ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ರೈಲಿಗೆ 147 ವರ್ಷ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ವಿದ್ಯುತ್ ಸಂಪರ್ಕ ಪಡೆದ ಮೊದಲ ನಗರವೆಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರಲ್ಲಿ ಇಂದು ವಿದ್ಯುತ್ ಚಾಲಿತ ಮೆಟ್ರೊ ರೈಲು ಸಂಚಾರ ಆರಂಭವಾಗುತ್ತಿದೆ.

ಕೋಲ್ಕತ್ತ, ದೆಹಲಿಯ ನಂತರ ಮೆಟ್ರೊ ಸೇವೆ ಪಡೆಯುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ರೈಲ್ವೆಯ ನಂಟು ಇಂದು ನಿನ್ನೆಯದಲ್ಲ. ಇದಕ್ಕಿದೆ 147 ವರ್ಷಗಳಷ್ಟು ಸುದೀರ್ಘ ಇತಿಹಾಸ.

ಬೆಂಗಳೂರು, ಬ್ರಿಟಿಷರ ಆಳ್ವಿಕೆಯಲ್ಲಿ ಇಡೀ ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಸೇನಾ ನೆಲೆ ಹೊಂದಿದ್ದ ನಗರ. ತಮ್ಮ ತವರನ್ನು ನೆನಪಿಸುವ ವಾತಾವರಣವಿದ್ದ ಬೆಂಗಳೂರಿಗೆ ಅನೇಕ ಸೌಲಭ್ಯಗಳನ್ನು ಏರ್ಪಡಿಸುವ ಇರಾದೆಯಿಂದ 1854 ರಲ್ಲಿಯೇ ರೈಲು ಸಂಪರ್ಕವನ್ನು ತರುವ ಪ್ರಯತ್ನವನ್ನು ಬ್ರಿಟಿಷರು ಆರಂಭಿಸಿದ್ದರು.

ಮೊದಲ ಪ್ರಯತ್ನ
ಆಗಿನ ಮೈಸೂರು ಸಂಸ್ಥಾನದ ಆಡಳಿತಶಾಹಿಯ ನೇತೃತ್ವ ವಹಿಸಿದ್ದ ಸರ್ ಮಾರ್ಕ್ ಕಬ್ಬನ್ ಅವರು ಮದ್ರಾಸ್-ಜೋಲಾರ್‌ಪೇಟೆಯ ನಡುವೆ ಆ ಹೊತ್ತಿಗಾಗಲೇ ಚಾಲನೆಯಲ್ಲಿದ್ದ ರೈಲ್ವೆ ಜಾಲವನ್ನು ಬೆಂಗಳೂರಿಗೆ ವಿಸ್ತರಿಸಲು ಪ್ರಯತ್ನ ಆರಂಭಿಸಿದರು. ಆದರೆ ಅವರು ಅಂದುಕೊಂಡಷ್ಟು ಬೇಗ ಇದು ಸಾಧ್ಯವಾಗಲಿಲ್ಲ.

ಇದಾಗಿ ಒಂದು ದಶಕದ ಬಳಿಕ 1864 ರಲ್ಲಿ ಬೆಂಗಳೂರು-ಜೋಲಾರ್‌ಪೇಟೆ ನಡುವೆ ಸಂಪರ್ಕ ಕಲ್ಪಿಸಲಾಯಿತು. ಹೀಗಾಗಿ ಬೆಂಗಳೂರು-ಮದ್ರಾಸ್ ನಡುವೆ ರೈಲು ಓಡಾಟಕ್ಕೆ ಚಾಲನೆ ದೊರೆಯಿತು. ಇದಕ್ಕಾಗಿ ರೈಲು ಹಳಿ ಹಾಕಲು ಅಗತ್ಯ ಭೂಮಿಯನ್ನು ಮೈಸೂರು ಸರ್ಕಾರ ಒದಗಿಸಿತ್ತು. ದಿ ಮದ್ರಾಸ್ ರೈಲ್ವೆ ಕಂಪನಿ ಸಂಪರ್ಕ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು.

ಅಂದು 1 ಆಗಸ್ಟ್ 1864. ಬೆಂಗಳೂರು ಶಾಖಾ ರೈಲು ಪ್ರಾರಂಭಗೊಂಡ ದಿನ. ಅಂದೇ ಶುರುವಾಯ್ತು ನೋಡಿ ಬೆಂಗಳೂರಿನಲ್ಲಿ ರೈಲ್ವೆ ಸೇವೆ. ಆಗೆಲ್ಲ ಉಗಿಬಂಡಿಯ ಉಪಯೋಗ ಹೆಚ್ಚಾಗಿ ಸೈನ್ಯಕ್ಕೆ ಸಂಬಂಧಪಟ್ಟವರಿಗೆ ಮಾತ್ರ ಆಗುತ್ತಿತ್ತು. ಬ್ರಿಟಿಷರು ಆಗ ಅಸ್ತಿತ್ವಕ್ಕೆ ತಂದಿದ್ದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಸೇವೆಗೆ ಈ ರೈಲು ಸೇವೆ ಬಹುತೇಕ ಮೀಸಲಾಗಿತ್ತು.

ಬೆಂಗಳೂರು-ಮದ್ರಾಸ್ ರೈಲು ಮಾರ್ಗ ಎಂಇಜಿ (ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್) ಆವರಣದಲ್ಲಿಯೇ ಹಾದು ಹೋಗುತ್ತಿತ್ತು. ಆದರೆ ನಿಲುಗಡೆ ಇರಲಿಲ್ಲ. ಹಲಸೂರು ಕೆರೆಯ ಆಸುಪಾಸಿನಲ್ಲಿ ತಲೆ ಎತ್ತಿದ್ದ ಸೈನ್ಯದ ವಾಸ್ತವ್ಯಕ್ಕೆ ಅಗತ್ಯ ವಸ್ತುಗಳನ್ನು ಮದ್ರಾಸಿನಿಂದ ಬೆಂಗಳೂರಿಗೆ ತಲುಪಲು ಈ ರೈಲು ಪ್ರಮುಖವಾಗಿ ಬಳಕೆಯಾಗುತ್ತಿತ್ತು. ದಾಸ್ತಾನು ತುಂಬಿದ ಬೋಗಿಗಳು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಎಂಇಜಿ ಕೇಂದ್ರ ಸ್ಥಾನದ ದಾಸ್ತಾನು ಮಳಿಗೆ ತಲುಪಲು ಪ್ರತ್ಯೇಕ ಹಳಿ ವ್ಯವಸ್ಥೆ ಮಾಡಲಾಗಿತ್ತು.

ಆರಂಭಿಕ ನೆನಪು
ಬ್ರಿಟಿಷ್ ಆಡಳಿತದ ಕಾಲದಲ್ಲಿ ಎಂಇಜಿಗೆ ಸಂಪರ್ಕ ಕಲ್ಪಿಸುತ್ತಿದ್ದ ರೈಲ್ವೆ ಹಳಿ ಈಗಿಲ್ಲ. ಆದರೆ ಎಂಇಜಿ ವಸ್ತು ಸಂಗ್ರಹಾಲಯದಲ್ಲಿ ಆಗ ಬಳಕೆಯಾಗುತ್ತಿದ್ದ ರೈಲ್ವೆ ಇಂಜಿನ್ ಬೆಂಗಳೂರು ರೈಲ್ವೆ ಚರಿತ್ರೆಯ ಆರಂಭಿಕ ದಿನಗಳ ನೆನಪಾಗಿ ಈಗಲೂ ಇದೆ.

ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಸಿದ ನಂತರ ಈ ನಗರವನ್ನು ಎಲ್ಲ ಪ್ರಮುಖ ಪಟ್ಟಣಗಳ ಜತೆ ಸಂಪರ್ಕಿಸುವ ಕಾರ್ಯ ಆರಂಭವಾಗಿ ತುಮಕೂರುವರೆಗೆ ರೈಲ್ವೆ ಸಂಪರ್ಕ 1884 ರಲ್ಲಿ ಪ್ರಾರಂಭಗೊಂಡಿತು.

ಬರ ಪರಿಹಾರ ಕಾಮಗಾರಿ
ಮೈಸೂರು-ಬೆಂಗಳೂರು ರೈಲ್ವೆ ಜಾಲ ನಿರ್ಮಾಣಗೊಂಡಿದ್ದು ನಾಲ್ಕಾರು ಹಂತಗಳಲ್ಲಿ. 1877-78 ರಲ್ಲಿ ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿದ್ದು ಬರ ಪರಿಹಾರ ಕಾಮಗಾರಿಯಾಗಿ! ಇದಕ್ಕಾಗಿ ಭಾರತ ಸರ್ಕಾರ ನೀಡಿದ ಅನುದಾನ 38.32 ಲಕ್ಷ ರೂ.ಗಳು. ಅಂತಿಮವಾಗಿ ಬೆಂಗಳೂರು-ಮೈಸೂರು ರೈಲು ಸಂಪರ್ಕ ಪೂರ್ಣಗೊಂಡಿದ್ದು 1882 ರಲ್ಲಿ.

ಕೇಂದ್ರ ಸರ್ಕಾರದ ನೆರವು, ಬರಪರಿಹಾರ ಕಾಮಗಾರಿ, ಕೊನೆಗೆ ಬಡ್ಡಿಗೆ ಪಡೆದ ಹಣದಿಂದ ಬೆಂಗಳೂರಿನ ರೈಲ್ವೆ ಮಾರ್ಗಗಳನ್ನು ವಿಸ್ತರಿಸುವ ಪ್ರಯತ್ನಗಳು ನಡೆದರೂ 1882 ರಿಂದ ನಂತರ ಇದು ಬಹುತೇಕ ಸ್ಥಗಿತವಾಯಿತು. 1910 ರಲ್ಲಿ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ರೂಪಿಸುವ ಹಿನ್ನೆಲೆಯಲ್ಲಿ ಚರ್ಚೆಗಳಾಗಿ ಹೊಸದಾಗಿ ರಾಜ್ಯ ರೈಲ್ವೆ ನಿರ್ಮಾಣ ಯೋಜನೆ 1912 ರಲ್ಲಿ ಅಸ್ತಿತ್ವಕ್ಕೆ ಬಂತು.

ಇದರ ಪರಿಣಾಮವಾಗಿ ಬೆಂಗಳೂರು-ಚಿಕ್ಕಬಳ್ಳಾಪುರ ಲಘು ರೈಲ್ವೆ ಸಂಪರ್ಕ ಜಾಲ ನಿರ್ಮಾಣ ಕಾರ್ಯವನ್ನು ಖಾಸಗಿ ಕಂಪನಿ ಆರಂಭಿಸಿತು. ಇದಕ್ಕೆ ಸರ್ಕಾರ ಜಮೀನು ನೀಡಿತು.

ಆ ಖಾಸಗಿ ಕಂಪನಿ ಕಾರ್ಯ ಮುಂದುವರೆಸಲು ವಿಫಲವಾದಾಗ ರಾಜ್ಯ ಸರ್ಕಾರವೇ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡು ಮೊದಲಿಗೆ ಯಲಹಂಕ ನಂತರ ಯಶವಂತಪುರದ ವರೆಗೆ (1915) ರೈಲು ಓಡಾಟಕ್ಕೆ ಅನುವು ಮಾಡಿಕೊಟ್ಟಿತು. ಆ ಬಳಿಕ ಬೆಂಗಳೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರಿನಿವಾಸಪುರ, ಕೋಲಾರ ಹಾಗೂ ಬಂಗಾರಪೇಟೆ ನ್ಯಾರೋಗೇಜ್ ಹಳಿಗಳು ಸಂಚಾರಕ್ಕೆ ಸಿದ್ಧಗೊಂಡವು.

ಬೆಂಗಳೂರಿಗೆ ಸರಕು ಸಾಗಣೆ, ವಿಶೇಷವಾಗಿ ತರಕಾರಿ, ಹೂ ಹಾಗೂ ದಿನಸಿ ಒದಗಿಸಲು ಸುಮಾರು 50 ವರ್ಷ ಈ ನ್ಯಾರೋಗೇಜ್ ರೈಲು ಸೇವೆ ನೀಡಿತು. ಕೆಲವು ವರ್ಷ ಸ್ಥಗಿತಗೊಂಡಿದ್ದ ಈ ರೈಲು ಸಂಪರ್ಕ ಬ್ರಾಡ್‌ಗೇಜ್‌ಗೆ ಪರಿವರ್ತನೆಯಾಗುತ್ತಿದ್ದು ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ.

ಹೆಚ್ಚಿನ ತೃಪ್ತಿ ಇಲ್ಲ
ಸ್ವಾತಂತ್ರ್ಯಾ ನಂತರ ರಾಜಧಾನಿಯಾಗಿ ಬೆಂಗಳೂರು ಹಲವಾರು ಉದ್ಯಮಗಳನ್ನು, ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಿದರೂ ರೈಲ್ವೆ ವ್ಯವಸ್ಥೆ ದೃಷ್ಟಿಯಿಂದ ಹೆಚ್ಚಿನದೇನನ್ನು ಪಡೆದುಕೊಳ್ಳಲಾಗಲಿಲ್ಲ. ರಾಷ್ಟ್ರೀಯ ನೀತಿಯಿಂದಾಗಿ ಈಗ ಬೆಂಗಳೂರು ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಜಾಲ ಹೊಂದಿದೆ. ಜೊತೆಗೆ ದೇಶದ ಅತ್ಯುತ್ತಮ ರೈಲ್ವೆ ನಿಲ್ದಾಣ (ಬೆಂಗಳೂರು ಸಿಟಿ)ಗಳಲ್ಲಿ ಒಂದೆಂಬ ಪ್ರಸಿದ್ಧಿಗೂ ಕಾರಣವಾಗಿದೆ. ಪರ್ಯಾಯ ನಿಲ್ದಾಣವಾಗಿ ಯಶವಂತಪುರವೂ ಅಭಿವೃದ್ಧಿಗೊಳ್ಳುತ್ತಿದೆ.

ಸೇವಾ ಸೌಲಭ್ಯಗಳ ದೃಷ್ಟಿಯಿಂದ ನೆರೆಹೊರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ದಕ್ಕಿದ್ದು ಹೆಚ್ಚಿನ ತೃಪ್ತಿ ತರದಿದ್ದರೂ ರಾಷ್ಟ್ರೀಯ ರೈಲ್ವೆ ಸಂಪತ್ತು ನಿರ್ಮಾಣಕ್ಕೆ ಬೆಂಗಳೂರು ಕೊಡುಗೆ ಕಡಿಮೆ ಏನಲ್ಲ.

ಬೆಂಗಳೂರು ಮೆಟ್ರೊದ ರೀಚ್-1 (ಬೈಯಪ್ಪನಹಳ್ಳಿ- ಎಂಜಿ ರಸ್ತೆ) ಮಾರ್ಗದಲ್ಲಿ ಇಂದಿನಿಂದ ಮೆಟ್ರೊ ರೈಲು ಸೇವೆ ಆರಂಭದಿಂದ ಸಂಚಾರ ಒತ್ತಡಕ್ಕೆ ಸ್ವಲ್ಪವಾದರೂ ಮುಕ್ತಿ ಸಿಗಬಹುದೆಂಬ ಆಶಯ ಬೆಂಗಳೂರಿಗರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT