ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಭಾರತ- ಇಂಗ್ಲೆಂಡ್ ಪಂದ್ಯ

Last Updated 31 ಜನವರಿ 2011, 17:35 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಕೋಲ್ಕತ್ತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿಯ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ತಿಳಿಸಿದೆ. ಇದರಿಂದ ಈ ಪಂದ್ಯದ ಆತಿಥ್ಯದ ಕುರಿತ ಅನಿಶ್ಚಿತತೆಗೆ ತೆರೆಬಿದ್ದಿದೆ.

ನಿಗದಿತ ವೇಳಾಪಟ್ಟಿಯಂತೆ ಈ ಪಂದ್ಯ ಕೋಲ್ಕತ್ತದಲ್ಲಿ ನಡೆಯಬೇಕಿತ್ತು. ಆದರೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ನವೀಕರಣ ಕಾಮಗಾರಿ ನಿಗದಿತ ಗಡುವಿನ ಒಳಗಾಗಿ ಪೂರ್ಣಗೊಳ್ಳದ ಕಾರಣ ಐಸಿಸಿಯು ಪಂದ್ಯವನ್ನು ಸ್ಥಳಾಂತರಿಸಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬದಲಿ ತಾಣದ ರೂಪದಲ್ಲಿ ಬೆಂಗಳೂರಿನ ಹೆಸರನ್ನು ಭಾನುವಾರ ಐಸಿಸಿಗೆ ಕಳುಹಿಸಿತ್ತು. ಅದಕ್ಕೆ ಐಸಿಸಿ ಸಮ್ಮತಿ ಸೂಚಿಸಿದೆ. ಆದರೆ ಪಂದ್ಯದ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ. ಫೆಬ್ರುವರಿ 27 ರಂದೇ ನಡೆಯಲಿದೆ.

‘ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯವನ್ನು ಸ್ಥಳಾಂತರಿಸುವ ನಿರ್ಧಾರವನ್ನು ಐಸಿಸಿ ಖಚಿತಪಡಿಸಿದೆ. ಈ ಪಂದ್ಯ ನಿಗದಿತ ವೇಳಾಪಟ್ಟಿಯಂತೆ ಫೆ. 27 ರಂದು ಕೋಲ್ಕತ್ತದಲ್ಲಿ ನಡೆಯಬೇಕಿತ್ತು. ಇದೀಗ ಪಂದ್ಯ ಅದೇ ದಿನಾಂಕದಂದು ಬೆಂಗಳೂರಿನಲ್ಲಿ ನಡೆಯಲಿದೆ’ ಎಂದು ಐಸಿಸಿಯ ಹೇಳಿಕೆ ತಿಳಿಸಿದೆ.

ಬೆಂಗಳೂರು ಸೂಕ್ತ ತಾಣವೆಂದು ಕಂಡುಬಂದ ಬಂದ ಕಾರಣ ಈ ಆಯ್ಕೆ ನಡೆದಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಹರೂನ್ ಲಾರ್ಗಟ್ ಹೇಳಿದರು.

‘ಟೂರ್ನಿಯ ಇತರ ಪಂದ್ಯಗಳು ನಿಗದಿತ ತಾಣದಲ್ಲಿಯೇ ನಡೆಯುವುದನ್ನು ಖಚಿತಪಡಿಸಲು ನಾವು ನಮ್ಮ ಎಲ್ಲ ಪಾಲುದಾರರ ಜೊತೆ ಸೇರಿಕೊಂಡು ಕೆಲಸ ಮಾಡಬೇಕಿದೆ’ ಎಂದು ಅವರು ತಿಳಿಸಿದರು.

ಇತರ ಮೂರು ಪಂದ್ಯಗಳನ್ನು ಕೋಲ್ಕತ್ತದಲ್ಲಿ ನಡೆಯುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಐಸಿಸಿ ಇದೇ ವೇಳೆ ಬಿಸಿಸಿಐಗೆ ಸೂಚಿಸಿದೆ. ದಕ್ಷಿಣ ಆಫ್ರಿಕಾ- ಐರ್ಲೆಂಡ್ (ಮಾರ್ಚ್ 15), ಹಾಲೆಂಡ್- ಐರ್ಲೆಂಡ್ (ಮಾ. 18) ಮತ್ತು ಜಿಂಬಾಬ್ವೆ- ಕೀನ್ಯಾ (ಮಾ. 20) ತಂಡಗಳ ನಡುವಿನ ವಿಶ್ವಕಪ್ ಟೂರ್ನಿಯ ಪಂದ್ಯಗಳು ಈಡನ್ ಗಾರ್ಡರ್ನ್ಸ್‌ನಲ್ಲಿ ನಡೆಯಲಿವೆ.

ಈ ಪಂದ್ಯಗಳನ್ನು ನಡೆಸಲು ನಿಗದಿತ ಅವಧಿಯೊಳಗೆ ಕ್ರೀಡಾಂಗಣದ ನವೀಕರಣ ಕೆಲಸ ಪೂರ್ಣಗೊಳಿಸಬೇಕು ಎಂದು ಐಸಿಸಿ ಹೇಳಿದೆ. ಐಸಿಸಿಯ ತಜ್ಞರ ಸಮಿತಿ ಫೆಬ್ರುವರಿ 7 ರಂದು ಮತ್ತೆ ಕ್ರೀಡಾಂಗಣದ ಪರಿಶೀಲನೆ ನಡೆಸಲಿದೆ.

ಮೂರೂ ಪಂದ್ಯಗಳು ಅನುಮಾನ: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪ್ರಮುಖ ಪಂದ್ಯವನ್ನು ಕಳೆದುಕೊಂಡಿರುವ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಇನ್ನುಳಿದ ಮೂರು ಪಂದ್ಯಗಳ ಆತಿಥ್ಯದ ಹಕ್ಕನ್ನೂ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದೆ.

ಕ್ರೀಡಾಂಗಣದಲ್ಲಿ ಎರಡು ಹೊಸ ಸ್ಟ್ಯಾಂಡ್‌ಗಳ ನವೀಕರಣ ಕೆಲಸ ಪ್ರಗತಿಯಲ್ಲಿದೆ. ಆದರೆ ನಿಗದಿತ ಗಡುವಿನ ಒಳಗಾಗಿ ಈ ಸ್ಟ್ಯಾಂಡ್‌ಗಳ ಮೇಲ್ಛಾವಣಿ ಕೆಲಸ ಪೂರ್ಣಗೊಳ್ಳುವುದು ಅನುಮಾನ.

ಮೇಲ್ಛಾವಣಿ ಕೆಲಸ ಹೊರತುಪಡಿಸಿ ಇತರ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಹೇಳಿದೆ. ಮೇಲ್ಛಾವಣಿಯ ಕಾಮಗಾರಿ ಪೂರ್ಣಗೊಳ್ಳದ ಕಾರಣ ಐಸಿಸಿ ತಜ್ಞರು ಇತರ ಪಂದ್ಯಗಳನ್ನು ನಡೆಸಲು ‘ಗ್ರೀನ್ ಸಿಗ್ನಲ್’ ನೀಡುವುದೇ ಎಂಬುದನ್ನು ಕಾದು ನೋಡಬೇಕು.

‘ಪ್ರಸಕ್ತ ಪರಿಸ್ಥಿತಿಯಲ್ಲಿ ನಾವು ಮೇಲ್ಛಾವಣಿಯ ಕಾಮಗಾರಿಯನ್ನು ಆರಂಭಿಸುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಅದನ್ನು ಆರಂಭಿಸಿದರೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವುದು ಅನುಮಾನ.

ಈ ವಿಷಯವನ್ನು ಫೆ. 7 ರಂದು ಐಸಿಸಿ ತಜ್ಞರ ಸಮಿತಿಗೆ ಮನದಟ್ಟು ಮಾಡಿಕೊಡುವೆವು’ ಎಂದು ಸಿಎಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT