ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಚಳವಳಿ

ಸ್ವಾತಂತ್ರ್ಯದ ತೊರೆಗಳು -1
Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಭಾರತವನ್ನು ಬ್ರಿಟಿಷರಿಂದ ಬಿಡುಗಡೆ ಮಾಡಲು ಬೆಂಗಳೂರನ್ನು ಒಳಗೊಂಡ ಮೈಸೂರು ಸಂಸ್ಥಾನದಲ್ಲಿ ನಡೆದ ಚಳವಳಿ ದೇಶದ ಬೇರೆ ಸ್ಥಳಗಳಿಗಿಂತ ಭಿನ್ನವಾಗಿತ್ತು.

ದೇಸಿ ರಾಜ ಮಹಾರಾಜರು ಆಳ್ವಿಕೆ ನಡೆಸುವ ಪ್ರಾಂತ್ಯಗಳಲ್ಲಿ ಕಾಯ್ದೆ ಉಲ್ಲಂಘಿಸುವ ಚಳವಳಿ ಹೂಡಬಾರದೆಂಬ ಕಾಂಗ್ರೆಸ್ ಸೂಚನೆಯೇ ಇದಕ್ಕೆ ಕಾರಣ. ದೇಶದಾದ್ಯಂತ ಚಳವಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದರೂ ಬೆಂಗಳೂರು ಶಾಂತವಾಗಿತ್ತು.

ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಆಂದೋಲನದ ಮುಂದಾಳತ್ವ ವಹಿಸಿಕೊಂಡ ಮೇಲೆ ರಚನಾತ್ಮಕ ಕಾರ್ಯಕ್ರಮಗಳಿಗೂ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದಾಗ ಖಾದಿ ಪ್ರಚಾರ, ಅಸ್ಪೃಶ್ಯತಾ ನಿವಾರಣೆ, ವಿದ್ಯಾಭ್ಯಾಸ ಕಾರ್ಯಕ್ರಮಗಳಲ್ಲಿ ರಾಷ್ಟ್ರಪ್ರೇಮಿಗಳು ತೊಡಗಿಕೊಂಡರು.

ಇಂಗ್ಲಿಷರ ಕಪಿಮುಷ್ಟಿಯಲ್ಲಿದ್ದರೂ ಮೈಸೂರು ಅರಸರು ಜನಹಿತ ಕಾಯುವಲ್ಲಿ ಮುಂದಿದ್ದರು. ಹತ್ತಾರು ಪ್ರಗತಿಪರ ಕಾರ್ಯಕ್ರಮಗಳ ಮೂಲಕ ಸಮಾಜಮುಖಿಗಳಾಗಿದ್ದ ಅರಸರ ಆಡಳಿತ ಜನ ಸಮುದಾಯದ ಮೆಚ್ಚುಗೆ ಪಡೆದಿತ್ತು.

ಗಾಂಧೀಜಿ 1915ರಲ್ಲಿ ಬೆಂಗಳೂರಿಗೆ ಮೊದಲು ಭೇಟಿ ನೀಡಿದಾಗ ತಮ್ಮ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರವನ್ನು ಅನಾವರಣಗೊಳಿಸಿದ ಸಂದರ್ಭದಲ್ಲಿ ಹಾಗೂ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಜರುಗಿದ ಸಾರ್ವಜನಿಕ ಸಭೆಯ ಭಾಷಣಗಳಲ್ಲಿ ದೇಶ ಪ್ರೇಮ, ಪರಿಶುದ್ಧ ಬದುಕು, ಶಿಕ್ಷಣ, ಖಾದಿ ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ರಾಷ್ಟ್ರೀಯತೆಯ ಚಿತ್ರಣ ಬಿಡಿಸಿಟ್ಟರು.

ರಾಷ್ಟ್ರದಾದ್ಯಂತ ಸದಾ ಸುದ್ದಿಯಲ್ಲಿರುತ್ತಿದ್ದ ಸ್ವದೇಶಿ ಚಳವಳಿ, ಅಸಹಕಾರ ಆಂದೋಲನ, ಕಾನೂನು ಭಂಗ ಚಳವಳಿಗಳು ಬೆಂಗಳೂರಿನಲ್ಲಿ ನಡೆಯಲಿಲ್ಲ. ಅಷ್ಟು ಹೊತ್ತಿಗಾಗಲೇ ಬ್ರಿಟಿಷರು ಬೆಂಗಳೂರಿನಲ್ಲಿ ದಂಡು ಸ್ಥಾಪಿಸಿದ್ದರು. ಕಂಟೋನ್ಮೆಂಟ್ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳವಳಿಯ ಕಾವು 1921-22ರ ಸುಮಾರಿಗೆ ಶುರುವಾಯಿತು.

ಇಪ್ಪತ್ತನೇ ಶತಮಾನದ ಪ್ರಾರಂಭದಿಂದಲೇ ದೇಶದುದ್ದಕ್ಕೂ ಹರಡುತ್ತಿದ್ದ ರಾಜಕೀಯ ಜಾಗೃತಿ ಬೆಂಗಳೂರಿಗರನ್ನು ತಲುಪುವುದು ತಡವಾಗಲಿಲ್ಲ. ಹಲವು ಹಿರಿಯ ಮುಖಂಡರನ್ನು ಬೆಂಗಳೂರಿಗೆ ಆಹ್ವಾನಿಸಲಾಯಿತು. ಸ್ವದೇಶಿ ಚಳವಳಿ, ಖಾದಿ ಪ್ರಚಾರ ಜನರ ಮನದಾಳದಲ್ಲಿ ಮನೆ ಮಾಡಿದವು.

ರಾಷ್ಟ್ರೀಯ ಚಳವಳಿಗೆ ತಮ್ಮನ್ನು ತೊಡಗಿಸಿಕೊಳ್ಳುವವರ ಸಂಖ್ಯೆಯೂ ಮೈಸೂರು ಸಂಸ್ಥಾನದಲ್ಲಿ ಬೆಳೆಯತೊಡಗಿ ಅನೇಕರು ಕಾಂಗ್ರೆಸ್ ಸೇರಿದರು. ಅಧಿವೇಶನ ಮತ್ತಿತರ ಕಾರ್ಯಕ್ರಮಗಳಿಗೆ ಹೋಗಿ ಬರುವವರೂ ಹೆಚ್ಚಾದರು.

ಸ್ವಯಂ ಸೇವಕರು ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ಚಳವಳಿಗೆ ಮೊದಲಿಟ್ಟರು. ಖಾದಿಧಾರಿಗಳು ಎಲ್ಲೆಲ್ಲೂ ಕಾಣಸಿಗತೊಡಗಿದರು. ಖಾದಿ ಪ್ರಚಾರಕ್ಕಾಗಿ ಅನೇಕ ಪ್ರದರ್ಶನಗಳು ಏರ್ಪಾಡಾದವು.

ಖಾದಿ ಉತ್ಪನ್ನಗಳನ್ನು ಮಾರಾಟ ಮಾಡುವ ಜೊತೆಗೆ ರಾಷ್ಟ್ರೀಯ ಜಾಗೃತಿ ಮೂಡಿಸುವ ಉದ್ದೇಶವೂ ಇದರಲ್ಲಿತ್ತು. ನಾಡ ಜನರನ್ನು ಎಚ್ಚರಿಸುವ ಮೂಲಕ ಸ್ವಾತಂತ್ರ್ಯದ ಆಶಯವನ್ನು ಬಿತ್ತುವ ಸಲುವಾಗಿ ಮಹಾತ್ಮರು ಗ್ರಾಮಾಭ್ಯುದಯವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿದರು. ಖಾದಿ ಯೋಜನೆಯ ಪ್ರಯೋಗದಿಂದ ಗ್ರಾಮಗಳ ಉದ್ಧಾರದ ಜೊತೆಗೆ ಜನರ ವೈಯಕ್ತಿಕ ಬದುಕೂ ಸರಿದಾರಿಯಲ್ಲಿ ನಡೆಯುತ್ತದೆ ಎಂಬ ಉದ್ದೇಶವನ್ನು ದೇಶದುದ್ದಕ್ಕೂ ಸಾರಲಾಗುತ್ತಿತ್ತು.

ಮೇಲು-ಕೀಳು ಎಂಬ ಭಾವನೆಯನ್ನು ದೂರ ಮಾಡುವ ಖಾದಿ ಧರಿಸುವ ಅಭ್ಯಾಸವನ್ನು ಹೆಚ್ಚು ಜನರಲ್ಲಿ ರೂಢಿಸುವ ದೃಷ್ಟಿಯಿಂದ ಬಾಪೂಜಿಯವರು ಬೆಂಗಳೂರಿನಲ್ಲಿ ದಕ್ಷಿಣ ಭಾರತ ಖಾದಿ ವಸ್ತು ಪ್ರದರ್ಶನವನ್ನು ಏರ್ಪಡಿಸುವ ವ್ಯವಸ್ಥೆ ಮಾಡಿದರು. ಹೀಗಾಗಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹಲವಾರು ಖಾದಿ ಹಾಗೂ ಕಾಂಗ್ರೆಸ್ ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.

ಬಾಪೂಜಿಯವರ ಪ್ರೇರಣೆಯಿಂದ ಹಲವರು ನೂಲುವುದನ್ನು ಅಭ್ಯಾಸ ಮಾಡಿಕೊಂಡರು. ಎಲ್ಲಾ ವರ್ಗದ ಜನರೂ ಖಾದಿ ಧರಿಸುವುದನ್ನು ರೂಢಿಮಾಡಿಕೊಂಡರು. ಸ್ವಾತಂತ್ರ್ಯ ಚಳವಳಿಗೆ ಬಾಪೂಜಿಯವರು ರೂಪಿಸಿದ ರಚನಾತ್ಮಕ ಕಾರ್ಯಕ್ರಮಗಳು ಮುನ್ನುಡಿ ಬರೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT