ್ನಪ್ಪ ಮತ್ತು ಪ್ರಕಾಶರಂಥ ಆಟಗಾರರ ಬಗ್ಗೆ ಸ್ವಾರಸ್ಯದ ವಿಷಯಗಳು ತಿಳಿದದ್ದು. ದೇವ್ ಮಲಯಾಳಿ. ಕನ್ನಡ ಚೆನ್ನಾಗಿ ಬಲ್ಲ ಬೆಂಗಳೂರಿಗ. ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ದಿನ ನಿತ್ಯದ ಕೆಲಸ ಬೇಸರ ಬಂದಾಗ ಬಿಟ್ಟು ಸ್ವತಂತ್ರವಾಗಿರುವುದನ್ನು ರೂಢಿ ಮಾಡಿಕೊಂಡಿದ್ದಾನೆ.

ಪ್ರಕಾಶ್ ಪಡುಕೋಣೆ ಜೀವನ ಚರಿತ್ರೆಯನ್ನು ಬರೆದಿರುವ ದೇವ್ ಆ ಕೆಲಸಕ್ಕೆ ಎರಡು ವರ್ಷ ಮೀಸಲಿಟ್ಟಿದ್ದ. ಕ್ರೀಡೆಯನ್ನು ಎಷ್ಟೇ ಪ್ರೀತಿಸಿದರೂ ಇಂಥ (ದೈನಿಕ ಪತ್ರಿಕಾ ದೃಷ್ಟಿಯಲ್ಲಿ) ದೀರ್ಘಾವಧಿ ಎನಿಸುವ ಸಾಹಸಕ್ಕೆ ನಮ್ಮ ಪತ್ರಕರ್ತ ಸಹೋದ್ಯೋಗಿಗಳು ಕೈ ಹಾಕುವುದು ಅಪರೂಪ. ಡಸ್ಟಿ ಟ್ರೇಲ್ಸ್ ಎಂಬ ಚಾರಣದಂಥ ಕ್ರೀಡೆಗಳಲ್ಲಿನ ಆಗು ಹೋಗುಗಳನ್ನು ದಾಖಲಿಸುವ ಮಾಸ ಪತ್ರಿಕೆಯನ್ನು ದೇವ್ ಈಗ ನಡೆಸುತ್ತಿದ್ದಾನೆ.

ಮೀನುಗಾರಿಕೆ ಓದಿ ನಂತರ ಪತ್ರಿಕೋದ್ಯಮದ ಕೋರ್ಸ್ ಅಭ್ಯಾಸ ಮಾಡಿದ ದೇವ್ ಕ್ರೀಡಾ ಪತ್ರಿಕೋದ್ಯಮವನ್ನು ಇಷ್ಟ ಪಟ್ಟು ಪ್ರಯೋಗ ಮಾಡಲು ಪ್ರಾರಂಭಿಸಿದ. ಕ್ರೀಡಾ ಸಂಸ್ಕೃತಿಯ ಬಗ್ಗೆ ದೇವ್ ಕಾಳಜಿಯಿಂದ ಚಿಂತಿಸುತ್ತಿರುತ್ತಾನೆ. ಕ್ರಿಕೆಟ್ ಹುಚ್ಚು ಹಿಡಿದು ಬೇರೆಲ್ಲ ಆಟಗಳನ್ನು ನಿರ್ಲಕ್ಷ್ಯ ಮಾಡುತ್ತಿರುವ ನಮ್ಮ ಜನರ ಮನೋಭಾವವನ್ನು ಗಮನಿಸಿ ಬೇಜಾರಾಗುತ್ತಿದ್ದ. ಆದರೆ ಈ ಖಿನ್ನತೆಯನ್ನು ಇಂದು ಕ್ರಿಯಾಶೀಲವಾಗಿ ಮೆಟ್ಟಿ ನಿಂತಿದ್ದಾನೆ.

ತರಬೇತಿ ಕೇಂದ್ರಗಳನ್ನು ಸರ್ಕಾರ ಕಟ್ಟಿಸಬೇಕು, ನಡೆಸಬೇಕು. ಆದರೆ ಅಂಥ ಸೌಕರ್ಯ ಕಲ್ಪಿಸಿ ಅಲ್ಲಿ ಒಳ್ಳೆಯ ಟಾಯ್ಲೆಟ್ ಇಲ್ಲದಿದ್ದರೆ ಹೆಣ್ಣು ಮಕ್ಕಳು ಕೋಚಿಂಗ್‌ಗೆ ಹೋಗುವುದೇ ಸಾಧ್ಯವಿಲ್ಲ ಎಂಬ ಸತ್ಯವನ್ನು ಮೊನ್ನೆ ದೇವ್ ಹೇಳುತ್ತಿದ್ದ.

ದೇವ್ ಬರೆದಿರುವ ಪ್ರಕಾಶ್ ಪಡುಕೋಣೆಯ ಜೀವನ ಚರಿತ್ರೆಯ ಹೆಸರು `ಟಚ್ ಪ್ಲೇ~. ಇದರ ಸಂಶೋಧನೆಗೆ  ಭಾರತದ ಹಲವು ನಗರಗಳನ್ನಲ್ಲದೆ ಇಂಡೋನೇಷ್ಯಾ ಕೂಡ ಸುತ್ತಿ ಬಂದ ಈತ ಕ್ರೀಡೆಯ ಬಗ್ಗೆ ಅಪರೂಪದ ಆತ್ಮೀಯತೆಯಿಂದ ಬರೆಯಬಲ್ಲ. ಕ್ರೀಡಾ ಪತ್ರಿಕೋದ್ಯಮ ಸಿನಿಮಾ ಮತ್ತು ಪೇಜ್ 3 ಪತ್ರಿಕೋದ್ಯಮದಂತೆಯೇ ಆಗುತ್ತಿರುವ ಈ ಯುಗದಲ್ಲಿ ದೇವ್‌ನಂಥವರ ಕೆಲಸ ಎಷ್ಟು ಅಮೂಲ್ಯ ಎಂದು ಬೇರೆ ಹೇಳಬೇಕಾಗಿಲ್ಲ.

ದೀಪಿಕಾ ಪಡುಕೋಣೆ ಇಂದು ಮುಂಬೈಯಲ್ಲಿ ತುಂಬಾ ಗ್ಲಾಮರಸ್ ನಟಿಯಾಗಿ ಬೆಳೆದು ಹೆಸರು ಮಾಡಿರುವ ಬೆಂಗಳೂರಿನ ಹುಡುಗಿ. ಆಕೆ ಅಪ್ಪ ಪ್ರಕಾಶ್‌ರಂತೆ ಏಕೆ ಬ್ಯಾಡ್ಮಿಂಟನ್ ಆಟದಲ್ಲಿ ಮಿಂಚಲಿಲ್ಲ ಎಂದು ದೇವ್ ಪುಸ್ತಕದಲ್ಲಿ ಮೊನ್ನೆ ಓದಿದೆ. ಆಕೆ ಚಿಕ್ಕಂದಿನಲ್ಲಿ ಆಡಲು ಪ್ರಾರಂಭಿಸಿದಾಗ ಎಲ್ಲರೂ ತಂದೆಗೆ ಹೋಲಿಸುತ್ತಿದ್ದರಂತೆ.

ತಂದೆಯಷ್ಟು ಕಷ್ಟ ಪಡದ, ಅಷ್ಟು ಪ್ರತಿಭೆಯೂ ಇಲ್ಲದ ಆಟಗಾರ್ತಿ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರಂತೆ. ತಾಯಿ ಉಜ್ಜಲ ಮಗಳನ್ನು ತರಬೇತಿಗೆ ಕರೆದುಕೊಂಡು ಹೋದರೆ, `ನೋಡಿ ಸೌಕರ್ಯ ಇಷ್ಟೆಲ್ಲಾ ಇದ್ದೂ ಇವಳು ಅಷ್ಟೇನೂ ಚೆನ್ನಾಗಿ ತಯಾರಾಗುತ್ತಿಲ್ಲ~ ಎಂದು ಅಲ್ಲಿದ್ದ ಇತರ ಅಪ್ಪ ಅಮ್ಮಂದಿರು ಮಾತಾಡಿಕೊಳ್ಳುತ್ತಿದ್ದರಂತೆ.
 
ಇದು ಯಾಕೋ ಸರಿಬರುತ್ತಿಲ್ಲ ಎಂದು ಅಮ್ಮ ಉಜ್ಜಲ ಬ್ಯಾಡ್ಮಿಂಟನ್ ಕೋರ್ಟ್‌ಗೆ ಮಗಳನ್ನು ಬಿಟ್ಟು ಹೋಗುತ್ತಿದ್ದರಂತೆ. `ಅಪ್ಪ ಅಮ್ಮ ಎಷ್ಟು ಬೇಜವಾಬ್ದಾರಿ ನೋಡಿ. ಮಗಳ ಆಟದ ಬೆಳವಣಿಗೆಗೆ ಸಮಯ ಕೊಡುತ್ತಿಲ್ಲ~ ಎಂದು ಹೇಳಲು ಶುರು ಮಾಡಿದರಂತೆ.

ಈ ನಡುವೆ ದೀಪಿಕಾ ಮಾಡೆಲಿಂಗ್ ಮಾಡುವ ಆಸೆ ತೋರುತ್ತಿದ್ದಳಂತೆ. ಪ್ರಕಾಶ್ ಯಾವುದನ್ನೂ ವಿರೋಧಿಸುವ, ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಸ್ವಭಾವದವರಲ್ಲ. ಆದರೆ ದೀಪಿಕಾಳ ಆಸೆಯನ್ನು ಮನ್ನಿಸಿ ಇಂಬು ಕೊಟ್ಟವರು ಅಮ್ಮ ಉಜ್ಜಲ.
ಮಗಳನ್ನು ಫ್ಯಾಶನ್ ಶೋಗಳಿಗೆ ಕರೆದುಕೊಂಡು ಹೋಗುತ್ತಿದ್ದರಂತೆ.

ಅಪ್ಪನಿಗೆ ಹೋಲಿಸುವುದನ್ನು ಜನ ನಿಲ್ಲಿಸದಿದ್ದಾಗ ಬ್ಯಾಡ್ಮಿಂಟನ್ ಬೇಡವೇ ಬೇಡ ಎಂದು ನಿರ್ಧರಿಸಿ ದೀಪಿಕಾ ಗ್ಲಾಮರ್ ಜಗತ್ತಿನ ಕಡೆಗೆ ನಡೆದುಬಿಟ್ಟಳು. (ಪಡುಕೋಣೆ ಕುಟುಂಬದ ಮನೆ ಮಾತು ಕೊಂಕಣಿ. ಆಕೆಯ ಕನ್ನಡದ ನಂಟು ಅವಳು ಮುಂಬೈಗೆ ಹೋದಮೇಲೂ ಗಟ್ಟಿಯಾಗಿದೆ. ಟಿವಿ ಕಾರ್ಯಕ್ರಮವೊಂದರಲ್ಲಿ ಅಭಿಷೇಕ್ ಬಚ್ಚನ್‌ಗೆ ಅವಳು ಕನ್ನಡ ಹೇಳಿಕೊಟ್ಟಿದ್ದನ್ನು ನೀವು ನೋಡಿರಬಹುದು. ಆ ವಿಡಿಯೋ `ಯು ಟ್ಯೂಬ್~ನಲ್ಲಿ ನೋಡಬಹುದು).

ಅದಿರಲಿ. ಪ್ರಕಾಶ್ ಪಡುಕೋಣೆ ಅವರ ಜೀವನ ಚರಿತ್ರೆಯನ್ನು ದೇವ್ ಬರೆದು ತನ್ನ ದುಡ್ಡಿನಲ್ಲೆೀ ಪ್ರಕಟಿಸಿಕೊಂಡಿದ್ದ. ಈಗ ನಿಯೋಗಿ ಎಂಬ ದೊಡ್ಡ ಪ್ರಮಾಣದ ದೆಹಲಿಯ ಪ್ರಕಾಶಕರು ಈ ಪುಸ್ತಕವನ್ನು ಪುನರ್ ಮುದ್ರಣ ಮಾಡುತ್ತಿದ್ದಾರೆ. ಬೆಂಗಳೂರಿನ ಪತ್ರಕರ್ತನ ಪುಸ್ತಕ ಭಾರತದಾದ್ಯಂತ ವಿತರಣೆಯಾಗುವ ಸಂತಸದಲ್ಲಿ ಈ ಟಿಪ್ಪಣಿ.

ಬೆಂಗಳೂರಿನಲ್ಲಿ ವೀಗನ್ ಶಿಬಿರ
ಸ್ವಲ್ಪ ಸಮಯದ ಹಿಂದೆ ನಾನು ವೀಗನ್ ಆಹಾರದ ಬಗ್ಗೆ ಬರೆದಿದ್ದೆ. ವೀಗನ್ ಅಂದರೆ ಪ್ರಾಣಿ ಮೂಲದ ಯಾವುದೇ ಆಹಾರವನ್ನೂ ತಿನ್ನದಿರುವ ಪದ್ಧತಿ. ಮೊಟ್ಟೆ ಮಾಂಸವಲ್ಲದೆ ಜೇನು, ಹಾಲು, ಬೆಣ್ಣೆ, ಚೀಜ್, ಪನೀರ್ ಇಂಥ ಎಲ್ಲ ಹೈನುಗಾರಿಕಾ ಆಹಾರವನ್ನೂ ವರ್ಜ್ಯ ಮಾಡುವುದು.
 
ಆ ಪದ್ಧತಿಯನ್ನು ಬಳಸಿ ಡಾ. ನಂದಿತಾ ಷಾ ಹಲವು ವ್ಯಾಧಿಗಳನ್ನು ಗುಣ ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಅಂಕಣದಲ್ಲಿ ಅದರ ಉಲ್ಲೆೀಖ ನೋಡಿ `ಪ್ರಜಾವಾಣಿ~ಯ ಹಲವು ಓದುಗರು ಅವರನ್ನು ಸಂಪರ್ಕಿಸಿದ್ದರಂತೆ. ಜುಲೈ 14 ರಂದು ನಂದಿತಾ ಷಾ ಬೆಂಗಳೂರಿನಲ್ಲಿ ಇರುತ್ತಾರೆ.
 
ಒಂದು ದಿನದ ಕಾರ್ಯಾಗಾರವನ್ನು ಬೆಳ್ಳಂದೂರಿನ ಅಪಾರ್ಟ್‌ಮೆಂಟ್ ಒಂದರ ಕ್ಲಬ್ ಹೌಸ್‌ನಲ್ಲಿ ನಡೆಸಲು ತಯಾರಾಗುತ್ತಿದ್ದಾರೆ. ಶುಲ್ಕ ತಲೆಗೆ ರೂ 1,000. ವೀಗನ್ ಆಹಾರ ಮತ್ತು ರೋಗ ನಿವಾರಣೆಯ ಬಗ್ಗೆ ಈ ಕಾರ್ಯಾಗಾರದಲ್ಲಿ ಮಾತಾಡುತ್ತಾರೆ.

ಆಸಕ್ತಿ ಇದ್ದಲ್ಲಿ ಈ ವಿಳಾಸಕ್ಕೆ ಇಮೇಲ್ ಮಾಡಿ: seminars@sharan-india.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT