ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಪೈಲ್ವಾನರ ಬೆಡಗು

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಸರಾ ಬಂದಿತೆಂದರೆ ಹಳೆ ಮೈಸೂರು ಪ್ರದೇಶದಲ್ಲಿ ಕುಸ್ತಿ ಚಟುವಟಿಕೆ ರಂಗು ಪಡೆದುಕೊಳ್ಳುತ್ತದೆ. ಬೆಂಗಳೂರು ನಗರ ಕೂಡಾ ಇದರಿಂದ ಹೊರತೇನಲ್ಲ. ಆದರೆ ದಸರಾ ಸಂದರ್ಭದಲ್ಲಿ ಮೈಸೂರು ನಗರದಲ್ಲಿರುವಷ್ಟು ಕುಸ್ತಿ ಚಟುವಟಿಕೆಗಳು ಬೆಂಗಳೂರಿನಲ್ಲಿರುವುದಿಲ್ಲ. ಆದರೆ ಬೆಂಗಳೂರು ನಗರದಲ್ಲಿನ ಕುಸ್ತಿ ಶ್ರೀಮಂತಿಕೆ ಅನನ್ಯವಾದುದು.

ಬೆಂಗಳೂರು ಕೆಂಪೇಗೌಡ ಕೂಡಾ ಒಬ್ಬ ಕುಸ್ತಿಪಟುವಾಗಿದ್ದರು ಎಂಬುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಸಾವನದುರ್ಗ ಬೆಟ್ಟದ ಮೇಲೆ ಗರಡಿ ಮನೆಗಳ ಅವಶೇಷಗಳನ್ನು ಇಂದಿಗೂ ಕಾಣಬಹುದು.

ಕ್ರಿ.ಶ. 1680ರ ಸಮಯದಲ್ಲಿ ಬೆಂಗಳೂರಿನಲ್ಲಿ ಕತ್ತಿ ಗೋಪಾಲರಾಜೇ ಅರಸ ಎಂಬುವವರು ಪಾರುಪತ್ತೆದಾರರಾಗಿದ್ದರು. ಇವರ ಮನೆಯಲ್ಲಿ ಹೈದರಾಲಿ ಕೆಲಸದಲ್ಲಿದ್ದ. ಬಿಡುವಿನ ವೇಳೆಯಲ್ಲಿ ಅರಳೇಪೇಟೆಯಲ್ಲಿ ಗರಡಿ ಸಾಧನೆ ಮಾಡುತ್ತಿದ್ದ. ಅವನು ದಳಪತಿಯಾಗಿ ನೇಮಕಗೊಂಡಾಗ ಬೆಂಗಳೂರಿನಲ್ಲಿ ಗರಡಿಯವರನ್ನು ತನ್ನ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದ.

ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಈ ಮುಂಚೆ ಧರ್ಮಾಂಬುಧಿ ಕೆರೆಯಾಗಿತ್ತು. ಕೆರೆ ವಿಶಾಲವಾಗಿದ್ದು ಮೆಟ್ಟಿಲುಗಳಿದ್ದವು. ಕೆರೆಯ ದಂಡೆಗೆ ಅರಳೇಪೇಟೆ, ರಾಣಾಸಿಂಗ್‌ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ, ಕಬ್ಬನ್‌ಪೇಟೆ, ತಿಗಳರ ಪೇಟೆ ಹೀಗೆ ಹಲವಾರು ಪೇಟೆಗಳಿದ್ದವು. ಇಲ್ಲಿ ಗಲ್ಲಿ ಗಲ್ಲಿಗೊಂದು ಗರಡಿ ಮನೆ. ಗರಡಿ ಮನೆಗೆ ಒಬ್ಬ ಯಜಮಾನ. ಹಲವಾರು ಆಸಕ್ತರು ಇಲ್ಲಿ ಸಾಧನೆ ಮಾಡುತ್ತಿದ್ದರು.

ಗರಡಿಗಳಲ್ಲಿ ಕುಸ್ತಿ ಸ್ಪರ್ಧೆಗಳು ಮೇಲಿಂದ ಮೇಲೆ ನಡೆಯುತ್ತಿತ್ತು. ಕುಸ್ತಿ ಸಮಾಜದಲ್ಲಿ ಗೌರವ, ಘನತೆಯ ಸಂಕೇತವಾಗಿತ್ತು. ಧರ್ಮಾಂಬುಧಿ ಕೆರೆ ಮೆಟ್ಟಿಲುಗಳ ಮೇಲೆ ಕುಳಿತು ಆಯಾ ಗರಡಿಯ ಮಲ್ಲರು ಕುಸ್ತಿ ವಿಷಯ ಚರ್ಚಿಸುತ್ತಿದ್ದರು. ಯಾವ ಗರಡಿಯ ಮೇಲೆ ಸ್ಪರ್ಧೆ ಮಾಡಬೇಕು ಹೇಗೆ ತಯಾರಿ ಮಾಡಬೇಕು ಎಂಬುದೇ ಚರ್ಚೆಯ ವಿಷಯ ಆಗಿರುತಿತ್ತು.

ಸಾಮಾನ್ಯವಾಗಿ ಗರಡಿಗಳಲ್ಲಿ ಪೈಲ್ವಾನರಿಗೆ ಮಾಲಿಷ್ ಮಾಡುವುದು ರೂಢಿಯಿತ್ತು. ಎಣ್ಣೆ ಹಾಕಿ ಉಜ್ಜುವುದು, ತಿಕ್ಕುವುದು, ನೀವುವುದು, ಪುಸಲಾವಣೆ ಇದು ಮಾಲಿಷ್ ಮಾಡುತ್ತಿದ್ದ ರೀತಿ. ಇದರಲ್ಲಿ ಅರಳೇಪೇಟೆಯಲ್ಲಿದ್ದ ಕಾಯಂಗಡಿ ಪಾಪಣ್ಣ ಹೆಸರು ಮಾಡಿದ್ದರು. (1910-20ರ ಸಮಯ).

ಅರಳೇಪೇಟೆ ಗರಡಿಯ ಉಸ್ತುವಾರಿಯನ್ನು `ಮಾಂಧಾತ~ ಎನ್ನುವ ಒಬ್ಬ ಪೈಲ್ವಾನ್ ನೋಡಿಕೊಳ್ಳುತ್ತಿದ್ದರು. ಇವರ ಮಿಠಾಯಿ ಅಂಗಡಿ ದೊಡ್ಡಪೇಟೆಯಲ್ಲಿತ್ತು. ಬೆಂಗಳೂರಿನಲ್ಲಿ ಪೂರಿಯನ್ನು ಪ್ರಪ್ರಥಮವಾಗಿ ಪರಿಚಯಿಸಿದವರು ಇವರೇ. ಅರಳೇಪೇಟೆ ಗರಡಿಯಲ್ಲಿ  ತಿಮ್ಮರಾಯಪ್ಪ,  ಕೆಂಪಣ್ಣ ಇನ್ನೂ ಅನೇಕರು ಹೆಸರು ಮಾಡಿದ್ದರು.

1914ರ ದಸರಾ ಹಬ್ಬದ ಸಮಯದಲ್ಲಿ ರಾಜಬಂಧು ಗೋಪಾಲರಾಜೇ ಅರಸ್ ಅವರು ಲಾಲ್‌ಬಾಗಿನ ಆಲ್ಬರ್ಟ್ ವಿಕ್ಟರ್ ಹಾಲ್‌ನಲ್ಲಿ  ಒಂದು ತಿಂಗಳು ದಿನ ಬಿಟ್ಟು ದಿನ ಹೊನಲು ಬೆಳಕಿನ ಕುಸ್ತಿ ಏರ್ಪಡಿಸಿದ್ದರು. ಇದಕ್ಕೆಂದೇ ವಿಶೇಷ ವಿದ್ಯುತ್ ಲೈನ್ ಬಳಸಲಾಗಿತ್ತು.

ಪೇಟೆಗಳು ಒಂದು ಕಡೆಯಾದರೆ ಶಿವಾಜಿನಗರದ ಕಡೆಗಳಲ್ಲಿ ಕೂಡ ಗರಡಿ ಚಟುವಟಿಕೆ ವಿಪುಲವಾಗಿದ್ದು ಅನೇಕ ಪೈಲ್ವಾನರಿದ್ದರು. ಷಹನಾಜ್ ಖಾನ್, ಪೂಲಾರಿ ಸಾಬ್ಜಾನ್, ರೋಟಿ ಸಾಬ್ಜಾನ್, ತೋಡೆವಾಲ್ ಅಹಮ್ಮದ್ ಹುಸೇನ್, ಕಾಶ್ಮೀರಿ ಮೆಹಬೂಬ್ ಇವರೆಲ್ಲ ಕುಸ್ತಿಯಲ್ಲಿ ಪ್ರವೀಣರಾಗಿದ್ದರು.

1904 ರಲ್ಲಿ ವಿಶ್ವವಿಖ್ಯಾತ ಜಟ್ಟಿ `ಯುಜಿಸ್ ಸ್ಯಾಂಡೋ~ ಭಾರತಕ್ಕೆ ಬಂದಿದ್ದ. ಮದ್ರಾಸ್‌ನಲ್ಲಿ ಅವನು, ಅವನ ತಂಡ ಸಾಹಸ ಪ್ರದರ್ಶನ ನಡೆಸಿತ್ತು. ಬೆಂಗಳೂರಿನ ಷಹನಾಜ್ ಖಾನ್ ಯುಜಿನ್ ಸ್ಯಾಂಡೋಗೆ ಸವಾಲ್ ಹಾಕಿ ಅವರ ಕಡೆಯವರನ್ನು ಕುಸ್ತಿಯಲ್ಲಿ ಸೋಲಿಸಿದ್ದ. ಶಿವಾಜಿನಗರದ ಭಾರಿ ಪೈಲ್ವಾನ್ ತೋಡೇವಾಲ್ ಅಹ್ಮದ್ ಹುಸೇನರಿಗೂ ಮೈಸೂರಿನ ಭಾರಿ ಪೈಲ್ವಾನ್ ಕೊಪ್ಪಲು ಬಸವಯ್ಯನವರಿಗೆ ಕುಸ್ತಿ ನಡೆದು ಅಹ್ಮದ್ ಹುಸೇನರ ಕಾಲಿಗೆ ಜಖಂ ಆಗಿತ್ತು.

ತಿಗಳರ ಪೇಟೆಯಲ್ಲಿದ್ದ ಅಣ್ಣಯ್ಯಪ್ಪ ಕುಸ್ತಿ ಪಂದ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದರು. ಬೇರೆ, ಬೇರೆ ರಾಜ್ಯಗಳಿಂದ ಲಾಹೋರ್‌ನಿಂದ ಕೂಡ ಅನೇಕ ಪೈಲ್ವಾನರು ಮೇಲಿಂದ ಮೇಲೆ ಬೆಂಗಳೂರಿಗೆ ಬರುತ್ತಿದ್ದರಂತೆ. ಇಲ್ಲಿ  ಮುನಿನಂಜಪ್ಪ, ಶ್ರೀನಿವಾಸ್ ಇವರೆಲ್ಲ ಹೆಸರು ಮಾಡಿದ್ದರು.

ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಕುಸ್ತಿ ಪಂದ್ಯಗಳು ಸೆಂಟ್ರಲ್ ಕಾಲೇಜಿನ ಮುಂದಿನ ಆವರಣದಲ್ಲಿ ನಡೆಯುತ್ತಿದ್ದವು. ಅನೇಕ ಉತ್ಸಾಹಿ ವಿದ್ಯಾರ್ಥಿಗಳು ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದ  ಕೆ. ಡಿ. ಜಾಧವ್ 40ರ ದಶಕದಲ್ಲಿ ಸೆಂಟ್ರಲ್ ಕಾಲೇಜಿನ ಮುಂದೆ ನಡೆದ ಕುಸ್ತಿಯಲ್ಲಿ ಸ್ಪರ್ಧಿಸಿದ್ದರು.

ಬಸವನಗುಡಿ ನ್ಯಾಷನಲ್ ಕಾಲೇಜ್‌ನಲ್ಲಿ ಕುಸ್ತಿ ಚಟುವಟಿಕೆ ಬಹಳವಾಗೇ ನಡೆಯುತ್ತಿತ್ತು. 1938 ರಲ್ಲಿ ವಿಶ್ವವಿಖ್ಯಾತ ಪೈಲ್ವಾನ್ ಗಾಮ ಈ ಕಾಲೇಜಿಗೆ ಬಂದು ಪುಟ್ಟ ಭಾಷಣ ಮಾಡಿದ್ದ. 1939 ರಲ್ಲಿ ಮತ್ತೊಬ್ಬ ಕುಸ್ತಿ ವಿಖ್ಯಾತ ಹರ್ಬಾಸ್ ಸಿಂಗ್ ಇದೇ ಕಾಲೇಜಿಗೆ ಬಂದು ಭಾಷಣ ಮಾಡಿದ್ದ. ಕುಸ್ತಿ ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದ ಧಾರಾಸಿಂಗ್, ಕಿಂಗ್‌ಕಾಂಗ್ ನಡುವಿನ ಕುಸ್ತಿ ಪ್ರಸಿದ್ಧವಾಗಿದ್ದು ಆಗಿಂದಾಗ್ಗೆ ನಡೆಯುತ್ತಿದ್ದವು. ಜನ ಈ ಕುಸ್ತಿ ನೋಡಲು ಮುಗಿ ಬಿದ್ದು ಸೇರುತ್ತಿದ್ದರು.

ಇನ್ನು ಕುಸ್ತಿ ನಡೆಸುವ ಅಖಾಡಗಳೆಂದರೆ ಕೆಂಪೇಗೌಡ ಬಸ್‌ನಿಲ್ದಾಣ ಆಗುವುದಕ್ಕಿಂತ ಮುಂಚೆ ಒಂದು ಭಾಗದಲ್ಲಿ ಕುಸ್ತಿ ಸ್ಪರ್ಧೆಗಳು ನಡೆಯುತ್ತಿದ್ದವು. ಮಾವಳ್ಳಿ ಕೆರೆ ಮೈದಾನ, ಶಿವಾಜಿನಗರದ ಮೈದಾನ, ಸೆಂಟ್ರಲ್ ಕಾಲೇಜಿನ ಹಿಂಭಾಗ, ಸಂಪಂಗಿಕೆರೆ ಮೈದಾನ (ಕಂಠೀರವ ಕ್ರೀಡಾಂಗಣ), ದೊಡ್ಡಣ್ಣ ಹಾಲ್ (ಸಿಟಿ ಮಾರ್ಕೆಟ್), ಶರೀಫ್ ಗಾರ್ಡನ್ ಇನ್ನೂ ಹಲವಾರು ಕಡೆ ಕುಸ್ತಿ ಪಂದ್ಯಗಳು ನಡೆಯುತ್ತಿದ್ದವು.

ಆ ಕಾಲದಲ್ಲಿ ಕುಸ್ತಿ ಎಂದರೆ ಜನ ಕಿಕ್ಕಿರಿದು ಸೇರುತ್ತಿದ್ದರು. ಬೆಂಗಳೂರಿನಲ್ಲಿ ದಸರಾ ಸಂದರ್ಭದಲ್ಲಷ್ಟೇ ಅಲ್ಲ ವರ್ಷದ ಎಲ್ಲಾ ಋತುಗಳಲ್ಲಿಯೂ ಕುಸ್ತಿ ಕೂಟಗಳು ನಡೆಯುತ್ತಿದ್ದವು.   ಕುಸ್ತಿ ಜನರ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಪೈಲ್ವಾನರು ಜನರ ಹೀರೋಗಳಾಗಿದ್ದರು.(ಲೇಖಕರು ಕರ್ನಾಟಕದಲ್ಲಿ ಕುಸ್ತಿ ಬಗ್ಗೆ ಎರಡು ಕೃತಿಗಳನ್ನು ರಚಿಸಿರುವುದೇ ಅಲ್ಲದೆ, ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದಾರೆ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT