ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ: ಕುಲಪತಿ ಕಾರ್ಯಶೈಲಿಗೆ ಸರ್ಕಾರದ ತರಾಟೆ

Last Updated 9 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರು ವಿವಿ ಕುಲಪತಿ ಎನ್. ಪ್ರಭುದೇವ್ ಅವರು ಪತ್ರದ ಮೂಲಕ (ಮೀಟಿಂಗ್ ಬೈ ಸರ್ಕುಲೇಷನ್) ಸಿಂಡಿಕೇಟ್ ಸಭೆ ನಡೆಸಿ ಪ್ರಮುಖ ವಿಚಾರಗಳಿಗೆ ಅನುಮೋದನೆ ಪಡೆದಿರುವುದನ್ನು ಅಸಿಂಧು ಎಂದು ಘೋಷಿಸಿರುವ ರಾಜ್ಯ ಸರ್ಕಾರ, ಕೂಡಲೇ ಸಿಂಡಿಕೇಟ್ ಸಭೆ ಕರೆದು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಕುಲಪತಿ ಅವರಿಗೆ ತಾಕೀತು ಮಾಡಿದೆ.

ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ, ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಸೋಮವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ವಿವಿಯಲ್ಲಿ ಸಾಕಷ್ಟು ಗೊಂದಲಗಳು ಇರುವುದು ಬೆಳಕಿಗೆ ಬಂದಿತ್ತು. ಈ ಗೊಂದಲಗಳ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಅವರು ಕುಲಪತಿ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.

`ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ಸಂಯೋಜನೆ ನೀಡುವಂತಹ ಮಹತ್ವದ ವಿಷಯವನ್ನು ಸಿಂಡಿಕೇಟ್ ಸಭೆ ಕರೆದು ಚರ್ಚೆ ನಡೆಸದೆ ಪತ್ರದ ಮೂಲಕ ಸಭೆಯ ನಡಾವಳಿ ರೂಪಿಸುವುದು ರಾಜ್ಯ ವಿಶ್ವವಿದ್ಯಾಲಯ ಕಾಯ್ದೆಗೆ  ವಿರುದ್ಧವಾಗಿದೆ. ಕಾಯ್ದೆ ಪ್ರಕಾರ ಸಿಂಡಿಕೇಟ್ ಸಭೆಗಳನ್ನು ಕುಲಸಚಿವರು ಕರೆಯಬೇಕು. ಕುಲಪತಿ ಕರೆದಿರುವುದು ಸಮಂಜಸವಲ್ಲ ಹಾಗೂ ಸಿಂಧು ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದರಿಂದಾಗಿ ಕಾಲೇಜುಗಳಿಗೆ ಸಂಯೋಜನೆ ನೀಡುವ ಪ್ರಕ್ರಿಯೆ ವಿಳಂಬವಾಗಿದೆ~ ಎಂದು ಅವರು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ವಾತಾವರಣ ಕಲುಷಿತ: `ವಿಶ್ವವಿದ್ಯಾಲಯದ ವಾತಾವರಣ ಸಂಪೂರ್ಣ ಕಲುಷಿತಗೊಂಡಿರುವುದು ಸಚಿವರು ಭೇಟಿ ಸಂದರ್ಭದಲ್ಲಿ ಮನವರಿಕೆ ಆಗಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಅವುಗಳ ಪರಿಸ್ಥಿತಿಯು ಚಿಂತಾಜನಕವಾಗಿದೆ.

ನೀರು ಸರಬರಾಜು ಹಾಗೂ ಶೌಚಾಲಯದ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳ ಆರೋಗ್ಯ ಹದಗೆಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನಕ್ಕೆ ಇದು ಸಾಕ್ಷಿಯಾಗಿದೆ. ವಿವಿಯ ಬಹಳಷ್ಟು ಕಾಮಗಾರಿಗಳು ಅಪೂರ್ಣ ಹಂತದಲ್ಲಿವೆ. ಯಾರೂ ಸಹ ಜವಾಬ್ದಾರಿ ತೆಗೆದುಕೊಳ್ಳದೆ ಇರುವುದು ಗಮನಕ್ಕೆ ಬಂದಿದೆ. ಇವೆಲ್ಲವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ~ ಎಂದು ಅವರು ಕಟುವಾಗಿ ಎಚ್ಚರಿಸಿದ್ದಾರೆ.

`ವಿವಿಯಲ್ಲಿ ಉಂಟಾಗಿರುವ ಗೊಂದಲಕ್ಕೆ ವಿದ್ಯಾರ್ಥಿಗಳು, ಸಂಶೋಧಕರು, ಪೋಷಕರು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕುಲಪತಿ ಅವರು ಶೈಕ್ಷಣಿಕ ವಿಚಾರದಲ್ಲಿ ಬೋಧನೆ, ಪರೀಕ್ಷೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು~ ಎಂದು ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT