ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಇಸ್ರೇಲ್ ಕಾನ್ಸುಲೆಟ್

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಜೆರುಸಲೇಂ (ಪಿಟಿಐ): ಉಭಯ ರಾಷ್ಟ್ರಗಳ ಮಧ್ಯೆ  ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತವು ಇಸ್ರೇಲ್‌ಗೆ ಬೆಂಗಳೂರಿನಲ್ಲಿ ತನ್ನ ಕಾನ್ಸುಲೆಟ್ ಕಚೇರಿ ಆರಂಭಿಸಲು ಅನುಮತಿ ನೀಡಿದೆ.

ಭಾರತದ ಈ ನಿರ್ಧಾರಕ್ಕಾಗಿ ಇಲ್ಲಿಗೆ ಎರಡು ದಿನಗಳ ಭೇಟಿ ನೀಡಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ ಇಸ್ರೇಲ್ ವಿದೇಶಾಂಗ ಸಚಿವ ಆವಿಗ್ದಾರ್ ಲೀಬರ್‌ಮನ್, ಇದರಿಂದ ಎರಡೂ ದೇಶಗಳ ವ್ಯಾಪಾರ ಬಾಂಧವ್ಯ ಇನ್ನಷ್ಟು ವೃದ್ಧಿಸುವುದು ಎಂದು     ಹೇಳಿದರು.

ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಬೆಂಬಲ: ಭಾರತವು ಜಗತ್ತಿನ `ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರ~ ಎಂದು ಬಣ್ಣಿಸಿರುವ ಇಸ್ರೇಲ್, `ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕೆಂಬುದು ತನ್ನ ಬಯಕೆಯಾಗಿದೆ~ ಎಂದು ಬೆಂಬಲ ಸೂಚಿಸಿದೆ.

ಕಳೆದ ಒಂದು ದಶಕದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ವಿದೇಶಾಂಗ ಸಚಿವರಾಗಿರುವ ಎಸ್.ಎಂ. ಕೃಷ್ಣ ಅವರನ್ನು ಸೋಮವಾರ ರಾತ್ರಿ ಬರಮಾಡಿಕೊಂಡ ಇಸ್ರೇಲ್ ಅಧ್ಯಕ್ಷ ಸೈಮನ್ ಪೆರೆಸ್, ತಮ್ಮ ದೇಶವು ಭಾರತವನ್ನು ಹೆಚ್ಚು  ಆಸಕ್ತಿಯಿಂದ ಗಮನಿಸುತ್ತಿದೆ ಎಂದು ತಿಳಿಸಿದರು.

`ನಮಗೆ ಎಲ್ಲದಕ್ಕೂ ಮುನ್ನ ಭಾರತ ಒಂದು ಸಂಸ್ಕೃತಿ. ನಂತರ ಭೂಮಿಯ ಮೇಲಿರುವ ಮಹಾನ್ ಪ್ರಜಾಸತ್ತೆ. ಆನಂತರ ಸ್ವಾತಂತ್ರ್ಯದಲ್ಲಿ ಬಡವಾಗದೆ ಬಡತನ ನಿರ್ಮೂಲನೆಯಲ್ಲಿ ನಂಬಲು ಅಸಾಧ್ಯವಾದ ಸಾಧನೆ ಮಾಡಿರುವ ದೇಶ~ ಎಂದು ಅವರು ಹೇಳಿದರು. ಭಾರತೀಯ ಸ್ವಾತಂತ್ರ್ಯ ಹೋರಾಟದ ಪಿತಮಹಾ ಮಹಾತ್ಮ ಗಾಂಧಿ ಅವರನ್ನು `ಪ್ರವಾದಿ~ಎಂದು ಮತ್ತು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು `ರಾಜ~ ಎಂದು ಅವರು ಬಣ್ಣಿಸಿದರು. `ಭಾರತ ಮತ್ತು ಚೀನಾ ಇಲ್ಲದಿದ್ದರೆ ವಿಶ್ವವನ್ನು ಹಸಿವು ಆಳುವುದು~ ಎಂದೂ ಅವರು ನುಡಿದರು.

`ವಿಶ್ವದಲ್ಲಿ ಅನೇಕ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದನೆಯನ್ನು ಹರಡುವ ಮೂಲಕ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಮ್ಮ ದೇಶವು ಮಾನವನ ಮೆದುಳಿನ ಸಂಶೋಧನೆಯನ್ನು ಮೊದಲ ಆದ್ಯತೆಯಲ್ಲಿ ಕೈಗೆತ್ತಿಕೊಳ್ಳುವುದು~ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನಂತರ ಮಾತನಾಡಿದ ಕೃಷ್ಣ, ಎರಡೂ ದೇಶಗಳ ಸಂಬಂಧ ಸುಧಾರಣೆಯಲ್ಲಿ ಮಹಾನ್ ಮುತ್ಸದ್ದಿ ಪೆರೆಸ್ ಅವರ ಕೊಡುಗೆಯನ್ನು ಶ್ಲಾಘಿಸಿದರು.

`ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಇಸ್ರೇಲ್ ರಾಷ್ಟ್ರವು ಭಾರತಕ್ಕೆ ಸ್ಫೂರ್ತಿಯಾಗಿದೆ~ ಎಂದೂ ತಿಳಿಸಿದರು. ಸಚಿವರು      ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನೂ ಭೇಟಿಯಾಗಿ ದ್ವಿಪಕ್ಷೀಯ ಬಾಂಧವ್ಯದ ಕುರಿತು ಸಮಾಲೋಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT