ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ವಾಯು ಮಾಲಿನ್ಯ...

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸಂಶೋಧನೆ

ಬೆಂಗಳೂರಿನ ವಾಯು ಮಾಲಿನ್ಯದ ಕತೆ ಎಲ್ಲರಿಗೂ ತಿಳಿದಿರುವ ವಿಷಯ. ಈ ಮಹಾನಗರಿಯಲ್ಲಿ ಕೆಲವು ಗಂಟೆಗಳ ಕಾಲ ರಸ್ತೆಯಲ್ಲಿ ಕಳೆದರೆ ಮುಖದ ಮೇಲೆ ಕಪ್ಪು ಕಣಗಳ ಒಂದು ಪದರ ಕೂತಿರುತ್ತದೆ ಎಂಬುದು ನಮಗೆಲ್ಲ ಅನುಭವಕ್ಕೆ ಬಂದಿರುವ ಸಂಗತಿ. ಇತ್ತೀಚಿಗೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ನಮ್ಮ ನೇರ ಅನುಭವಕ್ಕೆ ಬಾರದ ಕೆಲವು ಸಂಗತಿಗಳು ಹೊರಬಂದಿವೆ.

ಮೊದಲನೆಯದಾಗಿ, ಪ್ರತಿ ರಾತ್ರಿ, ನೆಲಕ್ಕೆ ಹತ್ತಿರದಲ್ಲಿ ಇಂಗಾಲದ ಡೈ ಆಕ್ಸೈಡ್ ಶೇಖರವಾಗುತ್ತದೆ; ಬೆಂಗಳೂರಿನ ಭೂಮಿಗೆ ಒಂದು ಹೊದಿಕೆ ಹೊದ್ದಿಸಿದಂತೆ. ಎರಡನೆಯದಾಗಿ, ಬೇಸಿಗೆಯಲ್ಲಿ ಮಳೆಗಾಲಕ್ಕಿಂತ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಶೇಖರವಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ದಿನದ ವಿವಿಧ ಸಮಯಗಳಲ್ಲಿ ಬೆಂಗಳೂರಿನ ವಾಯು ಮಾಲಿನ್ಯ ಮಟ್ಟವನ್ನು ಗಮನಿಸಿದಾಗ ಈ ವಿಷಯಗಳು ಬೆಳಕಿಗೆ ಬಂದವು.

ಮಾನವನ ಚಟುವಟಿಕೆಗಳು ಭೂಮಿಯ ಮೇಲೆ ದೊಡ್ಡ ಪರಿಣಾಮ ಬೀರಿರುವುದು ಮತ್ತು ಅದರಿಂದ ಆಗುತ್ತಿರುವ ಹವಾಮಾನ ಬದಲಾವಣೆಗಳ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ, ಈ ಬದಲಾವಣೆಗಳು ಹೇಗೆ ಆಗುತ್ತಿವೆ ಮತ್ತು ಅವನ್ನು ಹೇಗೆ ತಡೆಗಟ್ಟಬಹುದು ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಇದಕ್ಕೆ ಕಾರಣ ಅವುಗಳಲ್ಲಿರುವ ಸೂಕ್ಷ್ಮತೆಗಳು. ಬೆಂಗಳೂರು ಒಂದು ನಗರದಲ್ಲೇ, ದಿನದ ಬೇರೆ ಬೇರೆ ಸಮಯಗಳ ಮತ್ತು ವರ್ಷದ ವಿವಿಧ ಕಾಲಗಳ ವಾಯು ಮಾಲಿನ್ಯ ಪ್ರಮಾಣದಲ್ಲಿ ಇಷ್ಟೊಂದು ಬದಲಾವಣೆಗಳಿದ್ದರೆ, ಇಡೀ ಪ್ರಪಂಚದ ಮಟ್ಟದಲ್ಲಿ ಇರುವ ಸೂಕ್ಷ್ಮ ವಿಚಾರಗಳು ಎನೇನಿರಬಹುದು?

ಭಾರತೀಯ ವಿಜ್ಞಾನ ಸಂಸ್ಥೆಯ, ಸೆಂಟರ್ ಫಾರ್ ಅರ್ಥ್ ಸೈನ್ಸಸ್ ಮತ್ತು ಸೆಂಟರ್ ಫಾರ್ ಅಟ್ಮಾಸ್ಫೆರಿಕ್ ಅಂಡ್ ಒಶಿಯಾನಿಕ್ ಸೈನ್ಸಸ್‌ನ ಪ್ರೊಸೆಂಜಿತ್ ಸೆನ್ ಮತ್ತು ತನಿಯ ಗುಹಾ, ಮೂರು ವರ್ಷಗಳ ಕಾಲ ಬೆಂಗಳೂರಿನ ವಾಯುಮಂಡಲದಲ್ಲಿನ ಇಂಗಾಲದ ಡೈ ಆಕ್ಸೈಡ್, ಮತ್ತು ಇಂಗಾಲದ ಹಲವು ಐಸೋಟೋಪ್‌ಗಳ ಪ್ರಮಾಣವನ್ನು ಅಭ್ಯಸಿಸಿದರು. ಈ ಅಧ್ಯಯನದಿಂದ, ದೈನಂದಿನ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ನಗರದ ಪ್ರತಿ ಭಾಗದಲ್ಲೂ ಬೇರೆ ಬೇರೆ ಇರುತ್ತದೆ ಎಂಬ ಅಂಶ ತಿಳಿಯಿತು.

“ಜನದಟ್ಟಣೆಯ ನಗರದ ಭಾಗಗಳಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಬಹಳ ಜಾಸ್ತಿ. ಆದರೆ ಇದಕ್ಕೆ ವಾಹನಗಳ ಹೊಗೆಯೊಂದೆ ಕಾರಣವಲ್ಲ. ವಾಯು ಮಂಡಲದಲ್ಲಿ ನಡೆಯುವ ಕೆಲವು ಪ್ರಕ್ರಿಯೆಗಳಿಂದ ದೂರ ಪ್ರದೇಶಗಳ ಇಂಗಾಲದ ಡೈ ಆಕ್ಸೈಡ್ ಕೂಡ ನಗರ ಪ್ರದೇಶಗಳ ಮೇಲೆ ಬಂದು ಶೇಖರವಾಗಬಹುದು”, ಎನ್ನುತ್ತಾರೆ ಡಾ. ಪ್ರೊಸೆಂಜಿತ್ ಘೋಷ್. “ಬೆಂಗಳೂರು ನಗರದಲ್ಲಿನ ಇಂಗಾಲದ ಡೈ ಆಕ್ಸೈಡ್ ಪ್ರಮಾಣದಲ್ಲಿರುವ ವ್ಯತ್ಯಾಸಗಳನ್ನು ಗಮನಿಸಿ, ಇಂಗಾಲದ ಡೈ ಆಕ್ಸೈಡ್‌ನ ಅಣುಗಳು ಎಲ್ಲಿಂದ ಬಂದವು ಎಂಬುದನ್ನು ಹುಡುಕುವುದೇ ನಮ್ಮ ಉದ್ದೇಶ”.

ಸಂಶೋಧಕರು ದಿನ ಬಿಟ್ಟು ದಿನ, ದಿನದ ಎರಡು ಸಮಯಗಳಲ್ಲಿ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣವನ್ನು ಅಳತೆ ಮಾಡಿದರು. ಅಲ್ಲದೆ ಮಾಸಿಕ ಸರಾಸರಿ ಪ್ರಮಾಣಕ್ಕಾಗಿ, ತಿಂಗಳಲ್ಲಿ ನಾಲ್ಕೈದು ದಿನಗಳ ಪ್ರಮಾಣವನ್ನೂ ಕೂಡ ಅಳತೆ ಮಾಡಿದರು.

ಈ ರೀತಿ ಮೂರು ವರ್ಷಗಳ ಕಾಲ ಅಳತೆ ಮಾಡಿದ ಮೇಲೆ, ಬೆಂಗಳೂರಿನ ವಾಯು ಮಾಲಿನ್ಯದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಕಂಡುಬಂದವು. ಪ್ರತಿ ರಾತ್ರಿ ಬೆಂಗಳೂರಿನ ನೆಲಕ್ಕೆ ಇಂಗಾಲದ ಡೈ ಆಕ್ಸೈಡ್‌ನ ಹೊದಿಕೆ ಬರುವುದರಿಂದ, ಮುಂಜಾನೆಯ ಸಮಯದಲ್ಲಿ ಇಂಗಾಲ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿರುತ್ತದೆ. ಮಾಸಿಕ ಇಂಗಾಲದ ಡೈ ಆಕ್ಸೈಡ್ ಪ್ರಮಾಣದಲ್ಲೂ ಸಾಕಷ್ಟು ವ್ಯತ್ಯಾಸಗಳಿರುವುದು ಕೂಡ ಬೆಳಕಿಗೆ ಬಂದಿತು.

ಇಂಗಾಲದ ಡೈ ಆಕ್ಸೈಡ್‌ನ ಅಣುಗಳ ಮೂಲ ಹುಡುಕುವುದು ಸ್ವಲ್ಪ ಕಷ್ಟ. ಪ್ರೊಸೆಂಜಿತ್ ಘೋಷ್ ಮತ್ತು ತನಿಯ ಗುಹಾ ಅಧ್ಯಯನ ಮಾಡಿದ ಸಮಯದಲ್ಲಿ, ಕಟ್ಟಿಗೆ, ಬೆರಣಿ, ಪೆಟ್ರೋಲ್, ಡೀಸೆಲ್‌ನಂತಹ ಇಂಧನಗಳಿಂದಲೇ ಹೆಚ್ಚಿನ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಹೊರಸೂಸಲ್ಪಟ್ಟಿದೆ ಎಂಬುದು ಸಾಬೀತಾಯಿತು.

ಹವಾಮಾನ ಬದಲಾವಣೆಯಂತಹ ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸಲು ಈ ರೀತಿಯ ಹಲವು ಅಧ್ಯಯನಗಳು ಅವಶ್ಯ. ಆದರೆ, ಡಾ.ಪ್ರೊಸೆಂಜಿತ್ ಘೋಷ್ ಹೇಳುವಂತೆ, ನಮ್ಮ ದೇಶದ ಪರಿಸ್ಥಿತಿಯಲ್ಲಿ ಇದು ಕಷ್ಟ ಸಾಧ್ಯ. “ಈ ಅಧ್ಯಯನಕ್ಕೆ ನಾವು  ಬಳಸಿದ ಉಪಕರಣಗಳ ಬೆಲೆ  ₹  3 ಕೋಟಿಯಷ್ಟಾಗುತ್ತದೆ. ಇಂತಹ ಉಪಕರಣಗಳಿಲ್ಲದೆ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಅಧ್ಯಯನಗಳನ್ನು ನಡೆಸುವುದು ಸಾಧ್ಯವಿಲ್ಲ. ಆದ್ದರಿಂದಲೇ, ನಮ್ಮ ಕಾಲೇಜ್ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪರಿಸರ ಮಾಲಿನ್ಯದ ಬಗ್ಗೆ ತೀರಾ ಸರಳ ವಿಚಾರಗಳನ್ನು ಮಾತ್ರ ಹೇಳಿಕೊಡಲಾಗುತ್ತದೆ”.

ಆದರೆ, ಇದು ಜಯಿಸಲಾಗದ ಸವಾಲೇನಲ್ಲ. ಡಾ. ಪ್ರೊಸೆಂಜಿತ್ ಘೋಷ್ ಅವರೇ ಹೇಳುವಂತೆ, “ಹವಾಮಾನ ಬದಲಾವಣೆ ಮೇಲಿನ ಅಂತರರಾಷ್ಟ್ರೀಯ ತಜ್ಞರ ತಂಡ (ಇಂಟರ್ನ್ಯಾಷನಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್), ಪರಿಸರ ಮಾಲಿನ್ಯ ಅಧ್ಯಯನವನ್ನು ಸಾಮಾಜಿಕವಾಗಿ ಪ್ರಸ್ತುತ ಮಾಡುವಲ್ಲಿ ಸಫಲವಾಯಿತು. ಇದರಿಂದ, ಕಲಿಯಲು ವಿಶ್ವವಿದ್ಯಾನಿಲಯಗಳ ಹೊರಗೂ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗಿದೆ.

ಉದಾಹರಣೆಗೆ, ಭಾರತೀಯ ವಿಜ್ಞಾನ ಸಂಸ್ಥೆಯ ದಿವೆಚ ಹವಾಮಾನ ಬದಲಾವಣೆ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಾಗಾರಗಳನ್ನು ಆಯೋಜಿಸುತ್ತೇವೆ. ಇನ್ನೂ ಹೆಚ್ಚು ಸಂಪನ್ಮೂಲಗಳು ದೊರೆತಲ್ಲಿ, ನಾವು ಉಸಿರಾಡುವ ಗಾಳಿಯ ಗುಣಮಟ್ಟದ ಬಗ್ಗೆ ಹೆಚ್ಚಿಗೆ ಅಧ್ಯಯನ ನಡೆಸಬಹುದು”.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT