ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕಂಠಗಳು

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗರುಡಾ ಮಾಲ್ ಆಯೋಜಿಸಿದ್ದ ವಾಯ್ಸ ಆಫ್ ಬೆಂಗಳೂರು ಸೀಜನ್ 5ರ ಫೈನಲ್ಸ್‌ನಲ್ಲಿ ಬೆಂಗಳೂರಿನಲ್ಲಿ ಯುನಿಲಿವರ್ ಉದ್ಯೋಗಿ ಒಡಿಶಾ ಮೂಲದ ಪ್ರಗ್ಯಾ ಪಾತ್ರಾ ಹಾಗೂ ಮಂಗಳೂರಿನ ದಂತ ವೈದ್ಯ ಡಾ. ನಿತಿನ್ ಆಚಾರ್ಯ `ಬೆಂಗಳೂರು ಧ್ವನಿ~ಯಾಗಿ (ವಾಯ್ಸ ಆಫ್ ಬೆಂಗಳೂರು) ಹೊರಹೊಮ್ಮಿದರು.

ಬಹುಮಾನದ ರೂಪದಲ್ಲಿ ಒಂದೊಂದು ಮಾರುತಿ ಎ ಸ್ಟಾರ್ ಕಾರು, ಅನೇಕ ಕೊಡುಗೆ ತಮ್ಮದಾಗಿಸಿಕೊಂಡರು. ಇವರಿಬ್ಬರೂ ಸುಮಧುರ ಕಂಠದಲ್ಲಿ ಹರಿಸಿದ ಗಾನಸುಧೆಗೆ ಮಾಲ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಖುಷಿಯಿಂದ ಕೇಕೆ ಹಾಕಿದರು.

ಶ್ರೀರಕ್ಷಾ, ಸುಚಿತ್ರಾ, ಮಧು ಕಶ್ಯಪ್ ಹಾಗೂ ಕೃಷ್ಣ ರನ್ನರ್‌ಅಪ್ ಗೌರವಕ್ಕೆ ಭಾಜನರಾದರು. `ವಾಯ್ಸ ಆಫ್ ಬೆಂಗಳೂರು~ ಅಂತಿಮ ಹಣಾಹಣಿಯ ನಿರ್ಣಾಯಕರಾಗಿ ಕನ್ನಡ ಚಲನಚಿತ್ರ ರಂಗದ ಸಂಗೀತ ದಿಗ್ಗಜ ಹಂಸಲೇಖ ಹಾಗೂ ಬಾಲಿವುಡ್‌ನ ಅನು ಮಲಿಕ್ ಆಗಮಿಸಿದ್ದರು.

ಜತೆಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿ ತಾರಾ ಮೆರುಗು ತುಂಬಿದರು. ವೇದಿಕೆಯೇರಿ ಹಾಡಿಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮದ ರಾಯಭಾರಿ ರಾಜೇಶ್ ಕೃಷ್ಣನ್ ಸಹ ಜತೆಯಲ್ಲಿದ್ದರು.

ಒಡಿಶಾದಿಂದ ಸ್ಪರ್ಧೆಗೆ ಬಂದು ಕೊನೆ ಹಂತದವರೆಗೂ ಪ್ರಬಲ ಸ್ಪರ್ಧೆ ನೀಡಿ ಬೆಂಗಳೂರು ಧ್ವನಿಯಾಗಿ ಹೊರಹೊಮ್ಮಿದ ಪ್ರಗ್ಯಾ ಪಾತ್ರಾ ಕಂಠಕ್ಕೆ ಎಲ್ಲರೂ ತಲೆದೂಗಿದರು.

ಕನ್ನಡ ಬಾರದಿದ್ದರೂ ಕನ್ನಡ ಗೀತೆಗಳ ಭಾವವನ್ನು ಅರ್ಥಮಾಡಿಕೊಂಡು, ಸ್ಪಷ್ಟ ಉಚ್ಚಾರದೊಂದಿಗೆ ಹಾಡಿದ ಶೈಲಿ ಅಪ್ಯಾಯಮಾನವಾಗಿತ್ತು.

ಪ್ರಥಮ ಸುತ್ತಿನಲ್ಲಿ ಹಾಡಿದ `ಕೇಳಿಸದೆ ಕಲ್ಲುಕಲ್ಲಿನಲಿ ಕನ್ನಡ ನುಡಿ~ ಗೀತೆ ಆಕೆ ಸಂಗೀತದಲ್ಲಿ ಅಭಿಜಾತ ಕಲಾವಿದೆ ಎಂಬುದನ್ನು ನಿಚ್ಚಳವಾಗಿ ಬಿಂಬಿಸಿತು. ನಂತರ ಡ್ಯುಯೆಟ್ ರೌಂಡ್‌ನಲ್ಲೂ ಸಹ ಈಕೆ ತನ್ನ ಸಂಗೀತ ಪ್ರಾಬಲ್ಯವನ್ನು ಸಮರ್ಥವಾಗಿ ಕಾಯ್ದುಕೊಂಡು ಬಂದರು.

ಕನ್ನಡದ ಹುಡುಗ ಡಾ. ನಿತಿನ್ ಆಚಾರ್ಯ ಅವರ ವಿಶಿಷ್ಟ ಕಂಠ ಅವರನ್ನು ಇತರ ಎಲ್ಲ ಗಾಯಕರಿಂದ ಪ್ರತ್ಯೇಕವಾಗಿ ನಿಲ್ಲಿಸುತ್ತಿತ್ತು. ಅವರ ಕಂಚಿನ ಕಂಠದಲ್ಲಿ ತೇಲಿಬರುತ್ತಿದ್ದ ಗಾಯನ, ವೀಣೆಯನ್ನು ಹಿತವಾಗಿ ಮೀಟಿದಾಗ ಹೊರಹೊಮ್ಮುವ ನಾದದಂತೆ ಸುಶ್ರಾವ್ಯವಾಗಿತ್ತು. ಅದರ ಮಾಧುರ್ಯತೆಗೆ ಎಲ್ಲರೂ ಮನಸೋತರು.

ಪ್ರಥಮ ಸುತ್ತಿನಲ್ಲಿ ಅವರು ಹಾಡಿದ `ಕಣ್ ಕಣ್ ಸಲಿಗೆ~ ಗೀತೆ ಎಲ್ಲರ ಹೃದಯ ಕದ್ದಿತು. ಡ್ಯುಯೆಟ್ ಸುತ್ತಿನಲ್ಲಿ ನಿತಿನ್ ಅವರು ಶ್ರೀರಕ್ಷಾ ಅವರ ಜತೆಗೂಡಿ ಹಾಡಿದ ಪುಕಾರ್ ಚಿತ್ರದ ಗೀತೆ ಸಹ ಮನಸೂರೆಗೊಂಡಿತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT